ADVERTISEMENT

ವಾಚಕರ ವಾಣಿ: ಬುಧವಾರ, 25 ಜೂನ್‌ 2025

​ಪ್ರಜಾವಾಣಿ ವಾರ್ತೆ
Published 25 ಜೂನ್ 2025, 0:33 IST
Last Updated 25 ಜೂನ್ 2025, 0:33 IST
   

ಎಣ್ಣೆಗಾಣಕ್ಕೆ ಮರುಜೀವ ಸ್ತುತ್ಯರ್ಹ

ಮಂಡ್ಯ ಜಿಲ್ಲೆಯಲ್ಲಿ ಸಾಂಪ್ರದಾಯಿಕ ಎಣ್ಣೆಗಾಣಗಳಿಗೆ ಮರುಜೀವ ನೀಡಲು ಜಿಲ್ಲಾ ಪಂಚಾಯಿತಿ ಕೈಗೊಂಡಿರುವ ತೀರ್ಮಾನವು ಸ್ತುತ್ಯರ್ಹ (ಪ್ರ.ವಾ., ಜೂನ್‌ 24).  ಗ್ರಾಮಗಳ ಆರ್ಥಿಕ ಸಬಲೀಕರಣ, ಉದ್ಯೋಗ ಸೃಷ್ಟಿಯಂಥ ಕಾರಣಗಳಿಂದ ಇಂತಹ ಯೋಜನೆಗಳ ಜಾರಿಗೆ ಮುಂದಾಗಿರುವುದು ಉತ್ತಮ ನಡೆಯಾಗಿದೆ. ಆದರೆ, ಇಂದಿನ ಗ್ರಾಮೀಣ ಪರಿಸರದಲ್ಲಿ ಇಂಥ ಯೋಜನೆಗಳ ಜಾರಿಯು ಸವಾಲಿನ ಕೆಲಸವೇ ಆಗಿದೆ. ಯೋಜನೆಗಳ ಯಶಸ್ಸಿನ ಹಿಂದೆ ಅಧಿಕಾರಿಗಳು ಮತ್ತು ಫಲಾನುಭವಿಗಳ ಜವಾಬ್ದಾರಿಯೂ ಇದೆ. ಈ ಯೋಜನೆ ವಿಫಲಗೊಂಡರೆ ಗ್ರಾಮೀಣಾಭಿವೃದ್ಧಿಯನ್ನು ಮತ್ತೆ ಸರಿದಾರಿಗೆ ತರಲು ಹಲವು ದಶಕಗಳೇ ಹಿಡಿಯಲಿದೆ.

– ಸಂತೋಷ ಕೌಲಗಿ, ಮೇಲುಕೋಟೆ

ADVERTISEMENT

ಯುವಜನರಿಗೆ ಸತ್ಯ ದರ್ಶನ ಬೇಡವೇ?

‘ಯುವಜನ: ಜನಪ್ರಿಯತೆಯ ವಿಷಗಾಳಿ’ ಲೇಖನವು (ಪ್ರ.ವಾ., ಜೂನ್‌ 24) ಸತ್ಯಾಂಶಗಳಿಂದ ಕೂಡಿದೆ. ಈಗಿನ ಯುವಜನರು ದೀಪದ ಹುಳುಗಳಂತೆ; ತಾತ್ಕಾಲಿಕವಾಗಿ ತನ್ನತ್ತ ಸೆಳೆಯುವ ದೀಪದ ಬೆಳಕಿಗೆ ಆಕರ್ಷಿತಗೊಂಡು ಸುಟ್ಟು ಕರಕಲಾಗುತ್ತಿದ್ದಾರೆ. ತಮ್ಮ ಸ್ವಂತ ಬೆಳವಣಿಗೆ ಮರೆತು ತಾತ್ಕಾಲಿಕ ಸಂತೋಷ ಕೊಡುವ ವಿಷಯಗಳತ್ತ ಬಹುಬೇಗ ಆಕರ್ಷಿತರಾಗುವುದು ಸರಿಯಲ್ಲ. ಇದರಿಂದ ಜೀವನ ಸಂಕಷ್ಟಕ್ಕೆ ಸಿಲುಕಲಿದೆ. ಇದೆಲ್ಲದಕ್ಕೂ ಶಿಕ್ಷಣವೇ ಪರಿಹಾರ. ಶೈಕ್ಷಣಿಕ ಹಂತದಲ್ಲಿಯೇ ವಿದ್ಯಾರ್ಥಿಗಳಿಗೆ ಈ ಬಗ್ಗೆ ಸತ್ಯ ದರ್ಶನ ಮಾಡಿಕೊಟ್ಟರೆ ಅವರು ಸರಿದಾರಿಯಲ್ಲಿ ಸಾಗಲು ಸಹಕಾರಿಯಾಗಲಿದೆ. ಈ ದಿಸೆಯಲ್ಲಿ ಪೋಷಕರು ಮತ್ತು ಬೋಧಕರ ಗುರುತರ ಜವಾಬ್ದಾರಿ ಹೆಚ್ಚಿದೆ.

– ಎಂ.ಎಸ್‌. ದಿವ್ಯಶ್ರೀ, ಬೇಲೂರು 

ಕನ್ನಡಿಗರು ನಾಚಿಕೆಪಡುವ ಕಾಲ!

ನಾನು ಐಐಟಿಯಲ್ಲಿ ಎಂ.ಟೆಕ್ ಓದುವಾಗ ಅಲ್ಲಿ ಬೇರೆ ರಾಜ್ಯದ ಸಂಘಗಳಿದ್ದವು. ಕನ್ನಡ ಸಂಘದ ಕಾರ್ಯಕ್ರಮಗಳಿಗೆ ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಷ್ಟೇ ಬರುತ್ತಿದ್ದರು. ಸ್ನಾತಕ ಪದವಿ ವಿದ್ಯಾರ್ಥಿಗಳು ಬಾರದಿರುವುದು ಸೋಜಿಗವೆನಿಸಿತ್ತು. ಬಹಳ ದಿನಗಳ ನಂತರ ಇದಕ್ಕೆ ಕಾರಣವೂ ಗೊತ್ತಾಯಿತು. ಹಿಂದಿ ಅಥವಾ ಇಂಗ್ಲಿಷ್‌ನಲ್ಲಷ್ಟೇ ಮಾತನಾಡಬೇಕೆಂದು ಈ ವಿದ್ಯಾರ್ಥಿಗಳು ತಮ್ಮಲ್ಲೇ ಕಡ್ಡಾಯ ಮಾಡಿಕೊಂಡಿದ್ದರು. ಯಾವುದೇ ವಿದ್ಯಾರ್ಥಿಯು ತಮ್ಮ ರಾಜ್ಯದವರ ಜೊತೆ ಸೇರಿದರೆ ಅವರನ್ನು ‘ಹಿಂದಿವಾಲಾ’ಗಳು ಆಡಿಕೊಳ್ಳುತ್ತಿದ್ದರು. ದಕ್ಷಿಣ ಭಾರತದವರನ್ನು ‘ಸೌದಿ ಲೋಗ’ ಎಂದು ಅಪಹಾಸ್ಯ ಮಾಡುತ್ತಿದ್ದರು.

ಆದರೆ, ತಮಿಳು ಹುಡುಗರು ಇಂಥದ್ದಕ್ಕೆಲ್ಲ ಸೊಪ್ಪು ಹಾಕುತ್ತಿರಲಿಲ್ಲ. ಕನ್ನಡ ಹುಡುಗರು ಕಂಡರೂ ಕಾಣದಂತೆ ಹೋಗಿಬಿಡುತ್ತಿದ್ದರು. ಇದಕ್ಕೆ ಮೂಲ ಕಾರಣವೆಂದರೆ ಬಂಗಾಳಿ, ತಮಿಳು, ಮಲಯಾಳ, ಮರಾಠಿ ಭಾಷಿಕರನ್ನು ಬಿಟ್ಟರೆ ಉಳಿದವರು ಹಿಂದಿ ಯಜಮಾನಿಕೆಯನ್ನು ಒಪ್ಪಿಕೊಂಡಿರುವುದಾಗಿದೆ. ಇಂಗ್ಲಿಷ್‌ ಮಾತನಾಡುವವರು ನಾಚಿಕೆ ಪಟ್ಟುಕೊಳ್ಳುವ ಕಾಲ ಬರಲಿದೆ ಎಂದು ಕೇಂದ್ರ ಸಚಿವ ಅಮಿತ್‌ ಶಾ ಹೇಳಿದ್ದನ್ನು ಕೇಳಿ ಹಳೆಯ ಈ ಪ್ರಸಂಗಗಳು ನೆನಪಾದವು. ಅಂದಹಾಗೆ ‘ಕನ್ನಡ ಮಾತನಾಡುವವರು ನಾಚಿಕೆಪಡುವ ಕಾಲ’ ಬಂದು ಹಳೆಯ ಮಾತಾಯಿತು.

– ಶಶಿಧರ ಪಾಟೀಲ, ಬಾಗಲಕೋಟೆ

ಮನೆ ಮಂಜೂರಿಗೆ ಲಂಚ ಹೊಸತೇನಲ್ಲ

‘ವಸತಿ ಇಲಾಖೆಯಲ್ಲಿ ಮನೆ ಹಂಚಿಕೆಗೆ ಲಂಚ ನೀಡಬೇಕಿದೆ’ ಎಂದು ರಾಜ್ಯ ಯೋಜನಾ ಆಯೋಗದ ಉಪಾಧ್ಯಕ್ಷ ಬಿ.ಆರ್. ಪಾಟೀಲ ಮಾಡಿರುವ ಆರೋಪವು ಹೊಸದೇನಲ್ಲ. ಎಲ್ಲ ಪಕ್ಷಗಳ ಅಧಿಕಾರಾವಧಿಯಲ್ಲಿ ಇದು ನಿರಂತರವಾಗಿ ನಡೆದುಕೊಂಡು ಬಂದಿದೆ. ಗ್ರಾಮ ಪಂಚಾಯಿತಿ, ಪಟ್ಟಣ ಪಂಚಾಯಿತಿ, ಪುರಸಭೆ, ನಗರಸಭೆ, ಮಹಾನಗರ ಪಾಲಿಕೆಯಲ್ಲಿ ಫಲಾನುಭವಿಗಳು ಲಂಚ ನೀಡಿದರಷ್ಟೇ ಮನೆ ಮಂಜೂರಾಗಲಿದೆ. ಇದರಲ್ಲಿ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಭಾಗೀದಾರರಾಗಿದ್ದಾರೆ.

– ವಿ.ಜಿ. ಇನಾಮದಾರ, ಸಾರವಾಡ 

ಶಿಕ್ಷಕರ ಮೇಲೆ ಕಣ್ಗಾವಲು ಸರಿಯೇ?

ಪ್ರಾಥಮಿಕ ಮತ್ತು ಪ್ರೌಢಶಾಲಾ ಮಕ್ಕಳಿಗೆ ಮುಖಚರ್ಯೆ ಆಧಾರಿತ ಇ–ಹಾಜರಾತಿ ಕಡ್ಡಾಯಕ್ಕೆ ರಾಜ್ಯ ಸರ್ಕಾರ ಮುಂದಾಗಿರುವ ಸುದ್ದಿ ಓದಿ ಅಚ್ಚರಿಯಾಯಿತು (ಪ್ರ.ವಾ., ಜೂನ್‌ 22). ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯಲ್ಲಿ ತಪಾಸಣಾ ಅಧಿಕಾರಿಗಳು ಇಲ್ಲವೇ? ನಕಲಿ ದಾಖಲಾತಿ ತೋರಿಸುತ್ತಿದ್ದರೆ ಅಂತಹ ಶಿಕ್ಷಕರಿಗೆ ಶಿಕ್ಷೆ ಏಕಿಲ್ಲ? ಸಮಾಜದಲ್ಲಿ ಶಿಕ್ಷಕ ವೃತ್ತಿ ಪವಿತ್ರವೆಂದು ಭಾವಿಸಲಾಗಿದೆ. ಈಗ ಶಿಕ್ಷಕರ ಮೇಲೆಯೇ ಕಣ್ಗಾವಲು ಇಡುವ ಪರಿಸ್ಥಿತಿ ಬಂದಿರುವುದು ದುರಂತ. 

– ರವಿ ಯಲಿಗಾರ, ಮುನವಳ್ಳಿ

ಶಿಕ್ಷಕರ ವರ್ಗಾವಣೆ ತೊಡಕು ನಿವಾರಿಸಿ

2007ರಲ್ಲಿ ಕೊಪ್ಪಳ ಜಿಲ್ಲೆಯ ತಾಲ್ಲೂಕುವೊಂದಕ್ಕೆ ನಾನು ಪ್ರೌಢಶಾಲಾ ಶಿಕ್ಷಕಿಯಾಗಿ ನೇಮಕಗೊಂಡೆ. ಅದೇ ತಾಲ್ಲೂಕಿನಲ್ಲಿ ಮುಂದುವರಿದಿದ್ದರೆ ಈ ವೇಳೆಗೆ ವರ್ಗಾವಣೆ ಆಗಿರುತ್ತಿದ್ದೆ. ಆದರೆ, 2019ರಲ್ಲಿ ಅದೇ ಜಿಲ್ಲೆಯ ಬೇರೊಂದು ತಾಲ್ಲೂಕಿಗೆ ನನ್ನನ್ನು ಹೆಚ್ಚುವರಿ ಶಿಕ್ಷಕಿಯಾಗಿ ವರ್ಗಾಯಿಸಲಾಯಿತು. ಈಗಿನ ವರ್ಗಾವಣೆ ನಿಯಮದ ಪ್ರಕಾರ ಶೇ 25ರಷ್ಟು ಹುದ್ದೆಗಳು ಖಾಲಿ ಇರಬೇಕು ಮತ್ತು ಒಂದೇ ಬ್ಲಾಕ್‌ನಲ್ಲಿ ಹತ್ತು ವರ್ಷ ಸೇವೆ ಸಲ್ಲಿಸಿರುವುದು ಕಡ್ಡಾಯವಾಗಿದೆ. ಹಾಗಾಗಿ, ನಾನು ಮೂರ್ನಾಲ್ಕು ಬಾರಿ ವರ್ಗಾವಣೆಯಿಂದ ವಂಚಿತಳಾಗಿದ್ದೇನೆ.

ಇದೇ ನಿಯಮಗಳು ಮುಂದುವರಿದರೆ ನನಗೆ ವರ್ಗಾವಣೆಯಾಗಲು ಇನ್ನೂ ನಾಲ್ಕು ವರ್ಷ ಬೇಕು. ನನ್ನದಲ್ಲದ ತಪ್ಪಿಗೆ ಶಿಕ್ಷೆ ಅನುಭವಿಸುವಂತಾಗಿದೆ. ವರ್ಗಾವಣೆ ಪ್ರಕ್ರಿಯೆಯಲ್ಲಿ ಎದುರಾಗಿರುವ ತೊಡಕುಗಳಿಗೆ ಶಿಕ್ಷಣ ಸಚಿವರು ಪರಿಹಾರ ಹುಡುಕಬೇಕಿದೆ.

– ರೂಪಾ ದೊಡಮನಿ, ಕುಷ್ಟಗಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.