ADVERTISEMENT

ಆನೆಗಳು ಎಲ್ಲಿ ವಾಸವಾಗಿವೆ?

ವಿಜ್ಞಾನ ಲೋಕದಿಂದ

​ಪ್ರಜಾವಾಣಿ ವಾರ್ತೆ
Published 9 ಆಗಸ್ಟ್ 2015, 19:30 IST
Last Updated 9 ಆಗಸ್ಟ್ 2015, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಭಾರತದಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಆನೆಗಳು ಹೊಂದಿದ ರಾಜ್ಯ ಕರ್ನಾಟಕ. ಈ ದೊಡ್ಡ ಸಸ್ತನಿಗಳ ಸಂರಕ್ಷಣೆ ಅವುಗಳ ಸಂರಕ್ಷಿತ ಹಾಗು ಅರಕ್ಷಿತ ಪ್ರದೇಶಗಳ ಮ್ಯಾಪಿಂಗ್ ಮೇಲೆ ಅವಲಂಬಿಸಿರುತ್ತದೆ.

ನೇಚರ್ ಕನ್ಸರ್ವೇಷನ್ ಫೌಂಡೇಷನ್ ಹಾಗೂ ಭಾರತೀಯ ವಿಜ್ಞಾನ ಸಂಸ್ಥೆ  ವಿಜ್ಞಾನಿಗಳ ತಂಡವು ರಾಜ್ಯದಲ್ಲಿ ಎಲ್ಲೆಲ್ಲಿ ಆನೆಗಳು ಕಂಡುಬರುತ್ತವೆ ಎಂದು ಪತ್ತೆ ಹಚ್ಚಿ, ಯಾವ ಯಾವ ಪ್ರದೇಶದಲ್ಲಿ ಹೆಚ್ಚಾಗಿ ಕಂಡು ಬರುತ್ತವೆ ಹಾಗೂ ಎಲ್ಲಿ ಕಡಿಮೆ ಸಂಖ್ಯೆಯಲ್ಲಿವೆ ಎಂದು ಗುರುತಿಸಿದೆ. ಇದರಿಂದ ಆನೆಗಳು ಸಂರಕ್ಷಿತ ಪ್ರದೇಶದಿಂದ ಹೊರಗೆ ಹೆಚ್ಚಿನ ಸಂಖ್ಯೆಯಲ್ಲಿ ಕಂಡುಬಂದಿರುವುದು ಗಮನಾರ್ಹ ಸಂಗತಿಯಾಗಿದೆ. ಮಾನವ-–ವನ್ಯಜೀವಿ ಸಂಘರ್ಷಕ್ಕೆ ಪ್ರಮುಖ ಕಾರಣವಾಗಿದೆ.

ಏಷ್ಯಾದ ಆನೆಗಳನ್ನು ‘ಪರಿಸರ ಮತ್ತು ನೈಸರ್ಗಿಕ ಸಂಪನ್ಮೂಲಗಳ ಸಂರಕ್ಷಣೆಯ ಅಂತಾರಾಷ್ಟ್ರೀಯ ಒಕ್ಕೂಟ’ (ಐಯುಸಿಎನ್) ಪಟ್ಟಿಯಲ್ಲಿ ವಿನಾಶದಂಚಿನಲ್ಲಿರುವ ಪ್ರಾಣಿವರ್ಗಕ್ಕೆ ಸೇರಿಸಲಾಗಿದ್ದು ಇವುಗಳಿಗೆ ಅತಿ ಹೆಚ್ಚಿನ ಸಂರಕ್ಷಣೆ ನೀಡಬೇಕಾಗುತ್ತದೆ. ಅವುಗಳ ಪರಿಸರದ ನಿರ್ವಹಣೆಯಲ್ಲಿ ಹೆಚ್ಚಿನ ನಿಗಾ ವಹಿಸಬೇಕಾಗುತ್ತದೆ. ದುರಾದೃಷ್ಟವಶಾತ್ ಆನೆಗಳ ವಾಸಸ್ಥಾನದ ಛಿದ್ರೀಕರಣ ಹಾಗೂ ಅವನತಿಯಿಂದ ಅವುಗಳು ಮನುಷ್ಯರ ಸಂಪರ್ಕಕ್ಕೆ ಬರುತ್ತವೆ.

ಕರ್ನಾಟಕದಲ್ಲಿ ಆನೆಗಳು ಮೂರು ವಲಯಗಳಲ್ಲಿ ಕಂಡುಬರುತ್ತವೆ: ಉತ್ತರದಲ್ಲಿ ಉತ್ತರ ಕನ್ನಡ ಹಾಗೂ ಬೆಳಾಗಾವಿ ಜಿಲ್ಲೆಗಳು (ಸಣ್ಣ ಪ್ರಮಾಣ ದಲ್ಲಿ), ಮಧ್ಯಭಾಗದಲ್ಲಿ ಚಿಕ್ಕಮಗಳೂರು ಹಾಗೂ ಶಿವಮೊಗ್ಗ ಜಿಲ್ಲೆಗಳ ಭದ್ರಾ ಹುಲಿ ಸಂರಕ್ಷಿತ ಪ್ರದೇಶ ಮತ್ತು ಕೊನೆಯದಾಗಿ ಹಾಸನ-ಕೊಡಗು, -ಮೈಸೂರು, -ಮಂಡ್ಯ, -ಬೆಂಗಳೂರು ಪ್ರದೇಶ. ಈ ಕೊನೆಯ ಪ್ರದೇಶವು ಕರ್ನಾಟಕದ ಸುಮಾರು     ಶೇ 90ರಷ್ಟು ಆನೆಗಳನ್ನು ಹೊಂದಿರುವ ಸಾಧ್ಯತೆ ಇದೆಯೆಂದು ಭಾವಿಸಲಾಗಿದೆ. ಆನೆಗಳ ಫೈನ್ ಸ್ಕೇಲ್ಡ್ ಮ್ಯಾಪಿಂಗ್ ಕರ್ನಾಟಕದಲ್ಲೇ ಪ್ರಪ್ರಥಮ ಬಾರಿಗೆ ಮಾಡಲಾಗಿದೆ. ಈವರೆಗಿನ ಕೆಲಸಗಳು ಬರಿ ಸ್ಥಳೀಯ ಸಂಖ್ಯೆಗಳಿಗೆ ಅಥವಾ ಸಾಂದ್ರತೆಗಳಿಗೆ ಸೀಮಿತವಾಗಿದ್ದವು.

‘ಆನೆಗಳ ವಿತರಣೆಯ ಮೂಲ ಅಂಕಿ-–ಅಂಶಗಳು ಅರಣ್ಯ ಇಲಾಖೆ, ವೈಜ್ಞಾನಿಕ ಸಂಸ್ಥೆಗಳು ಹಾಗೂ  ಇತ್ತೀಚೆಗೆ ಸಂಶೋಧಕರ ಬಳಿ ಸಂಪೂರ್ಣವಾಗಿ ಹರಡಿಕೊಂಡಿವೆ. ಆನೆಗಳ ವಿತರಣೆಯನ್ನು ಚಿತ್ರಿಸಲು ಒಂದು ದೊಡ್ದ ​​ಸವಾಲಾಗಿದ್ದು, ಅದನ್ನು ವೈಜ್ಞಾನಿಕ ರೀತಿಯಲ್ಲದೆ ಅತ್ಯಂತ ಸರಳ ವಿಧಾನದಲ್ಲಿ ಸಾಂಸ್ಥಿಕ ರೀತಿಯಲ್ಲಿ ನಾವು ಮಾಡಿದೆವು. ಇದು ಹೊಸದು ಅಥವಾ ಉತ್ತಮ ವೈಜ್ಞಾನಿಕ ವಿಧಾನಗಳನ್ನು ಹುಡುಕುವ ಬದಲಿಗೆ ಅನೇಕ ವೈಜ್ಞಾನಿಕ ಗುಂಪುಗಳನ್ನು ಒಟ್ಟುಗೂಡಿಸುವ ಪ್ರಯತ್ನವಾಗಿತ್ತು’ ಎಂದು ಡಾ. ಮಧುಸುದನ್ ಹೇಳುತ್ತಾರೆ.

ಈ ಅಂಕಿ-–ಅಂಶಗಳು 2000ರಿಂದ 2015ರ ತನಕ ಸುಮಾರು 15 ವರ್ಷಗಳ ಅವಧಿಯಲ್ಲಿ ದೊರೆತದ್ದಾಗಿದ್ದು ಇವೆಲ್ಲವನ್ನು ಸಂರಕ್ಷಿತ ಪ್ರದೇಶದ ವ್ಯಾಪ್ತಿ, ಜನಸಂಖ್ಯೆ ಮತ್ತು ಕೃಷಿ ಭೂಮಿ ವಿಧ ಹಾಗೂ ವಿಸ್ತಾರ ಇವೇ ಮೊದಲಾದ ಮಾಹಿತಿ ಜೊತೆ ಹೋಲಿಸಲಾಗಿತ್ತು. ಈ ಅಧ್ಯಯನಕ್ಕೆ ಸಗಣಿ ಎಣಿಕೆ, ಸ್ಥಳೀಯರ ಸಂದರ್ಶನ, ಆನೆಗಳ ಕಾಣುವಿಕೆ ಹಾಗು ಸಂಘರ್ಷಗಳ ಬಗ್ಗೆ ಮಾಧ್ಯಮದಲ್ಲಿ ಪ್ರಕಟವಾದ ವರದಿಗಳನ್ನು ಬಳಸಿ ಅಂಕಿ-–ಅಂಶಗಳನ್ನು ಬಳಸಿಕೊಳ್ಳಲಾಗಿದೆ. ಈ ಅಂಕಿಗಳನ್ನು ರಾಜ್ಯಾದ್ಯಂತ ೨,೮೫೫ ಬೀಟ್‌ಗಳ (ಒಂದು ಚಿಕ್ಕ ಅರಣ್ಯ ನಿರ್ವಹಣ ಘಟಕಕ್ಕೆ ಬೀಟ್‌ ಎಂದು ಕರೆಯುವರು) ಮೇಲೆ ಹಾಸಲಾಗಿದೆ.

ಆನೆಗಳು ದಟ್ಟ ಕಾಡಿಗಳಲ್ಲಿ ಕಂಡುಬಾರದಿದ್ದರೂ (ಉತ್ತರ ಕನ್ನಡ) ಕುರುಚಲು ಭೂಮಿಯಲ್ಲಿ (ಹಾಸನ ಮತ್ತು ತುಮಕೂರು) ಎಲ್ಲಿ ದಟ್ಟನೆ ಮರಗಳಿಲ್ಲವೊ ಅಂತಹ ಪ್ರದೇಶಗಳಲ್ಲಿ ಕಂಡು ಬಂದಿವೆ. ‘ಆನೆಗಳ ನೈಜ ಸಮೃದ್ಧಿ (ಅಥವಾ ಸಾಂದ್ರತೆ)ಯ ದತ್ತಾಂಶವನ್ನು ಪಡೆಯಲು ಕ್ಲಿಷ್ಟಕರವಾಗಿದ್ದು ವಿನ್ಯಾಸ, ಮಾಹಿತಿ ಸಂಗ್ರಹಣೆ ಮತ್ತು ಅನ್ವೇಷಣೆಗಳ ಹಂತಗಳಲ್ಲಿ ಅತ್ಯಂತ ಎಚ್ಚರಿಕೆಯಿಂದ ವೈಜ್ಞಾನಿಕವಾಗಿ ಪರಿಗಣಿಸುವುದು ಅವಶ್ಯ’ ಎಂದು ಮಧುಸುದನ್‌ ಅವರು ಹೇಳುತ್ತಾರೆ.

‘ಈಗಲೂ ನಮ್ಮ ಬಳಿ ಹೆಚ್ಚಿನ ಪ್ರಮಾಣದಲ್ಲಿ ದತ್ತಾಂಶಗಳು ಲಭ್ಯವಿಲ್ಲದಿದ್ದರೂ ರಾಜ್ಯಾದ್ಯಂತ ದೊರೆತ ಮಾಹಿತಿಯನ್ನು ಸಾಧ್ಯವಾಗುವ ರೀತಿಯಲ್ಲಿ ಪ್ರಕಟಿಸುವ ಪ್ರಯತ್ನವನ್ನು ನಮ್ಮ ಪ್ರಬಂಧದಲ್ಲಿ ಮಾಡಿದ್ದೀವೆ. ಇಲ್ಲಿ ಆನೆ ಸಗಣಿ ಸಾಂದ್ರತೆಯ ದತ್ತಾಂಶ ಆನೆಗಳ ಸಾಂದ್ರತೆಗೆ ಒಂದು ಉಪಯುಕ್ತ ಬದಲಿ ಪ್ರತಿನಿಧಿ ಅಂಶವಾಗಿತ್ತು’ ಎಂದು ವಿವರಿಸುತ್ತಾರೆ.

ಆನೆಗಳು ಎಲ್ಲಿ ವಾಸವಾಗಿದ್ದವು ಎಂದು ತಿಳಿರುವುದು ಮೊದಲ ಹಂತ. ಅವುಗಳು ಅರಕ್ಷಿತ ಪ್ರದೇಶಗಳಲ್ಲಿ ಹಾಗೂ ಕೃಷಿ- ವ್ಯವಸಾಯ ಪ್ರದೇಶಗಳಲ್ಲಿ ನುಗ್ಗಿ ಮಾನವರ ಜೊತೆ ಘರ್ಷಣೆ ಕಡಿಮೆ ಮಾಡಲು ಏನು ಮಾಡಬೇಕು ಎಂಬುದನ್ನು ಸ್ಪಷ್ಟವಾಗಿ ಸೂಚಿಸಲು ಇನ್ನಷ್ಟು ಅಧ್ಯಯನದ ಅವಶ್ಯಕತೆ ಇದೆ. ​

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.