ADVERTISEMENT

ವಾಚಕರ ವಾಣಿ: ಕುಬೇರನ ಸ್ಥಾನ ಕದಲಿಸಿದ ಚಂಚಲೆ

​ಪ್ರಜಾವಾಣಿ ವಾರ್ತೆ
Published 24 ಫೆಬ್ರುವರಿ 2021, 17:53 IST
Last Updated 24 ಫೆಬ್ರುವರಿ 2021, 17:53 IST

ಕೆಲವು ವರ್ಷಗಳ ಕಾಲ ಜಗತ್ತಿನ ಅತ್ಯಂತ ಸಿರಿವಂತ ವ್ಯಕ್ತಿಯಾಗಿದ್ದ ಅಮೆಜಾನ್‌ನ ಜೆಫ್ ಬೆಝೋಸ್ ಇದೇ ಜನವರಿಯಲ್ಲಿ ಆ ಸ್ಥಾನವನ್ನು ವಿದ್ಯುಚ್ಛಕ್ತಿ ಮೂಲಕ ಚಲಿಸುವ ಕಾರನ್ನು ಉತ್ಪಾದಿಸುವ ಟೆಸ್ಲಾದ ಒಡೆಯ ಎಲಾನ್ ಮಸ್ಕ್ ಅವರಿಗೆ ಬಿಟ್ಟುಕೊಟ್ಟರು. ವಾಯುಮಾಲಿನ್ಯ ತಡೆಗಟ್ಟುವ ದೃಷ್ಟಿಯಿಂದ ಜಗತ್ತಿನಾದ್ಯಂತ ಇಂತಹ ಕಾರುಗಳಿಗೆ ಬೇಡಿಕೆ ಹೆಚ್ಚಾದಂತೆ ಟೆಸ್ಲಾಕ್ಕೆ ಶುಕ್ರದೆಸೆ.

ಇಂತಹ ಕಾರುಗಳ ಖರೀದಿಗೆ ಬಿಟ್ ಕಾಯಿನ್ ಮೂಲಕವೂ ಹಣ ಪಾವತಿಸಬಹುದು ಹಾಗೂ ತಾನೂ ಈ ರೀತಿಯ ಕ್ರಿಪ್ಟೊ ಕರೆನ್ಸಿಯಲ್ಲಿ ಹಣ ಹೂಡಿದ್ದೇನೆ ಎಂದು ಎಲಾನ್ ಹೇಳಿದ್ದೇ ತಡ ಬಿಟ್ ಕಾಯಿನ್ ಮುಂತಾದ ಡಿಜಿಟಲ್ ಕರೆನ್ಸಿಯ ಬೆಲೆ ಗಗನಕ್ಕೇ ಚಿಮ್ಮಿತು. ಯಾಕೋ ಈ ಬೆಲೆ ಸ್ವಲ್ಪ ಹೆಚ್ಚೇ ಆಯಿತೆಂದು ಎಲಾನ್ ಟ್ವೀಟ್ ಮಾಡಿದ್ದೇ ತಡ, ಒತ್ತಡಕ್ಕೊಳಗಾಗಿ ಈಗ ಕೆಳಗೆ ಜಾರಿದೆ. ಟೆಸ್ಲಾ ಕಂಪನಿಯ ಷೇರು ಬೆಲೆಯಲ್ಲಿ ಇತ್ತೀಚೆಗೆ ಒಂದೇ ದಿನ 66.80 ಅಮೆರಿಕನ್ ಡಾಲರ್‌ನ ಕುಸಿತ ಉಂಟಾಗಿ ಎಲಾನ್ ಅವರ ಸಂಪತ್ತೂ 15.2 ಶತಕೋಟಿ ಅಮೆರಿಕನ್ ಡಾಲರ್‌ನಷ್ಟು ಕರಗಿದೆ. ಅಂದರೆ ಸುಮಾರು ಒಂದು ಲಕ್ಷದ ಹತ್ತು ಸಾವಿರ ಕೋಟಿ ರೂಪಾಯಿಗಳು! ಹಾಗೆಯೇ ಕುಬೇರರಲ್ಲಿ ಅತ್ಯಂತ ಕುಬೇರನ ಮೊದಲ ಸ್ಥಾನ ಖಾಲಿ ಮಾಡಬೇಕಾಗಿ ಬಂದಿದೆ. ಲಕ್ಷ್ಮಿ ಎಷ್ಟು ಚಂಚಲ ಅಲ್ಲವೇ?

ಈ ರೀತಿಯ ಬಿಟ್ ಕಾಯಿನ್‌ಗಳು ನಮಗೆ ಬೇಡವೆಂದು ಸರ್ಕಾರವು ಭಾರತದಲ್ಲಿ ಇಂತಹ ಕ್ರಿಪ್ಟೊ ಕರೆನ್ಸಿಯನ್ನು ನಿಷೇಧಿಸಿ ಆತ್ಮನಿರ್ಭರದ ಸ್ವದೇಶಿ ಡಿಜಿಟಲ್ ಕರೆನ್ಸಿಯನ್ನು ಚಲಾವಣೆಗೆ ತರುವ ಸಿದ್ಧತೆಯಲ್ಲಿದೆ. ಡಿಜಿಟಲ್ ಇಂಡಿಯಾ ಅಭಿಯಾನದಲ್ಲಿ ಇದೂ ಒಂದು ಮಹತ್ತರ ಹೆಜ್ಜೆಯಾಗಲಿದೆ.

ADVERTISEMENT

-ಭರತ್ ಬಿ.ಎನ್., ಮೈಸೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.