ಪುಟ್ಟನ ಕೋಣೆಯ ಒಳಗೂ ಹೊರಗೂ
ಪುಸ್ತಕ ಚೆಲ್ಲಾಪಿಲ್ಲಿ
ದೊಡ್ಡಿಲಿ ಸಣ್ಣಿಲಿ ಪುಟ್ಟಿಲಿ ಮರಿಯಿಲಿ
ಸುತ್ತಾಡುತ್ತಿವೆ ಅಲ್ಲಲ್ಲಿ
ಯಾತಕ್ಕೆಂದರೆ ಪುಸ್ತಕದೊಳಗಡೆ
ತಿಂಡಿ ತಿನಿಸುಗಳ ಅವಶೇಷ
ಚಿಪ್ಸಿನ ಚೂರು ಲಡ್ಡಿನ ಬೂಂದು
ಕಳ್ಳೇಪುರಿಗಳ ಆವೇಶ
ಕೆಲ ಪುಟಗಳು ತೆರೆದಿವೆ
ಹಲ ಪುಟಗಳು ಹರಿದಿವೆ
ಬೋರಲು ಕೆಲವು
ಅಂಗಾತ ಹಲವು
ಮೂಷಿಕ ಸಭೆಯಲಿ
ದೊಡ್ಡಿಲಿ ಹೇಳಿತು: ಅಹ!
ಎಂಥಾ ಊಟ
ತೆಂಕಣಗಾಳಿಯಾಟ!
ಸಣ್ಣಿಲಿಯೆಂದಿತು: ಅಗೋಳಿ ಮಂಜಣ
ಅವ ನಮ್ಮವನೇ ಕಣ
ತಿಂದು ಮುಗಿಸಿದೆನು
ಕಂಡ ತಕ್ಷಣ!
ಪುಟ್ಟಿಲಿಯೆಂದಿತು: ಹೆಜ್ಜೆಯ ಹಾಕುತ
ಬನ್ನಿರಿ ಮುಂದಕೆ
ನೋಡಲು ದಸರೆಯ ಹಬ್ಬವನು
ಜಗಿದೇ ಬಿಟ್ಟೆನು ಕಬ್ಬಿಗಿಂತಲು ಸಿಹಿ ಈ ಕಬ್ಬವನು!
ಮರಿಯಿಲಿಯೆಂದಿತು: ಜಗಿಯಿರಿ ತಿನ್ನಿರಿ ಮೆಲ್ಲಿರಿ ಮಂಚಿರಿ
ಮಾಡಿರಿ ಏನು ಬೇಕಾದ್ರೂ – ಆದರೆ
ಬಿಟ್ಬಿಡಿ ನಂಗೆ
ಸೊಗಸಾದ ಮಕ್ಕಳ ಪದ್ಯವನು!
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.