ADVERTISEMENT

ಪೊಲೀಸರು ಜನಸ್ನೇಹಿ ಆಗುವುದೆಂದು?

​ಪ್ರಜಾವಾಣಿ ವಾರ್ತೆ
Published 18 ಅಕ್ಟೋಬರ್ 2021, 19:30 IST
Last Updated 18 ಅಕ್ಟೋಬರ್ 2021, 19:30 IST

ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲ್ಲೂಕಿನ ಕುಂದೂರಿನಲ್ಲಿ ಗ್ರಾಮವಾಸ್ತವ್ಯ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳ ಲಿದ್ದ ಮುಖ್ಯಮಂತ್ರಿಯನ್ನು ನೋಡಲು ಬಂದ ಬಾಲಕನ ತಲೆಗೆ ಪೊಲೀಸ್ ಸಿಬ್ಬಂದಿಯೊಬ್ಬರು ಟೋಪಿಯಿಂದ (ಟೋಪಿಯಲ್ಲಿರುವ ಲೋಹ) ಹೊಡೆದಿದ್ದು ಬಾಲಕನ ತಲೆಗೆ ಗಾಯವಾಗಿದೆ. ಕರ್ತವ್ಯದ ಹೆಸರಲ್ಲಿ ಸಾರ್ವಜನಿಕರ ಮೇಲೆ ಪೊಲೀಸರ ದೌರ್ಜನ್ಯ ಇಂದು-ನಿನ್ನೆಯದಲ್ಲ. ಆಗಾಗ್ಗೆ ಇಂತಹ ದುರ್ಘಟನೆಗಳಿಗೆ ಸಾಕ್ಷಿಯಾಗುತ್ತಿರುವ ಪೊಲೀಸ್ ಇಲಾಖೆ ಹೇಗೆ ತಾನೆ ಸಾರ್ವಜನಿಕರ ವಿಶ್ವಾಸ ಗಳಿಸಲು ಸಾಧ್ಯ? ಅಧಿಕಾರ, ಸಮವಸ್ತ್ರ, ಕೈಯಲ್ಲಿ ಲಾಠಿ ಇದೆ ಎಂದು ಏನು ಬೇಕಾದರೂ ಮಾಡಬಹುದೇ?

ತಮ್ಮ ಮಕ್ಕಳು ತಪ್ಪು ಮಾಡಿದಾಗ ಅವರಿಗೂ ಇದೇ ರೀತಿ ರಕ್ತ ಸುರಿಯುವಂತೆ ಹೊಡೆಯುವರೇ? ಮುಗ್ಧ ನಾಗರಿಕರ ಮೇಲೆ ಲಾಠಿ ಪ್ರಯೋಗವೊಂದೇ ಪರಿಹಾರವಲ್ಲ ಎಂಬುದನ್ನು ಮೊದಲು ಅರಿಯಬೇಕು. ಸಾರ್ವಜನಿಕರ ಸಹಕಾರವಿಲ್ಲದೆ ಪೊಲೀಸ್ ಇಲಾಖೆ ಏನೂ ಮಾಡಲು ಸಾಧ್ಯವಿಲ್ಲ. ಸಾರ್ವಜನಿಕರಲ್ಲಿ ಪೊಲೀಸರೆಂದರೆ ಭಯ, ಲಾಠಿ ಏಟು ಎನ್ನುವ ಮನೋಭಾವವನ್ನು ಹೋಗಲಾಡಿಸಬೇಕೇ ಹೊರತು, ಇನ್ನಷ್ಟು ಭಯಭೀತಗೊಳಿಸಬಾರದು. ಸರ್ಕಾರ ಪೊಲೀಸ್ ಇಲಾಖೆಯನ್ನು ಎಷ್ಟೇ ಜನಸ್ನೇಹಿ ಮಾಡಲು ಹೊರಟರೂ ಇಂತಹ ಘಟನೆಗಳಿಂದ ಜನರು ಇಲಾಖೆಯಿಂದ ಇನ್ನಷ್ಟು ದೂರವಾಗುವುದರಲ್ಲಿ ಅನುಮಾನವೇ ಇಲ್ಲ.

ಮುರುಗೇಶ ಡಿ.,ದಾವಣಗೆರೆ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.