ADVERTISEMENT

ಕನ್ನಡದ ಉಳಿವು, ವಿಸ್ತಾರ

​ಪ್ರಜಾವಾಣಿ ವಾರ್ತೆ
Published 31 ಅಕ್ಟೋಬರ್ 2018, 19:32 IST
Last Updated 31 ಅಕ್ಟೋಬರ್ 2018, 19:32 IST

‘ಇದು ನನ್ನ ಕನ್ನಡ. ಇದನ್ನು ಉಳಿಸಿ, ಬೆಳೆಸುವ ಕೆಲಸ ನನ್ನಿಂದಲೇ ಪ್ರಾರಂಭವಾಗಬೇಕು’ ಎಂಬ ಭಾವನೆ ಮೂಡಿ, ಅದರಂತೆ ನಡೆದುಕೊಂಡರೆ ಮಾತ್ರ ನಮ್ಮ ಭಾಷೆ ಉಳಿಯಲು, ಬೆಳೆಯಲು ಸಾಧ್ಯ. ನಾವು ಕನ್ನಡಿಗರು ಎಲ್ಲದರಲ್ಲೂ ಉದಾರಿಗಳು. ಭಾಷೆಯ ವಿಚಾರದಲ್ಲಿಯೂ ಹಾಗೇ. ನಮಗೆ ಎಲ್ಲ ಭಾಷೆಗಳೂ ಗೊತ್ತೆಂದು ತೋರಿಸಲು ನಾವು ಎದುರಿಗಿರುವ ವ್ಯಕ್ತಿಯ ಭಾಷೆಯಲ್ಲೇ ಮಾತನಾಡುತ್ತೇವೆ. ಇದು ನಮ್ಮ ದೊಡ್ದ ಗುಣವಲ್ಲ, ದಡ್ಡ ಗುಣ ಎಂದರೆ ತಪ್ಪಾಗಲಾರದು.‌ ಇದನ್ನು ನಾವು ಮನಗಾಣಬೇಕು.

ತಾಯಿ ಮೊದಲ ಗುರು, ಮನೆಯೇ ಮೊದಲ ಪಾಠಶಾಲೆ ಎಂಬುದು ಸುಳ್ಳಲ್ಲ. ಚಿಕ್ಕ ಮಕ್ಕಳು ತಂದೆ-ತಾಯಿಯ ಮಾತುಗಳನ್ನೇ ಅನುಕರಣೆ ಮಾಡಿ ಕಲಿಯುತ್ತವೆ. ಇಂದು ನಾವು ನಮ್ಮ ಮಕ್ಕಳಿಗೆ ಅಮ್ಮ- ಅಪ್ಪ ಎಂದು ಕಲಿಸುವ ಬದಲು ಮಮ್ಮಿ- ಡ್ಯಾಡಿ ಎಂದೆಲ್ಲ ಕಲಿಸುತ್ತಿದ್ದೇವೆ. ತಂದೆ ತಾಯಂದಿರು ತಾವು ಕನ್ನಡ ಶಾಲೆಗಳಲ್ಲೇ ಓದಿ ಈ ಮಟ್ಟಕ್ಕೆ ಬಂದರೂ ಅವರಿಗೇ ಅದರ ಬಗ್ಗೆ ನಂಬಿಕೆ ಇಲ್ಲವೋ ಎಂಬಂತೆ ಮಕ್ಕಳನ್ನು ಇಂಗ್ಲಿಷ್ ಮಾಧ್ಯಮ ಶಾಲೆಗೆ ಸೇರಿಸುತ್ತಿದ್ದಾರೆ. ಮಕ್ಕಳಿಗೆ ಕನ್ನಡದಲ್ಲಿ ಪಂಚತಂತ್ರದ ಕಥೆಗಳನ್ನು ಹೇಳುವ ಬದಲು ‘ಟ್ವಿಂಕಲ್ ಟ್ವಿಂಕಲ್ ಲಿಟಲ್ ಸ್ಟಾರ್’ ಎಂದು ಕಲಿಸಲು ಮುಂದಾಗುತ್ತಿದ್ದಾರೆ. ಈ ನಿಟ್ಟಿನಲ್ಲಿ ಮನೆಯ ಅಜ್ಜ-ಅಜ್ಜಿಯರು ಮುಂದಾಗಿ ಕನ್ನಡದಲ್ಲಿ ಕಥೆಗಳನ್ನು ಹೇಳಲು ಮುಂದಾಗಬೇಕು.

ಕನ್ನಡ ಸರಳ-ಸುಂದರ ಭಾಷೆ. ಇಂಗ್ಲಿಷ್‌ನ ಒಂದು ಪದವನ್ನು ಹತ್ತಾರು ರೀತಿ ಉಚ್ಚರಿಸಬಹುದು, ಅರ್ಥ ಮಾಡಿಕೊಳ್ಳಬಹುದು. ಆದರೆ ಕನ್ನಡ ಹಾಗಲ್ಲ. ಬರೆದದ್ದನ್ನೇ ಓದಬೇಕು, ಉಚ್ಚರಿಸಬೇಕು ಹಾಗೂ ಅರ್ಥವೂ ಒಂದೇ ಎಂಬುದೇ ಈ ಭಾಷೆಯ ಹಿರಿಮೆ.

ADVERTISEMENT

ಡಾ. ಗುರಲಿಂಗಪ್ಪ ಅಂಕದ, ವಿಜಯಪುರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.