ವಾಚಕರ ವಾಣಿ: ಪ್ರಜಾವಾಣಿ ಓದುಗರ ಈ ದಿನದ ಪತ್ರಗಳು
ತುಳುನಾಡಿನ ಭ್ರಾತೃತ್ವ ಮತ್ತೆ ಮೆರೆಯಲಿ
‘ಬದಲಾಗುತ್ತಿದೆಯೇ ಅವಿಭಜಿತ ದಕ್ಷಿಣ ಕನ್ನಡ’ ಲೇಖನವು (ಪ್ರ.ವಾ., ಜುಲೈ 20) ದಕ್ಷಿಣ ಕನ್ನಡ ಜಿಲ್ಲೆಯ ಸೂಕ್ಷ್ಮ ಮಾಹಿತಿಯನ್ನು ಸವಿವರವಾಗಿ ಕಟ್ಟಿಕೊಟ್ಟಿದೆ. ಅಲ್ಲಿನ ಜನರು ಬದಲಾವಣೆಗಾಗಿ ಹಂಬಲಿಸುತ್ತಿದ್ದಾರೆ. ಕೋಮುಗಲಭೆಗಳಿಂದ ಸಾರ್ವಜನಿಕವಾಗಿ ಹಾಗೂ ಪರಸ್ಪರರ ಏಳಿಗೆ ದೃಷ್ಟಿಯಿಂದ ಎಷ್ಟೊಂದು ಆಘಾತವಾಗುತ್ತದೆ ಎಂಬುದು ಅರ್ಥವಾಗುತ್ತದೆ. ಜಿಲ್ಲೆಯ ಅಭಿವೃದ್ಧಿ ಹಾಗೂ ಮಕ್ಕಳ ಭವಿಷ್ಯ ಕುರಿತು ಸಮುದಾಯದಲ್ಲಿ ಚಿಂತನೆ ಶುರುವಾಗಿರುವುದು ಒಳ್ಳೆಯ ಬೆಳವಣಿಗೆ. ದಕ್ಷಿಣ ಕನ್ನಡ ಬದಲಾಗಲಿ ಎಂಬುದು ಎಲ್ಲರ ಆಶಯ.
-ಜೆ.ಸಿ. ಜಾಧವ, ಬಾಗಲಕೋಟೆ
ಖರ್ಗೆ ಅವರಿಗೆ ಶೋಭೆ ತರುವುದೇ?
ಮೈಸೂರಿನಲ್ಲಿ ನಡೆದ ಸರ್ಕಾರದ ಸಾಧನಾ ಸಮಾವೇಶದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು, ‘ದೂರದರ್ಶನದಲ್ಲಿ ಹಿಂದಿನ ಯಾವ ಪ್ರಧಾನಿಯೂ ನರೇಂದ್ರ ಮೋದಿ ಅವರಂತೆ ನಿತ್ಯ ಬೊಗಳುತ್ತಿರಲಿಲ್ಲ’ ಎಂದು ಹೇಳಿದ್ದಾರೆ. ಇದು ಅವರ ಹಿರಿತನಕ್ಕೆ ಶೋಭೆ ತರುವುದಿಲ್ಲ. ರಾಜಕೀಯ ಕಾರಣಕ್ಕಾಗಿ ಟೀಕೆ, ಪ್ರತಿ ಟೀಕೆ ಸಾಮಾನ್ಯ. ಇಂದಿನ ರಾಜಕಾರಣಿಗಳು ಪಕ್ಷಾತೀತವಾಗಿ ಅವರ ಮೆದುಳಿಗೂ ನಾಲಿಗೆಗೂ ಸಂಪರ್ಕ ಕಳೆದುಕೊಂಡಿದ್ದಾರೆ. ಅಸಹನೆ, ಅಸೂಯೆ, ಮತ್ಸರದಿಂದ ಪ್ರಧಾನಿ ಅವರನ್ನು ಪದೇ ಪದೇ ಅರ್ಥಹೀನ ಪದಗಳಿಂದ ಜರಿಯುವುದು ತರವಲ್ಲ.
-ಎಸ್.ಎನ್. ರಮೇಶ್, ಸಾತನೂರು
ಹಲಸಿನ ಮರಗಳ ಮಾರಣಹೋಮ
ಕೊಡಗು ಜಿಲ್ಲೆಯ ಮಡಿಕೇರಿ ತಾಲ್ಲೂಕಿನ ಚೆಂಬು ಗ್ರಾಮದಲ್ಲಿರುವ ನನ್ನ ತೋಟಕ್ಕೆ ಕಾಡಾನೆಗಳು ಪ್ರತಿದಿನ ಲಗ್ಗೆ ಇಟ್ಟು ಫಸಲು ನಾಶ ಮಾಡುತ್ತಿವೆ. ಹಲಸಿನ ಹಣ್ಣಿನ ವಾಸನೆ ಹಿಡಿದು ಆನೆಗಳು ತೋಟಕ್ಕೆ ಬರುತ್ತವೆ ಎನ್ನುವುದು ನಮ್ಮೂರಿನವರ ಲೆಕ್ಕಾಚಾರ. ಹಲಸಿನ ಮರಗಳನ್ನು ಕಡಿದು ಹಾಕಿದರೆ ಅವು ಬರುವುದಿಲ್ಲ ಎಂದು ಊರವರೆಲ್ಲರೂ ಅವರವರ ತೋಟದಲ್ಲಿರುವ ಹಲಸಿನ ಮರಗಳನ್ನು ಕಡಿಯ
ತೊಡಗಿದ್ದಾರೆ. ನನ್ನ ಗಂಡ ಕೂಡ ಹಲಸಿನ ಮರ ಕಡಿಯಲು ಮುಂದಾಗಿದ್ದಾರೆ. ನಮ್ಮ ತೋಟದಲ್ಲಿ 25ಕ್ಕಿಂತ ಹೆಚ್ಚು ಹಲಸಿನ ಮರಗಳಿವೆ. ನಮ್ಮೂರಿನ ಸಂರಕ್ಷಿತ ಅರಣ್ಯಕ್ಕೆ ಆನೆಗಳು ಬಾರದಂತೆ ಸೌರ ಬೇಲಿ ಅಳವಡಿಸಿ ಎಂದು ಅರಣ್ಯಾಧಿಕಾರಿಗಳಿಗೆ ಎಷ್ಟು ಕೋರಿಕೊಂಡರೂ ಲೆಕ್ಕಕ್ಕೆ ತೆಗೆದುಕೊಳ್ಳುತ್ತಿಲ್ಲ. ಹಾಗಾಗಿ, ಅರಣ್ಯ ಸಚಿವರು ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ಅರಣ್ಯಕ್ಕೆ ಕೂಡಲೇ ಸೌರ ಬೇಲಿ ಅಳವಡಿಸಿ ಹಲಸಿನ ಮರಗಳನ್ನು ಉಳಿಸಬೇಕಾಗಿ ವಿನಂತಿ. ನಾವೇ ತೋಟಕ್ಕೆ ಬೇಲಿ ಅಳವಡಿಸಲು ಲಕ್ಷಗಟ್ಟಲೆ ದುಡ್ಡು ಬೇಕು. ಸರ್ಕಾರದ ಸಹಾಯಧನ ಸಿಗುವುದೆಂಬ ಗ್ಯಾರಂಟಿ ಇಲ್ಲ. ನಾಲ್ಕು ವರ್ಷದ ಹಿಂದೆ ಸೌರ ಬೇಲಿ ಅಳವಡಿಸಿಕೊಂಡ ಒಬ್ಬ ರೈತನಿಗೆ ಇನ್ನೂ ಸಹಾಯಧನ ಪಾವತಿಯಾಗಿಲ್ಲ.
-ಸಹನಾ ಕಾಂತಬೈಲು, ಮಡಿಕೇರಿ
ಧ್ವಜಾರೋಹಣದ ಹೊಣೆ ಯಾರದ್ದು?
ಸ್ವಾತಂತ್ರ್ಯೋತ್ಸವ, ಗಣರಾಜ್ಯೋತ್ಸವ, ಕನ್ನಡ ರಾಜ್ಯೋತ್ಸವ, ಕಲ್ಯಾಣ ಕರ್ನಾಟಕ ಉತ್ಸವ ದಿನಗಳಂದು ಶಾಲೆಗಳಲ್ಲಿ ಮೊದಲಿನಿಂದಲೂ ಮುಖ್ಯೋಪಾಧ್ಯಾಯರೇ ಧ್ವಜಾರೋಹಣ ನೆರವೇರಿಸುತ್ತಾ ಬಂದಿದ್ದಾರೆ. ಈಗೀಗ ಕೆಲವು ಶಾಲೆಗಳಲ್ಲಿ ಎಸ್‌ಡಿಎಂಸಿ ಅಧ್ಯಕ್ಷರು ಈ ಕಾರ್ಯ ಮಾಡುತ್ತಿದ್ದಾರೆ. ಇದಕ್ಕೆ ಮುಖ್ಯೋಪಾಧ್ಯಾಯರ ಮೇಲೆ ಹೇರುವ ರಾಜಕೀಯ ಒತ್ತಡವೇ ಕಾರಣ. ಯಾವುದೋ ಶಾಲೆಯ ಉದಾಹರಣೆ ತೋರಿಸಿ, ತಾವು ಅಧ್ಯಕ್ಷರಾಗಿರುವ ಶಾಲೆಯಲ್ಲೂ ತಾವೇ ಧ್ವಜಾರೋಹಣ ನೆರವೇರಿಸುವುದಾಗಿ ಹಟ ಹಿಡಿದು ಶಿಕ್ಷಕರನ್ನು ಬೆದರಿಸಿ ಗೊಂದಲ ಸೃಷ್ಟಿಸುತ್ತಿದ್ದಾರೆ. ಸರ್ಕಾರ ಇದಕ್ಕೆ ಸಂಬಂಧಿಸಿದಂತೆ ಮಾರ್ಗಸೂಚಿ ಹೊರಡಿಸಿ ಏಕರೂಪತೆ ಕಾಯ್ದುಕೊಳ್ಳಬೇಕಿದೆ.
-ಶಿವಕುಮಾರ ಬಂಡೋಳಿ, ಯಾದಗಿರಿ
ಮುಸುಕಿನ ಗುದ್ದಾಟ ಬಹಿರಂಗ
ಮೈಸೂರಿನಲ್ಲಿ ನಡೆದ ರಾಜ್ಯ ಸರ್ಕಾರದ ಸಾಧನಾ ಸಮಾವೇಶದಲ್ಲಿ ಭಾಗವಹಿಸಿದ್ದ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸಮಾರಂಭದ ಮಧ್ಯದಲ್ಲಿಯೇ ನಿರ್ಗಮಿಸಿದ್ದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸ್ವಾಗತಕ್ಕೆ ನಿಂತಾಗ ಶಿವಕುಮಾರ್ ಅವರ ಹೆಸರು ಪ್ರಸ್ತಾಪಿಸುವುದನ್ನು ಕೈಬಿಟ್ಟರು. ಈ ಬಗ್ಗೆ ಪಕ್ಕದಲ್ಲಿದ್ದವರು ಅವರಿಗೆ ಇದನ್ನು ಜ್ಞಾಪಿಸಿದರು. ಆಗ ಸಿದ್ದರಾಮಯ್ಯ, ‘ಮನೆಯಲ್ಲಿ ಕುಳಿತವರಿಗೆ ಸ್ವಾಗತ ಕೋರಲು ಆಗುವುದಿಲ್ಲ’ ಎಂದು ಗರಂ ಆದ ಬಗ್ಗೆ ವರದಿಯಾಗಿದೆ. ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದವರ ಗೈರುಹಾಜರಿಯಲ್ಲಿಯೂ ಅವರ ಹೆಸರನ್ನು ಉಲ್ಲೇಖಿಸುವ ಸಂಪ್ರದಾಯ ಇದೆ. ಈ ಇಬ್ಬರು ಧುರೀಣರ ಮುಸುಕಿನ ಗುದ್ದಾಟ ಸಾರ್ವಜನಿಕವಾಗಿ ಬಹಿರಂಗಗೊಂಡಿದ್ದಂತೂ ಸತ್ಯ.
-ಲಕ್ಷ್ಮೀಕಾಂತರಾಜು ಎಂ.ಜಿ., ಗುಬ್ಬಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.