ವ್ಯಭಿಚಾರವನ್ನು ಸುಪ್ರೀಂ ಕೋರ್ಟ್ ‘ಅಪರಾಧಮುಕ್ತ’ಗೊಳಿಸಿದೆ. ಕೋರ್ಟ್‌ನ ಈ ತೀರ್ಪಿನ ಬಗ್ಗೆ ಜನರಲ್ಲಿ ಗೊಂದಲ ಇರುವಂತೆ ಕಾಣಿಸುತ್ತದೆ. ‘ವ್ಯಭಿಚಾರದಲ್ಲಿ ತೊಡಗಲು ಎಲ್ಲರಿಗೂ ನೀಡಿರುವ ಅನುಮತಿ’ ಎಂದು ಈ ತೀರ್ಪನ್ನು ಭಾವಿಸಬಾರದು. ಕೋರ್ಟ್ ಹೇಳಿರುವುದು, ‘ವ್ಯಭಿಚಾರ ದಂಡನೀಯ ಅಪರಾಧವಲ್ಲ’ ಎಂದೇ ಹೊರತು, ಸಾಮಾಜಿಕ ದೋಷವಲ್ಲ ಎಂದಲ್ಲ!
ಸ್ವಾತಂತ್ರ್ಯಪೂರ್ವದಿಂದಲೂ ಜಾರಿಯಲ್ಲಿದ್ದ ವ್ಯಭಿಚಾರ ನಿಷೇಧ ಕಾಯ್ದೆಯು ವಿವಾಹಿತ ಮಹಿಳೆಯನ್ನು ಗಂಡನ ವೈಯಕ್ತಿಕ ಸೊತ್ತು ಎಂಬ ವಾದದ ತಳಹದಿಯನ್ನು ಹೊಂದಿತ್ತು. ಈಗ ಅದನ್ನು ಸುಪ್ರೀಂ ಕೋರ್ಟ್ ಇಡಿಯಾಗಿ ರದ್ದುಪಡಿಸಿದೆ. ಇದರಿಂದ ‘ಮಹಿಳಾ ಸಮಾನತೆಗೆ ಬೆಂಬಲ ಸಿಕ್ಕಿದೆ’ ಎಂದು ಸಂಭ್ರಮಿಸುವ ಅಗತ್ಯವಿಲ್ಲ.
ಇದು ‘ಪಶ್ಚಾತ್ ವಿವೇಕ’! ಸ್ತ್ರೀ ಮತ್ತು ಪುರುಷರ ಸಮಾನತೆಯನ್ನು ಕಡ್ಡಾಯಗೊಳಿಸುವ ಸಂವಿಧಾನವು ಜಾರಿಗೆ ಬಂದಾಗಲೇ ಈ ಅಸಮಾನತೆಯ ಕಾಯ್ದೆ ತಂತಾನೇ ಇಲ್ಲವಾಗಿಬಿಡಬೇಕಾಗಿತ್ತು. ಹಾಗೆ ಮಾಡದೆ, ಇದನ್ನು ಇಲ್ಲಿಯವರೆಗೂ ಉಳಿಸಿಕೊಂಡಿದ್ದೇ ಅವಿವೇಕ! ಇಂತಹ ಇನ್ನೆಷ್ಟು ಅಸಾಂವಿಧಾನಿಕ ಅನಿಷ್ಟಗಳು ನಮ್ಮ ವ್ಯವಸ್ಥೆಯಲ್ಲಿ ಅಂತರ್ಗತವಾಗಿವೆಯೋ!
ಈಗಲಾದರೂ ಎಚ್ಚೆತ್ತುಕೊಳ್ಳುವುದು ಒಳ್ಳೆಯದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.