ADVERTISEMENT

ಸೆಲೆಬ್ರಿಟಿಗಳಿಗೂ ಇರುತ್ತದೆ ವೈಯಕ್ತಿಕ ಆಯ್ಕೆ

ಎಚ್.ಎನ್.ಜಯರಾಮ್, ಹಂದಿಕುಂಟೆ.ಸಿರಾ (ತಾ)
Published 16 ಏಪ್ರಿಲ್ 2021, 19:31 IST
Last Updated 16 ಏಪ್ರಿಲ್ 2021, 19:31 IST

ರಾಹುಲ್ ದ್ರಾವಿಡ್ ಅವರು ಜಾಹೀರಾತೊಂದರಲ್ಲಿ, ಟ್ರಾಫಿಕ್‌ ಜಾಮ್‌ ವಿರುದ್ಧ ರೌದ್ರಾವತಾರ ತಾಳಿ, ಕಾರೊಂದರ ಗಾಜನ್ನು ಒಡೆಯುವುದಕ್ಕೆ ಸಂಬಂಧಿಸಿದಂತೆ ಡಾ. ಟಿ.ಗೋವಿಂದರಾಜು ಅವರು ಬರೆದಿರುವ ಪತ್ರದಲ್ಲಿ (ವಾ.ವಾ., ಏ. 12), ಜಾಹೀರಾತಿನಲ್ಲಿ ಪಾಲ್ಗೊಳ್ಳುವ ಸೆಲೆಬ್ರಿಟಿಗಳಿಗೆ ಸಾಮಾಜಿಕ ಹೊಣೆಗಾರಿಕೆ ಇರುವುದಿಲ್ಲವೇ ಎಂದು ಪ್ರಶ್ನಿಸಿದ್ದಾರೆ. ಟ್ರಾಫಿಕ್ ಜಾಮ್ ಆದರೆ ಯಾರಾದರೂ ಬ್ಯಾಟ್ ಅಥವಾ ದೊಣ್ಣೆ ಬೀಸಿ ಪಕ್ಕದ ಕಾರನ್ನು ಧ್ವಂಸ ಮಾಡಿ ‘ನಾನು ರೌಡಿ’ ಎಂದು ಅಬ್ಬರಿಸಿರಿ ಎಂಬುದು ಜಾಹೀರಾತಿನ ಸಂದೇಶ ಎಂದು ಅವರು ಹೇಳಿದ್ದಾರೆ. ಅವರು ಹೇಳಿದ ಹಾಗೆ, ಟ್ರಾಫಿಕ್ ಜಾಮ್ ಉಂಟಾದರೆ ಯಾರಾದರೂ ಬ್ಯಾಟ್ ಬೀಸಿ ಯಾರದೋ ಕಾರನ್ನು ಚಚ್ಚಲು ಸಾಧ್ಯವೇ? ಜನ ಪ್ರಜ್ಞಾವಂತರಾಗಿದ್ದು, ಜಾಹೀರಾತುಗಳನ್ನು ಸ್ವೀಕರಿಸುವಾಗ ಅಷ್ಟೊಂದು ಭ್ರಾಮಕವಾಗಿ ವರ್ತಿಸುವುದಿಲ್ಲ. ಇದೇ ರಾಹುಲ್ ದ್ರಾವಿಡ್ ತಂಬಾಕು, ಸಿಗರೇಟ್ ಸೇವನೆಯಿಂದಾಗುವ ಅಪಾಯಗಳ ಬಗ್ಗೆ ಜನಜಾಗೃತಿ ಮೂಡಿಸುವ ಜಾಹೀರಾತಿನಲ್ಲಿ ಪಾಲ್ಗೊಂಡಿರುವುದನ್ನು ಮರೆಯಬಾರದು. ಸಾಮಾಜಿಕ ಹೊಣೆಗಾರಿಕೆಗೆ ಇದಕ್ಕಿಂತ ಉತ್ತಮ ಉದಾಹರಣೆ ಬೇಕೇ?

ಮತ್ತೊಂದು ಜಾಹೀರಾತಿನಲ್ಲಿ, ಬೆಂಚ್ ಮೇಲೆ ಕುಳಿತ ಅಜ್ಜಿಯೊಬ್ಬಳು ಕೆಳಗೆ ಬಿದ್ದಿದ್ದ ಊರುಗೋಲನ್ನು ಎತ್ತಿ ಕೊಡುವಂತೆ ಒಬ್ಬ ಹುಡುಗನನ್ನು ಕೇಳುತ್ತಾಳೆ. ಆದರೆ ಆ ಹುಡುಗ ಚಾಕೊಲೇಟ್ ತಿನ್ನುವುದರಲ್ಲಿ ಮಗ್ನನಾಗಿರುತ್ತಾನೆ. ಆಗ ಅಜ್ಜಿ ಸ್ವತಃ ಮುಂದೆ ಬಂದು ಅದನ್ನು ತೆಗೆದುಕೊಳ್ಳುತ್ತಾಳೆ. ಅಷ್ಟರಲ್ಲಿ ಆಕೆ ಕುಳಿತ ಬೆಂಚ್ ಮೇಲೆ ಭಾರವಾದ ವಸ್ತು ಬಿದ್ದು ಪುಡಿಪುಡಿಯಾಗುತ್ತದೆ. ಅದಕ್ಕೆ ಪ್ರತಿಯಾಗಿ ಅಜ್ಜಿಯು ಹುಡುಗನಿಗೆ ‘ನೀನು ಏನೂ ಮಾಡದೇ ಇದ್ದುದು ಒಳ್ಳೆಯದಾಯಿತು’ ಎನ್ನುತ್ತಾಳೆ. ಹಾಗಿದ್ದರೆ ಈ ಜಾಹೀರಾತಿನ ಪ್ರಕಾರ, ವಯಸ್ಸಾದವರಿಗೆ ಯಾರೂ ಸಹಾಯ ಮಾಡಬಾರದು ಎಂದು ಅರ್ಥವೇ? ಜನ ಹೀಗೆ ವರ್ತಿಸುತ್ತಾರೆಂದು ಭಾವಿಸುವುದು ಹಾಸ್ಯಾಸ್ಪದ ಆಗುವುದಿಲ್ಲವೇ? ಸೆಲೆಬ್ರಿಟಿಗಳಿಗೂ ವೈಯಕ್ತಿಕ ಆಯ್ಕೆಗಳಿರುತ್ತವೆ.

- ಅಶೋಕ ಓಜಿನಹಳ್ಳಿ, ಕೊಪ್ಪಳ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.