ADVERTISEMENT

ವಾಚಕರ ವಾಣಿ | ಸೇವಾ ಮನೋಭಾವ ಎಂದರೆ...

​ಪ್ರಜಾವಾಣಿ ವಾರ್ತೆ
Published 27 ಜುಲೈ 2020, 19:30 IST
Last Updated 27 ಜುಲೈ 2020, 19:30 IST

ಸಮಾಜಸೇವೆ ಎಂದರೆ ಹಣ, ಅಧಿಕಾರ ಮತ್ತು ಅಂತಸ್ತು ಇದ್ದವರು ತಮ್ಮ ಹುಟ್ಟುಹಬ್ಬದಂದು ಆಸ್ಪತ್ರೆಯ ರೋಗಿಗಳಿಗೆ ಎರಡು ಹಣ್ಣು ಕೊಟ್ಟು ದೊಡ್ಡ ಫೋಟೊ ತೆಗೆಸಿಕೊಳ್ಳುವುದು, ಶಾಲಾ ಮಕ್ಕಳಿಗೆ ತಮ್ಮ ಭಾವಚಿತ್ರ ಸಹಿತ ನೋಟ್‌ ಪುಸ್ತಕಗಳನ್ನು ಕೊಡುವುದು, ಇತ್ತೀಚೆಗೆ ಆಹಾರ ಸಾಮಗ್ರಿಗಳ ಕಿಟ್ ಕೊಟ್ಟು ಮಾಧ್ಯಮಗಳಲ್ಲಿ, ಸಾಮಾಜಿಕ ಜಾಲತಾಣಗಳಲ್ಲಿ ಬಿಂಬಿಸಿಕೊಳ್ಳುವುದು ಎಂಬಂತಾಗಿದೆ. ಆದರೆ ಇದರಾಚೆಗೆ, ಕಷ್ಟದಲ್ಲಿ ಇರುವವರಿಗೆ ತನ್ನಿಂದ ಮಾಡಲಾಗುವ ಸಣ್ಣ ಸಹಾಯವೂ ಸಮಾಜಸೇವೆ ಎಂಬುದನ್ನು ಉಡುಪಿಯ ರಾಜೀವಿ ತೋರಿಸಿಕೊಟ್ಟಿದ್ದಾರೆ. ಆಟೊ ಚಾಲಕಿ ಹಾಗೂ ಆಶಾ ಕಾರ್ಯಕರ್ತೆಯಾಗಿರುವ ಅವರು, ಮಧ್ಯರಾತ್ರಿ ಊರಿನ ಮಹಿಳೆಯೊಬ್ಬರಿಗೆ ಹೆರಿಗೆ ನೋವು ಕಾಣಿಸಿಕೊಂಡಾಗ 18 ಕಿ.ಮೀ. ಆಟೊ ಚಲಾಯಿಸಿಕೊಂಡು ಹೋಗಿ ದೂರದ ಆಸ್ಪತ್ರೆಗೆ ಸೇರಿಸಿದ್ದಾರೆ.

ಈ ರೀತಿ ಅದೆಷ್ಟೋ ಜನ ತಮ್ಮಿಂದಾಗುವ ಸಹಾಯವನ್ನು ಮಾಡುವ ಮೂಲಕ ಸಮಾಜಕ್ಕೆ ನೆರವಾಗುತ್ತಿರುತ್ತಾರೆ. ಆದರೆ ಅವರಲ್ಲಿ ಯಾರಲ್ಲಿಯೂ ಅದನ್ನು ಪ್ರದರ್ಶನ ಮಾಡಬೇಕೆನ್ನುವ ಹಪಹಪಿತನ ಇರುವುದಿಲ್ಲ ಮತ್ತು ಸಮಾಜ ಸೇವಕರು ಎನ್ನುವ ಹಣೆಪಟ್ಟಿಯನ್ನೂ ಅವರು ಹೊಂದಿರುವುದಿಲ್ಲ. ಇನ್ನೊಬ್ಬರ ನೋವಿಗೆ ಸ್ಪಂದಿಸುವ ಗುಣ ಅವರಲ್ಲಿ ಇರುತ್ತದೆ. ಫಲಾಪೇಕ್ಷೆ ನಿರೀಕ್ಷಿಸದೆ ಜನರ ನೋವಿಗೆ ಸ್ಪಂದಿಸುವ ರಾಜೀವಿ ಅವರಿಗೆ ಇರುವಂತಹ ಮನೋಭಾವ ಈಗಿನ ಸಮಾಜಕ್ಕೆ ಅವಶ್ಯಕ.

-ತಿಮ್ಮೇಶ ಮುಸ್ಟೂರು,ಜಗಳೂರು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.