ADVERTISEMENT

ರಾಜ್ಯಭಾಷೆ ಬಗ್ಗೆ ಒಲವು ಹೆಚ್ಚಲಿ

​ಪ್ರಜಾವಾಣಿ ವಾರ್ತೆ
Published 19 ಸೆಪ್ಟೆಂಬರ್ 2019, 19:34 IST
Last Updated 19 ಸೆಪ್ಟೆಂಬರ್ 2019, 19:34 IST

‘ದೇಶದಲ್ಲಿ ಹಿಂದಿ ಭಾಷೆಯನ್ನು ಹೇರಬೇಕು ಎಂದು ನಾನು ಹೇಳಿಲ್ಲ, ಬದಲಿಗೆ, ದ್ವಿತೀಯ ಭಾಷೆಯಾಗಿ ಬಳಸಬೇಕು ಎಂದು ಪ್ರತಿಪಾದಿಸಿದ್ದೆ’ ಎಂದು ಕೇಂದ್ರ ಗೃಹ ಸಚಿವರು ಸ್ಪಷ್ಟಪಡಿಸಿದ್ದಾರೆ (ಪ್ರ.ವಾ., ಸೆ.19). ಗೃಹ ಸಚಿವರ ಮುಂಚಿನ ಹೇಳಿಕೆಯ ವಿರುದ್ಧ ದಕ್ಷಿಣದ ರಾಜ್ಯಗಳಲ್ಲಿ ತೀವ್ರ ಪ್ರತಿಭಟನೆಗಳು ನಡೆದ ಕಾರಣ, ಅವರು ಒಂದು ಹೆಜ್ಜೆ ಹಿಂದಿಟ್ಟಿರಬಹುದು ಎನಿಸುತ್ತದೆ. ಏನೇ ಇರಲಿ, ಈಗ ಅವರು ‘ಹೇರಿಕೆ’ ಪ್ರಶ್ನೆಯೇ ಇಲ್ಲ ಎಂದಿದ್ದಾರೆ. ಪ್ರಾದೇಶಿಕ ಭಾಷೆಗಳ ಕುರಿತು ಗೃಹ ಸಚಿವರ ಮಾತುಗಳು ಗಮನಾರ್ಹವಾಗಿವೆ: ‘ಯಾರೂ ತಮ್ಮ ಮಾತೃಭಾಷೆಯನ್ನು ಕಳೆದುಕೊಳ್ಳಬಾರದು. ಅವುಗಳನ್ನು ಗಟ್ಟಿಗೊಳಿಸಲು ಚಳವಳಿಗಳು ನಡೆಯಬೇಕು...’ ಎಂದು ಸಾರಿದ್ದಾರೆ.

ಕರ್ನಾಟಕದಲ್ಲಿ ಕನ್ನಡದ ಪರಿಸ್ಥಿತಿಯನ್ನು ಅವಲೋಕಿಸಿದಾಗ, ಇಲ್ಲಿ ಆಡಳಿತ ನಡೆಸಿದ ಯಾವೊಂದು ಸರ್ಕಾರವೂ ಕನ್ನಡದ ಬಗ್ಗೆ ಪ್ರಾಮಾಣಿಕ ಕಾಳಜಿ ವಹಿಸಲಿಲ್ಲ ಎನ್ನುವುದು ವಾಸ್ತವ. ಎಳೆಯ ಮನಸ್ಸಿನ ಮೇಲೆ ಅದು ಬದುಕುವ ಪರಿಸರದಲ್ಲಿ ಇಲ್ಲದ ಭಾಷೆಯನ್ನು ಯಾವುದೋ ನೆಪವೊಡ್ಡುತ್ತ ಕಲಿಸುವ ಹುನ್ನಾರವೇ ನಡೆದಿದೆ. ಸರ್ಕಾರಿ ಶಾಲೆಗಳಲ್ಲಿ ಸರ್ಕಾರವೇ ಇಂಗ್ಲಿಷ್ ಮಾಧ್ಯಮ ತರಗತಿ ತೆರೆಯಲು ಮುಂದಾಗಿರುವುದನ್ನು ಇಲ್ಲಿ ಗಮನಿಸಬೇಕು. ಮೇಲಾಗಿ ಸುಪ್ರೀಂ ಕೋರ್ಟ್‌ನ ತೀರ್ಪು ಸಹ ಇಂಥ ಅಪಕ್ವ ಯೋಚನೆಗಳಿಗೆ ಬೆಂಬಲವಾಗಿದೆ. ಆ ತೀರ್ಪು ಬಂದಾಗ ನಮ್ಮ ರಾಜಕೀಯ ನಾಯಕರು, ಪ್ರಾಥಮಿಕ ಹಂತದಲ್ಲಿ ಮಾತೃಭಾಷೆ ಅಥವಾ ರಾಜ್ಯಭಾಷೆ ಶಿಕ್ಷಣ ಮಾಧ್ಯಮ ಆಗಲು ಅನುವಾಗುವಂತೆ ಸಂವಿಧಾನದಲ್ಲಿ ಸೂಕ್ತ ತಿದ್ದುಪಡಿ ತರಬೇಕೆಂದು ಆಗ್ರಹಿಸಿದ್ದರು. ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳ ಸಭೆ ಕರೆದು ಒಮ್ಮತದ ತೀರ್ಮಾನ ಮಾಡಿ ಈ ಕುರಿತು ಕೇಂದ್ರಕ್ಕೆ ಒತ್ತಾಯಿಸಬೇಕು ಎಂದು ವೀರಾವೇಶ ಪ್ರದರ್ಶಿಸಿದ್ದರು.

ಆದರೆ ಫಲಿತಾಂಶ ಏನಾಯಿತು? ಈಗಲೂ ಸಮಯ ಮಿಂಚಿಲ್ಲ. ಪ್ರೌಢಶಿಕ್ಷಣದವರೆಗೆ ಶಿಕ್ಷಣ ಮಾಧ್ಯಮ ಮಾತೃಭಾಷೆ ಅಥವಾ ರಾಜ್ಯಭಾಷೆಯಲ್ಲೇ ಇರತಕ್ಕದ್ದು ಎಂಬುದನ್ನು ಸಂವಿಧಾನದಲ್ಲಿ ಅಳವಡಿಸಲು ಮುಂದಾಗಬೇಕು.

ADVERTISEMENT

-ಸಾಮಗ ದತ್ತಾತ್ರಿ,ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.