ADVERTISEMENT

ಪ್ರತ್ಯೇಕತಾ ಸಿದ್ಧಾಂತದ ಸ್ಪಷ್ಟ ಉಲ್ಲಂಘನೆ

​ಪ್ರಜಾವಾಣಿ ವಾರ್ತೆ
Published 10 ಏಪ್ರಿಲ್ 2022, 15:55 IST
Last Updated 10 ಏಪ್ರಿಲ್ 2022, 15:55 IST

‘ಪವಿತ್ರ ಬಂಧಕ್ಕೆ ಅತ್ಯಾಚಾರ ಆರೋಪದ ನರಳಿಕೆ ಏಕೆ?’ ಎಂಬ ವಕೀಲ ಸಿ.ಎಚ್.ಹನುಮಂತರಾಯ ಅವರ ಅಭಿಪ್ರಾಯ (ಪ್ರ.ವಾ., ಏ. 9) ಪ್ರಸ್ತುತತೆಗೆ ಸ್ಪಂದಿಸುವಂತಿದೆ. ವೈವಾಹಿಕ ಅತ್ಯಾಚಾರವನ್ನು ಶಿಕ್ಷಾರ್ಹವಾಗಿಸಬೇಕೆಂಬ ನ್ಯಾಯಾಲಯದ ಆದೇಶ ನಿಸ್ಸಂದೇಹವಾಗಿ ಭಾರತೀಯ ಕೌಟುಂಬಿಕ ವ್ಯವಸ್ಥೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಪಾಶ್ಚಾತ್ಯ ಸಾಮಾಜಿಕ ಮೌಲ್ಯಗಳತ್ತ ವಾಲುತ್ತಿರುವ ನಮ್ಮ ಯುವಜನತೆ, ಈ ರೀತಿಯ ಆದೇಶಗಳು ಒಂದು ವೇಳೆ ಶಾಸನಗಳಾದರೆ ಅವುಗಳ ಅಡಿಯಲ್ಲಿ ಸಾಂಸಾರಿಕ ಬದುಕನ್ನು ವಿಘಟನೆಯತ್ತ ಕೊಂಡೊಯ್ಯಲು ಹಿಂಜರಿಯುವುದಿಲ್ಲ.

ನಿಜ, ಮಹಿಳೆಯು ಗಂಡನ ಸ್ವತ್ತಲ್ಲ ಮತ್ತು ದಾಸಿಯೂ ಅಲ್ಲ. ಆದರೆ ಕುಟುಂಬದೊಳಗಿನ ಖಾಸಗಿ ಕ್ಷಣಗಳನ್ನು ನ್ಯಾಯಾಲಯದ ಮುಂದೆ ಸಾದರಪಡಿಸುವುದು ಎಷ್ಟರಮಟ್ಟಿಗೆ ಸರಿ ಎಂಬ ಪ್ರಶ್ನೆಯೂ ಉದ್ಭವವಾಗುತ್ತದೆ. ಸೂಕ್ತ ಸಾಕ್ಷ್ಯಾಧಾರಗಳ ಮೂಲಕ ರುಜುವಾತುಪಡಿಸಲು ಸಾಧ್ಯವಾಗದ ಇಂತಹ ಸನ್ನಿವೇಶದಲ್ಲಿ ಪುರುಷರೇ ನ್ಯಾಯದ ಕಟಕಟೆಯಲ್ಲಿ ಅಪರಾಧಿಗಳಾಗುವ ಸಂಭವ ಅಧಿಕವಾಗಿರುತ್ತದೆ. ವೈವಾಹಿಕ ಬದುಕಿನ ಪಾವಿತ್ರ್ಯವನ್ನು ಕಾಪಾಡುವ ದೃಷ್ಟಿಯಿಂದ ಮತ್ತು ನಾಗರಿಕರ ಖಾಸಗಿತನದೊಳಗೆ ಹಸ್ತಕ್ಷೇಪ ಮಾಡದಿರುವ ಉದ್ದೇಶದಿಂದ ಶಾಸಕಾಂಗವು ತರದಿರುವ ತಿದ್ದುಪಡಿಯನ್ನು ನ್ಯಾಯಾಂಗವು ಅಪೇಕ್ಷಿಸುತ್ತಿರುವುದು ಅಧಿಕಾರ ಪ್ರತ್ಯೇಕತಾ ಸಿದ್ಧಾಂತದ ಸ್ಪಷ್ಟ ಉಲ್ಲಂಘನೆ ಆಗುತ್ತದೆ. ಸಮಾನತೆಯ ಹಕ್ಕು ಮಹಿಳೆ ಮತ್ತು ಪುರುಷರಿಬ್ಬರಿಗೂ ಅನ್ವಯವಾಗುತ್ತದೆ. ಈಗಾಗಲೇ ಹಗುರವಾದ ಕಾರಣಗಳಿಗೇ ವಿಚ್ಛೇದನದ ಮೊರೆ ಹೋಗುತ್ತಿರುವ ಕುಟುಂಬಗಳು ಮುಂದೆ ಕ್ರಮಿಸಲಿರುವ ದಾರಿಯನ್ನು ನೆನೆದರೆ ಭಯವಾಗುತ್ತದೆ. ‘ಸತಿಪತಿಗಳೊಂದಾದ ಭಕ್ತಿ ಹಿತವಾಗಿಪ್ಪುದು ಶಿವಂಗೆ’ ಎಂಬ ಶರಣರ ನುಡಿ ದಾರಿದೀಪವಾಗಬೇಕಿದೆ.

‌‌‌‌ಮೋದೂರು ಮಹೇಶಾರಾಧ್ಯ,ಹುಣಸೂರು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.