ADVERTISEMENT

ನಿತೀಶ್-ಮೋದಿ: ಜಟಾಪಟಿಯ ಲಾಭ ಯಾರಿಗೆ?

ಹೊನಕೆರೆ ನಂಜುಂಡೇಗೌಡ
Published 20 ಏಪ್ರಿಲ್ 2013, 19:59 IST
Last Updated 20 ಏಪ್ರಿಲ್ 2013, 19:59 IST

ನರೇಂದ್ರ ಮೋದಿ `ನಾಗಾಲೋಟ'ಕ್ಕೆ ನಿತೀಶ್ ಕುಮಾರ್ ಬ್ರೇಕ್ ಹಾಕುತ್ತಿದ್ದಾರೆ. ಹೆಚ್ಚುಕಡಿಮೆ ಒಂದೇ ವಾರಿಗೆಯ ಇಬ್ಬರೂ ನಾಯಕರು ರಾಜಕೀಯವಾಗಿ ಹಾವು-ಮುಂಗುಸಿ ಆಗಿದ್ದಾರೆ. ಮೋದಿ `ದೆಹಲಿ ಗದ್ದುಗೆ' ಹಿಡಿಯುವ ಅವಸರದಲ್ಲಿದ್ದಾರೆ. ಬಿಜೆಪಿ ಕೆಲ ನಾಯಕರು ಮತ್ತು ಕಾರ್ಯಕರ್ತರಿಗೆ `ಮೋದಿ ಮ್ಯಾಚ್ ಗೆಲ್ಲಿಸುವ ಕ್ಯಾಪ್ಟನ್' ಆಗಬಹುದೆನ್ನುವ ನಿರೀಕ್ಷೆ ಇದೆ. ಆದರೆ, ಪಕ್ಷ ಅವರನ್ನು `ಪ್ರಧಾನಿ ಅಭ್ಯರ್ಥಿ' ಎಂದು ಬಿಂಬಿಸುವ ತಂಟೆಗೆ ಹೋಗಿಲ್ಲ. ಅದು ಸುಲಭದ ಕೆಲಸವೂ ಅಲ್ಲ. ಏಕೆಂದರೆ ಮೋದಿ ಅವರಿಗೆ ಹೊರಗಿನಂತೆ ಅವರದೇ ಪಕ್ಷದೊಳಗೆ ವಿರೋಧಿಗಳಿದ್ದಾರೆ.

`ಮೋದಿ ಅವರನ್ನು ಬಿಜೆಪಿ ಪ್ರಧಾನಿ ಹುದ್ದೆಗೆ ಬಿಂಬಿಸಬಾರದು' ಎಂದು ಜೆಡಿಯು ಹಟ ಹಿಡಿದಿದೆ. ಮಿತ್ರಪಕ್ಷದ ನಡವಳಿಕೆಯಿಂದ ಬಿಜೆಪಿ ನಾಯಕರಿಗೆ ಇರುಸುಮುರುಸಾಗಿದೆ. `ನಿತೀಶ್ ಸಂಬಂಧ ಮುಂದುವರಿಸುವುದಕ್ಕಿಂತ ಕಡಿದುಕೊಳ್ಳುವುದು ಲೇಸು' ಎನ್ನುವ ಅಭಿಪ್ರಾಯ ಕೆಲವರಲ್ಲಿದೆ. ಕರ್ನಾಟಕ ವಿಧಾನಸಭೆ ಚುನಾವಣೆ ಬಳಿಕ ಬಿಹಾರ ಸರ್ಕಾರದಿಂದ ಬಿಜೆಪಿ ಹೊರಬರುವ ಆಲೋಚನೆ ಮಾಡುತ್ತಿದೆ. ಈ ನಿಟ್ಟಿನಲ್ಲಿ ಚರ್ಚೆಗಳು ಶುರುವಾಗಿದೆ.

ವೈಚಾರಿಕವಾಗಿ ಪರಸ್ಪರ ವಿರುದ್ಧ ದಿಕ್ಕಿಗೆ ನಿಲ್ಲುವ ಬಿಹಾರದ ಮುಖ್ಯಮಂತ್ರಿ ನಿತೀಶ್ ಗುಜರಾತಿನ ಮುಖ್ಯಮಂತ್ರಿ ಮೋದಿ ಅವರಿಗಿಂತ ವಯಸ್ಸಿನಲ್ಲಿ ಐದೂವರೆ ತಿಂಗಳು ಚಿಕ್ಕವರು. ಮೋದಿ ಸಂಘ- ಪರಿವಾರದ ಹಿನ್ನೆಲೆಯಿಂದ ಬಂದವರು. ನಿತೀಶ್ ಸಮಾಜವಾದಿ ಚಳವಳಿಯ ಪ್ರಭಾವದಲ್ಲಿ ಬೆಳೆದವರು. 13 ವರ್ಷದ ಹಿಂದೆಯೇ ಬಿಹಾರದ ಮುಖ್ಯಮಂತ್ರಿಯಾದರೂ ಬಹುಮತದ ಕೊರತೆಯಿಂದ ಏಳೇ ದಿನದಲ್ಲಿ ಅಧಿಕಾರ ತ್ಯಜಿಸಿದರು ನಿತೀಶ್. 2005ರಿಂದ ಪುನಃ ಮುಖ್ಯಮಂತ್ರಿ ಆಗಿದ್ದಾರೆ. ಆದರೆ, ಮೋದಿ 2001ರಿಂದ ಗುಜರಾತಿನ ಮುಖ್ಯಮಂತ್ರಿ. ಹೋದ ವರ್ಷ ಚುನಾವಣೆ ಗೆದ್ದು `ಹ್ಯಾಟ್ರಿಕ್' ಹೊಡೆದಿದ್ದಾರೆ.

ರಾಜಕೀಯ ಭಿನ್ನಾಭಿಪ್ರಾಯದ ನಡುವೆ ಕೆಲವು ವಿಷಯಗಳಲ್ಲಿ ಹೋಲಿಕೆ ಇದೆ. ಇಬ್ಬರೂ ಗಡ್ಡಧಾರಿಗಳು. ಅಭಿವೃದ್ಧಿ ವಿಷಯದಲ್ಲಿ ತಮ್ಮ ರಾಜ್ಯವೇ ಹೆಚ್ಚೆಂದು ಹೇಳಿಕೊಳ್ಳುವ ಗುಣ ಸ್ವಭಾವ ಹೊಂದಿದ್ದಾರೆ. ಮಾತಿನಲ್ಲಿ ಮೋದಿ ಸ್ವಲ್ಪ ನಾಜೂಕು. ಎಂಜಿನಿಯರಿಂಗ್ ಪದವೀಧರ ನಿತೀಶ್ ನಮ್ಮ ಹಳ್ಳಿಯ ಯಜಮಾನ ಮನುಷ್ಯನಂತೆ. ಮೋದಿ ರಾಜ್ಯಶಾಸ್ತ್ರ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಸಾಮರ್ಥ್ಯದಲ್ಲಿ ನಿತೀಶ್ ಕಡಿಮೆಯೇನಿಲ್ಲ. ಅವಕಾಶ ಸಿಕ್ಕರೆ ಪ್ರಧಾನಿ ಹುದ್ದೆ ನಿಭಾಯಿಸುವ ತಾಕತ್ತಿದೆ.

ಮೋದಿ ತಮ್ಮನ್ನು ರಾಷ್ಟ್ರ ನಾಯಕನಂತೆ ಬಿಂಬಿಸಿಕೊಳ್ಳುತ್ತಿದ್ದಾರೆ. ಅವರ ಮಾತು- ನಡವಳಿಕೆಯಲ್ಲಿ ಸಾಕಷ್ಟು ಬದಲಾವಣೆಗಳಾಗಿದೆ. ಹೋದ ಕಡೆಗಳಲ್ಲಿ ಗುಜರಾತ್ ಮಾದರಿಯನ್ನೇ ದೇಶ ಅನುಸರಿಸಬೇಕೆಂದು ಹೇಳುತ್ತಿದ್ದಾರೆ. ದೊಡ್ಡ ಕಾರ್ಪೋರೇಟ್ ವಲಯವೇ ಮೋದಿ ಬೆನ್ನಿಗಿದೆ. ಮತ್ತೊಂದು ಗಮನಿಸಬೇಕಾದ ಅಂಶವೆಂದರೆ ಗೋದ್ರಾ ಹಿಂಸಾಚಾರದ ಬಳಿಕ ದೂರವಿದ್ದ ದೇಶಗಳು ಹತ್ತಿರ ಬರುತ್ತಿವೆ. ಮೋದಿ ಸಾಧನೆ ಕೊಂಡಾಡುತ್ತಿವೆ.

ಬಿಹಾರದಲ್ಲಿ ನಿತೀಶ್ ಸರ್ಕಾರ ಬಂದ ಬಳಿಕ ಬೇಕಾದಷ್ಟು ಪ್ರಗತಿ ಆಗಿದೆ. ಕಾನೂನು-ಸುವ್ಯವಸ್ಥೆ ಸುಧಾರಿಸಿದೆ. ಆರ್ಥಿಕ ವೃದ್ಧಿ ದರ ಶೇ.11.7ರಷ್ಟಿದೆ. ಬಿಹಾರಕ್ಕೆ ಹೋಲಿಸಿದರೆ ಗುಜರಾತಿನ ಪ್ರಗತಿ ಶೇ. 11.1. `ಮೋದಿ ಗುಜರಾತ್ ಅಭಿವೃದ್ಧಿ ಕುರಿತು ಮಾತನಾಡುತ್ತಿರುವುದರ ಹಿಂದೆ ಯಾವ ಹೆಚ್ಚುಗಾರಿಕೆ ಇಲ್ಲ. ಏಕೆಂದರೆ ಈ ರಾಜ್ಯ ಬಹಳ ಹಿಂದಿನಿಂದಲೇ ಅಭಿವೃದ್ಧಿ ಹಾದಿಯಲ್ಲಿ ಸಾಗಿದೆ' ಎಂದು ಮಧ್ಯಪ್ರದೇಶ ಮುಖ್ಯ ಮಂತ್ರಿ ಶಿವರಾಜ್‌ಸಿಂಗ್ ಚೌಹಾಣ್ ಅವರೇ ಹೇಳಿದ್ದಾರೆ. ತಮ್ಮ ರಾಜ್ಯದ ಅಭಿವೃದ್ಧಿ ಸೊನ್ನೆಯಿಂದ ಶುರುವಾಗಿದೆ ಎಂದಿದ್ದಾರೆ. ಈ ಮಾತು ಬಿಹಾರಕ್ಕೂ ಅನ್ವಯಿಸುತ್ತದೆ.

ಬಿಹಾರ ಅತ್ಯಂತ ಹಿಂದುಳಿದ ರಾಜ್ಯ. 2000ನೇ ವರ್ಷದಲ್ಲಿ ಬಿಹಾರ ಇಬ್ಭಾಗವಾದಾಗ ನೈಸರ್ಗಿಕ ಸಂಪತ್ತು- ಉದ್ಯಮಗಳು ಜಾರ್ಖಂಡ್ ಪಾಲಾಯಿತು. `ಲಾಲು ಸಾಮ್ರಾಜ್ಯ' ಪತನಗೊಂಡ ಬಳಿಕ ನಿತೀಶ್ ಬಿಹಾರ ಕಟ್ಟುವ ಕೆಲಸ ಮಾಡುತ್ತಿದ್ದಾರೆ. ಈ ಕಟ್ಟುವ ಕೆಲಸಕ್ಕೆ 20 ಸಾವಿರ ಕೋಟಿ ವಿಶೇಷ ಪ್ಯಾಕೇಜ್ ಕೇಳಿದ್ದಾರೆ. ಗುರುವಾರ ಕೇಂದ್ರ ಸಂಪುಟ 12 ಸಾವಿರ ಕೋಟಿ ರೂಪಾಯಿ ವಿಶೇಷ ಅನುದಾನ ಪ್ರಕಟಿಸಿದೆ. ಇದು ಐದು ವರ್ಷದ ಅವಧಿಗೆ.

`ಕೇಂದ್ರದ ತೀರ್ಮಾನದ ಹಿಂದೆ ರಾಜಕೀಯ ಉದ್ದೇಶವಿಲ್ಲ' ಎಂದು ಪ್ರತಿಪಾದಿಸಲಾಗುತ್ತಿದೆ. ಈ ಮಾತನ್ನು ನಂಬುವುದು ಸ್ವಲ್ಪ ಕಷ್ಟ. ರಾಜ್ಯಗಳು ಅತ್ತು, ಕರೆದು ಬೊಬ್ಬೆ ಹಾಕಿದರೂ ಕೇಂದ್ರ ಸರ್ಕಾರ ಬಿಡಿ ಕಾಸು ಬಿಚ್ಚುವುದಿಲ್ಲ. ಇನ್ನು ಏಕಾಏಕಿ 12 ಸಾವಿರ ಕೋಟಿ ವಿಶೇಷ ಅನುದಾನ ಪ್ರಕಟಿಸಿದರೆ? ಇದರ ಹಿಂದಿನ ಉದ್ದೇಶ ಯಾರಿಗಾದರೂ ಸುಲಭವಾಗಿ ಅರ್ಥವಾಗುತ್ತದೆ. ಯುಪಿಎ ಮೈತ್ರಿಕೂಟದಿಂದ ಮಮತಾ ಹೊರ ಹೋಗಿದ್ದಾರೆ. ಅವರನ್ನು ಕರುಣಾನಿಧಿ ಹಿಂಬಾಲಿಸಿದ್ದಾರೆ. ಮುಲಾಯಂ, ಮಾಯಾವತಿ ಹೊರಗಿನಿಂದ ಬೆಂಬಲ ಕೊಡುತ್ತಿದ್ದಾರೆ. ಇವರನ್ನು ಪೂರ್ಣ ನಂಬುವ ಸ್ಥಿತಿಯಲ್ಲಿ ಕಾಂಗ್ರೆಸ್ ಇಲ್ಲ. ಕೇಂದ್ರದಲ್ಲಿ ಅಧಿಕಾರ ಹಂಚಿಕೊಂಡಿರುವ ಎನ್‌ಸಿಪಿ ಮುಖಂಡ ಶರದ್ ಪವಾರ್ ಅಪಸ್ವರ  ತೆಗೆದಿದ್ದಾರೆ. ಈ ರಾಜಕೀಯ ಇಕ್ಕಟ್ಟಿನ ಪರಿಸ್ಥಿತಿಯಲ್ಲಿ ಕಾಂಗ್ರೆಸ್ `ಕೈ' ಹಿಡಿಯಲು ನಿತೀಶ್ ಅವರಂಥ ನಂಬಿಕಸ್ಥ ನಾಯಕರ ಅಗತ್ಯವಿದೆ.

ಬಿಜೆಪಿ ಮೋದಿ ಅವರನ್ನು ದೂರವಿಟ್ಟರೆ ನಿತೀಶ್ ಎನ್‌ಡಿಎ ಮೈತ್ರಿಕೂಟದಲ್ಲಿ ಉಳಿಯುತ್ತಾರೆ. ಬೇಕಾದರೆ ಹಿರಿಯ ನಾಯಕ ಅಡ್ವಾಣಿ ಅವರನ್ನು ಒಪ್ಪಿಕೊಳ್ಳಲು ನಿತೀಶ್ ಸಿದ್ಧರಿದ್ದಾರೆ. ಬಾಬ್ರಿ ಮಸೀದಿ ನೆಲಸಮ ಕಳಂಕ ಹೊತ್ತ ಅಡ್ವಾಣಿ ಬಹಳ ಬದಲಾಗಿದ್ದಾರೆ. ಎನ್‌ಡಿಎ ಒಕ್ಕೂಟ ಬಲಪಡಿಸುವ ಉದ್ದೇಶದಿಂದ ಬಿಜೆಪಿ ಜಾತ್ಯತೀತ ಧೋರಣೆ ಹೊಂದುವ ಅಗತ್ಯವಿದೆ ಎಂದು ಪಕ್ಷದ ಸಮಾವೇಶಗಳಲ್ಲಿ ಅಡ್ವಾಣಿ ಹೇಳಿದ್ದಾರೆ.

`ರಾಜ್ಯ ಧರ್ಮ ಪಾಲನೆ ಮಾಡಬೇಕು' ಎಂದು ಮಾಜಿ ಪ್ರಧಾನಿ ವಾಜಪೇಯಿ ಅವರಿಂದ ಇಕ್ಕಿಸಿಕೊಂಡ ಮೋದಿಗಿಂತಲೂ ಅಡ್ವಾಣಿ ಮೇಲು ಎಂಬ ಭಾವನೆ ಬಿಜೆಪಿ ಒಳಗೆ ಮತ್ತು ಹೊರಗೆ ಬಲಿಯುತ್ತಿದೆ. ಶಿವರಾಜ್‌ಸಿಂಗ್ ಚವ್ಹಾಣ್ ಈಚೆಗೆ ಅಡ್ವಾಣಿ ಪಕ್ಷದ ಅತ್ಯಂತ ದೊಡ್ಡ ನಾಯಕರೆಂದು ಹೇಳಿದ್ದಾರೆ. ಈ ಮಾತಿಗೆ ಬೇಕಾದಷ್ಟು ಅರ್ಥವಿದೆ. ದೆಹಲಿ ಬಿಜೆಪಿ ನಾಯಕ ವಿಜಯ ಗೋಯಲ್ ಬಿಜೆಪಿಗೆ ಹಿರಿಯ ನಾಯಕ ಅಡ್ವಾಣಿ ಅನಿವಾರ್ಯ ಎಂದಿದ್ದಾರೆ. ಬಹುತೇಕ ಬಿಜೆಪಿ ನಾಯಕರಿಗೆ ಮೋದಿ ಅವರನ್ನು ಕಂಡರೆ ಅಷ್ಟಕಷ್ಟೆ. ಬಿಹಾರ ಉಪ ಮುಖ್ಯಮಂತ್ರಿ ಸುಶೀಲ್ ಕುಮಾರ್ ಮೋದಿ ಪ್ರಧಾನಿ ಹುದ್ದೆಗೆ ಮೋದಿಗಿಂತ ನಿತೀಶ್ ಹೆಚ್ಚು ಸೂಕ್ತವೆಂಬ ಹೇಳಿಕೆಯನ್ನು ಹಿಂದೊಮ್ಮೆ ನೀಡಿದ್ದರು. ಅವರಿಗೆ ನಿತೀಶ್ ಜತೆ ಉತ್ತಮ ಹೊಂದಾಣಿಕೆ ಇದೆ. ಈಗ ಬಿಜೆಪಿ- ಜೆಡಿಯು ಸಮರದಲ್ಲಿ ಸುಶೀಲ್ ಕುಮಾರ್ ಅನಿವಾರ್ಯವಾಗಿ ಪಕ್ಷವನ್ನು ಬೆಂಬಲಿಸಿದ್ದಾರೆ.

ಬಿಜೆಪಿಯಲ್ಲೂ ಗುಂಪುಗಾರಿಕೆ ಮೆರೆಯುತ್ತಿದೆ. ಸಂಸದೀಯ ಮಂಡಳಿ ನೇಮಕಾತಿಯಲ್ಲಿ ಅಡ್ವಾಣಿಯವರ ಮಾತಿಗೆ ಬೆಲೆ ಸಿಕ್ಕಿಲ್ಲ. ಬಿಜೆಪಿ ಅಧ್ಯಕ್ಷ ರಾಜನಾಥ್ ಸಿಂಗ್ ಹಾಗೂ ನರೇಂದ್ರ ಮೋದಿ ಅವರ ಕೈ ಮೇಲಾಗಿದೆ. ಶಿವರಾಜ್‌ಸಿಂಗ್ ಚೌಹಾಣ್ ಅವರನ್ನು ಸಂಸದೀಯ ಮಂಡಳಿಗೆ ನೇಮಕ ಮಾಡುವಂತೆ  ಅಡ್ವಾಣಿ ಸಲಹೆ ಮಾಡಿದ್ದರು. ಅದಾಗಲೇ ಇಲ್ಲ. ಮೋದಿ ಅವರ ಆಪ್ತ ಅಮಿತ್ ಷಾ ಅವರನ್ನು ಪಕ್ಷದ ಪ್ರಧಾನ ಕಾರ್ಯದರ್ಶಿ ಆಗಿ ನೇಮಕ ಮಾಡಲಾಯಿತು. ಶಿವರಾಜ್ ಸಿಂಗ್ ಚೌಹಾಣ್ ಅವರ ಕಡು ವೈರಿ ಪ್ರಭಾತ್ ಝಾ ಅವರನ್ನು ಉಪಾಧ್ಯಕ್ಷರಾಗಿ ನೇಮಕವಾದರು.

ಈ ವರ್ಷದ ಕೊನೆಗೆ ನಡೆಯುವ ಮಧ್ಯಪ್ರದೇಶ ಮತ್ತು ಛತ್ತೀಸ್‌ಗಢ ವಿಧಾನಸಭೆ ಚುನಾವಣೆ ಮೋದಿ ವಿರೋಧಿಗಳ ಪಾಲಿಗೆ ಮಹತ್ವದ್ದು. ಶಿವರಾಜ್‌ಸಿಂಗ್ ಚವ್ಹಾಣ್ ಮತ್ತು ರಮಣ್‌ಸಿಂಗ್ ಹ್ಯಾಟ್ರಿಕ್ ಸಾಧಿಸಿದರೆ ಮೋದಿ ಅವರಿಗೆ ಪ್ರಬಲ ಪ್ರತಿಸ್ಪರ್ಧಿಗಳು ಹುಟ್ಟಿಕೊಳ್ಳುತ್ತಾರೆ. ಸಹಜವಾಗಿ ಮೋದಿ ಅವರ ವೇಗ ಕಡಿಮೆಯಾಗುತ್ತದೆ. ಗುಜರಾತಿನ ಮೂರು ಚುನಾವಣೆಗೆ ಹೋಲಿಕೆ ಮಾಡಿ ನೋಡಿದರೆ ಮೋದಿ ಜನಪ್ರಿಯತೆ ಕಡಿಮೆಯಾಗುತ್ತದೆ.

ವಿಧಾನಸಭೆಗೆ 2002ರಲ್ಲಿ ನಡೆದ ಚುನಾವಣೆಯಲ್ಲಿ ಮೋದಿ 127 ಸ್ಥಾನ ಪಡೆದಿದ್ದರು. 2007ರಲ್ಲಿ 117 ಸ್ಥಾನ ಗಳಿಸಿದರು. ಹೋದ ವರ್ಷ ಸಿಕ್ಕಿರುವುದು 115 ಸ್ಥಾನ. ಹಿಂದಿನ ಚುನಾವಣೆಗಿಂತ ಹೋದ ವರ್ಷ ಮುಗಿದ ಚುನಾವಣೆಯಲ್ಲಿ ಶೇ. 1ರಷ್ಟು ಮತ ಕಡಿಮೆ ಆಗಿದೆ. ಇವೆಲ್ಲದರ ನಡುವೆಯೂ ಮೋದಿ ಬಿಜೆಪಿಯ ಜನಪ್ರಿಯ ನಾಯಕ. ಮಾತಿನಲ್ಲೇ ಮೋಡಿ ಮಾಡುವ ಕಲೆ ಗೊತ್ತಿದೆ.  ಈ ಕಾರಣಕ್ಕೆ ಬಿಜೆಪಿ ಕೆಲವು ನಾಯಕರು ಮತ್ತು ಕಾರ್ಯಕರ್ತರು ಅವರ ಹಿಂದೆ ಬಿದ್ದಿದ್ದಾರೆ. ಕೇಂದ್ರದಲ್ಲಿ ದಶಕದಿಂದ ಅಧಿಕಾರವಿಲ್ಲದೆ ಸೋತು ಸುಣ್ಣವಾಗಿರುವ ಬಿಜೆಪಿಗೆ ಮೋದಿ ಅನಿವಾರ್ಯವಾಗಿರುವುದಕ್ಕೆ ಅಚ್ಚರಿ ಪಡಬೇಕಾಗಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.