ADVERTISEMENT

ಸಾವಿನ ಮನೆಯಲ್ಲಿ ಶ್ಯಾವಿಗೆ ತಿನ್ನುವವರು

​ಪ್ರಜಾವಾಣಿ ವಾರ್ತೆ
Published 3 ಫೆಬ್ರುವರಿ 2019, 20:00 IST
Last Updated 3 ಫೆಬ್ರುವರಿ 2019, 20:00 IST

ನಮ್ಮ ಬಹುತೇಕ ಮಂತ್ರಿಗಳು ಸ್ವಂತ ವಿವೇಚನೆಯನ್ನೇ ಬಳಸದೆ ಉನ್ನತಾಧಿಕಾರಿಗಳ ಅಭಿಪ್ರಾಯಗಳನ್ನೇ ಒಪ್ಪಿ ಜಾರಿಗೆ ತರುತ್ತಾರೆ ಎಂಬುದಕ್ಕೆ, ಐದು ಎಕರೆವರೆಗೆ ಜಮೀನು ಹೊಂದಿರುವ ರೈತರಿಗೆ ವರ್ಷಕ್ಕೆ ₹6 ಸಾವಿರ ಧನಸಹಾಯ ನೀಡುವ ಕೇಂದ್ರದ ಉದ್ದೇಶಿತ ಯೋಜನೆಯೇ ಉದಾಹರಣೆ.

ಸಾಮಾನ್ಯವಾಗಿ ರೈತರಿಗೆ ಜಮೀನು ಹೆಚ್ಚಿಗಿದ್ದಷ್ಟೂ ಸಾಲವೂ ಹೆಚ್ಚಾಗಿಯೇ ಇರುತ್ತದೆ. ಅಂತಹವರಿಗೆ ಸಹಾಯ ಬೇಡವೇ? ಈ ಧನಸಹಾಯ ಹಸಿದವನ ನಾಲಿಗೆಗೆ ಸೂಜಿಯಿಂದ ತುಪ್ಪ ಸವರಿದಂತೆ ಎಂದು ವಿಮರ್ಶಕರು ಹೇಳಿರುವುದನ್ನು ತಪ್ಪು ಎನ್ನಬಹುದೇ? ‘ರೈತರ ಸಾಲ ಮನ್ನಾ ಮಾಡಿದರೆ ಅವರು ಸೋಮಾರಿಗಳಾಗುತ್ತಾರೆ’ ಎಂಬುದೇ ಅನ್ನದಾತನಿಗೆ ಮಾಡುವ ಅವಮಾನ.

ಬೆಳೆ ಬೆಳೆಯಲು ರೈತ ಸಾಲ ಮಾಡಿಕೊಂಡ ಎಂದರೆ, ಅದರ ಹೊಣೆಯನ್ನು ಇಡೀ ಸಮಾಜ ಹೊರಬೇಕಾಗುತ್ತದೆ. ನಿಸರ್ಗ
ದೊಂದಿಗೆ ‘ಜೂಜಾಡುವ’ ರೈತ ನಮ್ಮ ಅನ್ನಕ್ಕಾಗಿ ತಾನೇಕೆ ಸಾಯಬೇಕು? ಉದ್ಯಮಿಗಳಿಗೆ ಕೋಟ್ಯಂತರ ರೂಪಾಯಿ ಸಾಲ ನೀಡಿ ಮೂರು ನಾಮ ಹಾಕಿಸಿಕೊಂಡಿರುವ ನಮ್ಮ ಬ್ಯಾಂಕುಗಳು, ರೈತ ಎಂದರೆ ಮುಖ ತಿರುಗಿಸುತ್ತವೆ. ಸಾಲ ಮನ್ನಾ ಎಂಬುದು ಮಹಾದಯೆ ಅಲ್ಲ. ಅದು ಕರ್ತವ್ಯ. ಅದನ್ನೇ ದಾಳ ಮಾಡಿಕೊಂಡು ಕಚ್ಚಾಡುವ ಮಂದಿ ‘ಸಾವಿನ ಮನೆಯಲ್ಲಿ ಶ್ಯಾವಿಗೆ ತಿಂದಂತೆ’ ವರ್ತಿಸುತ್ತಾರೆ.

ADVERTISEMENT

ಇಂದು ರೈತನೊಂದಿಗೆ ಪ್ರಕೃತಿ ಮುನಿದಿದೆ. ಸ್ವಾಭಿಮಾನ ಕೆಣಕುತ್ತಿದೆ. ಇಂತಹ ಸಂದರ್ಭದಲ್ಲಿ ನಾವು ಅವನ ಮುಂದೆ ₹ 6 ಸಾವಿರ (ಅದೂ 3 ಕಂತುಗಳಲ್ಲಿ) ಹಿಡಿದುಕೊಂಡು ನಿಂತಿದ್ದೇವೆ ಎಂದರೆ...? ನಮ್ಮನ್ನು ಆಳುವವರ ಐಡಿಯಾಗಳು ಯಾವ ದಿಕ್ಕಿನಲ್ಲಿ ಓಡುತ್ತಿರುತ್ತವೆ ನೋಡಿ!

–ತಿರುಪತಿ ನಾಯಕ್,ಆಶೀಹಾಳ ತಾಂಡ, ರಾಯಚೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.