ADVERTISEMENT

ವಾಚಕರ ವಾಣಿ: ಪ್ರಿ-ವೆಡ್ಡಿಂಗ್ ಶೂಟ್ ಎಂಬ ಹೊಸ ಭ್ರಮೆ!

​ಪ್ರಜಾವಾಣಿ ವಾರ್ತೆ
Published 10 ನವೆಂಬರ್ 2020, 19:30 IST
Last Updated 10 ನವೆಂಬರ್ 2020, 19:30 IST

ವಿವಾಹಪೂರ್ವ (ಪ್ರಿ– ವೆಡ್ಡಿಂಗ್‌) ಫೋಟೊ ಶೂಟ್‌ನಲ್ಲಿ ಭಾಗಿಯಾಗಿದ್ದ ಜೋಡಿಯೊಂದು ಕಾವೇರಿ ನದಿಯಲ್ಲಿ ತೆಪ್ಪ ಮುಳುಗಿ ಪ್ರಾಣಬಿಟ್ಟ ದುರ್ಘಟನೆ ಆಘಾತ ತಂದಿದೆ (ವಾ.ವಾ., ನ. 10). ಹೊಸ ಬಾಳಿನತ್ತ ನಡೆಯಬೇಕಿದ್ದವರು ಇಂಥ ಅಂತ್ಯ ಕಾಣಲು ಯಾವ ಅನಿವಾರ್ಯ ಕಾರಣಗಳೂ ಇರಲಿಲ್ಲ. ಸರಿಯಾದ ಮುನ್ನೆಚ್ಚರಿಕೆ ಕ್ರಮಗಳಿಲ್ಲದೆ ತೆಪ್ಪ ಏರಿ ಶೂಟ್ ಮಾಡುವ ಸಂಭ್ರಮದಲ್ಲಿ ಮುಳುಗಿಹೋಗಿದ್ದು ಕೇವಲ ಎರಡು ಜೀವಗಳಲ್ಲ; ಇಡೀ ಎರಡು ಕುಟುಂಬಗಳು. ಇದಕ್ಕೆ ಯಾರನ್ನು ದೂರಬೇಕು?

ಈ ಚಾಳಿ ಇದೀಗ ಎಲ್ಲಾ ವರ್ಗದ ಜನರನ್ನೂ ಅವರಿಸುತ್ತಿದೆ. ಇದೊಂದು ಅನಿವಾರ್ಯ, ಮಾಡಿಸದಿದ್ದರೆ ಲೆವೆಲ್ ಕಡಿಮೆ ಎಂಬಂಥ ವಾತಾವರಣ ನಿರ್ಮಾಣವಾಗುತ್ತಿದೆ. ಈ ಭ್ರಮೆಯಿಂದ ಎಲ್ಲರೂ ಹೊರಬರಬೇಕಿದೆ. ಈಚೆಗೆ ಮದುವೆ ಗೊತ್ತಾಗಿದ್ದ ನನ್ನ ಗೆಳೆಯನೊಬ್ಬ ಪ್ರಿ ವೆಡ್ಡಿಂಗ್‌ ಫೋಟೊ ಶೂಟ್‌ ಸಂದರ್ಭದಲ್ಲಿ ದೊಡ್ಡ ಮರವೇರಿ ಬಿದ್ದು ಕಾಲು ಮುರಿದುಕೊಂಡು, ಮದುವೆ ಮುಂದಕ್ಕೆ ಹೋಗುವಂತಾಗಿತ್ತು. ಸೆಲ್ಫಿ ಅವಘಡಗಳಂತೆ ಪ್ರಿ-ವೆಡ್ಡಿಂಗ್‌ ಶೂಟ್ ಮದುವೆ ದುರಂತಗಳು ಈಗೀಗ ಹೆಚ್ಚಾಗುತ್ತಿವೆ. ವಾಚು, ಉಂಗುರ, ಛತ್ರದಲ್ಲಿ ಮದುವೆ ಎಂಬ ಡಿಮ್ಯಾಂಡುಗಳ ಪಟ್ಟಿಯಲ್ಲಿ ಈಗ ‘ಪ್ರಿ- ವೆಡ್ಡಿಂಗ್ ಶೂಟ್’ ಹೊಸ ಡಿಮ್ಯಾಂಡ್ ಆಗುತ್ತಿದೆ. ಎಲ್ಲರೂ ಇಂಥ ಆಡಂಬರವನ್ನು ತಿರಸ್ಕರಿಸೋಣ. ಸರಳ ಜೀವನವನ್ನೇ ಎತ್ತಿ ಹಿಡಿಯೋಣ.

–ಅಜಯ್, ಮಂಡ್ಯ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.