ADVERTISEMENT

ಅಧಿಕಾರಕ್ಕೆ ತಕ್ಕಂತೆ ಹೆಸರು ಮತ್ತೆ ಬದಲಾದೀತು

​ಪ್ರಜಾವಾಣಿ ವಾರ್ತೆ
Published 5 ಜನವರಿ 2020, 18:07 IST
Last Updated 5 ಜನವರಿ 2020, 18:07 IST

ರಾಮನಗರ ಎಂದ ಕೂಡಲೇ ನೆನಪಾಗುವುದು ರೇಷ್ಮೆ ಕೃಷಿ ಹಾಗೂ ಎಚ್.ಎಲ್‌.ನಾಗೇಗೌಡರ ಜಾನಪದ ಲೋಕ. ಇಂತಹ ರೇಷ್ಮೆ ನಗರಿ ರಾಮನಗರವನ್ನು ರಾಜ್ಯ ಸರ್ಕಾರವು ನವ ಬೆಂಗಳೂರು ಎಂದು ಮರು ನಾಮಕರಣ ಮಾಡಲು ಹೊರಟಿದೆ ಎಂದು ವರದಿಯಾಗಿತ್ತು (ಪ್ರ.ವಾ., ಜ. 5). ಅದರ ಬೆನ್ನಲ್ಲೇ, ರಾಮನಗರ ಜಿಲ್ಲೆಗೆ ಮರುನಾಮಕರಣ ಮಾಡುವ ಯಾವುದೇ ಪ್ರಸ್ತಾವ ಸರ್ಕಾರದ ಮುಂದೆ ಇಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಹೇಳಿದ್ದಾರೆ (ಪ್ರ.ವಾ., ಜ. 6).

ಅನಾದಿ ಕಾಲದಿಂದಲೂ ರಾಮನಗರಕ್ಕೆ ರಾಮನಗರ, ಶಿವನಗರ ಎಂಬ ಹೆಸರುಗಳಿದ್ದವು. ಆದರೆ, ಮೈಸೂರು ಅರಸ ಮುಮ್ಮಡಿ ಕೃಷ್ಣರಾಜ ಒಡೆಯರ್‌ ಅವರು ಮೈಸೂರಿನ‌ ಮೊದಲ ಆಂಗ್ಲ ರೆಸಿಡೆಂಟ್ ಕರ್ನಲ್ ಕ್ಲೋಸ್ ಅವರ ಮೇಲಿನ ಪ್ರೀತಿಯಿಂದಾಗಿ 1780ರಲ್ಲಿ ರಾಮನಗರಕ್ಕೆ ‘ಕ್ಲೋಸ್ ಪೇಟೆ’ ಎಂದು ನಾಮಕರಣ ಮಾಡಿದ್ದರು. ಸ್ವಾತಂತ್ರ್ಯ ಬಂದ ನಂತರ 1949ರಲ್ಲಿ ಅದು ಮತ್ತೆ ರಾಮನಗರವಾಯಿತು.

ಇದೀಗ ಪುನಃ ರಾಮನಗರದ ಹೆಸರು ಬದಲಿಸುವ ವಿಷಯ ಮುನ್ನೆಲೆಗೆ ಬರುವ ಅವಶ್ಯಕತೆಯಾದರೂ ಏನು? ಊರಿನ ಹೆಸರು ಬದಲಿಸಿದಾಕ್ಷಣ ಆ ಊರಿನ ಅಭಿವೃದ್ಧಿ ಆಗಿಬಿಡುವುದಿಲ್ಲ.

ADVERTISEMENT

ಯಾವುದೇ ಸರ್ಕಾರಕ್ಕೆ ರಾಮನಗರವನ್ನು ಬೆಂಗಳೂರಿನ ಉಪನಗರಿಯಾಗಿ ಅಭಿವೃದ್ಧಿಪಡಿಸುವ ಇರಾದೆ ಇದ್ದರೆ,ಹೆಸರು ಬದಲಿಸದೆಯೂ ಅದು ಆ ಕೆಲಸವನ್ನು ಮಾಡಬಹುದು. ಅದುಬಿಟ್ಟು ಯಾವುದೇ ಪಕ್ಷದ ಸರ್ಕಾರವಾಗಲಿ, ವಿರೋಧಿ ಪಾಳಯದ ನಾಯಕರ ಮೇಲಿನ ಕೋಪಕ್ಕೆ ಊರುಗಳ ಹೆಸರು ಬದಲಿಸುವುದು ಸರಿಯಲ್ಲ. ಯಾಕೆಂದರೆ, ಆ ಊರಿನ ಮೇಲೆ ಪ್ರೀತಿ ಇರುವವರು ಮುಂದೆ ಅಧಿಕಾರಕ್ಕೆ ಬಂದರೆ, ಅದು ಹಿಂದಿನ ಸರ್ಕಾರ ಇಟ್ಟ ಹೊಸ ಹೆಸರನ್ನು ತೆಗೆದುಹಾಕಿ, ಮತ್ತೆ ಹಿಂದಿನ ಹೆಸರನ್ನೇ ಮುಂದುವರಿಸುವ ಸಾಧ್ಯತೆ ಇಲ್ಲದಿಲ್ಲ.

ಲಕ್ಷ್ಮೀಕಾಂತರಾಜು ಎಂ.ಜಿ., ಮಠಗ್ರಾಮ, ಗುಬ್ಬಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.