ADVERTISEMENT

ಶಾಂತಿ ಬೇಕೆಂದಿದ್ದರೆ ಜಾತಿ ಕೇಳದಿರಲಿ

​ಪ್ರಜಾವಾಣಿ ವಾರ್ತೆ
Published 6 ಜುಲೈ 2021, 19:31 IST
Last Updated 6 ಜುಲೈ 2021, 19:31 IST

‘ಧಾರ್ಮಿಕ ಕಟ್ಟುಪಾಡುಗಳ ಬಿಗಿಹಿಡಿತ’ ಎಂಬ ಡಾ. ಶಿವಮೂರ್ತಿ ಮುರುಘಾ ಶರಣರ ಲೇಖನವನ್ನು (ಪ್ರ.ವಾ., ಜುಲೈ 6) ಓದಿದಾಗ ಈ ಪತ್ರ ಬರೆಯಬೇಕೆನಿಸಿತು. ನಿಜ ಹೇಳಬೇಕೆಂದರೆ, ಈ ಜಾತಿವಾದ, ಪರಸ್ಪರ ವೈಷಮ್ಯ ಹೆಚ್ಚಾಗಿರುವುದಕ್ಕೆ ಕಾರಣ ರಾಜಕಾರಣಿಗಳು ಮತ್ತು ಮಠಾಧೀಶರು. ಮುಖ್ಯವಾಗಿ, ಬಸವಣ್ಣನವರ ಅನುಯಾಯಿಗಳೆಂದು ಹೇಳಿಕೊಳ್ಳುವ ಕೆಲವು ಕಾವಿಧಾರಿಗಳು, ತಮ್ಮ ಕರ್ತವ್ಯ ಮರೆತು ರಾಜಕೀಯ ಮಾಡುತ್ತಿರುವುದು ವಿಷಾದನೀಯ. ಬಸವಣ್ಣನವರು ಯಾವುದನ್ನು ಬೇಡವೆಂದು ಧಿಕ್ಕರಿಸಿದ್ದರೋ ಅದನ್ನು ಇವರು ಬಿಡದೆ ಮಾಡುತ್ತಿದ್ದಾರೆ. ನೂರಾರು ಮಠಗಳನ್ನು ಸ್ಥಾಪಿಸಿ, ಅವರವರಲ್ಲೇ ವೈಷಮ್ಯ ಹುಟ್ಟಿಸಿದ್ದಾರೆ. ತಮ್ಮ ಗುಂಪಿನ ಜನಕ್ಕೇ ಪದವಿ ಬೇಕೆಂದು ಧರಣಿ ಮಾಡುವ ಹೀನ ಸ್ಥಿತಿಗೆ ಇಳಿದಿದ್ದಾರೆ.

ಸಮಾಜಸೇವೆ ಮಾಡುತ್ತೇವೆಂದು ನೆಪ ಹೇಳಿ ರಾಜಕೀಯಕ್ಕೆ ಬಂದಿರುವ ಮಹಾನಾಯಕರು, ಮೀ‌ಸಲಾತಿಗಾಗಿ, ಇದ್ದ ನಾಲ್ಕು ಜಾತಿಗಳನ್ನು ನೂರಾರು ಜಾತಿಗಳಾಗಿ ಒಡೆದು ಕಚ್ಚಾಡುತ್ತಿದ್ದಾರೆ. ಇನ್ನು ಜಾತಿ ವೈಷಮ್ಯ ಹೋಗುವುದು ಹೇಗೆ? ದೇಶದಲ್ಲಿ ಶಾಂತಿ ಬೇಕೆಂದಿದ್ದರೆ, ಸರ್ಕಾರ ಜಾತಿ ಕೇಳುವುದನ್ನು ಬಿಡಲಿ. ವಿಷಾದವಾದರೂ ತಮಾಷೆ ಎಂದರೆ, ನನ್ನ ಮೊಮ್ಮಗ ನಾಲ್ಕು ವರ್ಷದ ಅಭಿರಾಮ್‌ಗೆ, ಜಾತಿ ಪ್ರಮಾಣಪತ್ರ ತರುವಂತೆ ಶಾಲೆಯಲ್ಲಿ ಕೇಳುತ್ತಾರೆ. ಏನೂ ತಿಳಿಯದ ಮಕ್ಕಳಲ್ಲಿ ಜಾತಿ ವೈಷಮ್ಯ ಬಿತ್ತುತ್ತಿದ್ದಾರೆ. ದೇಶ ಉದ್ಧಾರವಾಗಬೇಕೆಂದಿದ್ದರೆ, ಜಾತಿ ಕೇಳುವುದನ್ನು ಬಿಡಲಿ. ಬಡವರ ವಿದ್ಯಾಭ್ಯಾಸಕ್ಕೆ ಅನುಕೂಲ ಮಾಡಿಕೊಡಬೇಕು. ಯಾರು ಬಡವರು ಎನ್ನುವುದನ್ನು ಅವರ ಜೀವನಶೈಲಿಯೇ ಹೇಳುತ್ತದೆ. ಆಗ ಜಾತಿ ವೈಷಮ್ಯ ಹೇಳದಂತೆ ಮರೆಯಾಗುತ್ತದೆ.

-ವೆಂಕಟೇಶ್ ಮೂರ್ತಿ, ಚಿಂತಾಮಣಿ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.