ADVERTISEMENT

ವಾಚಕರ ವಾಣಿ: ಮಂಗಳವಾರ, 24 ಜೂನ್‌ 2025

​ಪ್ರಜಾವಾಣಿ ವಾರ್ತೆ
Published 24 ಜೂನ್ 2025, 1:00 IST
Last Updated 24 ಜೂನ್ 2025, 1:00 IST
<div class="paragraphs"><p>ವಾಚಕರ ವಾಣಿ: ಪ್ರಜಾವಾಣಿ ಓದುಗರ ಈ ದಿನದ ಪತ್ರಗಳು</p></div>

ವಾಚಕರ ವಾಣಿ: ಪ್ರಜಾವಾಣಿ ಓದುಗರ ಈ ದಿನದ ಪತ್ರಗಳು

   

ಗ್ರಾಮಗ್ರಾಮ ಗ್ರಂಥಾಲಯ ಸ್ವಾಗತಾರ್ಹ

ಕೇಂದ್ರ ಸರ್ಕಾರದ ನೆರವಿನೊಂದಿಗೆ ರಾಜ್ಯದಲ್ಲಿ ಹೊಸದಾಗಿ 6,599 ಗ್ರಾಮ ಗ್ರಂಥಾಲಯಗಳ ಸ್ಥಾಪನೆಗೆ ಮುಂದಾಗಿರುವುದು ಉತ್ತಮ ನಿರ್ಧಾರ (ಪ್ರ.ವಾ., ಜೂನ್‌ 23). ಗ್ರಂಥಾಲಯಗಳು ದೇವಾಲಯ ಇದ್ದಂತೆ. ಈ ಯೋಜನೆಯ ಸಮರ್ಪಕ ಅನುಷ್ಠಾನದಲ್ಲಿ ರಾಜ್ಯ ಸರ್ಕಾರ ಹಲವು ಕ್ರಮ ವಹಿಸಬೇಕಿದೆ. ಗ್ರಂಥಾಲಯ ತೆರೆಯುವ ಕಟ್ಟಡವು ಸುಸಜ್ಜಿತವಾಗಿರಬೇಕು. ಇದರ ನಿರ್ವಹಣೆಗೆ ಪೂರ್ಣಾವಧಿಯ ಸಿಬ್ಬಂದಿ‌ ನೇಮಿಸಬೇಕು. ಸಮಕಾಲೀನ, ವೈಜ್ಞಾನಿಕ, ವೈಚಾರಿಕ, ನಾಡು, ನುಡಿ, ಸಂಸ್ಕೃತಿಯನ್ನು ಬಿಂಬಿಸುವ ಪುಸ್ತಕಗಳ ಸಂಖ್ಯೆ ಹೆಚ್ಚಿರಬೇಕು. ಗ್ರಂಥಾಲಯವು ಅಲಂಕಾರದ ಕೋಣೆಯಂತಿರಬಾರದು. ಆಗಷ್ಟೇ ಅದು ಜನಸ್ನೇಹಿಯಾಗಲಿದೆ.

ADVERTISEMENT

– ಸಿ. ಚಿಕ್ಕತಿಮ್ಮಯ್ಯ ಹಂದನಕೆರೆ, ಬೆಂಗಳೂರು 

ಹಿರಿಯ ಜೀವಗಳಿಗೆ ಆಸರೆ ಬೇಕು

ಆಸ್ತಿಗಾಗಿ ಜಗಳವಾಡಿದ ಇಬ್ಬರು ಪುತ್ರರು ತಂದೆ, ತಾಯಿಯನ್ನು ಮನೆಯಿಂದ ಹೊರಹಾಕಿರುವುದು ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲ್ಲೂಕಿನಲ್ಲಿ ವರದಿಯಾಗಿದೆ. ಈಗೀಗ ಎಲ್ಲವೂ ವ್ಯಾಪಾರಿ ಧೋರಣೆಯ ಸಂಬಂಧಗಳೇ ಆಗಿವೆ. ದಯೆ, ಕರುಣೆ, ಮಾನವೀಯತೆ, ಪ್ರೀತಿ, ನಂಬಿಕೆ ಎಂಬುದು ಮರೆಯಾಗಿದೆ.

ಹೆತ್ತವರನ್ನು ಕಾಳಜಿಯಿಂದ ನೋಡಿಕೊಳ್ಳುವ ಮಕ್ಕಳೂ ಇದ್ದಾರೆ. ಅಂತಹವರ ಸಂಖ್ಯೆ ವಿರಳ. ಹೊಂದಾಣಿಕೆ ಕೊರತೆ ಹಾಗೂ ಸೋಲದ ಮನಃಸ್ಥಿತಿ ಇರದೇ ಇರುವುದರಿಂದ ಹಿರಿಯ ನಾಗರಿಕರು ನಿರ್ಲಕ್ಷ್ಯಕ್ಕೆ ಒಳಗಾಗುತ್ತಿದ್ದಾರೆ. ಕನಿಕರಕ್ಕಿಂತ ಅವರಿಗೆ ಆಸರೆ ಮತ್ತು ಆರೈಕೆ ಬೇಕಿದೆ. 

– ರುದ್ರಮೂರ್ತಿ ಎಂ.ಜೆ., ಚಿತ್ರದುರ್ಗ  

ಉದ್ಯೋಗ: ವಯೋಮಿತಿ ಹೆಚ್ಚಿಸಿ

ಐದಾರು ವರ್ಷಗಳಿಂದ ರಾಜ್ಯದಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಸರ್ಕಾರಿ ಹುದ್ದೆಗಳ ನೇಮಕಾತಿ ಪ್ರಕ್ರಿಯೆ ನಡೆದಿಲ್ಲ. ಹೀಗಾಗಿ, ಅಭ್ಯರ್ಥಿಗಳಿಗೆ ಉದ್ಯೋಗ ವಯೋಮಿತಿ ಮೀರಿ ಸಂಕಷ್ಟ ಎದುರಾಗಿದೆ. ಪ್ರಸ್ತುತ ಪರಿಶಿಷ್ಟ ಜಾತಿಯ ಒಳಮೀಸಲಾತಿ ಸಮೀಕ್ಷೆ ನಡೆಯುತ್ತಿದೆ. ಮತ್ತೆ ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆ ಒಳಗೊಂಡ ಜಾತಿ ಜನಗಣತಿ ನಡೆಸುವುದಾಗಿ ಸರ್ಕಾರ ಪ್ರಕಟಿಸಿದೆ. ಇದರಿಂದ ನೇಮಕಾತಿಗೆ ಮತ್ತಷ್ಟು ಗ್ರಹಣ ಹಿಡಿಯುವುದರಲ್ಲಿ ಅನುಮಾನವಿಲ್ಲ. ಸರ್ಕಾರಿ ಉದ್ಯೋಗ ಪಡೆಯಲು ಹಲವು ವರ್ಷಗಳಿಂದ ಅಧ್ಯಯನದಲ್ಲಿ ತೊಡಗಿರುವ ಅಭ್ಯರ್ಥಿಗಳ ಗೋಳು ಹೇಳತೀರದಾಗಿದೆ. 

ಸದ್ಯ ಕರ್ನಾಟಕದಲ್ಲಿ ಸರ್ಕಾರಿ ಉದ್ಯೋಗ ಪಡೆಯಲು ಸಾಮಾನ್ಯ ವರ್ಗ 35 ವರ್ಷ, ಹಿಂದುಳಿದ ವರ್ಗ 38 ವರ್ಷ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ 40 ವರ್ಷ ವಯೋಮಿತಿ ನಿಗದಿಪಡಿಸಲಾಗಿದೆ. ದೇಶದ ಇತರ ರಾಜ್ಯಗಳಲ್ಲಿ ಸದರಿ ವಯೋಮಿತಿಯು ಇದಕ್ಕಿಂತ ಹೆಚ್ಚಿದೆ. ವಯೋಮಿತಿ ಹೆಚ್ಚಿಸಲು ಸರ್ಕಾರ ಚಿಂತನೆ ನಡೆಸಬೇಕಿದೆ.

– ಅನಿಲ್ ಕುಮಾರ್, ನಂಜನಗೂಡು 

ಜನರ ತೆರಿಗೆ ಹಣ ವ್ಯಯ ಬೇಡ

ಉಕ್ರೇನ್‌, ಇಸ್ರೇಲ್‌, ಇರಾನ್‌ನಲ್ಲಿ ಸಂಘರ್ಷ ತಲೆದೋರಿದೆ. ಅಲ್ಲಿಗೆ ಉನ್ನತ ವ್ಯಾಸಂಗಕ್ಕೆ ತೆರಳಿದ್ದ ಭಾರತೀಯ ವಿದ್ಯಾರ್ಥಿಗಳು ಹಾಗೂ ಉದ್ಯೋಗಕ್ಕೆ ತೆರಳಿದವರನ್ನು ಮಾನವೀಯತೆ  ದೃಷ್ಟಿಯಿಂದ ಸ್ವದೇಶಕ್ಕೆ ಕರೆತರಲಾಗುತ್ತಿದೆ.

ವಿದೇಶಗಳಿಗೆ ವಿದ್ಯಾಭ್ಯಾಸಕ್ಕೆ ತೆರಳುವವರು ಲಕ್ಷಾಂತರ ರೂಪಾಯಿ ಖರ್ಚು ಮಾಡುವ ಸ್ಥಿತಿವಂತರೇ ಆಗಿರುತ್ತಾರೆ. ಭವಿಷ್ಯದಲ್ಲಿ ಹೆಚ್ಚಿನ ಸಂಬಳ ಪಡೆಯುವ ಗುರಿ ಹೊಂದಿರುತ್ತಾರೆ. ಬಡವರು ಹಾಗೂ ಮಧ್ಯಮ ವರ್ಗದವರು ಸರ್ಕಾರಕ್ಕೆ ಕಟ್ಟುವ ತೆರಿಗೆ ಹಣವು ಇಂತಹ ಕಾರ್ಯಾಚರಣೆಗಳಿಗೆ ಬಳಕೆಯಾಗುತ್ತದೆ.

ವಿದೇಶಗಳಲ್ಲಿ ಸಿಲುಕಿದ ಭಾರತೀಯರನ್ನು ಇನ್ನು ಮುಂದೆಯೂ ಕರೆತರೋಣ. ಆದರೆ, ಅದಕ್ಕಾಗಿ ಬಡವರ ತೆರಿಗೆ ಹಣ ವ್ಯಯವಾಗುವುದು ಸರಿಯೇ? ಅಂತಹವರಿಂದ ವಿದೇಶಕ್ಕೆ ತೆರಳಲು ಅನುಮತಿ ನೀಡುವ ವೇಳೆಯೇ ಭದ್ರತಾ ಠೇವಣಿ ಸಂಗ್ರಹಿಸಬೇಕಿದೆ. ಅವರು ಅಲ್ಲಿ ಸಂಕಷ್ಟಕ್ಕೆ ಸಿಲುಕಿದಾಗ ಕರೆತರಲು ಈ ಹಣ ಬಳಸಬಹುದು. ಕೇಂದ್ರವು ಈ ದಿಸೆಯಲ್ಲಿ ಗಮನ ಹರಿಸುವುದು ಉತ್ತಮ.

– ಬಿ.ಎನ್. ಭರತ್, ಬೆಂಗಳೂರು 

ಯುದ್ಧದಿಂದ ಮನುಕುಲಕ್ಕೆ ಆಪತ್ತು

ಯುದ್ಧ ಇಬ್ಬಾಯ ಕತ್ತಿ ಇದ್ದಂತೆ. ಎರಡೂ ಕಡೆಯವರನ್ನು ಕೊಲ್ಲುತ್ತದೆ. ಯುದ್ಧವು ದೇಶವೊಂದಕ್ಕೆ ಪ್ರತಿಷ್ಠೆಯಾದರೆ ಮನುಕುಲ ನಾಶವಾಗಲಿದೆ. ಪ್ರಾಕೃತಿಕ ವಿಕೋಪ, ಮಾರಣಾಂತಿಕ ಕಾಯಿಲೆ, ಬಡತನ, ನಿರುದ್ಯೋಗದ ವಿರುದ್ಧ ಹೋರಾಡ ಬೇಕಿರುವುದು ಇಂದಿನ ತುರ್ತು. ಆದರೆ, ಮನುಷ್ಯ ತನ್ನ ನಿಜವಾದ ‘ಹೋರಾಟ’ ಯಾರ ಮೇಲೆ ಮಾಡಬೇಕಾಗಿದೆ ಎನ್ನುವುದನ್ನೇ ಮರೆತಿರುವುದು ವಿಪರ್ಯಾಸ. 

– ಸುಶ್ಮಿತಾ ವೈ., ಹೊಸನಗರ ಗ್ರಂಥಾಲಯ ಸ್ವಾಗತಾರ್ಹ

ಮಹಿಳೆಯರಿಗೆ ಪ್ರತ್ಯೇಕ ಬಸ್‌ ಓಡಿಸಿ

‘ಶಕ್ತಿ’ ಯೋಜನೆ ಬಳಸಿಕೊಂಡು ಮಹಿಳೆಯರು ರಾಜ್ಯದ ಎಲ್ಲ ಭಾಗದಲ್ಲೂ ಓಡಾಡುತ್ತಿದ್ದಾರೆ. ಗಂಡುಮಕ್ಕಳಿಗೆ ಬಸ್‌ನಲ್ಲಿ ಹತ್ತಲು ಸಾಧ್ಯವಾಗುತ್ತಿಲ್ಲ ಎಂಬ ರಾಜ್ಯ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಆರ್.ವಿ. ದೇಶಪಾಂಡೆ ಅವರ ಹೇಳಿಕೆಯು ಸಮಂಜಸವಾಗಿದೆ (ಪ್ರ.ವಾ., ಜೂನ್‌ 23). ಮಹಿಳೆಯರಿಗೆ ಸರ್ಕಾರ ಉಚಿತ ಬಸ್‌ ಪ್ರಯಾಣ ಸೌಲಭ್ಯ ಕಲ್ಪಿಸಿರುವುದಕ್ಕೆ ನಮ್ಮ ಅಭ್ಯಂತರವಿಲ್ಲ. ಆದರೆ, ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಹಣ ಪಾವತಿಸಿಯೂ ಆಸನ ದೊರೆಯದೆ ನಿಂತೇ ಪಯಣಿಸಬೇಕಾದ ಸ್ಥಿತಿಯಿದೆ. ‘ಶಕ್ತಿ’ ಯೋಜನೆ ಬಗ್ಗೆ ಸರ್ಕಾರ ಪುನರ್ ವಿಮರ್ಶೆ ಮಾಡಬೇಕಿದೆ ಅಥವಾ ಮಹಿಳೆಯರಿಗೇ ಪ್ರತ್ಯೇಕವಾಗಿ ಬಸ್‌ ಓಡಿಸುವತ್ತ ಚಿಂತನೆ ನಡೆಸಲಿ.

– ಎಂ.ಎ. ಸುರೇಶ್, ಬೆಂಗಳೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.