ADVERTISEMENT

ಯಾಕೆ ನಿರ್ಲಕ್ಷ್ಯ?

ಸತ್ಯಬೋಧ, ಬೆಂಗಳೂರು
Published 15 ಅಕ್ಟೋಬರ್ 2018, 16:32 IST
Last Updated 15 ಅಕ್ಟೋಬರ್ 2018, 16:32 IST

ಮಾಧ್ಯಮಗಳದ್ದು ಯಾವತ್ತೂ ಹದ್ದಿನ ಕಣ್ಣು. ಅವುಗಳ ಮಿಂಚಿನ ಕಾರ್ಯಾಚಾರಣೆಯಿಂದ ಅದೆಷ್ಟೋ ಸುದ್ದಿಗಳು, ಹಗರಣಗಳು ಬಯಲಿಗೆ ಬರುತ್ತವೆ. ಆದರೆ ಗಂಗಾ ನದಿಯ ಉಳಿವಿಗಾಗಿ ಉಪವಾಸ ಮಾಡಿ ಪ್ರಾಣತ್ಯಾಗ ಮಾಡಿದ ವ್ಯಕ್ತಿಯೊಬ್ಬರ ಬಗ್ಗೆ ಮಾಧ್ಯಮಗಳು, ವಿಶೇಷವಾಗಿ ದೃಶ್ಯ ಮಾಧ್ಯಮಗಳು ನಿರ್ಲಕ್ಷ್ಯ ತೋರಿದ್ದು ಬೇಸರದ ವಿಚಾರ.

ಉಪವಾಸ ಕುಳಿತು ಪ್ರಾಣ ಬಿಟ್ಟಿರುವ ಸಾನಂದ ಸ್ವಾಮೀಜಿ ಸಾಮಾನ್ಯ ವ್ಯಕ್ತಿಯಲ್ಲ. ಒಬ್ಬ ಪರಿಸರ ತಜ್ಞ. ಅಭಿವೃದ್ಧಿ ಹೆಸರಿನಲ್ಲಿ ಗಂಗಾ ನದಿಗೆ ನಿರ್ಮಿಸುವ ಅಣೆಕಟ್ಟುಗಳಿಂದ ಆಗಬಹುದಾದ ವಿಪತ್ತುಗಳ ಬಗ್ಗೆ ಸರ್ಕಾರದ ಗಮನ ಸೆಳೆಯಲು ಮತ್ತು ಜನರಲ್ಲಿ ಜಾಗೃತಿ ಮೂಡಿಸಲು ಅವರು ಉಪವಾಸ ಕೈಗೊಂಡಿದ್ದರು. ಮಾಧ್ಯಮಗಳು ಇವರಿಗೆ ಸ್ವಲ್ಪ ಬೆಂಬಲ ಸೂಚಿಸಿದ್ದರೆ ‘ಗಂಗೆ ಉಳಿಸಿ’ ಚಳವಳಿಗೆ ಶಕ್ತಿ ಬರುತ್ತಿತ್ತು. ಜೊತೆಗೆ ಗಂಗಾ ನದಿಗಾಗಿ ಹೋರಾಡಿದ ಸಾನಂದರೂ ಉಳಿದಿರುತ್ತಿದ್ದರು. ಮಾಧ್ಯಮಗಳಿಗೆ ಇದು ಏಕೆ ಬೇಡಾಯಿತು?

ಕೊಡಗು ಮತ್ತು ಕೇರಳದಲ್ಲಿ ಈಚೆಗೆ ಸಂಭವಿಸಿದ ದುರಂತದ ತೀವ್ರತೆಯನ್ನು ಜನರು ಮಾಧ್ಯಮಗಳ ಮೂಲಕ ಅರಿತುಕೊಂಡಿದ್ದಾರೆ. ಪ್ರಕೃತಿಗೆ ಹಾನಿ ಮಾಡಿದರೆ ಏನಾಗುತ್ತದೆ ಎಂಬುದನ್ನೂ ಅರಿತುಕೊಂಡಿದ್ದಾರೆ. ಆದರೆ ಪ್ರಕೃತಿಯ ಹಾಗೂ ದೇಶದ ಮಹಾನದಿಯ ಉಳಿವಿಗಾಗಿ ನಡೆಸಿದ ಹೋರಾಟಕ್ಕೆ ಮಾಧ್ಯಮಗಳು ಮತ್ತು ಜನರು ಸ್ಪಂದಿಸಿದ ರೀತಿ ಬೇಸರ ಮೂಡಿಸುವಂಥದ್ದು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.