ADVERTISEMENT

ವಿಟಿಯು ವಿಭಜನೆ ಬೇಡ

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2019, 20:15 IST
Last Updated 10 ಫೆಬ್ರುವರಿ 2019, 20:15 IST

ಬೆಳಗಾವಿಯಲ್ಲಿರುವ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯವನ್ನು ವಿಭಜಿಸಿ, ಹಾಸನದಲ್ಲಿ ಪ್ರತ್ಯೇಕವಾದ ಒಂದು ತಾಂತ್ರಿಕ ವಿಶ್ವವಿದ್ಯಾಲಯ ಸ್ಥಾಪಿಸುವ ಪ್ರಸ್ತಾವ ರಾಜ್ಯದ ಈ ಸಲದ ಬಜೆಟ್‌ನಲ್ಲಿದೆ. ಉತ್ತರ ಕರ್ನಾಟಕಕ್ಕೆ ಅನ್ಯಾಯವಾಗುತ್ತಿದೆ ಎಂಬ ಕೂಗು ಧ್ವನಿಸುತ್ತಿರುವಾಗ, ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿಯವರ ಈ ನಿರ್ಧಾರದಿಂದ ಆ ಧ್ವನಿಗೆ ಇಂಬು ಕೊಟ್ಟಂತಾಗುತ್ತದೆ.

ಬೆಳಗಾವಿಗೆ ಅತಿ ಹೆಚ್ಚು ಬಾರಿ ಭೇಟಿ ನೀಡಿದ ಮುಖ್ಯಮಂತ್ರಿ ಎಂಬ ಹೆಗ್ಗಳಿಕೆಗೆ ಪಾತ್ರರಾದ ಹಾಗೂ ವಿಧಾನಮಂಡಲದ ಐತಿಹಾಸಿಕ ಅಧಿವೇಶನ ನಡೆಸಿ ಸುವರ್ಣಸೌಧ ನಿರ್ಮಾಣಕ್ಕೆ ಕಾರಣರಾದ ಕುಮಾರಸ್ವಾಮಿಯವರ ಬಗ್ಗೆ ಬೆಳಗಾವಿ ಜನರಲ್ಲಿ ವಿಶೇಷ ಪ್ರೀತಿ-ಅಭಿಮಾನವಿದೆ. ಅವರ ಹೆಸರನ್ನು ಒಂದು ಬಡಾವಣೆಗೇ ಇಟ್ಟು ಅಭಿಮಾನ ತೋರಿರುವ ಇಲ್ಲಿಯ ಜನಕ್ಕೆ ಈ ನಿಲುವಿನಿಂದ ಅನ್ಯಾಯವಾಗುವುದು ಸಲ್ಲ. ಇದರ ಹಿಂದೆ ಕೆಲವು ರಾಜಕೀಯ ಹಿತಾಸಕ್ತಿಗಳಿವೆ ಎಂಬ ಆಪಾದನೆಗಳು ವದಂತಿಗಳಾಗಿ ಕೇಳಿ ಬರುತ್ತಿವೆ.

ವಿಟಿಯು 1998ರಲ್ಲಿ ಆರಂಭವಾಯಿತು. ಹಸಿರು ಕಾಡಿನ ಸುಂದರ ಪರಿಸರದಲ್ಲಿ, ಅದ್ಭುತವಾದ ವಾಸ್ತು ವಿನ್ಯಾಸದಲ್ಲಿ ಕಾರ್ಯನಿರ್ವಹಿಸುತ್ತಿರುವ ಅದು ಊರಿಗೊಂದು ಭೂಷಣವೇ ಹೌದು. ರಾಜೀವ್‌ ಗಾಂಧಿ ವೈದ್ಯಕೀಯ ವಿಶ್ವ
ವಿದ್ಯಾಲಯ, ಮೈಸೂರಿನ ಗಂಗೂಬಾಯಿ ಹಾನಗಲ್‌ ಸಂಗೀತ ವಿಶ್ವವಿದ್ಯಾಲಯ, ಹಂಪಿಯ ಕನ್ನಡ ವಿಶ್ವವಿದ್ಯಾಲಯ- ಇವೆಲ್ಲವೂ ಒಂದೇ ಆಗಿಲ್ಲವೆ? ಹಾಗಾದರೆ ಇದನ್ನು ಮಾತ್ರ ಯಾಕೆ ಒಡೆಯುತ್ತೀರಿ? ವಿಟಿಯು ವಿಂಗಡಣಾ ನೀತಿಗೆ ಪುಷ್ಟಿ ನೀಡುವಂತೆ ಅವುಗಳನ್ನು ಸಹ ಒಡೆದು ಉತ್ತರ-ದಕ್ಷಿಣ, ಪೂರ್ವ- ಪಶ್ಚಿಮಗಳಿಗೆ ಹಂಚಿಬಿಡಿ ಎಂಬ ಒಣ ತರ್ಕವೊಂದು ಜನ್ಮತಾಳಿ ಚರ್ಚೆ ಶುರುವಾಗುವುದಿಲ್ಲವೇ? ಹೀಗೆ ಮತ್ತೊಂದು ಹೊಸ ವಾದಕ್ಕೆ ಅವಕಾಶವಾಗುವ ಮುನ್ನ ಮುಖ್ಯಮಂತ್ರಿ ತಕ್ಷಣ ತಮ್ಮ ನಿರ್ಧಾರವನ್ನು ಕೈಬಿಡಬೇಕು.

ADVERTISEMENT

ಡಾ. ಡಿ.ಎಸ್.ಚೌಗಲೆ, ಬೆಳಗಾವಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.