ADVERTISEMENT

ಅಶ್ಲೀಲ ನಿರ್ಧರಿಸುವ ಮಾನದಂಡ ಯಾವುದು?

​ಪ್ರಜಾವಾಣಿ ವಾರ್ತೆ
Published 21 ಜನವರಿ 2019, 20:00 IST
Last Updated 21 ಜನವರಿ 2019, 20:00 IST

ಮಹಾರಾಷ್ಟ್ರದಲ್ಲಿ ಡಾನ್ಸ್‌ ಬಾರ್‌ಗಳ ಪುನರಾರಂಭಕ್ಕೆ ಸುಪ್ರೀಂ ಕೋರ್ಟ್‌ ಇತ್ತೀಚೆಗೆ ಒಪ್ಪಿಗೆ ನೀಡಿದೆ. ಸರ್ವೋಚ್ಚ ನ್ಯಾಯಾಲಯದಲ್ಲಿ ಸಾವಿರಾರು ಪ್ರಮುಖ ಪ್ರಕರಣಗಳು ಇತ್ಯರ್ಥಕ್ಕಾಗಿ ಕಾದಿರುವಾಗ, ಡಾನ್ಸ್‌ ಬಾರ್‌ನಂಥವು ಆದ್ಯತೆ ಪಡೆಯಬೇಕೇ ಎನ್ನುವುದು ಒಂದು ವಿಚಾರವಾದರೆ, ಸುಪ್ರೀಂ ಕೋರ್ಟ್‌ ಇರುವುದು ಇಂಥವುಗಳನ್ನು ಪರಿಹರಿಸುವುದಕ್ಕಾಗಿಯೇ ಎನ್ನುವುದೂ ವಿಚಾರಣೀಯ! ದಹಿ ಹಂಡಿ, ಜಲ್ಲಿಕಟ್ಟು, ದೇವಮಂದಿರಗಳಿಗೆ ಪ್ರವೇಶ, ಸಾರ್ವಜನಿಕವಾಗಿ ಮೈಕ್‌ ಬಳಕೆಯಂಥ ವಿಷಯಗಳ ಬಗೆಗಿನ ವಿವಾದಗಳನ್ನು ಸುಪ್ರೀಂ ಕೋರ್ಟೇ ಪರಿಹರಿಸಬೇಕೆ?

ವಾಕ್‌ ಸ್ವಾತಂತ್ರ್ಯ, ಅಭಿಪ್ರಾಯ ಸ್ವಾತಂತ್ರ್ಯ, ಜೀವಿಸುವ ಹಕ್ಕು ಎಂದೆಲ್ಲ ಪ್ರತಿಪಾದಿಸುವುದಾದರೆ, ಜೀವನದ ಯಾವುದೇ ಬಾಬನ್ನಾದರೂ ಹೀಗೆ ಹಕ್ಕುಗಳ ವ್ಯಾಪ್ತಿಯಲ್ಲಿ ತರುವುದು ಸಾಧ್ಯ. ಇವುಗಳಿಗೆ ಕೊನೆ ಎಲ್ಲಿ? ಡಾನ್ಸ್‌ ಬಾರ್‌ಗಳಿಗೆ ಪ್ರತಿಬಂಧ ಒಡ್ಡಿದಾಗ, ಅಲ್ಲಿ ದುಡಿಯುವ ಮಹಿಳೆಯರು ಅನುಭವಿಸಬೇಕಾಗಿ ಬರುವ ಬದುಕಿನ ದಾರುಣತೆಯ ಬಗ್ಗೆ ಸಂಪಾದಕೀಯ (ಪ್ರ.ವಾ., 19) ಪ್ರಸ್ತಾಪಿಸಿದೆ. ಇದು ಕಟು ವಾಸ್ತವ ನಿಜ. ಹಾಗೆಂದು ಇಂಥ ಬಾರ್‌ಗಳನ್ನು ಪ್ರತಿಬಂಧಿಸದಿದ್ದಲ್ಲಿ ಮಹಿಳೆಯರ ಶೋಷಣೆಯನ್ನು ನಿವಾರಿಸುವುದು ಹೇಗೆ? ಬಾರ್‌ಗಳನ್ನು ಮುಚ್ಚಬೇಡಿ, ಆದರೆ ಮಹಿಳೆಯರಿಗೆ ರಕ್ಷಣೆ ಕೊಡಿ ಎಂದು ಹೇಳುವುದು ಸುಲಭ. ರಕ್ಷಣೆ ಕೊಡುವ ಹೊಣೆಗಾರಿಕೆ ಬಾರ್‌ ಮಾಲೀಕರದ್ದು. ಒಂದು ಕಾಲಕ್ಕೆ ಅನೈತಿಕವಾದುದು ಈಗ ಹಾಗಿಲ್ಲದೇ ಇರಬಹುದು. ನೈತಿಕ– ಅನೈತಿಕ ಎಂಬುದನ್ನು ನಿರ್ಧರಿಸುವವರು ಯಾರು? ಕೋರ್ಟುಗಳೇ?

ಸಾಮಗ ದತ್ತಾತ್ರಿ, ಬೆಂಗಳೂರು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.