ADVERTISEMENT

ವಾಚಕರ ವಾಣಿ | ಮೂಢನಂಬಿಕೆಗೆ ಬಲಿಯಾಗುವ ಮುದ್ದು ಜೀವಿಗಳು

​ಪ್ರಜಾವಾಣಿ ವಾರ್ತೆ
Published 19 ನವೆಂಬರ್ 2020, 19:31 IST
Last Updated 19 ನವೆಂಬರ್ 2020, 19:31 IST

ಕೆಲ ದಿನಗಳ ಹಿಂದೆ ಪರಿಚಿತರ ಮನೆಯ ಸಾಕು ಬೆಕ್ಕೊಂದು ಮೂರು ಮರಿಗಳಿಗೆ ಜನ್ಮ ನೀಡಿತ್ತು. ಅವುಗಳಲ್ಲಿ ಒಂದು ಕಡುಕಪ್ಪು ಬಣ್ಣದ ಮರಿ ತನ್ನ ವಿಶಿಷ್ಟ ವರ್ಣ ಸಂಯೋಜನೆಯಿಂದ ಮತ್ತು ಬಾಲ್ಯ ಸಹಜ ಚಟುವಟಿಕೆ, ಹಾವಭಾವದಿಂದ ‘ಬಂಡೀಪುರದ ಕಪ್ಪು ಚಿರತೆ’ ಮತ್ತು ಜಂಗಲ್‌ಬುಕ್ ಚಿತ್ರದ ‘ಭಗಿರಾ’ವನ್ನು ನೆನಪಿಸುತ್ತಿತ್ತು. ಇಂತಿಪ್ಪ ಮರಿಯು ಮಕ್ಕಳಾದಿಯಾಗಿ ಊರಿನ ಎಲ್ಲ‌ ವರ್ಗದ ಜನರ ಗಮನ ಸೆಳೆದಿತ್ತು.

ಮರಿ ಬೆಳೆದಂತೆ ಅದರ ಜನಪ್ರಿಯತೆಯೂ ಹೆಚ್ಚಾಯಿತು. ಜೊತೆಗೆ ಕಪ್ಪು ಬಣ್ಣದ ಬೆಕ್ಕು ಅನಿಷ್ಟ, ಅದನ್ನು ವಾಮಾಚಾರ
ದಂತಹ ಮೌಢ್ಯಗಳಿಗೆ ಬಳಸುವರು ಎಂಬ ಕುಖ್ಯಾತಿ ಹಬ್ಬತೊಡಗಿತು. ಇದರ ಪರಿಣಾಮವಾಗಿ ಬೆಕ್ಕಿನ ಮರಿ ಅನಾಥವಾಗಿ ಬೀದಿಗೆ ಬಿದ್ದು ಕೆಲವೇ ದಿನಗಳಲ್ಲಿ ಶಾಶ್ವತವಾಗಿ ಕಣ್ಮರೆಯಾಯಿತು. ಯಾವುದೋ ಮೂಢನಂಬಿಕೆಗೆ ಅದು ಬಲಿಯಾಗಿರುವುದರಲ್ಲಿ ನಮಗೆ ಸಂಶಯ ಉಳಿಯಲಿಲ್ಲ. ಕಪ್ಪು ಬಣ್ಣದ ಬೆಕ್ಕು, ಗೂಬೆ, ಆಮೆ ಮುಂತಾದ ವಿಶಿಷ್ಟ ಜೀವಿಗಳು ಮೂಢನಂಬಿಕೆಯ ಕಬಂಧ ಬಾಹುಗಳಿಗೆ ಸಿಲುಕಿ ಜೀವ ಬಿಡುತ್ತಲೇ ಇರುತ್ತವೆ. ಜನರಲ್ಲಿ ವೈಚಾರಿಕ ಪ್ರಜ್ಞೆ ಅರಳಿ ಮೂಢನಂಬಿಕೆಯನ್ನು ತೊರೆಯುವ ವೇಳೆಗೆ ಇನ್ನೂ ಅದೆಷ್ಟು ಜೀವಗಳು ಬಲಿಯಾಗಬೇಕೋ?

-ಮಹೇಶ್ವರ ಹುರುಕಡ್ಲಿ,ಬಾಚಿಗೊಂಡನಹಳ್ಳಿ, ಹಗರಿಬೊಮ್ಮನಹಳ್ಳಿ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.