ADVERTISEMENT

ವಾಚಕರ ವಾಣಿ: ತಪ್ಪು ಆ ಹೆಣ್ಣು ಮಗಳದ್ದಲ್ಲ...

​ಪ್ರಜಾವಾಣಿ ವಾರ್ತೆ
Published 2 ಜೂನ್ 2022, 19:30 IST
Last Updated 2 ಜೂನ್ 2022, 19:30 IST

ಬೆಳಗಾವಿಯ ಸುವರ್ಣ ವಿಧಾನಸೌಧದ ಮೆಟ್ಟಿಲುಗಳ ಮೇಲೆ ಶ್ಯಾವಿಗೆ ಒಣಗಲು ಹಾಕಿದರೆಂಬ ಕಾರಣಕ್ಕೆ ಗುತ್ತಿಗೆ ಆಧಾರದ ಕಾರ್ಮಿಕ ಮಹಿಳೆಯ ಮೇಲೆ ಶಿಸ್ತು ಕ್ರಮ ಕೈಗೊಳ್ಳಲಾಗಿದೆ ಎಂದು ಸರ್ಕಾರದ ಪ್ರತಿನಿಧಿಗಳು ಬಡಾಯಿ ಕೊಚ್ಚಿಕೊಳ್ಳುತ್ತಿದ್ದಾರೆ. ಕೇವಲ 200 ರೂಪಾಯಿಗಾಗಿ ಇಡೀ ದಿನ ದುಡಿದು ಹೊಟ್ಟೆ ಹೊರೆಯುವ ಅವರ ಮೇಲೆ ಕ್ರಮ ಕೈಗೊಂಡವರು, ಅಧಿವೇಶನ ನಡೆಯುವ ಸಂದರ್ಭದಲ್ಲಿಯೇ ನೀಲಿಚಿತ್ರ ನೋಡುವ ಮೂಲಕ ಕರ್ನಾಟಕದ ಕೀರ್ತಿ ಪತಾಕೆಯನ್ನು ಅಮೆರಿಕದ ಕಾಂಗ್ರೆಸ್‌ವರೆಗೂ ವಿಸ್ತರಿಸಿದ ಮಹಾಶಯರ ವಿರುದ್ಧ ಯಾವ ಕ್ರಮ ಕೈಗೊಳ್ಳಲಾಗಿದೆ ಎಂಬುದನ್ನು ಹೇಳಲಿ.

ವಿಧಾನಸೌಧದಲ್ಲಿಯೇ ರೌಡಿಗಳಿಗಿಂತಲೂ ಕಡೆಯಾಗಿ ಪರಸ್ಪರ ಎಳೆದಾಡಿ ಅಂಗಿ ಹರಿದುಕೊಂಡು ಹೊಡೆದಾಡಿಕೊಂಡವರ ವಿರುದ್ಧ ಯಾವ ಕ್ರಮ ಕೈಗಳ್ಳಲಾಗಿದೆ? ಪ್ರತಿರೋಧ ತೋರುವಷ್ಟೂ ಸಾಮರ್ಥ್ಯವಿರದವರ ಮೇಲೆ ಕ್ರಮ ಕೈಗೊಳ್ಳಲು ಇರುವ ಈ ಆತುರ ಬಲಿಷ್ಠರ ವಿರುದ್ಧ ಯಾಕಿಲ್ಲ? ದುಡಿದು ಉಣ್ಣುವ ಹೆಣ್ಣುಮಗಳನ್ನು ಶಿಕ್ಷಿಸುವುದರಿಂದ ನಿಮ್ಮ ಆಡಳಿತಕ್ಕೆ ಆದ್ಯಾವ ಶಿಸ್ತು ದೊರೆಯುತ್ತದೆ? ಅಷ್ಟಕ್ಕೂ ಆ ಮಹಿಳಾ ಕಾರ್ಮಿಕಳ ತಪ್ಪೇನಿದೆ? ₹ 400 ಕೋಟಿ ಖರ್ಚು ಮಾಡಿ ಕಟ್ಟಿಸಿದ ಸೌಧವನ್ನು ಸರಿಯಾಗಿ ಬಳಸಿಕೊಳ್ಳದೆ ಭೂತಬಂಗಲೆಯಾಗಿಸಿದ ಸರ್ಕಾರದ ನಿರ್ಲಕ್ಷ್ಯದ ವಿರುದ್ಧ ಯಾವ ಕ್ರಮ
ಕೈಗೊಳ್ಳಲಾಗಿದೆ?

ಪ್ರಮುಖ ಇಲಾಖೆಗಳನ್ನು ಸುವರ್ಣ ವಿಧಾನಸೌಧಕ್ಕೆ ವರ್ಗಾಯಿಸುವಂತೆ ಈ ಭಾಗದ ಹೋರಾಟಗಾರರು ಬೊಬ್ಬೆ ಹಾಕಿದರೂ ಅದಕ್ಕೆ ಸೊಪ್ಪುಹಾಕದೆ ಕಿವುಡಾಗಿ ವರ್ತಿಸುವ ಸರ್ಕಾರದ ನಿರ್ಲಕ್ಷ್ಯವೇ ಇದಕ್ಕೆ ನೇರ ಹೊಣೆ. ನಿಮ್ಮ ಹುಳುಕನ್ನು ಮುಚ್ಚಿಕೊಳ್ಳುವ ಬದಲು ಅದನ್ನು ಸರಿಪಡಿಸಿಕೊಳ್ಳಿ. ಬದುಕಿನ ಬಂಡಿಯ ನೊಗಕ್ಕೆ ಹೆಗಲು ನೀಡಿ ಶ್ರಮಿಸುವ ಆ ಮಹಿಳೆಯು ತನಗರಿವಿಲ್ಲದೇ ಮಾಡಿದ ಈ ಕ್ರಾಂತಿಕಾರಿ ಕೆಲಸಕ್ಕೆ ನಾಡಿನ ಎಲ್ಲ ಪ್ರಗತಿಪರರು ಆ ಮಹಿಳೆಯನ್ನು ಸನ್ಮಾನಿಸಲಿ. ಕಾಮನ್‌ಮ್ಯಾನ್ ಮುಖ್ಯಮಂತ್ರಿ ಎಂದು ಹೇಳಿಕೊಳ್ಳುವ ಬಸವರಾಜ ಬೊಮ್ಮಾಯಿ ಅವರು ತಕ್ಷಣವೇ ಆ ಹೆಣ್ಣುಮಗಳ ನೆರವಿಗೆ ಬಂದು ತಮ್ಮ ಹೇಳಿಕೆಯ ಪ್ರಕಾರ ನಡೆದುಕೊಳ್ಳುವುದನ್ನು ಸಾಬೀತುಪಡಿಸಲಿ.

ADVERTISEMENT

- ಸುರೇಶ ಎಮ್. ತಾಕತರಾವ, ಹಲ್ಯಾಳ, ಅಥಣಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.