ADVERTISEMENT

ವಾಚಕರ ವಾಣಿ | ಸಾರ್ವಜನಿಕರ ಹಣದ ಬಳಕೆ ಹೀಗಿರಲಿ...

​ಪ್ರಜಾವಾಣಿ ವಾರ್ತೆ
Published 28 ಜುಲೈ 2020, 19:30 IST
Last Updated 28 ಜುಲೈ 2020, 19:30 IST

ಕೋವಿಡ್ ನಿಯಂತ್ರಣ ಉಪಕರಣಗಳ ಖರೀದಿಯಲ್ಲಿ ಅವ್ಯವಹಾರ ನಡೆದಿದೆ ಎಂದು ವಿರೋಧ ಪಕ್ಷಗಳು ಆಪಾದಿಸಿದರೆ, ಯಾವುದೇ ಅಕ್ರಮ ನಡೆದಿಲ್ಲ ಎಂದು ಆಡಳಿತ ಪಕ್ಷ ಸಮರ್ಥಿಸಿಕೊಳ್ಳುತ್ತಿದೆ. ಎರಡು ವಾರಗಳಿಂದ ಪತ್ರಿಕೆ, ಸುದ್ದಿವಾಹಿನಿಗಳಲ್ಲಿ ಇದರದೇ ಸದ್ದು. ಈ ವಿಷಯದ ಸತ್ಯಾಸತ್ಯತೆ ಏನೇ ಇರಲಿ, ಸಾರ್ವಜನಿಕರ ಹಣದ ಬಳಕೆ ಕುರಿತು ಎಂತಹ ಜಾಗ್ರತೆ ಅಗತ್ಯ ಎಂಬುದಕ್ಕೆ ಗಾಂಧಿಯವರ ಸಾಬರಮತಿ ಆಶ್ರಮದಲ್ಲಿ ನಡೆದ ಈ ಘಟನೆ ನಮಗೆಲ್ಲರಿಗೂ ಪಾಠವಾಗಬೇಕು:

ಮಧ್ಯಾಹ್ನದ ಊಟದ ಬಳಿಕ ಆಶ್ರಮವಾಸಿಗಳ ಮಕ್ಕಳ ಆಟವನ್ನು ನೋಡುತ್ತಾ ಕಸ್ತೂರ ಬಾ ವಿಶ್ರಾಂತಿ ಪಡೆಯುತ್ತಿದ್ದರು. ತಕ್ಷಣ ಅವರಿಗೆ ಅಂದು ಕೃಷ್ಣ ಜನ್ಮಾಷ್ಟಮಿ ಎಂಬುದು ನೆನಪಾಯಿತು. ಮಕ್ಕಳಿಗೆ ಹೆಸರುಬೇಳೆ ಪಾಯಸ ಎಂದರೆ ಅಚ್ಚುಮೆಚ್ಚು. ರಾತ್ರಿ ಊಟದ ಸಂಗಡ ಪಾಯಸ ನೀಡಿದರೆ ಸಂತೋಷದಿಂದ ಸವಿಯುತ್ತಾರೆ ಎಂದು ಯೋಚಿಸಿ, ಪಾಯಸ ಸಿದ್ಧಪಡಿಸುವಂತೆ ಆಶ್ರಮದ ವ್ಯವಸ್ಥಾಪಕರಿಗೆ ಹೇಳುತ್ತಾರೆ. ಇದನ್ನು ನಿರಾಕರಿಸುವ ವ್ಯವಸ್ಥಾಪಕ, ಸಾರ್ವಜನಿಕರ ದೇಣಿಗೆ ಹಣದಲ್ಲಿ ಆಶ್ರಮ ನಡೆಯುತ್ತಿದೆ, ನಮ್ಮಿಷ್ಟದಂತೆ ಹಣದ ಬಳಕೆ ಸಾಧ್ಯವಿಲ್ಲ, ಇದನ್ನು ಬಾಪೂ ಅವರೂ ಒಪ್ಪುವುದಿಲ್ಲ ಎನ್ನುತ್ತಾರೆ. ತಕ್ಷಣ ಕಸ್ತೂರ ಬಾ ಸ್ವತಃ ಪಾಯಸ ಮಾಡಿ ಮಕ್ಕಳಿಗೆ ನೀಡಿ, ತಾವು ನಾಳೆಯಿಂದ ಎರಡು ದಿನಗಳ ಕಾಲ ಉಪವಾಸ ಮಾಡುವ ಮೂಲಕ ಪಾಯಸದ ಬಾಬ್ತು ಖರ್ಚಾದ ಹೆಚ್ಚುವರಿ ಹಣವನ್ನು ಸರಿದೂಗಿಸಲು ನಿರ್ಧರಿಸುತ್ತಾರೆ.

ರಾತ್ರಿ ಪಾದಯಾತ್ರೆ ಮುಗಿಸಿ ಬಂದ ಬಾಪೂವಿಗೆ ಬಾ ಪಾಯಸ ನೀಡುತ್ತಾರೆ. ಆಗ ಬಾಪೂ ಹುಬ್ಬುಗಂಟಿಕ್ಕಿ, ‘ಯಾರು ಮಾಡಿಸಿದ್ದು’ ಎಂದು ಗಡುಸಾಗಿ ಪ್ರಶ್ನಿಸುತ್ತಾರೆ. ತಕ್ಷಣ ಬಾ ಮಧ್ಯಾಹ್ನದ ಘಟನೆಯನ್ನು, ತಾವು ಉಪವಾಸ ಮಾಡಿ ವೆಚ್ಚ ಸರಿದೂಗಿಸಲಿರುವುದನ್ನು ಹೇಳಿದಾಗ ಬಾಪೂ ಮುಗುಳ್ನಕ್ಕು ಪಾಯಸ ಕುಡಿಯುತ್ತಾರೆ. ಸಾರ್ವಜನಿಕರ ಹಣದ ಬಳಕೆ ಕುರಿತು ಇಂತಹ ವಿವೇಕ ನಮ್ಮಲ್ಲಿ ಮೂಡಿದಾಗ ಮಾತ್ರ ಬಾಪೂವಿನ ರಾಮರಾಜ್ಯದ ಕನಸು ನನಸಾಗಲು
ಸಾಧ್ಯವಾಗುವುದಲ್ಲವೇ?

ADVERTISEMENT

-ಜಿ.ಚಂದ್ರಶೇಖರ್,ಅರಕಲಗೂಡು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.