ADVERTISEMENT

ವಾಚಕರ ವಾಣಿ | ಕುರೂಪಗೊಂಡ ಸ್ಥಳನಾಮ: ವೈಶಿಷ್ಟ್ಯ ಮರೆಯಾದೀತು

​ಪ್ರಜಾವಾಣಿ ವಾರ್ತೆ
Published 2 ಜುಲೈ 2021, 19:02 IST
Last Updated 2 ಜುಲೈ 2021, 19:02 IST

‘ಎಲ್ಲರಿಗೂ ಬೇಕು ಎಲ್ಲದಕ್ಕೂ ಬೇಕು’ ಎಂಬ ಒಗಟಿಗೆ ಉತ್ತರ ‘ಹೆಸರು’. ಯಾವುದೇ ವ್ಯಕ್ತಿ, ವಸ್ತು, ಸ್ಥಳಗಳ ಹೆಸರಿನ ಜೊತೆ ಚಾರಿತ್ರಿಕವಾದ, ಸಾಂಸ್ಕೃತಿಕವಾದ, ಭಾವನಾತ್ಮಕವಾದ ಸಂಬಂಧವಿರುತ್ತದೆ. ಕರ್ನಾಟಕದ ಗಡಿ ಭಾಗದಲ್ಲಿರುವ ಕೇರಳದ ಕಾಸರಗೋಡು ತಾಲ್ಲೂಕಿನ ಊರುಗಳ ಕನ್ನಡ ಹೆಸರುಗಳನ್ನು ಬದಲಾಯಿಸಬಾರದು, ಅಲ್ಲಿನ ಕನ್ನಡ ಮನಸ್ಸುಗಳಿಗೆ ಗಾಸಿ ಮಾಡಬಾರದು ಎನ್ನುವ ಚರ್ಚೆ ನಡೆಯುತ್ತಿರುವ ಈ ಹೊತ್ತಿನಲ್ಲಿ, ರಾಜ್ಯದ ಇನ್ನಿತರ ಭಾಗಗಳಿಗೂ ಈ ಆಸಕ್ತಿಯನ್ನು ಹೊರಳಿಸಬೇಕು.

ರಾಜ್ಯದಲ್ಲಿನ ಹೆದ್ದಾರಿಗಳ ಬದಿಯ ಅನೇಕ ಊರಿನ ಹೆಸರುಗಳು ಹೀಗೆ ಕುರೂಪಗೊಂಡಿರುವುದು ಕಂಡುಬರುತ್ತದೆ. ಉದಾಹರಣೆಗೆ, ರಾಷ್ಟ್ರೀಯ ಹೆದ್ದಾರಿ- 04ರಲ್ಲಿ ಹಾದು ಹೋಗುತ್ತ ಶಿರಾ ತಾಲ್ಲೂಕಿನ ಕಳ್ಳಂಬೆಳ್ಳದ ಹತ್ತಿರ ಒಂದು ಹೆದ್ದಾರಿ ಸುಂಕ ವಸೂಲಾತಿ ಕೇಂದ್ರವಿದೆ. ಅದು ಈಗ ‘ಕರಜೀವನ ಹಳ್ಳಿ’ಯಾಗಿದೆ. ಅಲ್ಲಿ ರಸ್ತೆ ಕರವನ್ನು ವಸೂಲಿ ಮಾಡುತ್ತಿರುವುದಕ್ಕೂ ಆ ಹೆಸರಿಗೂ ಕಾಕತಾಳೀಯವಾದ ಹೊಂದಾಣಿಕೆಯಾಗಿ, ಇಂಥ ಹೆಸರು ಬಂದಿದೆ. ಆದರೆ ಆ ಊರಿನ ಹೆಸರು ‘ಕರೆಜವನಹಳ್ಳಿ’. ಇದಕ್ಕೆ ಇರುವ ಸಾಂಸ್ಕೃತಿಕವಾದ, ಪೌರಾಣಿಕವಾದ ಅರ್ಥವೇ ಬೇರೆ.

ನಮ್ಮ ಹಿರಿಯರು ಯಮನನ್ನು ಜವನೆಂದು ಕರೆದು, ಅವನ ವಾಹನ ಕೋಣವಾದ್ದರಿಂದ ಅವನು ‘ಕರೆಜವ’ ಆಗಿರಬಹುದು ಎನ್ನುವ ವಿಶಾಲಾರ್ಥವನ್ನು ಈ ಹೆಸರು ಕೊಡುತ್ತದೆ. ಆದರೆ ಈಗ ಇಲ್ಲಿ ಕರ ವಸೂಲಿ ಮಾಡುವುದರಿಂದ ಕರಜೀವನಹಳ್ಳಿ ಎಂಬ ಸಂಕುಚಿತವಾದ ತಪ್ಪು ಅರ್ಥಕ್ಕೆ ಕಾರಣವಾಗಿದೆ. ಹೀಗೆ ಈ ಹೆದ್ದಾರಿಗಳ ಗುಂಟ ಹೋದರೆ ಇಂತಹ ಅನೇಕ ಕುರೂಪಗೊಂಡ, ಸ್ಥಳನಾಮ ವಿಶೇಷಗಳನ್ನೇ ಮರೆಮಾಡುತ್ತಿರುವ ಹೆಸರುಗಳು ಸಿಗಬಹುದು. ಹೆದ್ದಾರಿ ಪ್ರಾಧಿಕಾರಗಳು ಊರಿನ ಹೆಸರುಗಳ ನಾಮಫಲಕಗಳನ್ನು ಹಾಕುವಾಗ ಸ್ಥಳನಾಮಗಳ ವಿಶೇಷಗಳನ್ನು ಸ್ಥಳೀಯರಿಂದ ತಿಳಿದುಕೊಂಡು, ಸರಿಯಾಗಿ ಬರೆಸಿ ಹಾಕುವ ಸೂಕ್ಷ್ಮ ಮನೋಭಾವ ಬೆಳೆಸಿಕೊಳ್ಳಬೇಕು. ಕನ್ನಡ ಅಭಿವೃದ್ಧಿ ಪ್ರಾಧಿಕಾರವು ಈ ಬಗ್ಗೆ ಗಮನಹರಿಸಬೇಕು.
-ಡಾ. ಮೂರ್ತಿತಿಮ್ಮನಹಳ್ಳಿ,ಹೊಸಂಗಡಿ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.