ADVERTISEMENT

ವಾಚಕರ ವಾಣಿ: 31 ಮಾರ್ಚ್ 2023 ಶುಕ್ರವಾರ

​ಪ್ರಜಾವಾಣಿ ವಾರ್ತೆ
Published 30 ಮಾರ್ಚ್ 2023, 19:30 IST
Last Updated 30 ಮಾರ್ಚ್ 2023, 19:30 IST

ಕಿರಿಯ ಮೇಯರ್‌ ಮಾಡಲಿ ಹಿರಿಯ ಸಾಧನೆ

ರಾಜ್ಯದ ಅತ್ಯಂತ ಕಿರಿಯ ಮೇಯರ್ ಎಂಬ ಖ್ಯಾತಿಗೆ ಪಾತ್ರರಾಗಿರುವ ಬಳ್ಳಾರಿಯ ತ್ರಿವೇಣಿ ಅವರಿಗೆ ಬರೀ 23 ವರ್ಷ. ಇಷ್ಟು ಚಿಕ್ಕ ವಯಸ್ಸಿನಲ್ಲೇ ದೊಡ್ಡ ಜವಾಬ್ದಾರಿ ವಹಿಸಿಕೊಂಡಿರುವ ಅವರ ಮುಂದೆ ದೊಡ್ಡ ದೊಡ್ಡ ಸವಾಲುಗಳೇ ಇರಬಹುದು. ಬಹುಮುಖ್ಯವಾಗಿ, ಬಳ್ಳಾರಿಯಂತಹ ಬಹುಮುಖ್ಯವಾದ ನಗರದಲ್ಲಿ ಜನರಿಗೆ ಮೂಲ ಸೌಕರ್ಯಗಳನ್ನು ಸಮರ್ಪಕವಾಗಿ ಕಲ್ಪಿಸುವಲ್ಲಿ ಅವರ ಪಾತ್ರ ಪ್ರಮುಖವಾಗಿದೆ.

ಅತಿ ಹೆಚ್ಚು ಅಧಿಕಾರವನ್ನೇನೂ ಹೊಂದಿರದ ಮೇಯರ್ ಹುದ್ದೆ ಆಲಂಕಾರಿಕವಾದುದಾದರೂ ಅದರ ಕಿಮ್ಮತ್ತು ಆ ಹುದ್ದೆಯನ್ನು ಅಲಂಕರಿಸುವವರನ್ನು ಅವಲಂಬಿಸಿದೆ. ನಗರದ ಪ್ರಥಮ ಪ್ರಜೆ ಎಂದು ಕರೆಸಿಕೊಳ್ಳುವ ಮೇಯರ್‌ಗಳಲ್ಲಿ ಕೆಲವರು ತಮ್ಮ ಸೀಮಿತವಾದ ಅಧಿಕಾರ ವ್ಯಾಪ್ತಿಯಲ್ಲಿಯೇ ಅನೇಕ ಜನೋಪಯೋಗಿ ಕಾರ್ಯಗಳ ಮೂಲಕ ಒಳ್ಳೆಯ ಹೆಸರು ಗಳಿಸಿದ್ದಾರೆ. ಇದೀಗ ತ್ರಿವೇಣಿ ಅವರು ಇಂತಹವರ ಸಾಲಿಗೆ ಸೇರಲಿ ಎಂದು ಹಾರೈಸೋಣ.

ADVERTISEMENT

ಕೆ.ವಿ.ವಾಸು, ಮೈಸೂರು‌

***

ಮೀಸಲಾತಿ: ಅನ್ಯಾಯ ಸರಿಪಡಿಸಿ

ಮುಸ್ಲಿಂ ಸಮುದಾಯವು ಬಡತನ, ಅನಕ್ಷರತೆ, ನಿರುದ್ಯೋಗ ಸಮಸ್ಯೆಗಳಿಂದ ಈಗಲೂ ಬಳಲುತ್ತಿದೆ. ಕರ್ನಾಟಕಕ್ಕೆ ಸಂಬಂಧಿಸಿದಂತೆ ಈ ಸಮುದಾಯದ ಹಿಂದುಳಿದಿರುವಿಕೆಯನ್ನು ಗಮನಿಸಿದ ಎಚ್.ಡಿ.ದೇವೇಗೌಡ ಅವರು ತಾವು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಶೇಕಡ 4ರಷ್ಟು ಮೀಸಲಾತಿಯನ್ನು ನೀಡಿದ್ದರು. ಈಗ ಸರ್ಕಾರ ಅದನ್ನು ಕಿತ್ತುಕೊಂಡಿರುವುದು ಅನ್ಯಾಯದ ತೀರ್ಮಾನವಾಗಿದೆ.

ಬೇರೆ ಸಮುದಾಯಗಳಿಗೆ ಮೀಸಲಾತಿ ಹೆಚ್ಚಿಸುವುದರ ಬಗೆಗೆ ಸರ್ಕಾರ ಪರ್ಯಾಯವಾಗಿ ಯೋಚಿಸಿ ಕ್ರಮ ಕೈಗೊಳ್ಳಬೇಕು. ಮುಸ್ಲಿಂ ಸಮುದಾಯದಿಂದ ಕಿತ್ತುಕೊಳ್ಳಲಾದ ಈ ಸೌಲಭ್ಯವನ್ನು ಪುನಃ ಅವರಿಗೆ ನೀಡಿ ಅನ್ಯಾಯವನ್ನು ಸರಿಪಡಿಸಬೇಕು.

ಡಾ. ಸರ್ಜಾಶಂಕರ್ ಹರಳಿಮಠ, ಶಿವಮೊಗ್ಗ

***

ಎಚ್ಚರ... ಬರುತ್ತಿದ್ದಾರೆ ರಂಗೋಲಿ ಕೆಳಗೆ ತೂರುವವರು!

ಚುನಾವಣಾ ಆಯೋಗವು ನೀತಿ ಸಂಹಿತೆ ಜಾರಿ ಮಾಡಿದೆ. ರಾಜಕೀಯ ಪಕ್ಷಗಳು ಹಾಗೂ ಅಭ್ಯರ್ಥಿಗಳು ಇಷ್ಟೇ ಮಿತಿಯೊಳಗೆ ಖರ್ಚುವೆಚ್ಚ ಮಾಡಬೇಕೆಂದು ತಿಳಿಸಿದೆ. ಆದರೆ ಹಿಂದಿನಿಂದಲೂ ಬಹಳಷ್ಟು ಅಭ್ಯರ್ಥಿಗಳು ಮತದಾರರಿಗೆ ಎಗ್ಗಿಲ್ಲದೇ ಆಮಿಷ ತೋರಿಸಿ, ಮದ್ಯ, ಮಾಂಸ, ಭೂರಿ ಭೋಜನ, ಇದಲ್ಲದೆ ಕುಕ್ಕರ್, ಮಿಕ್ಸಿ, ಸೀರೆ, ಒಡವೆ, ದುಡ್ಡು ಹಂಚಿ ಚುನಾವಣೆ ನಡೆಸಿಕೊಂಡು ಬರುತ್ತಿದ್ದಾರೆ. ಹೊರನೋಟಕ್ಕೆ ನೀತಿ ಸಂಹಿತೆ. ಅನೇಕ ಪ್ರಜ್ಞಾವಂತ ನಾಗರಿಕರು ತಿಳಿದೂ ತಿಳಿಯದಂತೆ ವರ್ತಿಸುತ್ತಿದ್ದಾರೆ.

ಇಲ್ಲಿ ಚುನಾವಣಾ ಆಯೋಗ, ಪೊಲೀಸ್ ಸಿಬ್ಬಂದಿ ಮಾತ್ರವೇ ಇಂತಹ ಕೃತ್ಯಗಳನ್ನು ತಡೆಯಬೇಕು ಎನ್ನುವ ತೀರ್ಮಾನ ತಪ್ಪು. ಎಲ್ಲಿ ಆಮಿಷ ಒಡ್ದುವ ಕೃತ್ಯಗಳು ನಡೆಯುತ್ತವೋ ಅಂತಲ್ಲಿ ಆಯೋಗಕ್ಕೆ, ಪೊಲೀಸ್ ಇಲಾಖೆಗೆ ಸುದ್ದಿ ಮುಟ್ಟಿಸುವ ಜವಾಬ್ದಾರಿ ಎಲ್ಲ ನಾಗರಿಕರ ಮೇಲಿದೆ. ಚುನಾವಣಾ ಆಯೋಗದ ಕಣ್ಣು ತಪ್ಪಿಸಿ ಇಂತಹ ಕೃತ್ಯಗಳನ್ನು ನಡೆಸುವ ಅಭ್ಯರ್ಥಿಗಳ ಮೇಲೆ ಅತಿ ಸೂಕ್ಷ್ಮ ಕಣ್ಣಿಟ್ಟಿರಬೇಕು. ಇಲ್ಲದಿದ್ದಲ್ಲಿ ದುಡ್ಡಿದ್ದವರು ಚುನಾವಣೆ ಗೆಲ್ಲಲು ರಂಗೋಲಿ ಕೆಳಗೆ ತೂರುತ್ತಾರೆ.

ಎಂ.ಪರಮೇಶ್ವರ, ಮದ್ದಿಹಳ್ಳಿ, ಹಿರಿಯೂರು

***

ಐಪಿಎಲ್ ಟೂರ್ನಿ: ಕಾಯುವಿಕೆ ಕೊನೆಯಾಗುವುದೇ?

ಇದೀಗ ಐಪಿಎಲ್ ಟೂರ್ನಿ ಆರಂಭವಾಗಿದೆ. ಪ್ರತಿವರ್ಷದಂತೆ ‘ಈ ಸಲ ಕಪ್ ನಮ್ದೇ’ ಎಂಬ ಆತ್ಮವಿಶ್ವಾಸದ ಮಾತಿನೊಂದಿಗೆ ಆರ್‌ಸಿಬಿ ತಂಡದ ಕೋಟ್ಯಂತರ ಅಭಿಮಾನಿಗಳು ಐಪಿಎಲ್ ವೀಕ್ಷಣೆಗೆ ಕಾಯುತ್ತಿದ್ದಾರೆ. ಹಿಂದಿನ ಹದಿನೈದು ವರ್ಷಗಳಿಂದ ಕಪ್ ಗೆಲ್ಲದಿದ್ದರೂ ತನ್ನದೇ ಆದ ಅಭಿಮಾನಿ ಬಳಗ ಸಂಪಾದಿಸಿರುವ ಆರ್‌ಸಿಬಿ ಈ ಬಾರಿ ಕಪ್ ಎತ್ತಿ ಹಿಡಿಯಲಿ. ಅಭಿಮಾನಿಗಳ ಕಾಯುವಿಕೆ ಕೊನೆಯಾಗಲಿ. ಅಭಿಮಾನಿಗಳು ಸಹ ಬೆಟ್ಟಿಂಗ್ ಕಡೆಗೆ ಹೋಗದೆ, ಕ್ರಿಕೆಟ್ ಪಂದ್ಯಗಳನ್ನು ಮನರಂಜನೆಗಾಗಿ ಮಾತ್ರ ನೋಡುವಂತೆ ಆಗಲಿ.

ಅಂಬಿಕಾ ಬಿ.ಟಿ., ತುಮಕೂರು

***

ಉಚಿತ ಕೊಡುಗೆ: ನಡೆಯಲಿ ಚಿಂತನೆ

ಐದನೆಯ ಶತಮಾನದ ಆರಂಭದಲ್ಲಿ ಭಾರತಕ್ಕೆ ಭೇಟಿ ನೀಡಿದ್ದ ಹ್ಯುಯೆನ್‍ತ್ಸಾಂಗ್‌ ಮತ್ತು ಪಾಹಿಯಾನ ಎಂಬ ಚೀನಾದ ಇತಿಹಾಸಕಾರರು ಭಾರತದಾದ್ಯಂತ ಸಂಚರಿಸಿದರೂ ಒಬ್ಬನೇ ಒಬ್ಬ ಭಿಕ್ಷುಕನನ್ನೂ ಕಂಡಿರಲಿಲ್ಲ. ಭಾರತ ಅತ್ಯಂತ ಸುಭಿಕ್ಷವಾದ ನಾಡಾಗಿತ್ತು ಎಂದು ಅವರು ಬರೆದಿದ್ದಾರೆ. ಭಾರತ ಸ್ವಾತಂತ್ರ್ಯದ ನಂತರ ಸರ್ಕಾರಗಳು ಬಡತನ ನಿವಾರಣೆಯ ವಿವಿಧ ಯೋಜನೆಗಳನ್ನು ಕೈಗೊಂಡ ನಂತರವೂ ಬಡತನ ಹಾಗೆಯೇ ಉಳಿದಿದೆ. ಇಂದಿಗೂ ದೇಶದಲ್ಲಿ ದೀರ್ಘಾವಧಿ ಅನುಕೂಲಗಳನ್ನು ದೃಷ್ಟಿಯಲ್ಲಿ ಇರಿಸಿಕೊಂಡು ಮತ ಹಾಕುವುದಕ್ಕಿಂತ ಅಲ್ಪಾವಧಿ ಖುಷಿಯ ಸಂಗತಿಗಳಿಗೆ ಮನಸೋತು ಮತ ಹಾಕುವವರ ಸಂಖ್ಯೆ ಗಣನೀಯ ಪ್ರಮಾಣದಲ್ಲಿದೆ. ಹೀಗಾಗಿಯೇ ರಾಜಕಾರಣಿಗಳು ಇದನ್ನು ದುರ್ಬಳಕೆ ಮಾಡಿಕೊಂಡು ಚುನಾವಣೆ ವೇಳೆ ಉಚಿತ ಕೊಡುಗೆಗಳ ಬಗ್ಗೆ ಹೇಳಿ ಮತ ಬಾಚುತ್ತಾರೆ. ಹೀಗಾಗುವುದನ್ನು ತಡೆಯಲು ಚುನಾವಣಾ ಆಯೋಗಕ್ಕೆ ಕೇಂದ್ರ ಸರ್ಕಾರ ಹೆಚ್ಚಿನ ಕಾನೂನು ಬಲ ನೀಡಬೇಕು.

ವೈವಿಧ್ಯಮಯ ಸಾಮಾಜಿಕ, ಆರ್ಥಿಕ ಪರಿಸ್ಥಿತಿಯುಳ್ಳ ದೇಶದಲ್ಲಿ ಜನರ ನೆರವಿಗೆ ಕೆಲ ಕೊಡುಗೆಗಳನ್ನು ಘೋಷಿಸಬಹುದು. ಆದರೆ ಎಲ್ಲದಕ್ಕೂ ಒಂದು ಮಿತಿ ಇರಬೇಕು. ಹಾಗೆಯೇ ಇಂಥ ಘೋಷಣೆಗಳಿಗೆ ತಾರ್ಕಿಕ ನೆಲೆಗಟ್ಟು ಸಹ ಇರಬೇಕಾಗುತ್ತದೆ ಹಾಗೂ ಅವುಗಳನ್ನು ಈಡೇರಿಸಲು ಹೇಗೆ ಹಣ ಒದಗಿಸಲಾಗುವುದು ಎಂಬುದನ್ನೂ ಸ್ಪಷ್ಟವಾಗಿ ಘೋಷಿಸಿರಬೇಕು. ಈ ಉಚಿತ ಕೊಡುಗೆಗಳು ಸರ್ಕಾರಗಳ ಬೊಕ್ಕಸಕ್ಕೆ ದೊಡ್ಡ ಹೊರೆಯಾಗಿ ಅಭಿವೃದ್ಧಿ ಕಾರ್ಯಗಳಿಗೆ ಹಣ ವಿನಿಯೋಗ ಕಡಿಮೆಯಾಗುತ್ತದೆ. ಸರ್ಕಾರಗಳು ಉದ್ಯೋಗ ಸೃಷ್ಟಿ, ಮೂಲ ಸೌಕರ್ಯ ಹೆಚ್ಚಳಕ್ಕೆ ಹೆಚ್ಚಿನ ಹಣ ವಿನಿಯೋಗಿಸಬೇಕು. ಉಚಿತ ಕೊಡುಗೆ ಕೊಡುವುದೇ ಜನರ ಅಭಿವೃದ್ಧಿ ಎಂದು ಬಿಂಬಿಸಿ ಮತದಾರರ ದಿಕ್ಕು ತಪ್ಪಿಸುತ್ತಿರುವ ಸಮಯಸಾಧಕ ರಾಜಕಾರಣಿಗಳ ಬಗ್ಗೆ ಜನಜಾಗೃತಿ ಮೂಡಿಸಬೇಕಾದ ಅಗತ್ಯ ಇದೆ.

ಉದಯ ಮ. ಯಂಡಿಗೇರಿ, ಧಾರವಾಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.