ADVERTISEMENT

ಟ್ರೊಸ್ಟ್ ವಿಥ್ ಡೆಸ್ಟಿನಿ: ಸಾರ್ವಕಾಲಿಕ ಪ್ರಣಾಳಿಕೆ

ಡಾ.ಸಿ.ನಾಗಣ್ಣ
Published 2 ಜುಲೈ 2013, 12:48 IST
Last Updated 2 ಜುಲೈ 2013, 12:48 IST

`ಹಲವು ವರ್ಷಗಳ ಹಿಂದೆ ನಾವು ಭವಿಷ್ಯದೊಡನೆ ಒಪ್ಪಂದ ಮಾಡಿಕೊಂಡೆವು. ಈಗ ಪೂರ್ಣವಾಗಿ ಅಲ್ಲದಿದ್ದರೂ ಗಣನೀಯವಾಗಿ ನಮ್ಮ ಸಂಕಲ್ಪವನ್ನು ಸಾಕಾರಗೊಳಿಸುವ ಸಮಯ ಬಂದಿದೆ. ಸಮಸ್ತ ಜಗತ್ತು ನಿದ್ರಿಸುವ ಮಧ್ಯರಾತ್ರಿಯ ವೇಳೆ ಭಾರತ ಚೈತನ್ಯಗೊಂಡು ಸ್ವಾತಂತ್ರ್ಯಕ್ಕೆ ಹೊರಳುತ್ತಿದೆ. ಚರಿತ್ರೆಯಲ್ಲಿ ಒಂದು ಅಪರೂಪದ ಮುಹೂರ್ತ ಕಾಣಿಸಿಕೊಳ್ಳುತ್ತದೆ; ಆ ಘಳಿಗೆಯಲ್ಲಿ ಹಳೆಯದನ್ನು ಬಿಟ್ಟು ಹೊಸದಕ್ಕೆ ಪದಾರ್ಪಣ ಮಾಡುತ್ತೇವೆ; ಆಗ ಒಂದು ಯುಗ ಮುಗಿದು ದೀರ್ಘಕಾಲದ ದಿಗ್ಭಂಧನದಿಂದ ಒಂದು ದೇಶದ ಆತ್ಮ ಬಿಡುಗಡೆ ಹೊಂದಿ ಮಾತನಾಡತೊಡಗುತ್ತದೆ. ಇಂಥ ಒಂದು ವಿದ್ಯುಕ್ತ ಕ್ಷಣದಲ್ಲಿ ಭಾರತಾಂಬೆಯ, ಮತ್ತವಳ ಪ್ರಜೆಗಳ ಸೇವೆಗೆ, ಅಷ್ಟೇ ಏಕೆ, ವಿಶಾಲವಾದ ಮನುಕುಲದ ಸೇವೆಗೆ ಸಮರ್ಪಿಸಿಕೊಳ್ಳುವ ಪ್ರತಿಜ್ಞೆ ಮಾಡಬೇಕಾದುದು ವಿಹಿತವಾಗಿದೆ.

ಇತಿಹಾಸದ ಆರಂಭಕಾಲದಲ್ಲಿ ಭಾರತ ತನ್ನ ಅನಂತ ಅನ್ವೇಷಣೆಯಲ್ಲಿ ತೊಡಗಿದ್ದು ಶತಶತಮಾನಗಳಿಂದ ಅವಳ ಸತತ ಪ್ರಯತ್ನದ ಗುರುತುಗಳು ಗೋಚರವಾಗುತ್ತಿವೆ; ಹಾಗೆಯೇ ಅವಳ ಯಶಸ್ಸು ಮತ್ತು ಪರಾಭವದ ಭವ್ಯತೆಯನ್ನೂ ನಾವು ಕಾಣುತ್ತಿದ್ದೇವೆ. ತನ್ನ ಅದೃಷ್ಟದ ದಿನಗಳಲ್ಲೆಂತೊ ಅಂತೆಯೇ ನತದೃಷ್ಟ ದಿನಗಳಲ್ಲೂ ಆಕೆ ತನಗೆ ಚೈತನ್ಯ ನೀಡಿರುವ ಆದರ್ಶಗಳಿಂದ ದೃಷ್ಟಿಯನ್ನು ಬೇರೆಡೆ ಹೊರಳಿಸಿಲ್ಲ.

ಈ ದಿನ ನಾವು ದುರದೃಷ್ಟಕರವಾದ ಪರ್ವವನ್ನು ಕೊನೆಗಾಣಿಸಿದ್ದೇವೆ ಮತ್ತು ಭಾರತ ಮತ್ತೆ ತನ್ನನ್ನು ತಾನು ಕಂಡುಕೊಳ್ಳುತ್ತಿದ್ದಾಳೆ. ನಾವು ಈ ದಿನ ನಮ್ಮ ಸಾಧನೆಯ ಸಂಭ್ರಮವನ್ನು ಆಚರಿಸುತ್ತಿರುವುದು ಒಂದು ಆರಂಭವಷ್ಟೆ, ಭವಿಷ್ಯತ್ತಿನಲ್ಲಿ ಇನ್ನೂ ಹೆಚ್ಚಿನ ಜಯ ಮತ್ತು ಸಾಧನೆ ನಮ್ಮದಾಗುವುದು. ಈ ಅವಕಾಶವನ್ನು ದೃಢವಾಗಿ ಹಿಡಿಯಲು ಹಾಗೂ ಭವಿಷ್ಯದ ಸವಾಲುಗಳನ್ನು ಸ್ವೀಕರಿಸಲು ನಮಗೆ ಧೈರ್ಯವಿದೆಯೇ?

ಸ್ವಾತಂತ್ರ್ಯ ಮತ್ತು ಅಧಿಕಾರ ಜವಾಬ್ದಾರಿಯನ್ನು ಹೊತ್ತು ತರುತ್ತದೆ. ಹಾಗೆಯೇ ಸ್ವತಂತ್ರ ಭಾರತದ ಪ್ರಜೆಗಳನ್ನು ಪ್ರತಿನಿಧಿಸುವ ಈ ಸಾರ್ವಭೌಮ ಸದನ ಸಹ ಆ ಜವಾಬ್ದಾರಿಯನ್ನು ಹೊತ್ತಿದೆ. ಸ್ವಾತಂತ್ರ್ಯದ ಉದಯಕ್ಕೆ ಮೊದಲು ನಾವು ಎಷ್ಟೊಂದು ಪ್ರಸವವೇದನೆಯನ್ನು ಅನುಭವಿಸಿದ್ದೇವೆ; ಆ ಸಂಕಟದ ನೆನಪು ನಮ್ಮ ಹೃದಯಗಳಲ್ಲಿ ಇನ್ನೂ ಭಾರವಾಗಿ ಕುಳಿತಿದೆ. ಆದಾಗ್ಯೂ ಭೂತಕಾಲ ಮುಗಿದಿದೆ; ಭವಿಷ್ಯತ್ತು ನಮ್ಮನ್ನು ಕೈಬೀಸಿ ಕರೆಯುತ್ತಿದೆ.

ಆ ಭವಿಷ್ಯತ್ತಿನಲ್ಲಿ ನಾವು ಆರಾಮವಾಗಿ ವಿರಮಿಸುವಂತಿಲ್ಲ; ಬದಲಿಗೆ ಸತತವಾಗಿ ದುಡಿಯಬೇಕು, ತನ್ಮೂಲಕ ನಾವು ಈಗಾಗಲೇ ಮಾಡಿರುವ, ಇಂದು ಮತ್ತೆ ಮಾಡುತ್ತಿರುವ ಪ್ರತಿಜ್ಞೆಯನ್ನು ಸಾಕಾರಗೊಳಿಸಬೇಕು. ಭಾರತದ ಸೇವೆ ಎಂದರೆ ನೊಂದ ಅಸಂಖ್ಯಾತರ ಸೇವೆಯೇ ಆಗಿದೆ. ಸೇವೆ ಎಂದರೆ ಬಡತನ, ಅಜ್ಞಾನ, ರೋಗ ಮತ್ತು ಅವಕಾಶಗಳ ಅಸಮಾನತೆಯನ್ನು ಹೋಗಲಾಡಿಸುವುದು ಎಂದರ್ಥ.

ನಮ್ಮ ತಲೆಮಾರಿನಲ್ಲಿ ಮಹಾನ್ ವ್ಯಕ್ತಿಯೊಬ್ಬರಿದ್ದಾರೆ; ಆ ವ್ಯಕ್ತಿಯ ಮಹತ್ವಾಕಾಂಕ್ಷೆಯೆಂದರೆ ಪ್ರತಿಯೊಬ್ಬನ ಕಣ್ಣೀರನ್ನೂ ಒರೆಸುವುದು. ಅದು ನಮ್ಮಿಂದ ಸಾಧ್ಯವಾಗದಿರಬಹುದು; ಆದರೆ ಎಲ್ಲಿಯವರೆಗೆ ನೋವು ಮತ್ತು ಕಣ್ಣೀರು ಇರುತ್ತದೆಯೋ ಅಲ್ಲಿಯವರೆಗೆ ನಮ್ಮ ಕರ್ತವ್ಯ ಮುಗಿದಂತಾಗುವುದಿಲ್ಲ.

ಹಾಗಾಗಿ ನಾವು ದುಡಿಯಬೇಕು, ಶ್ರಮವಹಿಸಿ ದುಡಿಯಬೇಕು. ನಾವು ಪ್ರತಿನಿಧಿಸುವಂಥ ಭಾರತದ ಜನತೆಗೆ ವಿನಂತಿ ಮಾಡಿಕೊಳ್ಳೋಣ : ಈ ಅಸೀಮ ಸಾಹಸದಲ್ಲಿ ನಂಬಿಕೆ ಹಾಗೂ ಆತ್ಮವಿಶ್ವಾಸದಿಂದ ನಮ್ಮಂದಿಗೆ ಕೈಜೋಡಿಸಿ ಎಂದು. ಸಣ್ಣತನದ ಮಾತುಗಳಿಗೆ, ವಿನಾಶಕಾರಿಯಾದ ಟೀಕೆಗಳಿಗೆ ಇದು ಸಮಯವಲ್ಲ; ಇತರರನ್ನು ದ್ವೇಷಿಸುವ ಹಾಗೂ ದೂಷಿಸುವ ಕಾಲವೂ ಇದಲ್ಲ. ಸ್ವತಂತ್ರ ಭಾರತದ ಘನವಾದ ಸೌಧವನ್ನು ನಿರ್ಮಿಸುವ ಮೂಲಕ ಮಾತೆಯ ಮಕ್ಕಳೆಲ್ಲ ವಾಸಿಸುವಂತೆ ಮಾಡಬೇಕು.

ಅದನ್ನು ಸಾಕಾರಗೊಳಿಸುವ ಘಳಿಗೆ ಈಗ ಕೂಡಿ ಬಂದಿದೆ. ಸುದೀರ್ಘವಾದ ನಿದ್ರೆ ಮತ್ತು ಹೋರಾಟ, ಎಚ್ಚರ, ಚೈತನ್ಯ, ಸ್ವಾತಂತ್ರ್ಯ- ಎಲ್ಲವನ್ನೂ ಹೊತ್ತ ಘಳಿಗೆ ಇದು. ಚರಿತ್ರೆ ಹೊಸದಾಗಿ ಅನಾವರಣಗೊಂಡಿದೆ. ಈ ಚರಿತ್ರೆಯಲ್ಲಿ ನಾವು ಬಾಳಬೇಕು, ಪಾತ್ರವಹಿಸಬೇಕು; ಇತರರು ಅದರ ಬಗ್ಗೆ ಬರೆಯಬೇಕು.

ಭಾರತದಲ್ಲಿರುವ ನಮಗೆ, ಏಷ್ಯಾದ ಎಲ್ಲ ಜನರಿಗೆ, ಅಷ್ಟೇ ಏಕೆ ಜಗತ್ತಿನ ಜನರಿಗೆಲ್ಲ ಇದು ಒಂದು ಮಹತ್ವದ ಕ್ಷಣ. ಸ್ವಾತಂತ್ರ್ಯವೆಂಬ ನಕ್ಷತ್ರ ಪೂರ್ವದಲ್ಲಿ ಉದಯವಾಗುತ್ತಿದೆ. ಹೊಸ ಭರವಸೆ ಮೂಡುತ್ತಿದೆ; ಬಹಳ ಕಾಲದಿಂದ ಧ್ಯಾನಿಸುತ್ತಿದ್ದ ಹೊಸ ಕಾಣ್ಕೆ ಸಾಕಾರಗೊಳ್ಳುತ್ತಿದೆ. ಆ ನಕ್ಷತ್ರ ಎಂದೂ ಮುಳುಗದಿರಲಿ, ಭರವಸೆ ಎಂದೂ ಹುಸಿಯಾಗದಿರಲಿ.

ಇಂದಿನ ದಿನ ನಾವು ಮೊದಲು ನೆನೆಯಬೇಕಾದದ್ದು ನಮ್ಮ ಸ್ವಾತಂತ್ರ್ಯ ಶಿಲ್ಪಿ, ರಾಷ್ಟ್ರಪಿತ ಅವರನ್ನು. ಅವರು ಭಾರತದ ಪ್ರಾಚೀನ ಚೈತನ್ಯದ ಪ್ರತೀಕವಾಗಿ ಸ್ವಾತಂತ್ರ್ಯದ ಜ್ಯೋತಿಯನ್ನು ಎತ್ತಿ ಹಿಡಿದರು; ನಮ್ಮನ್ನು ಸುತ್ತುವರೆದಿದ್ದ ಕತ್ತಲನ್ನು ಹೋಗಲಾಡಿಸಿದರು. ಅನೇಕ ವೇಳೆ ನಾವು ಅಂಥ ಮಹಾನ್ ವ್ಯಕ್ತಿಯ ಯೋಗ್ಯ ಅನುಯಾಯಿಗಳಾಗಿಲ್ಲ. ಆತನ ಸಂದೇಶದಿಂದ ದೂರ ಸರಿದಿದ್ದೇವೆ. ಆದರೆ ಒಂದಂತೂ ನಿಜ: ನಾವಷ್ಟೇ ಅಲ್ಲ, ಇನ್ನು ಮುಂದೆ ಬರಲಿರುವ ಹಲವು ತಲೆಮಾರುಗಳ ಜನ ಆತನ ಸಂದೇಶವನ್ನು ನೆನೆಯುತ್ತಾರೆ, ತಮ್ಮ ಹೃದಯಗಳಲ್ಲಿ ಭಾರತದ ಈ ಮಹಾನ್ ಪುರುಷನ ರೂಪನ್ನು ಅಚ್ಚೊತ್ತಿಕೊಳ್ಳುತ್ತಾರೆ.

ಭವಿಷ್ಯ ನಮ್ಮನ್ನು ಕೈಬೀಸಿ ಕರೆಯುತ್ತಿದೆ. ನಾವು ಎತ್ತ ಹೋಗಬೇಕು ಮತ್ತು ನಮ್ಮ ಪ್ರಯತ್ನ ಎತ್ತ ಸಾಗಬೇಕು? ಭಾರತದ ಜನಸಾಮಾನ್ಯನಿಗೆ, ರೈತರಿಗೆ ಹಾಗೂ ಕಾರ್ಮಿಕರಿಗೆ ಸ್ವಾತಂತ್ರ್ಯ ಮತ್ತು ಅವಕಾಶವನ್ನು ಕಲ್ಪಿಸುವುದು; ಬಡತನ, ಅಜ್ಞಾನ ಹಾಗೂ ರೋಗರುಜಿನದ ವಿರುದ್ಧ ಹೋರಾಡಿ ಅವನ್ನು ಕೊನೆಗೊಳಿಸುವುದು; ಪ್ರಗತಿಪರವೂ, ಸಮೃದ್ಧವೂ, ಜನತಂತ್ರವೂ ಆದ ರಾಷ್ಟ್ರವನ್ನು ನಿರ್ಮಿಸುವುದು; ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯ ಸಂಸ್ಥೆಗಳನ್ನು ನಿರ್ಮಿಸಿ ತನ್ಮೂಲಕ ಪ್ರತಿಯೊಬ್ಬ ಪುರುಷ ಹಾಗೂ ಮಹಿಳೆಗೆ ನ್ಯಾಯಯುತವೂ ಸಂಪೂರ್ಣವೂ ಆದ ಬದುಕನ್ನು ದೊರಕಿಸಿಕೊಡುವುದು.

ನಮ್ಮ ಮುಂದೆ ಇರುವುದು ಶ್ರಮದ ದುಡಿಮೆ. ಭಾರತದ ಜನತೆಗೆ ಸುಖಸಮೃದ್ಧಿಯ ಬದುಕನ್ನು ದೊರಕಿಸುವ ತನಕ ನಮಗಾರಿಗೂ ವಿಶ್ರಾಂತಿ ಎಂಬುದಿಲ್ಲ. ಒಂದು ದಿಟ್ಟ ಹೆಜ್ಜೆಯನ್ನಿಟ್ಟಿರುವ ಮಹಾನ್ ರಾಷ್ಟ್ರದ ಪ್ರಜೆಗಳು ನಾವು; ಹಾಗಾಗಿ, ಆ ದೊಡ್ಡ ಗೌರವಕ್ಕೆ ಅನುಗುಣವಾಗಿ ಬದುಕಬೇಕಾಗಿದೆ.

ನಾವು ಯಾವ ಧರ್ಮಕ್ಕೇ ಸೇರಿದವರಾಗಿರಲಿ, ಸಮಾನ ಅಧಿಕಾರ, ಪ್ರತಿಷ್ಠೆ ಹಾಗೂ ಹೊಣೆಗಾರಿಕೆಯುಳ್ಳ ಭಾರತಾಂಬೆಯ ಮಕ್ಕಳು ನಾವು. ಮತಾಂಧತೆ ಹಾಗೂ ಸಂಕುಚಿತ ಮನೋಭಾವವನ್ನು ಪ್ರೊತ್ಸಾಹಿಸಲು ಸಾಧ್ಯವಿಲ್ಲ; ಏಕೆಂದರೆ ಆಲೋಚನೆಯಲ್ಲಾಗಲೀ ಅಥವಾ ಕ್ರಿಯೆಯಲ್ಲಾಗಲೀ ಸಂಕುಚಿತ ಮನೋಭಾವವನ್ನು ಹೊಂದಿದ ಜನರಿರುವ ರಾಷ್ಟ್ರ ದೊಡ್ಡರಾಷ್ಟ್ರವಾಗಲು ಸಾಧ್ಯವಿಲ್ಲ.

ಅಮರವೂ, ನವ ನವೋನ್ಮೇಷಶಾಲಿಯೂ ಆದ ನಮ್ಮ ಮಾತೃಭೂಮಿಗೆ, ನಮ್ಮ ಹೃದಯಾಂತರಾಳದ ನಮನಗಳನ್ನು ಸಲ್ಲಿಸುತ್ತಾ ಆ ಮಾತೆಯ ಸೇವೆಗಾಗಿ ಮತ್ತೆ ನಮ್ಮನ್ನು ನಾವು ಸಮರ್ಪಿಸಿಕೊಳ್ಳೋಣ'.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.