ತುರ್ತು ಪರಿಸ್ಥಿತಿಯ ನೆರಳು ಕವಿದಿದೆ...
ರಾಷ್ಟ್ರೀಯ ಪಕ್ಷಗಳಲ್ಲಿ ಒಂದು ರೀತಿಯ ಆಂತರಿಕ ತುರ್ತು ಪರಿಸ್ಥಿತಿ ಇರುತ್ತದೆ. ಅಲ್ಲಿ ಆ ಪಕ್ಷದ ಪ್ರತಿನಿಧಿಗಳು ಆತ್ಮಸಾಕ್ಷಿ, ನೈತಿಕತೆಯನ್ನು ಅಡಮಾನ ಇಟ್ಟಿರುತ್ತಾರೆ. ಸ್ವಂತ ವಿವೇಚನೆಗೆ ಅಲ್ಲಿ ಆಸ್ಪದ ಕಡಿಮೆ. ಜನಹಿತ, ನಾಡಹಿತಕ್ಕಿಂತ ಸ್ವಹಿತ, ಪಕ್ಷಹಿತ ಮುಖ್ಯ. ನಿಷ್ಠುರವಾಗಿ ಅಭಿಪ್ರಾಯ ವ್ಯಕ್ತಪಡಿಸುವವರನ್ನು ಅಲ್ಲಿ ಸಹಿಸುವುದಿಲ್ಲ. ಅಂತೆಯೇ ನಮ್ಮ ಸಂಸದರು ಕರ್ನಾಟಕದ ಅಭಿವೃದ್ಧಿ, ಅನುದಾನ ವಿಷಯದಲ್ಲಿ ಕೇಂದ್ರದಿಂದ ಏನೇ ತಾರತಮ್ಯವಾದರೂ ಚಕಾರ ಎತ್ತುವುದಿಲ್ಲ.
ನೈತಿಕತೆ, ಆತ್ಮಸಾಕ್ಷಿ ಶಬ್ದಗಳಿಗೆ ರಾಜಕೀಯದಲ್ಲಿ ಈಗ ಯಾವ ಅರ್ಥವೂ ಉಳಿದಿಲ್ಲ. ಅಂತಹ ನೈತಿಕ ಧೈರ್ಯ, ಸ್ಥೈರ್ಯವಿರುವ ವ್ಯಕ್ತಿಗಳು ಯಾವ ಪಕ್ಷದಲ್ಲಿ ಇದ್ದಾರೆ? ಹೀಗಾಗಿ, ಏನೇ ದುರಾಚಾರ ನಡೆದರೂ ಸ್ವಪಕ್ಷೀಯರು ಧ್ವನಿ ಎತ್ತುವುದಿಲ್ಲ. ಕೂಡಲೇ, ಹೈಕಮಾಂಡ್ ಮಧ್ಯಪ್ರವೇಶಿಸಿ ಎಚ್ಚರಿಕೆ ನೀಡುತ್ತದೆ.
ರಾಷ್ಟ್ರೀಯ ಪಕ್ಷಗಳಿಗೂ ಒಂದಿಷ್ಟು ಶಿಸ್ತು ಬೇಕು ನಿಜ. ಆದರೆ ಅದು ರಾಷ್ಟ್ರಹಿತ, ನಾಡಹಿತಕ್ಕಿಂತ ಮಿಗಿಲಾದದ್ದು ಅಲ್ಲ. ನ್ಯಾಯೋಚಿತ ಆಡಳಿತ ವ್ಯವಸ್ಥೆಯ ಬದಲು ಪ್ರತೀಕಾರಾತ್ಮಕ ಆಡಳಿತ ವ್ಯವಸ್ಥೆ ಅನ್ನುವುದು ಇಂದಿನ ಸರ್ಕಾರಗಳ ಮಾರ್ಗವಾಗಿದೆ. ಹಾಗಾಗಿ, ತುರ್ತು ಪರಿಸ್ಥಿತಿಯ ನೆರಳು ಸದಾ ದೇಶದ ಮೇಲೆ ಕವಿದಿರುವಂತೆ ಭಾಸವಾಗುತ್ತದೆ. ಇದು ನಿಜವಾದ ಕಾಲದ ಕೇಡು.
- ವೆಂಕಟೇಶ ಮಾಚಕನೂರ, ಧಾರವಾಡ
ವಾಸ್ತವಕ್ಕೆ ಹಿಡಿದ ಕನ್ನಡಿ
‘ಶಿಕ್ಷಣ ವ್ಯವಸ್ಥೆ: ಕಲ್ಪನಾತೀತ ದುರವಸ್ಥೆ’ ಲೇಖನದಲ್ಲಿ (ಪ್ರ.ವಾ., ಜೂನ್ 25) ಸಿ.ಎನ್. ರಾಮಚಂದ್ರನ್ ಅವರು, ವಾಸ್ತವದ ಮೇಲೆ ಬೆಳಕು ಚೆಲ್ಲಿದ್ದಾರೆ. ಸರ್ಕಾರಿ ಶಾಲೆಗಳಲ್ಲಿರುವ ನುರಿತ ಶಿಕ್ಷಕರು ಯಾವುದೇ ಖಾಸಗಿ ಶಾಲೆಯಲ್ಲಿಲ್ಲ.
ಆದರೆ, ಈ ಅವ್ಯವಸ್ಥೆಗೆ ಮೂಲ ಕಾರಣ ಸರಿಯಾದ ಉತ್ತರದಾಯಿತ್ವ ಇಲ್ಲದಿರುವುದಾಗಿದೆ. ಸರ್ಕಾರಿ ಶಾಲೆ, ಕಾಲೇಜುಗಳಿಗೆ ಸೇರುವ ಬಹುತೇಕ ವಿದ್ಯಾರ್ಥಿಗಳು ಸಾಮಾಜಿಕವಾಗಿ, ಆರ್ಥಿಕವಾಗಿ ಹಾಗೂ ಶೈಕ್ಷಣಿಕವಾಗಿ ಹಿಂದುಳಿದವರಾಗಿರುತ್ತಾರೆ. ಹಾಗಾಗಿ, ಸರಿಯಾದ ಉತ್ತರದಾಯಿತ್ವ ನಿಗದಿಪಡಿಸುವುದು ಸರ್ಕಾರದ ಜವಾಬ್ದಾರಿ.
- ಅಭಿಷೇಕ್ ಎನ್., ಬೇಲೂರು
ಕರಗಬಲ್ಲ ಹಾಲಿನ ಪೊಟ್ಟಣ ಸ್ವಾಗತಾರ್ಹ
ಪಾಲಿಲ್ಯಾಕ್ಟಿಕ್ ಆಮ್ಲ ಎಂಬ ಸಸ್ಯಜನ್ಯ ರಾಸಾಯನಿಕದಿಂದ ತಯಾರಿಸುವ ಮಣ್ಣಿನಲ್ಲಿ ಕರಗಬಲ್ಲ ಪ್ಲಾಸ್ಟಿಕ್‌ನಲ್ಲಿ ಗ್ರಾಹಕರಿಗೆ ಹಾಲಿನ ಉತ್ಪನ್ನಗಳನ್ನು ತಲುಪಿಸಲು ಬೆಂಗಳೂರು ಹಾಲು ಒಕ್ಕೂಟ (ಬಮೂಲ್) ಮುಂದಾಗಿರುವುದು ಉತ್ತಮ ನಡೆ. ಮುಂಬರುವ ದಿನಗಳಲ್ಲಿ ಕೆಎಂಎಫ್ ತನ್ನ ಎಲ್ಲ ಹಾಲಿನ ಉತ್ಪನ್ನಗಳನ್ನು ಇದೇ ಮಾದರಿಯಲ್ಲಿ ಮಾರುಕಟ್ಟೆಗೆ ಒದಗಿಸುವಂತಾಗಲಿ. ಆರಂಭಿಕವಾಗಿ ಇದು ಕೊಂಚ ಹೆಚ್ಚು ವೆಚ್ಚದಾಯಕವಾದರೂ ಬಳಕೆಯ ವ್ಯಾಪ್ತಿ ಹಿಗ್ಗಿದಂತೆ ಅದರ ವೆಚ್ಚ ಖಂಡಿತ ತಗ್ಗಬಲ್ಲದು. ಮಾರುಕಟ್ಟೆಯಲ್ಲಿ ಇತರ ಸಹಕಾರ ಹಾಗೂ ಖಾಸಗಿ ವಲಯದಿಂದ ತೀವ್ರ ಸ್ಪರ್ಧೆ ಎದುರಿಸುತ್ತಿರುವ ‘ನಂದಿನಿ’ಯ ನೈತಿಕ ಬಲವೂ ಇದರಿಂದ ಮತ್ತಷ್ಟು ಹಿಗ್ಗಬಲ್ಲದು. ಇಂಥದೊಂದು ತಾಜಾ ಯಶೋಗಾಥೆಗೆ ನಾಡು ಕಾಯುತ್ತಿದೆ.
- ಕೇಶವ ಎಚ್. ಕೊರ್ಸೆ, ಶಿರಸಿ
ವಿದ್ಯಾರ್ಥಿಗಳು ಭಾಷಾ ದಲಿತರು
ರಘುನಾಥ ಚ.ಹ. ಅವರ ‘ಅತಿಯಾದರೆ ಭಾವುಕತೆಯೂ ಕುತ್ತು’ ಲೇಖನವು (ಪ್ರ.ವಾ., ಜೂನ್ 26) ಕನ್ನಡಿಗರ ಮನಸ್ಸಿಗೆ ಕನ್ನಡಿ ಹಿಡಿದಿದೆ. ಬೆಂಗಳೂರು, ಮೈಸೂರು ಸೇರಿ ರಾಜ್ಯದ ನಗರ ಪ್ರದೇಶಗಳ ಶಾಲೆ, ಕಾಲೇಜುಗಳಲ್ಲಿ ಕನ್ನಡ ಮಾತನಾಡುವ ವಿದ್ಯಾರ್ಥಿಗಳು ಭಾಷಾ ದಲಿತರಾಗಿದ್ದಾರೆ! ಕರ್ನಾಟಕದಲ್ಲಿರುವ ಕೇಂದ್ರ ಸರ್ಕಾರದ ಅಧೀನದ ಸಂಸ್ಥೆಗಳಲ್ಲಿ ಕನ್ನಡ ಕರಗುತ್ತಿದೆ. ಕಮಲ್ ಹಾಸನ್ ಮಾತಿಗೆ ಕೋಪಗೊಳ್ಳುವ ಕನ್ನಡಿಗರು, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಹೇಳಿಕೆಗೆ, ಜಾಣ ಕುರುಡುತನ ಪ್ರದರ್ಶಿಸಿದ್ದು ವಿಪರ್ಯಾಸ.
ತಮ್ಮ ಬಲಹೀನತೆಯನ್ನು ಔದಾರ್ಯದ ಹೆಸರಿನಲ್ಲಿ ಪ್ರಚಾರ ಪಡೆಯುವ ಕನ್ನಡಿಗರು, ಕರ್ಣನಂತೆ ಆಗದೆ ಕಲಿಭೀಮರಾಗಿ ಕುವೆಂಪು ಹಾಗೂ ಇತರ ಕನ್ನಡದ ಕವಿಗಳ ಕನ್ನಡದ ಕನಸನ್ನು ನನಸಾಗಿಸಲಿ.
- ಮಂಜುಳಾ ರಾಮಶೇಷ, ಹುಲಿಮಂಗಲ
ಜನರಿಗೆ ನಿತ್ಯ ಮನರಂಜನೆ
ರಾಜ್ಯದಲ್ಲಿ ಲಂಚಾವತಾರ ನಾಟಕವು ಸಾರ್ವಜನಿಕರಿಗೆ ನಿತ್ಯವೂ ಮನರಂಜನೆ ನೀಡುತ್ತಿದೆ. ಒಂದಾದ ನಂತರ ಒಂದು ಎಪಿಸೋಡ್ ಹೊರಬರುತ್ತಲೇ ಇದೆ. ದೇಶದಲ್ಲಿ ಮೂರು ರಾಜ್ಯಗಳಲ್ಲಿ ಮಾತ್ರವೇ ಕಾಂಗ್ರೆಸ್ ಅಧಿಕಾರದಲ್ಲಿದೆ. ಅಧಿಕಾರಕ್ಕೆ ಬಂದು ಎರಡು ವರ್ಷವಾದರೂ ಬಿಜೆಪಿ ನೇತೃತ್ವದ ಈ ಹಿಂದಿನ ಸರ್ಕಾರದ ಮೇಲೆ ಮಾಡಲಾಗಿದ್ದ ಭ್ರಷ್ಟಾಚಾರ ಆರೋಪಗಳಲ್ಲಿ ಒಂದನ್ನಾದರೂ ಸಾಬೀತುಪಡಿಸುವಲ್ಲಿ ಯಶಸ್ವಿಯಾಗಿಲ್ಲ. ಭ್ರಷ್ಟಾಚಾರ ನಿಯಂತ್ರಿಸಿ, ತನ್ನ ಕಾರ್ಯವೈಖರಿ ತಿದ್ದಿಕೊಳ್ಳುವ ಸ್ಥಿತಿಯಲ್ಲಿ ರಾಜ್ಯ ಸರ್ಕಾರ ಇದ್ದಂತಿಲ್ಲ.
- ಶಿವರಾಮಕೃಷ್ಣ, ಮೈಸೂರು
ಅಸ್ಪೃಶ್ಯತೆಗೆ ಕೊನೆ ಇಲ್ಲವೇ?
ಚಾಮರಾಜನಗರ ಜಿಲ್ಲೆಯ ಹೊಮ್ಮ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಪರಿಶಿಷ್ಟ ಜಾತಿಗೆ ಸೇರಿದ ಮಹಿಳೆಯು ಅಡುಗೆ ಮಾಡುತ್ತಿದ್ದಾರೆ ಎಂಬ ಕಾರಣಕ್ಕೆ ಪೋಷಕರು, ತಮ್ಮ ಮಕ್ಕಳನ್ನು ಶಾಲೆ ಬಿಡಿಸುತ್ತಿರುವುದು ವರದಿಯಾಗಿದೆ. ಇದು ಒಳ್ಳೆಯ ಬೆಳವಣಿಗೆಯಲ್ಲ. ಸಂವಿಧಾನ ಜಾರಿಯಾಗಿ ಮುಕ್ಕಾಲು ಶತಮಾನ ಕಳೆದಿದೆ. ಜಾತಿ ಕಾರಣಕ್ಕಾಗಿ ನಡೆಯುತ್ತಿರುವ ಇಂತಹ ಪ್ರಕರಣಗಳು ಹೆಚ್ಚುತ್ತಲೇ ಇವೆ. ಆಳುವ ವರ್ಗ ಏನು ಮಾಡುತ್ತಿದೆ? ಹಳ್ಳಿಗಳಲ್ಲಿ ಅಸ್ಪೃಶ್ಯತೆ ಇನ್ನೂ ಜೀವಂತವಾಗಿದೆ. ಇದರ ನಿರ್ಮೂಲನೆಗೆ ಜಾಗೃತಿ ಮೂಡಿಸಬೇಕಿದೆ.
- ರಾಮಚಂದ್ರ ಮಂಚಲದೊರೆ, ಗುಬ್ಬಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.