ADVERTISEMENT

ಅಧ್ಯಾತ್ಮ ಜ್ಞಾನ ರಾಷ್ಟ್ರ ನಿರ್ಮಾಣಕ್ಕೆ ಬಳಕೆಯಾಗಲಿ

​ಪ್ರಜಾವಾಣಿ ವಾರ್ತೆ
Published 17 ಅಕ್ಟೋಬರ್ 2018, 17:40 IST
Last Updated 17 ಅಕ್ಟೋಬರ್ 2018, 17:40 IST

ಜಗ್ಗಿ ವಾಸುದೇವ್ (ಸದ್ಗುರು) ಅವರು ಯುವ ಜನರಿಗೆ ನೀಡುತ್ತಿರುವ ಮಾರ್ಗದರ್ಶನ ಹಾಗೂ ವಿವಿಧ ವಿಷಯಗಳ ಕುರಿತ ಅವರ ನಿಲುವುಗಳ ಬಗ್ಗೆ ‘ಅನುರಣನ’ ಅಂಕಣದಲ್ಲಿ ನಾರಾಯಣ ವ್ಯಕ್ತಪಡಿಸಿರುವ ಅಭಿಪ್ರಾಯ (ಪ್ರ.ವಾ., ಅ.9) ಮಹತ್ವದ್ದೆನಿಸುತ್ತದೆ. ಯೋಗ ಹಾಗೂ ಅಧ್ಯಾತ್ಮದ ಜ್ಞಾನವನ್ನು ಸಿದ್ಧಿಸಿಕೊಂಡಿರುವ ಸದ್ಗುರು ಕೆಲವೊಂದು ಸಂದರ್ಭದಲ್ಲಿ ಹೇಳುವ ಮಾತುಗಳನ್ನು ವಿಶ್ಲೇಷಣೆಗೆ ಒಳಪಡಿಸಬೇಕಾಗುತ್ತದೆ.

ಅವಧೂತ (ಯೋಗಿ) ಎಂದು ಕರೆಸಿಕೊಳ್ಳುವ ವ್ಯಕ್ತಿಯು ಸಮಾಜಕ್ಕೆ ಮಾರಕವಾಗುವ ಯಾವುದೇ ಧಾರ್ಮಿಕ ನಂಬಿಕೆ, ಆಚರಣೆ, ಸಾಮಾಜಿಕ ಹಾಗೂ ರಾಜಕೀಯ ನಿಲುವುಗಳನ್ನು ಪೂರ್ವಗ್ರಹಪೀಡಿತರಾಗದೆ ನೇರವಾಗಿ, ದಿಟ್ಟತನದಿಂದ ವಿರೋಧಿಸುವ ಛಾತಿ ಹೊಂದಿರಬೇಕು. ಈ ನಿಟ್ಟಿನಲ್ಲಿ ಓಶೋ ರಜನೀಶ್ ಕಟುವಾಗಿ ಮಾತನಾಡಿದ ಸ್ಥೈರ್ಯವಂತ ಮಿಸ್ಟಿಕ್ ಆಗಿದ್ದರು ಎನ್ನಬಹುದು.

ಸದ್ಗುರು, ಇತ್ತೀಚೆಗೆ ಹಮ್ಮಿಕೊಂಡಿದ್ದ ‘ರ‍್ಯಾಲಿ ಫಾರ್ ರಿವರ್’ ಎಂಬ ಜಾಗೃತಿ ಕಾರ್ಯಕ್ರಮ ಶ್ಲಾಘನೀಯ. ಆದರೆ ಇದೇ ಮಾದರಿಯಲ್ಲಿ ಮದ್ಯಪಾನವನ್ನು ವಿರೋಧಿಸುವ ಧೈರ್ಯ ತೋರುವುದಿಲ್ಲ. ದನ ಕಳ್ಳತನದ ಬಗ್ಗೆ ಮಾತನಾಡುವ ಇವರು ಆ ನೆಪದಲ್ಲಿ ಹಲ್ಲೆಗೆ ಒಳಗಾದ, ಕೊಲೆಗೀಡಾದ ಸಾಮಾನ್ಯ ಜನರ ಬಗ್ಗೆ ಎಲ್ಲೂ ಚಕಾರ ಎತ್ತುವುದಿಲ್ಲ.

ADVERTISEMENT

ಶಿವಾಜಿ ಪ್ರತಿಮೆ ಸ್ಥಾಪನೆಯಿಂದ ಬರುವ ಆದಾಯದ ಬಗ್ಗೆ ಲೆಕ್ಕ ಹೇಳುವ ಸದ್ಗುರು, ದೇಶಕ್ಕೆ ಕೋಟಿ ಕೋಟಿ ರೂಪಾಯಿ ವಂಚಿಸುವ ಕಳ್ಳರ ಕೈಗೆ ಬ್ಯಾಂಕ್ ಕೀ ನೀಡಿರುವವರ ಬಗ್ಗೆ ಚರ್ಚಿಸುವುದಿಲ್ಲ. ಪರಿಸರದ ಬಗ್ಗೆ ಅಪಾರ ಕಾಳಜಿ ಇರುವ ಜಗ್ಗಿ ವಾಸುದೇವ್‌, ಬಾಬಾ ರಾಮದೇವ್ ಅವರು ಬ್ರ್ಯಾಂಡ್‌ ಅಂಬಾಸಿಡರ್ ಆಗಿರುವ ‘ಪತಂಜಲಿ’ ಉತ್ಪನ್ನಗಳಲ್ಲಿ ಬಳಸುವ ಹಾನಿಕಾರಕ ಪ್ಲಾಸ್ಟಿಕ್ ಉತ್ಪನ್ನಗಳು ಮತ್ತು ಉತ್ಪನ್ನಗಳ ಗುಣಮಟ್ಟದ ವಿರುದ್ಧ ಮೌನ ಮುರಿಯುವುದಿಲ್ಲ. ಸದ್ಗುರುವಿನ ಇಂತಹ ನಡೆ ಜನರಲ್ಲಿ ಸಂಶಯಗಳನ್ನು ಮೂಡಿಸುತ್ತದೆ. ವಿದ್ಯಾರ್ಥಿಗಳು ಕೇಳುವ ಮಹತ್ವವಲ್ಲದ ಪ್ರಶ್ನೆಗಳಿಗೆ ಉತ್ತರಿಸುವುದು ಹರಟೆಯಂತಿರುತ್ತದೆ.

ಆದ್ದರಿಂದ ತಮ್ಮ ಅದ್ಭುತ ಅಧ್ಯಾತ್ಮ ಜ್ಞಾನ ಪಾಂಡಿತ್ಯವನ್ನು ಗೊಂದಲಕ್ಕೆ ಎಡೆ ಇಲ್ಲದಂತೆ ಭಾರತದ ಯುವ ಸಮೂಹವನ್ನು ಸಮಾನತೆ, ಮಾನವೀಯತೆ ಮೂಲಕ ಒಂದುಗೂಡಿಸಿ ರಾಷ್ಟ್ರ ನಿರ್ಮಾಣದೆಡೆಗೆ ಮುನ್ನಡೆಸಲು ಬಳಸಬೇಕಾಗಿದೆ.

-ಗಣೇಶ್ ಉಡುಪಿ,ಸಾಲಿಗ್ರಾಮ, ಕೆ.ಆರ್‌.ನಗರ ತಾಲ್ಲೂಕು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.