ADVERTISEMENT

ವಾಚಕರ ವಾಣಿ: ಅನುಕೂಲಸಿಂಧು ಸತ್ಯದ ಪ್ರತಿಪಾದನೆ

ಎಚ್.ಎನ್.ಜಯರಾಮ್, ಹಂದಿಕುಂಟೆ.ಸಿರಾ (ತಾ)
Published 21 ಫೆಬ್ರುವರಿ 2022, 19:30 IST
Last Updated 21 ಫೆಬ್ರುವರಿ 2022, 19:30 IST

ಪ್ರಧಾನಮಂತ್ರಿಯವರು ಉತ್ತರಪ್ರದೇಶದ ಹರ್ದೋಯಿಯಲ್ಲಿ ನಡೆದ ಚುನಾವಣಾ ಸಭೆಯಲ್ಲಿ ಮಾಡಿದ ಭಾಷಣದಲ್ಲಿ, ‘ಕೋವಿಡ್ ಅವಧಿಯಲ್ಲಿ ರೇಶನ್ (ಪಡಿತರ ಧಾನ್ಯ) ನೀಡಿದರು. ಅವರ ಉಪ್ಪು ತಿಂದು ಅವರಿಗೆ ದ್ರೋಹ ಬಗೆಯುವುದಿಲ್ಲ’ಎಂದು ವೃದ್ಧೆಯೊಬ್ಬರು ಹೇಳಿದ್ದನ್ನು ಪ್ರಸ್ತಾಪಿಸಿದರು. ಮುಂದುವರಿದು, ‘ಮೊದಲೆಲ್ಲ ವ್ಯಾಕ್ಸಿನೇಷನ್‌ ಕೇವಲ ಕೆಲವು ದೊಡ್ಡವರನ್ನು ತಲುಪುತ್ತಿತ್ತು, ಬಡವರಿಗೆ ಚುಚ್ಚುಮದ್ದು ತಲುಪಲು 10–20 ವರ್ಷ (?) ತಗಲುತ್ತಿತ್ತು. ಈಗ ನಾವು ಎಲ್ಲರಿಗೂ ಲಸಿಕೆ ಲಭ್ಯವಾಗುವಂತೆ ನೋಡಿಕೊಂಡಿದ್ದೇವೆ’ ಎಂದರು. ‘ದೇಶೀಯ ವ್ಯಾಕ್ಸಿನ್ ಬಗೆಗೆ ಸಂದೇಹ ಹುಟ್ಟಿಸಿದರು’ ಅನ್ನುವ ಹಿಂದಿನ ಆರೋಪವನ್ನು ಪುನರುಚ್ಚರಿಸಿದರು.

ಇಲ್ಲಿ ಉದ್ಭವಿಸುವ ಪ್ರಶ್ನೆಯೆಂದರೆ- ಇದನ್ನು ಚುನಾವಣಾ ವಸ್ತುವಾಗಿ ಬಳಸಲಾಗುತ್ತಿರುವುದು ಸರಿಯೇ? ಕೊರೊನಾ ಹಿಂದೆ ಬಂದಿರಲಿಲ್ಲ. ಲಾಕ್‌ಡೌನ್ ಮಾಡಿದ್ದು ಸರ್ಕಾರ- ಬಡವರಿಗೆ ಆದಾಯದ ಮೂಲ ಬಂದ್ ಆಯಿತು, ಅನಿವಾರ್ಯವಾಗಿ ದೈನಿಕ ಆಹಾರ ಅಗತ್ಯದ ಪೂರೈಕೆಗೆ ವ್ಯವಸ್ಥೆ ಕಲ್ಪಿಸಬೇಕಾಯಿತು. ಈ ‘ಋಣ’ವನ್ನು ಅಧಿಕಾರದಲ್ಲಿರುವ ಪಕ್ಷಕ್ಕೆ ಈಗ ಮತ ಹಾಕುವ ಮೂಲಕ ತೀರಿಸಬೇಕೇ? ‘ಸಹಸ್ರಾರು ಸಾವುಗಳನ್ನು ತಪ್ಪಿಸಿದೆವು’ ಎಂಬ ಮಾತೂ ಬಂತು. ಭಾರತದಲ್ಲಿ ಕೋವಿಡ್‌ನಿಂದ ಸಂಭವಿಸಿದ ಸಾವಿನ ನೈಜ ಸಂಖ್ಯೆ ಅಧಿಕೃತ ಅಂಕಿಅಂಶಕ್ಕಿಂತ ಕೆಲವು ಪಟ್ಟು ಹೆಚ್ಚು ಎಂಬ ಇನ್ನೊಂದು ವಿಶ್ಲೇಷಣೆ ಇತ್ತೀಚೆಗೆ ಬಂದಿದೆ (ಪ್ರ.ವಾ., ಫೆ. 17). ಇದನ್ನು ಸಮರ್ಥ ರೀತಿಯಲ್ಲಿ ಅಲ್ಲಗಳೆಯಲು ಪ್ರಧಾನಿ ಅಥವಾ ಆರೋಗ್ಯ ಸಚಿವರು ಹೋಗಿಲ್ಲ. ಜನಸಾಮಾನ್ಯರ ಅನಿಸಿಕೆಯೆಂದರೆ, ‘ದಾಖಲೇ ಆಗದ ಅಥವಾ ಸಾವಿಗೆ ಬೇರೆ ಕಾರಣ ತೋರಿಸಿರುವ ಗಮನಾರ್ಹ ಸಂಖ್ಯೆಯ ಪ್ರಕರಣಗಳಿವೆ’. ಈ ಬಗೆಯ ಪಾರ್ಶ್ವಿಕ ಅಥವಾ ಅನುಕೂಲಸಿಂಧು ಸತ್ಯದ ಪ್ರತಿಪಾದನೆ ನಿಲ್ಲುವುದೆಂದು?

–ಎಚ್.ಎಸ್.ಮಂಜುನಾಥ, ಬೆಂಗಳೂರು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.