ವಾಚಕರ ವಾಣಿ
ನ್ಯಾಯತಕ್ಕಡಿ ತಾರುಮಾರು, ಕಣ್ಣಪಟ್ಟಿ ಒದ್ದೆ
ಉಮರ್ ಖಾಲಿದ್ ಮತ್ತು ಶರ್ಜೀಲ್ ಇಮಾಮ್ ಅವರಿಗೆ ಜಾಮೀನು ನೀಡಲು ನಿರಾಕರಿಸುತ್ತ ಸುಪ್ರೀಂ ಕೋರ್ಟ್ ತೋರಿರುವ ಧೋರಣೆ ಕುರಿತಾದ ‘ಪ್ರಜಾವಾಣಿ’ಯ ಸಂಪಾದಕೀಯ (ಜ. 7) ಮಾರ್ಮಿಕವಾಗಿದೆ; ಸದ್ಧರ್ಮವೆಂದರೆ ಏನು ಎಂಬುದನ್ನು ದಿಟ್ಟವಾಗಿ, ಸ್ಫಟಿಕಸ್ಪಷ್ಟವಾಗಿ ಮುಂದಿಟ್ಟಿದೆ. ಯುಎಪಿಎ ಕಾಯ್ದೆ ಮೊದಲೇ ರಕ್ಕಸಕ್ರೂರವಾದದ್ದು. ಖಾಲಿದ್ ಮತ್ತು ಇಮಾಮರ ವಿಷಯದಲ್ಲಿ ನ್ಯಾಯಾಲಯವು ಅದನ್ನು ವಿಚಿತ್ರವಾಗಿ ವ್ಯಾಖ್ಯಾನಿಸಿ, ಇನ್ನಷ್ಟು ಕ್ರೌರ್ಯ ಮೆರೆದಿದೆ. ನ್ಯಾಯದೇವತೆಯ ಕೈಯಲ್ಲಿರುವ ತಕ್ಕಡಿ ತಾರುಮಾರಾಗಿ, ಅವಳ ಕಣ್ಣ ಕಪ್ಪುಪಟ್ಟಿ ಕಂಬನಿಯಿಂದ ಒದ್ದೆಯಾಗಿರುತ್ತದೆ.
⇒ರಘುನಂದನ, ಬೆಂಗಳೂರು
ಸಮಸಮಾಜ ನಿರ್ಮಾಣ ಇಂದಿನ ಅಗತ್ಯ
‘ಸಹಬಾಳ್ವೆ, ಪ್ರಜಾಪ್ರಭುತ್ವಕ್ಕಾಗಿ...’ ಲೇಖನವು (ಲೇ: ದೇವನೂರ ಮಹಾದೇವ, ಪ್ರ.ವಾ., ಜ. 7) ವಾಸ್ತವ ಸಂಗತಿಯ ಮೇಲೆ ಚೆಳಕು ಚೆಲ್ಲಿದೆ. ಬುದ್ಧ, ಬಸವ, ಅಂಬೇಡ್ಕರ್ ಆಶಿಸಿದ್ದ ಸಮಸಮಾಜ ದೇಶದಲ್ಲಿ ಅಸ್ತಿತ್ವಕ್ಕೆ ಬರಬೇಕಿದೆ. ಕೆಲವು ಜನರ ಮನಸ್ಸಿನ ಕೊಳಕನ್ನು ಹೊರಹಾಕಲು ಎಷ್ಟು ವರ್ಷ ಬೇಕೋ? ಇದು ಸೃಷ್ಟಿಕರ್ತನಿಗೂ ಅರ್ಥವಾಗುವುದಿಲ್ಲ. ಜಾತೀಯತೆ ಬೂದಿಮುಚ್ಚಿದ ಕೆಂಡದಂತಿದೆ. ಈ ಬಗ್ಗೆ ಮೇಲುಕೀಳು, ಅಸ್ಪೃಶ್ಯತೆಯ ನೋವು ಅನುಭವಿಸುತ್ತಿರುವ ಜನರಲ್ಲಿ ಅರಿವು ಮೂಡಿಸಬೇಕಿದೆ. ಇದರ ಮೂಲೋತ್ಪಾಟನೆಗೆ ಒಗ್ಗಟ್ಟಿನಿಂದ ಒಂದೇ ವೇದಿಕೆಯಡಿ ಹೋರಾಟವನ್ನೂ ಮಾಡಬೇಕಿದೆ.
⇒ಮೋಟಮ್ಮ, ಬೆಂಗಳೂರು
ಭಕ್ತನ ಸರಳ ಭಕ್ತಿ ಮತ್ತು ತೋರುಗಾಣಿಕೆ
ಪರ್ಯಾಯ ಪುತ್ತಿಗೆ ಮಠಾಧೀಶ ಸುಗುಣೇಂದ್ರತೀರ್ಥ ಶ್ರೀಪಾದರ ಚತುರ್ಥ ಪರ್ಯಾಯದ ಅಂಗವಾಗಿ ದೆಹಲಿಯ ಶ್ರೀಕೃಷ್ಣ ಭಕ್ತರೊಬ್ಬರು ₹2 ಕೋಟಿ ವೆಚ್ಚದಲ್ಲಿ ಸಿದ್ಧಪಡಿಸಿರುವ ಚಿನ್ನದ ಭಗವದ್ಗೀತೆ ಹೊತ್ತಿಗೆ ಲೋಕಾರ್ಪಣೆ ಮಾಡುತ್ತಿರುವುದು ಭಕ್ತಿಯ ಸಂಕೇತದಂತೆ ಕಾಣಿಸುತ್ತಿಲ್ಲ. ಇದು ಹೆಚ್ಚುಗಾರಿಕೆಯ, ಪ್ರದರ್ಶನದ ಆಡಂಬರ. ಸಮಾಜಕ್ಕೆ ತಪ್ಪುಮಾದರಿಯ ಸಂದೇಶ ನೀಡುತ್ತದೆ. ಈ ರೀತಿ ಕೀರ್ತಿ, ತೋರುಗಾಣಿಕೆಗಾಗಿ ವೃಥಾ ಹಣ ಪೋಲು ಮಾಡುವುದನ್ನು ಬಿಟ್ಟು ಭಗವದ್ಗೀತೆಯಲ್ಲಿನ ಭಕ್ತಿ ಮತ್ತು ಸ್ಥಿತಪ್ರಜ್ಞ ಸಂದೇಶದಲ್ಲಿ ಭಕ್ತನ ಸರಳ ಭಕ್ತಿ ಹೇಗಿರಬೇಕು ಎನ್ನುವ ಶ್ರೀಕೃಷ್ಣನ ಮಾತುಗಳನ್ನು ನಾವೆಲ್ಲರೂ ಅನುಸರಿಸಬೇಕು. ಭಗವದ್ಗೀತೆಯ ಚಿಂತನೆಗಳು ಆಂತರಿಕವಾಗಿ ಆಚರಣೆಗೆ ಬರಲಿ.
⇒ಶಿವನಕೆರೆ ಬಸವಲಿಂಗಪ್ಪ, ದಾವಣಗೆರೆ
ಜವಾಬ್ದಾರಿ ಮರೆತ ಚಲನಚಿತ್ರ ಅಕಾಡೆಮಿ
‘ಚಿತ್ರೋತ್ಸವಕ್ಕೆ ಸೀಮಿತವಾದ ಚಲನಚಿತ್ರ ಅಕಾಡೆಮಿ’ ವರದಿಯಲ್ಲಿ (ಪ್ರ.ವಾ.,
ಜ. 4) ಪ್ರಸ್ತಾಪಿಸಿರುವ ಒಟ್ಟಾರೆ ಸ್ಥಿತಿ ಯಥಾರ್ಥವಾದುದು. ‘ಹಿಂದಿನ ಅಧ್ಯಕ್ಷ
ರಿಂದಲೂ ಏನೂ ಕಾರ್ಯಕ್ರಮ ಆಗಿರಲಿಲ್ಲ’ ಎಂಬುದು ಸಮರ್ಥನೆ ಆಗದು. ಪ್ರಥಮ ಅಧ್ಯಕ್ಷ ಟಿ.ಎಸ್. ನಾಗಾಭರಣ ಕೆಲವು ಯೋಜನೆ ಆರಂಭಿಸಿದ್ದರು.
ರಾಜೇಂದ್ರಸಿಂಗ್ ಬಾಬು ಅವರು ಕೆಲವು ಕಾರ್ಯಕ್ರಮ ನಡೆಸಿದರಾದರೂ, ಅವು ವಾಣಿಜ್ಯ ಮಂಡಳಿ ನಡೆಸುವಂತಹವಾಗಿದ್ದವು. ಮಾಧ್ಯಮವಾಗಿ ಚಲನಚಿತ್ರವನ್ನು ಬೆಳೆಸುವುದು ಹೇಗೆ ಎಂಬುದರತ್ತ ಅಕಾಡೆಮಿಯು ಗಮನಹರಿಸಬೇಕು. ಹದಿನಾರು ವರ್ಷಗಳ ನಂತರವೂ ಅಕಾಡೆಮಿಯು ಒಂದು ಸಾರ್ಥಕ ಸಂಸ್ಥೆಯಾಗಿ ರೂಪುಗೊಂಡಿಲ್ಲ. ‘ಬಿಫೆಸ್’ ನಡೆಸುವುದು ಸರ್ಕಾರ. ಅದರಲ್ಲಿ ಅಕಾಡೆಮಿಯ ಪಾತ್ರ ಸೀಮಿತ. ಅದನ್ನೇ ತನ್ನ ಸಾಧನೆ ಎಂದು ಅಕಾಡೆಮಿ ಹೇಳಿಕೊಳ್ಳಬಾರದು.
⇒ಎಚ್.ಎಸ್. ಮಂಜುನಾಥ, ಗೌರಿಬಿದನೂರು
ಪರಿಹಾರ ತಡ: ಪ್ರಜಾಪ್ರಭುತ್ವದ ಅಣಕ
ಬಳ್ಳಾರಿಯಲ್ಲಿ ನಡೆದ ಬ್ಯಾನರ್ ಗಲಾಟೆಯಲ್ಲಿ ಮೃತಪಟ್ಟ ಕಾಂಗ್ರೆಸ್ ಕಾರ್ಯಕರ್ತನ ಕುಟುಂಬಕ್ಕೆ ಎರಡು ದಿನದಲ್ಲಿಯೇ ಸಚಿವ ಜಮೀರ್ ಅಹಮದ್ ಖಾನ್ ಅವರು ₹25 ಲಕ್ಷ ಪರಿಹಾರ ನೀಡಿ ಸಾಂತ್ವನ ಹೇಳಿದ್ದಾರೆ. ಆದರೆ, ಮೈಸೂರಿನಲ್ಲಿ ಸಂಭವಿಸಿದ ಸಿಲಿಂಡರ್ ಸ್ಫೋಟದಲ್ಲಿ ಸಂತ್ರಸ್ತರಾದವರಿಗೆ ಇನ್ನೂ ಪರಿಹಾರ ನೀಡಿಲ್ಲ. ಈ ಎರಡೂ ಪ್ರಕರಣಗಳಲ್ಲಿ ಸಂಭವಿಸಿರುವುದು ದುರಂತ ಸಾವುಗಳೇ! ಆದರೆ, ರಾಜಕೀಯ ಸಾವಿಗೆ ಸ್ಪಂದಿಸಿದ ರೀತಿಗೂ, ಬಡಪಾಯಿ ಮಹಿಳೆಯರ ಸಾವಿಗೆ ಸ್ಪಂದಿಸುತ್ತಿರುವ ರೀತಿಗೂ ವ್ಯತ್ಯಾಸವಿದೆ. ಪ್ರಜಾಪ್ರಭುತ್ವವನ್ನೇ ಅಣಕಿಸುವಂತಹ ಇಂತಹ ವೈರುಧ್ಯಗಳಿಗೆ ಹೊಣೆ ಯಾರು?
⇒ಅಶೋಕ ಓಜಿನಹಳ್ಳಿ, ಕೊಪ್ಪಳ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.