ADVERTISEMENT

ವಾಚಕರ ವಾಣಿ: ಶೋಭೆ ತರದ ನಾಮಕರಣ

​ಪ್ರಜಾವಾಣಿ ವಾರ್ತೆ
Published 26 ಫೆಬ್ರುವರಿ 2021, 17:31 IST
Last Updated 26 ಫೆಬ್ರುವರಿ 2021, 17:31 IST

‘ಸಾಧಕರ ಹೆಸರು ಮುನ್ನೆಲೆಗೆ ಬರಲಿ, ಪ್ರದರ್ಶನಪ್ರಿಯತೆ ಕೊನೆಗೊಳ್ಳಲಿ’ ಎಂಬ ಸಂಪಾದಕೀಯ (ಪ್ರ.ವಾ., ಫೆ. 26) ಕಟು ಸತ್ಯವಾದುದು. ನಮ್ಮಲ್ಲಿ ಬಹಳ ಹಿಂದಿನಿಂದಲೂ ನಡೆದುಕೊಂಡು ಬಂದಿರುವ ಒಂದು ಕೆಟ್ಟ ಪರಿಪಾಟವೆಂದರೆ, ಯಾರೇ ಅಧಿಕಾರದಲ್ಲಿರಲಿ ಎಲ್ಲಕ್ಕೂ ಆಡಳಿತ ಪಕ್ಷದ ನಾಯಕರ ಹೆಸರುಗಳನ್ನೇ ನಾಮಕರಣ ಮಾಡುವುದು. ಅದು ಒಂದು ಜನಪರ ಯೋಜನೆಯಾಗಲಿ, ಕ್ರೀಡಾಂಗಣವಾಗಲಿ, ಕಟ್ಟಡ, ಸೇತುವೆಯೇ ಆಗಿರಲಿ, ಯಾರದೋ ಸಾಧನೆಗೆ ಮತ್ಯಾರದೋ ಹೆಸರು ಇರಿಸುವುದು ಎಷ್ಟು ಸರಿ?

ಕೆಲವು ಜನಪರ ಯೋಜನೆಗಳು ಹೆಚ್ಚು ಸಫಲವಾಗಿರುತ್ತವೆ. ಅಂತಹ ಯೋಜನೆಗಳು ವಿರೋಧ ಪಕ್ಷಗಳ ಮೆಚ್ಚುಗೆಗೆ ಪಾತ್ರವಾಗುವಂತೆ ಇದ್ದರೂ ಮುಂದೆ ಅಧಿಕಾರಕ್ಕೆ ಬರುವ ಪಕ್ಷವು ಅವುಗಳ ಹೆಸರಿನ ಕಾರಣದಿಂದ ಅವುಗಳನ್ನು ಮುಂದುವರಿಸಲು ಆಸಕ್ತಿ ತೋರುವುದಿಲ್ಲ. ಏಕೆಂದರೆ ಅವು ಹೊಂದಿರುವುದು ಬೇರೊಂದು ಪಕ್ಷದ ನಾಯಕರ ಹೆಸರುಗಳನ್ನು. ಇಂತಹ ಮನಃಸ್ಥಿತಿಯಿಂದಾಗಿ ಆ ಯೋಜನೆಗಳು ಅಲ್ಲಿಗೇ ಸ್ಥಗಿತವಾಗಬೇಕಾಗುತ್ತದೆ ಇಲ್ಲವೇ ಕುಂಟುತ್ತಾ ಸಾಗುವಂತಹ ಸ್ಥಿತಿ ಉಂಟಾಗುತ್ತದೆ. ಅದರ ಬದಲು ಈ ದೇಶದ ಉದ್ದಗಲಕ್ಕೂ ಸಾಧನೆ ಮಾಡಿದ, ಎಲ್ಲರೂ ಒಪ್ಪುವಂತಹ ಕ್ರೀಡಾಳುಗಳು, ಪರಿಸರ ಪ್ರೇಮಿಗಳು, ಸಮಾಜ ಸೇವಕರು, ಸಂಗೀತ, ಸಾಹಿತ್ಯ, ಚಿತ್ರರಂಗದ ದಿಗ್ಗಜರು, ಕವಿಗಳು, ಜಲ ಸಂರಕ್ಷಕರು, ಇಲ್ಲದವರಿಗೆ ಅನ್ನ ದಾಸೋಹ, ಶಿಕ್ಷಣ, ವಸತಿ ವ್ಯವಸ್ಥೆ ಕಲ್ಪಿಸಿ ಎಲೆ ಮರೆಯ ಕಾಯಿಯಂತೆ ಸೇವೆ ಮಾಡಿರುವ ಎಷ್ಟೋ ಮಹನೀಯರಿಲ್ಲವೇ? ಅಂತಹವರ ಹೆಸರು ಇಡುವುದು ಔಚಿತ್ಯಪೂರ್ಣ.

ಚೆಲುವರಾಜು ಕೆ., ಧನಗೆರೆ, ಕೊಳ್ಳೇಗಾಲ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.