ಕಳೆದ ೪೦ ವರ್ಷಗಳಿಂದ ಮೈಸೂರಿನಲ್ಲಿ ಬೆಳಗಾದೊಡನೆ ಕಾಮಾಕ್ಷಿ ಆಸ್ಪತ್ರೆಯ ಬಳಿಯಿಂದ ಹೊರಡುವ ಒಬ್ಬರು, ಜೆಸಿಇ ಎದುರು ಹಾದು, ಮಾನಸ ಗಂಗೋತ್ರಿಗೆ ಬಂದು ಕನ್ನಡ ಅಧ್ಯಯನ ಸಂಸ್ಥೆಗೆ ಸುತ್ತು ಹಾಕಿ ಹೋಗುವುದನ್ನು ಎಲ್ಲರೂ ಗಮನಿಸಿದ್ದಾರೆ. ಅವರದು ಒಂದೇ ವೇಗ, ಒಂದೇ ವೇಷ. ತಾವು ಕೆಲಸ ಮಾಡಿದ ಸಂಸ್ಥೆಗೆ ತಪ್ಪದೇ ಸುತ್ತುಹಾಕುವ ವ್ಯಕ್ತಿ ಗಜಾನನ ಸುಬ್ರಾಯ ಭಟ್ಟರು - ಹಾಗೆಂದರೆ ಯಾರಿಗೂ ತಿಳಿಯಲಿಕ್ಕಿಲ್ಲ. ಅವರು ಜಿ. ಎಸ್. ಭಟ್ಟ ಎಂದೇ ಚಿರಪರಿಚಿತರು. ಮೈಸೂರಿನಲ್ಲಿ ಫೆಬ್ರುವರಿ ೧೪ ೧೫ ಮತ್ತು 16ರಂದು ನಡೆಯಲಿರುವ ೯ನೇ ಅಖಿಲ ಭಾರತ ಯಕ್ಷಗಾನ ಬಯಲಾಟ ಸಾಹಿತ್ಯ ಸಮ್ಮೇಳನಕ್ಕೆ ಅಧ್ಯಕ್ಷರಾಗಿ ಆಯ್ಕೆಗೊಂಡಿರುವ ಪತ್ರಕರ್ತ, ಜಾನಪದ ವಿದ್ವಾಂಸ, ಯಕ್ಷಗಾನ ಸಂಘಟಕ, ಸಾಮಾಜಿಕ ಕಾರ್ಯಕರ್ತ ಈ ರೀತಿ ಎಲ್ಲವೂ ಆಗಿರುವವರು ಜಿ. ಎಸ್. ಭಟ್ಟರು.
ಅವರು ಉತ್ತರಕನ್ನಡ ಜಿಲ್ಲೆಯ ಮೂಲದವರು. ಅವರ ತಂದೆ ಸುಬ್ರಾಯ ಭಟ್ಟರು ಕುಮಟಾ ತಾಲೂಕಿನ ಹೊಲನಗದ್ದೆಯವರು. ಜೀವನ ನಿರ್ವಹಣೆಗೆ ಶಿರಸಿಗೆ ಬಂದ ಸುಬ್ರಾಯ ಭಟ್ಟರಿಗೆ ಏಳುಜನ ಮಕ್ಕಳು. ಹಿರಿಯ ಮಗ ಪ. ಸು .ಭಟ್ಟ- ಚಿಕ್ಕ ವಯಸ್ಸಿನಲ್ಲೇ ಕನ್ನಡ ಪತ್ರಿಕೋದ್ಯಮದಲ್ಲಿ ಬಹಳ ಬೇಗ ಹೆಸರು ಮಾಡಿದವರು. ಸಂಯುಕ್ತ ಕರ್ನಾಟಕ, ಪ್ರಜಾಪ್ರಭುತ್ವ ಪತ್ರಿಕೆಗಳ ಸಂಪಾದಕರಾಗಿದ್ದು, ಬಸ್ ಅಪಘಾತವೊಂದರಲ್ಲಿ ಪ.ಸು.ಭಟ್ಟರು ಅಕಾಲಿಕವಾಗಿ ನಿಧನರಾಗಿದ್ದು ಕನ್ನಡ ಪತ್ರಿಕೋದ್ಯಮಕ್ಕೆ ಆದ ದೊಡ್ಡ ನಷ್ಟ. ಅವರ ತಮ್ಮ ಗಜಾನನ- ಮನೆಯಲ್ಲಿ ನಾಲ್ಕನೆಯ ಮಗ. ಶಿರಸಿಯಲ್ಲಿ ಹಾಗೂ ಧಾರವಾಡಗಳಲ್ಲಿ ಓದಿ ಚರಿತ್ರೆಯಲ್ಲಿ ಸ್ನಾತಕೋತ್ತರ ಪದವಿ ಪಡೆದವರು. ಸಾಹಿತ್ಯ, ನಾಟಕ, ಯಕ್ಷಗಾನದ ಗೀಳು ಅವರಿಗೆ ಚಿಕ್ಕಂದಿನಿಂದ ಗಂಟುಬಿದ್ದಿದ್ದು, ಚರಿತ್ರೆ ಓದಿಯೂ ಪತ್ರಿಕೋದ್ಯಮಕ್ಕೆ ಹೊರಳಲು ಕಾರಣವಾಯ್ತು.
ಗಜಾನನ ಭಟ್ಟರು ಹುಬ್ಬಳ್ಳಿಯ ಕಸ್ತೂರಿ ಮಾಸಪತ್ರಿಕೆಗೆ ಉಪಸಂಪಾದಕರಾಗಿ ಸೇರಿ ಅಂದಿನ ಪ್ರಸಿದ್ಧ ಸಂಪಾದಕರಾದ ಪಾವೆಂ ಆಚಾರ್ಯರ ಗರಡಿಯಲ್ಲಿ ಪಳಗಿದರು. ಹುಬ್ಬಳ್ಳಿಯಿಂದ ಅವರು ಮೈಸೂರಿಗೆ ಬಂದುದೊಂದು ಆಕಸ್ಮಿಕ. ಇವರ ಕನ್ನಡಾಸಕ್ತಿ, ಭಾಷಾಪ್ರೌಢಿಮೆ, ದುಡಿಯುವ ಹುಮ್ಮಸ್ಸು ನೋಡಿ ಆಗ ಮೈಸೂರು ವಿಶ್ವವಿದ್ಯಾನಿಲಯದ ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕರಾಗಿದ್ದ ಪ್ರೊ. ದೇಜಗೌ ಹಾಗೂ ವಿಜ್ಞಾನ ವಿಭಾಗದ ಸಂಪಾದಕರಾಗಿದ್ದ ಜಿ.ಟಿ. ನಾರಾಯಣರಾಯರು ಗಜಾನನ ಭಟ್ಟರನ್ನು ಮೈಸೂರು ವಿವಿಯ ಕನ್ನಡ ವಿಶ್ವಕೋಶದ ಕೆಲಸಕ್ಕೆ ಸೆಳೆದುಕೊಂಡರು. ಅಲ್ಲಿಂದ ಅವರ ಬದುಕೇ ಬದಲಾಯಿತು. ವಿಶ್ವಕೋಶಗಳ ವಿಶಾಲ ಕ್ಷೇತ್ರಕ್ಕೆ ಬದುಕು ತೆರೆದುಕೊಂಡಿತು.
ಹೀಗೆ ಮೈಸೂರಿಗೆ ಬಂದ ಜಿ. ಎಸ್. ಭಟ್ಟರು ಬಹುಶ್ರುತ ವಿದ್ವಾಂಸರಾಗಿ ಬೆಳೆದರು. ಹೆಸರಾಂತ ಜಾನಪದ ವಿದ್ವಾಂಸರಾಗಿದ್ದ ಪ್ರೊ. ಜೀ. ಶಂ .ಪರಮಶಿವಯ್ಯನವರ ಆಕರ್ಷಣೆಗೆ ಒಳಗಾದ ಭಟ್ಟರು, ಜೀಶಂಪ ಅವರ ನೆರಳಿನಂತೆ ಕೆಲಸ ಮಾಡಿದರು. ಜೀಶಂಪ ಅವರ ಜೊತೆಗೂಡಿ ಅಳಿವಿನಂಚಿಗೆ ಬಂದಿದ್ದ ಮೂಡಲಪಾಯ ಯಕ್ಷಗಾನ ಪರಂಪರೆಗೆ ಕಾಯಕಲ್ಪ ನೀಡಲು ಶ್ರಮಿಸಿದರು. ಕರ್ನಾಟಕದ ಕರಾವಳಿ ಹಾಗೂ ಘಟ್ಟದ ಮೇಲಿನ ಹಾಗೂ ಬಯಲು ಸೀಮೆಯ ಯಕ್ಷಗಾನ ಪ್ರಕಾರಗಳ ವೈವಿಧ್ಯಗಳ ಅರಿವಿಗೆ ಜೀಶಂಪ ಅವರ ಸ್ನೇಹ ನೆರವಾಯ್ತು. ಉ.ಕ. ಜಿಲ್ಲೆಯ ಯಕ್ಷಗಾನ ಆಸಕ್ತಿ ಅವರ ರಕ್ತದಲ್ಲೇ ಇದ್ದುದರಿಂದ ಅದನ್ನು ಮೈಸೂರಿಗೆ ತಂದು ಇಲ್ಲಿನ ಜನರಿಗೆ ಪರಿಚಯಿಸಲು ಹರಸಾಹಸ ಮಾಡಿದರು.
ಇಂದು ತೆಂಕು–-ಬಡಗು ತಿಟ್ಟಿನ ಯಕ್ಷಗಾನ ಪ್ರದರ್ಶನಗಳು ಮೈಸೂರಿನಲ್ಲಿ ಬಹಳಷ್ಟು ನಡೆಯುತ್ತವೆ. ಕರಾವಳಿ ಯಕ್ಷಗಾನ ಕೇಂದ್ರದ ಮೂಲಕ ಎರಡೂ ತಿಟ್ಟಿನ ಯಕ್ಷಗಾನವನ್ನು ಆಸಕ್ತರಿಗೆ ಕಲಿಸಲಾಗುತ್ತಿದೆ. ಹೀಗೆ ಇಂದು ಮೈಸೂರಿನಲ್ಲಿ ಯಕ್ಷಗಾನ ಜನಪ್ರಿಯವಾಗಿರಲು ಜಿ. ಎಸ್. ಭಟ್ಟರ ಶ್ರಮವೂ ಇದೆಯೆಂಬುದನ್ನು ಯಾರು ಅಲ್ಲಗಳೆಯಲಾರರು.
ಭಟ್ಟರ ಕಾರ್ಯಕ್ಷೇತ್ರಗಳು ಒಂದೆರಡಲ್ಲ. ಸಾಹಿತ್ಯರಚನೆ, ಸಂಶೋಧನೆ, ಸಂಪಾದನೆ, ಯಕ್ಷಗಾನ ಸಂಘಟನೆ, ಹತ್ತು ಹಲವು ಸಂಘಟನೆಗಳ ಮೂಲಕ ಸಾಮಾಜಿಕ ಹಾಗೂ ಕನ್ನಡದ ಕೆಲಸಗಳಲ್ಲಿ ಅವರು ನಿರಂತರವಾಗಿ ತೊಡಗಿಸಿಕೊಂಡಿದ್ದಾರೆ. ೨೦೦೧ರಲ್ಲೇ ಅವರು ವೃತ್ತಿಯಿಂದ ನಿವೃತ್ತರಾದರೂ ೨೦೦೫ರಲ್ಲಿ ಮೈಸೂರು ವಿವಿ ಅವರನ್ನು ಮತ್ತೆ ಕರೆಸಿಕೊಂಡು ಕನ್ನಡ ವಿಷಯ ವಿಶ್ವಕೋಶದ ಪರಿಷ್ಕರಣೆಯ ಗೌರವ ಸಂಪಾದಕರನ್ನಾಗಿ ನೇಮಿಸಿತು. ಈಗ ಕರ್ನಾಟಕ ಜಾನಪದ ವಿಶ್ವವಿದ್ಯಾನಿಲಯದ ಪ್ರತಿಷ್ಠಿತ ಗ್ರಾಮಚರಿತ್ರೆ ಕೋಶದ ಮೈಸೂರು ಜಿಲ್ಲಾ ಸಂಪಾದಕರಾಗಿ ಅವರು ಕೆಲಸ ಮಾಡುತ್ತಿದ್ದಾರೆ. ಇಪ್ಪತ್ತಕ್ಕೂ ಹೆಚ್ಚು ಜೀವನ ಚರಿತ್ರೆಯ ಪುಸ್ತಕಗಳನ್ನು ಭಟ್ಟರು ಬರೆದಿದ್ದಾರೆ. ಹಲವು ಅಭಿನಂದನಾ ಗ್ರಂಥಗಳನ್ನು ಸಂಪಾದಿಸಿದ್ದಾರೆ. ಜಾನಪದ ಹಾಗೂ ಯಕ್ಷಗಾನಕ್ಕೆ ಸಂಬಂಧಿಸಿದ ಪುಸ್ತಕಗಳು ಹಾಗೂ ವಿಚಾರ ಸಂಕಿರಣಗಳಲ್ಲಿ ಅವರು ಮಂಡಿಸಿದ ಪ್ರಬಂಧಗಳು ಅವರನ್ನು ಜಾನಪದ ತಜ್ಞರನ್ನಾಗಿಯೂ ಯಕ್ಷಗಾನದ ವಿದ್ವಾಂಸರನ್ನಾಗಿಯೂ ಜನ ಗುರುತಿಸಲು ಕಾರಣವಾಗಿವೆ.
ಮೈಸೂರಿನಲ್ಲಿ ಉತ್ತರ ಕನ್ನಡ ಜಿಲ್ಲಾ ಸಾಂಸ್ಕೃತಿಕ ಸಂಘ ಸ್ಥಾಪನೆಯಾದದ್ದು ೪೦ ವರ್ಷಗಳ ಹಿಂದೆ. ಕುವೆಂಪು ನಗರದಲ್ಲಿ ಸಂಘಕ್ಕೆ ಸೇರಿದ ಬೃಹತ್ ಸಮುಚ್ಚಯವಿದೆ. ಈ ಸಂಘದ ಬೆಳವಣಿಗೆಯಲ್ಲಿ ಭಟ್ಟರ ಕೊಡುಗೆ ಅನನ್ಯವಾದುದು. ಮೈಸೂರಿನ ಕುಟುಂಬ ಯೋಜನಾ ಸಂಘದ ಸದಸ್ಯರಾಗಿ, ಅಧ್ಯಕ್ಷರಾಗಿ ಅವರು ಹಲವಾರು ವರ್ಷ ದುಡಿದವರು. ತಮ್ಮದೇ ಇನ್ನೊವೇಟಿವ್ ಸಂಸ್ಥೆಯ ಮೂಲಕ ಕಳೆದ ಹತ್ತು ವರ್ಷಗಳಿಂದ ಮೈಸೂರಿನಲ್ಲಿ ಅವರು ಮಾಡಿರುವ ಸಂಸ್ಕೃತಿ ಸೇವೆಯೂ ಗಮನಾರ್ಹ ವಾದುದು.
ಅಖಿಲ ಭಾರತ ಯಕ್ಷಗಾನ ಬಯಲಾಟ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಸ್ಥಾನ ಅವರ ಪಾಲಿಗೆ ಬಂದುದು ಅಚ್ಚರಿಯ ವಿಷಯವಲ್ಲ. ಅವರು ಯಕ್ಷಗಾನದ ವೇಷಧಾರಿಯೋ, ಭಾಗವತರೋ ಅಲ್ಲದಿರಬಹುದು ಆದರೆ ಯಕ್ಷಗಾನದ ವಿವಿಧ ಪ್ರಕಾರಗಳನ್ನು ಅಭ್ಯಸಿಸಿ ವಿದ್ವಾಂಸರಾಗಿ ಬೆಳೆದವರಿಗೆ ಸಂದ ಗೌರವವಿದು. ಯಕ್ಷಗಾನ ಕುರಿತು ಅವರು ಮಂಡಿಸಿರುವ ಪ್ರಬಂಧಗಳು, ತಂದಿರುವ ಯಕ್ಷಗಾನ ಸಂಬಂಧಿ ಲೇಖನಗಳ ಸಂಗ್ರಹಗಳು, ಸಂಪಾದಿಸಿದ ಸ್ಮರಣ ಸಂಚಿಕೆಗಳು, ಆಡಿಸಿದ ಯಕ್ಷಗಾನ ಬಯಲಾಟಗಳು, ಕಳೆದ ೫ ದಶಕಗಳಿಂದ ಯಕ್ಷಗಾನಕ್ಕೆ ಅವರು ತೋರಿದ ಪ್ರೀತಿ, ಕಾಳಜಿಗಳು ಅವರನ್ನು ಈ ಪೀಠಕ್ಕೆ ಅರ್ಹರನ್ನಾಗಿಸಿವೆ. ನಿವೃತ್ತಿಯ ಬಳಿಕವೂ ಯಕ್ಷಗಾನ, ಜಾನಪದ, ವಿಶ್ವಕೋಶಗಳ ಕೆಲಸಕ್ಕೆ ಅವರು ಎಲ್ಲರಿಗೂ ಬಹಳ ಬೇಕಾದವರಾಗಿದ್ದಾರೆಂಬುದೇ ಅವರ ಕ್ರಿಯಾಶೀಲತೆಯ ಹೆಗ್ಗುರುತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.