ADVERTISEMENT

ಕ್ಷಮಿಸಲು ಕಾರಣ ಹಲವು...

​ಪ್ರಜಾವಾಣಿ ವಾರ್ತೆ
Published 20 ಮಾರ್ಚ್ 2018, 19:30 IST
Last Updated 20 ಮಾರ್ಚ್ 2018, 19:30 IST
ಮಾಲಾ ಮ. ಅಕ್ಕಿಶೆಟ್ಟಿ
ಮಾಲಾ ಮ. ಅಕ್ಕಿಶೆಟ್ಟಿ   

ಮಾಲಾ ಮ. ಅಕ್ಕಿಶೆಟ್ಟಿ

ಈ ಜೀವನ ತುಂಬ ಸುಂದರವಾದದ್ದು. ಇಲ್ಲಿ ಎಲ್ಲರೊಂದಿಗೆ ಸಂತಸದಿಂದ ಇದ್ದಾಗಲಷ್ಟೇ ಈ ಸೌಂದರ್ಯ ಉಳಿಯವುದು.  ಯಾರೋ ಮನಸ್ಸಿಗೆ ಬೇಸರ ಮಾಡಿದರು ಎಂದುಕೊಂಡು ಜೀವನಪೂರ್ತಿ ಅವರೊಂದಿಗೆ ಮಾತನಾಡದೆ, ಅವರನ್ನು ದ್ವೇಷಿಸುವುದಕ್ಕಿಂತ ಕ್ಷಮಿಸಿ ಅವರೊಂದಿಗೆ ಕೂಡಿ ಬಾಳುವ ಗುಣ ನಮ್ಮದಾಗಬೇಕು. ಕ್ಷಮಿಸುವ ಗುಣ ನಮ್ಮಲ್ಲಿದ್ದರೆ ಬದುಕನ್ನು ಸುಂದರಗೊಳಿಸುವ ಗುಣವೂ ನಮ್ಮೊಂದಿಗೆ ಜೊತೆಯಾಗಿರುವುದು ಎಂದೇ ಅರ್ಥ.

ಏಕಾದರೂ ಇತರರನ್ನು ಕ್ಷಮಿಸಬೇಕು?
ಮಾನಸಿಕ ನೆಮ್ಮದಿಗಾಗಿ:
ಯಾರೋ ನಮ್ಮ ಬಗ್ಗೆ ಕೆಟ್ಟದ್ದಾಗಿ ಮಾತನಾಡಿದರು, ಮನಸ್ಸನ್ನು ನೋಯಿಸಿದರೆಂದು ಅದನ್ನೇ ತಲೆಯಲ್ಲಿ ಇಟ್ಟುಕೊಂಡರೆ ನಮ್ಮ ಮಾನಸಿಕ ನೆಮ್ಮದಿಯೇ ಹಾಳಾಗುತ್ತದೆ. ಅದಕ್ಕಿಂತ ಒಮ್ಮೆ ಕ್ಷಮಿಸಿಬಿಟ್ಟರೆ, ಆ ವಿಷಯ ಅಲ್ಲಿಗೇ ಮುಗಿಯುತ್ತದೆ.

ADVERTISEMENT

ಭೂತಕಾಲದ ಮರೆವಿಗೆ, ವರ್ತಮಾನದ ಬದುಕಿಗೆ: ಕೆಟ್ಟ ಘಟನೆಯನ್ನು ಮರೆಯಲು, ದುಃಖ ನೀಡಿದವರನ್ನು ಕ್ಷಮಿಸಲು ನಾವು ಭೂತಕಾಲವನ್ನು ಮರೆತು, ವರ್ತಮಾನದಲ್ಲಿ ಬದುಕಬೇಕು. ಕಳೆದ ದಿನಗಳ ಮರುಗಳಿಕೆ ಅಸಾಧ್ಯ. ಹೀಗಿದ್ದಾಗ ಅವುಗಳ ಬಗ್ಗೆಯೇ ಏಕೆ ಯೋಚಿಸುವುದು? ವರ್ತಮಾನದಲ್ಲಿ ಬದುಕಿ, ಭವಿಷ್ಯವನ್ನು ರೂಪಿಸಿಕೊಳ್ಳಬೇಕಾದರೆ, ನಮಗೆ ‘ನೆನ್ನೆ’ ನೋವನ್ನುಂಟುಮಾಡಿದವರನ್ನು ಕ್ಷಮಿಸಬೇಕು.

ಶಕ್ತಿವಂತನಷ್ಟೇ ಕ್ಷಮಿಸಬಲ್ಲ: ಗಾಂಧೀಜಿ ಹೇಳುವಂತೆ, ಶಕ್ತಿಯುತ ವ್ಯಕ್ತಿ ಮಾತ್ರವೇ ಕ್ಷಮಿಸುತ್ತಾನೆಯೇ ಹೊರತು ಶಕ್ತಿಹೀನನಲ್ಲ. ಕ್ಷಮೆಯು ದೈವೀರೂಪದ್ದು. ಇದು ಎಲ್ಲರಿಂದಲೂ ಸಾಧ್ಯವಿಲ್ಲ. ನಮ್ಮ ಕ್ಷಮಾಗುಣವು ಮಾನಸಿಕ ನೆಮ್ಮದಿಯ ಜೊತೆಗೆ ನಮ್ಮ ದೃಢವ್ಯಕ್ತಿತ್ವವನ್ನೂ ಬಿಂಬಿಸುತ್ತದೆ.

ದ್ವೇಷ–ಹಿಂಸೆಗಳಿಂದ ದೂರ ಸರಿಯಲು: ಯಾರು ನಮಗೆ ತೊಂದರೆಯನ್ನು ಕೊಟ್ಟಿದ್ದಾರೋ ಅವರಿಗೂ ತೊಂದರೆ ಉಂಟಾಗಲಿ ಎಂದು ಹಾರೈಸುವುದು ನಮ್ಮಲ್ಲಿ ದ್ವೇಷವನ್ನೂ ಹಿಂಸೆಯನ್ನೂ ಬೆಳೆಸುತ್ತದೆಯೇ ವಿನಾ ನಮ್ಮನ್ನು ನೆಮ್ಮದಿಯನ್ನಾಗಿಸದು. ಒಮ್ಮೆ ಮನಸ್ಸು ದ್ವೇಷ–ಹಿಂಸೆಗಳಲ್ಲಿ ಮುಳುಗಿದರೆ ಅಲ್ಲಿಂದ ಹೊರಗೆ ಬರುವುದು ಸುಲಭವಲ್ಲ.

ಒಳ್ಳೆಯ ವಿಚಾರಗಳಿಗಾಗಿ: ಕ್ಷಮೆ ನಮ್ಮಲ್ಲಿ ನಮಗರಿವಿಲ್ಲದೆಯೇ ಒಳ್ಳೆಯ ವಿಚಾರಗಳನ್ನು ಬಿತ್ತುತ್ತದೆ. ನಾವು ಆಗ ಸಕಾರಾತ್ಮಕವಾಗಿ ಯೋಚಿಸಲು ಪ್ರಾರಂಭಿಸುತ್ತೇವೆ. ಉತ್ತಮ ಜೀವನಕ್ಕೆ ಒಳ್ಳೆಯ ಆಲೋಚನೆಗಳೇ ಮೂಲ. ಹೀಗಿರುವಾಗ ನಾವು ಇತರರ ತಪ್ಪುಗಳನ್ನು ಕ್ಷಮಿಸಬಾರದೇಕೆ?

ಕ್ಷಮೆಯಿಂದ ಲಾಭ ನಮಗೇ: ನಮಗೆ ದುಃಖವನ್ನುಂಟುಮಾಡಿದ ವ್ಯಕ್ತಿಗಳನ್ನು ಬೇರು ಸಮೇತ ನಮ್ಮ ನೆನಪಿನ ಬುತ್ತಿಯಿಂದ ಕಿತ್ತು ಹಾಕಬೇಕು ಎಂದರೆ ಅವರನ್ನು ಕ್ಷಮಿಸಿ ಬಿಡಬೇಕು. ನಮಗೆ ಬೇಡದ ವ್ಯಕ್ತಿಗೆ ನಮ್ಮ ಜೀವನದಲ್ಲಿ ಸ್ಥಾನವನ್ನೇ ಕೊಡಬಾರದಲ್ಲವೆ ಹೀಗಾಗಿ ಅವರನ್ನು ಸುಮ್ಮನೇ ಏಕಾದರೂ ನೆನಪಿನಿಂದ ಹೊರುತ್ತಿರಬೇಕು? ನಾವು ಅವರನ್ನು ಕ್ಷಮಿಸಿದರೆ ಅವರಿಗಲ್ಲ ಲಾಭ, ನಮಗೇ ಲಾಭ. ದೇಹ ಹೇಗೆ ಕಲ್ಮಶಗಳನ್ನು ಹೊರಹಾಕುತ್ತದೋ, ಬೇಡದ ವ್ಯಕ್ತಿ–ಘಟನೆಗಳನ್ನು ನಮ್ಮ ಸ್ಮೃತಿಪಟಲದಿಂದ ಹೊರಹಾಕಬೇಕು. ಇದು ಸಾಧ್ಯವಾಗುವುದು ನಾವು ಅವರನ್ನು ಕ್ಷಮಿಸಿದಾಗಲೇ.

ಜೀವನದ ಅವಧಿ ತುಂಬ ಕಡಿಮೆ. ಮುಂದಿನ ಕ್ಷಣದಲ್ಲಿ ಏನಾಗುವುದೆಂದು ನಮಗೆ ಗೊತ್ತಿಲ್ಲ. ಹೀಗಿರುವಾಗ ಜೀವನದ ನಮ್ಮ ನೆಮ್ಮದಿಯನ್ನು ಬೇರೆಯವರ ಕಾರಣದಿಂದಾಗಿ ಏಕಾದರೂ ಕಳೆದುಕೊಳ್ಳಬೇಕು? ಕೆಟ್ಟ ಘಟನೆಗಳನ್ನು ಮರೆಯೋಣ; ಕೆಟ್ಟ ಗುಣಗಳನ್ನು ಕ್ಷಮಿಸೋಣ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.