ADVERTISEMENT

ರೇಡಾರ್ ಮತ್ತು ಆತ್ಮಸ್ತುತಿ

​ಪ್ರಜಾವಾಣಿ ವಾರ್ತೆ
Published 13 ಮೇ 2019, 19:43 IST
Last Updated 13 ಮೇ 2019, 19:43 IST

‘ಮೋಡ ಇದ್ದಾಗ ರೇಡಾರ್ ಕಣ್ತಪ್ಪಿಸಿ ದಾಳಿ ಮಾಡಬಹುದು’ ಎಂಬರ್ಥದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಹೇಳಿದ ಮಾತನ್ನು ನಾವೆಲ್ಲಾ ಸಾಮಾಜಿಕ ಮಾಧ್ಯಮಗಳಲ್ಲಿ ನೋಡಿದ್ದೇವೆ. ಅದು ಎಂಥ ಅಜ್ಞಾನದ ಹಾಗೂ ಅಪಾಯಕಾರಿ ಮಾತು ಎಂಬುದಕ್ಕೆ ತುಸು ವಿವರಣೆ ಬೇಕಾಗುತ್ತದೆ:

ಯುದ್ಧ ವಿಮಾನಗಳು ಮೋಡಗಳಿಗಿಂತ ಎತ್ತರದಲ್ಲಿ ಹಾರುತ್ತವೆ. ವಿಮಾನದ ಕೆಳಗೆ ಮೋಡದ ಹಾಸು ಇರುತ್ತದೆ; ಅದರ ಕೆಳಗೆ ನೆಲದ ಮೇಲೆ ರೇಡಾರ್‌ ಇರುತ್ತದೆ. ಹಾಗಾಗಿ ರೇಡಾರ್‌ಗೆ ವಿಮಾನ ಕಾಣುವುದಿಲ್ಲ ಎಂದು ಮೋದಿಯವರು ಭಾವಿಸಿದ್ದಾರೆ. ಅದು ತಪ್ಪು. ದಟ್ಟ ಮೋಡ ಇರಲಿ, ಮಳೆ ಇರಲಿ, ರೇಡಾರ್‌ನಿಂದ ಹೊಮ್ಮುವ ಕಿರಣಗಳು ಮೇಲಕ್ಕೆ ಚಿಮ್ಮಿ, ಮೋಡವನ್ನೂ ಛೇದಿಸಿ, ವಿಮಾನವನ್ನು ಸ್ಪರ್ಶಿಸಿ ಅಲ್ಲಿಂದ ಹಿಂದಿರುಗಿ ರೇಡಾರ್ ಆಂಟೆನಾವನ್ನು ತಲುಪುತ್ತವೆ. ವಿಮಾನದ ದಿಕ್ಕು ಮತ್ತು ಚಲನೆಯ ವೇಗವನ್ನು ತಿಳಿಸುತ್ತವೆ. ಅದು ಮೋದಿಯವರಿಗೆ ಗೊತ್ತಿರಲಿಲ್ಲ.

‘ಮೋಡದ ಪರದೆಯನ್ನೇ ನಾವು ನಮ್ಮ ಅನುಕೂಲಕ್ಕೆ ಬಳಸಬಹುದು. ಆದ್ದರಿಂದ ನಾನು ದಾಳಿಗೆ ಆದೇಶ ಕೊಟ್ಟೆ’ ಎಂದು ಅವರು ಹೇಳಿದ್ದಾರೆ. ದಂಡನಾಯಕ ಹೀಗೆ ತಪ್ಪು ಗ್ರಹಿಕೆಯಿಂದ ಆದೇಶ ಕೊಟ್ಟಾಗ, ರೇಡಾರ್ ವಿಜ್ಞಾನ ಗೊತ್ತಿದ್ದ (ತರಬೇತಿ ಪಡೆದ) ಯುದ್ಧ ತಜ್ಞರು ಬಾಯಿ ಮುಚ್ಚಿ ಕೂತಿದ್ದರೆಂದು ಕಾಣುತ್ತದೆ. ಪ್ರಧಾನಿಗೆ ಅವರು ತಿಳಿಸಿ ಹೇಳಿದ್ದಿದ್ದರೆ, ಹೀಗೆ ಟಿ.ವಿ ಚಾನೆಲ್ ಕ್ಯಾಮೆರಾ ಮುಂದೆ ಮೋದಿಯವರು ತಮ್ಮ ದುಸ್ಸಾಹಸದ ಸಲಹೆಯ ಬಗ್ಗೆ ಆತ್ಮಪ್ರಶಂಸೆ ಮಾಡಿಕೊಳ್ಳುತ್ತಿರಲಿಲ್ಲ.

ADVERTISEMENT

ಇದರಿಂದ ವ್ಯಕ್ತವಾಗುವ ಇನ್ನೂ ದೊಡ್ಡ ಆತಂಕ ಏನೆಂದರೆ, ಪ್ರಧಾನಿಗೆ ರೇಡಾರ್ ತಂತ್ರಜ್ಞಾನದ ಬಗ್ಗೆ ತಿಳಿಸಿ ಹೇಳುವ ಬದಲು, ನಮ್ಮ ಕಮಾಂಡರ್‌ಗಳು ಅವರ ಮುಗ್ಧ ಆದೇಶವನ್ನು ಕಣ್ಣುಮುಚ್ಚಿ ಪಾಲಿಸಿದ್ದಾರಲ್ಲ! ನ್ಯೂಕ್ಲಿಯರ್ ಬಟನ್ ಇರುವ ಸಿಗ್ನಲ್ ಪೆಟ್ಟಿಗೆಯನ್ನು ಜೊತೆಗೆ ಸದಾ ಇಟ್ಟುಕೊಂಡಿರಬೇಕಾದ ಪ್ರಧಾನಿಯವರು ನಾಳೆ ಇದೇ ಯುದ್ಧೋತ್ಸಾಹದಲ್ಲಿ ಏನಾದರೂ ಹೆಚ್ಚು ಕಮ್ಮಿ ಮಾಡಲು ಹೊರಟರೆ? ಆಗಲೂ ನಮ್ಮಮಿಲಿಟರಿ ಬಾಯಿ ಮುಚ್ಚಿಕೊಂಡು ‘ಓಕೆ ಸರ್’ ಎಂದು ಕೈಕಟ್ಟಿ ನಿಲ್ಲುವುದೇ? ಅದು ಇಡೀ ದೇಶದ ಪಾಲಿಗೆ ಆತ್ಮಘಾತುಕ ಆದೀತಲ್ಲವೇ?

ನಾಗೇಶ ಹೆಗಡೆ,ಕೆಂಗೇರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.