ADVERTISEMENT

‘ಬಾಗಿಲಿನಿಂದ ದೂರವಿರಿ’

ರೋಹಿಣಿ ಮುಂಡಾಜೆ
Published 14 ಸೆಪ್ಟೆಂಬರ್ 2017, 19:30 IST
Last Updated 14 ಸೆಪ್ಟೆಂಬರ್ 2017, 19:30 IST
‘ಬಾಗಿಲಿನಿಂದ ದೂರವಿರಿ’
‘ಬಾಗಿಲಿನಿಂದ ದೂರವಿರಿ’   

ಸೆಪ್ಟೆಂಬರ್‌ 13, ಬುಧವಾರ ಸಂಜೆ 6.17.

ಮಹಾತ್ಮ ಗಾಂಧಿ ರಸ್ತೆಯಿಂದ ಮೈಸೂರು ರಸ್ತೆ ಮಾರ್ಗದ ಮೆಟ್ರೊ ರೈಲು ವಿಧಾನಸೌಧ ನಿಲ್ದಾಣ ದಾಟಿ ಒಂದೆರಡು ಸೆಕೆಂಡು ಆಗಿತ್ತು ಅಷ್ಟೇ. ಎಡಬದಿಯ ಬಾಗಿಲು ಒಂದು ಇಂಚಿನಷ್ಟು ತೆರೆದುಕೊಂಡಿತು! ರೈಲಿನಲ್ಲಿ ಕಿಕ್ಕಿರಿದ ಜನಸಂದಣಿಯೇನೂ ಇರಲಿಲ್ಲ. ಬಾಗಿಲಿಗೆ ಯಾರೂ ಒರಗಿ ನಿಂತೂ ಇರಲಿಲ್ಲ. ಒಬ್ಬ ಯುವಕ ಮಾತ್ರ ಬಾಗಿಲ ಮೇಲೆ ಒಂದು ಬೆರಳನ್ನು ಇರಿಸಿದ್ದ ಅಷ್ಟೇ!

ಯುವಕನೂ ಸೇರಿ, ಬಾಗಿಲ ಪಕ್ಕದಲ್ಲಿ ಇದ್ದುದು ಮೂರೇ ಮಂದಿ. ಒಬ್ಬ ಯುವತಿ, ಮತ್ತೊಬ್ಬ ಮಹಿಳೆ, ಆ ಯುವಕ. ಬಾಗಿಲು ಒಂದು ಇಂಚಿನಷ್ಟು ತೆರೆದುಕೊಂಡಿದ್ದನ್ನು ಕಂಡು ಅವರು ಅವಾಕ್ಕಾಗಿಬಿಟ್ಟಿದ್ದರು. ಬಾಗಿಲು ತೆರೆದುಕೊಳ್ಳುತ್ತಲೇ ಯುವತಿ, ಆ ಹುಡುಗನ ಕೈಯನ್ನು ಬಾಗಿಲಿನಿಂದ ರಪ್ಪನೆ ಸರಿಸಿ ಬಾಗಿಲು ಇನ್ನಷ್ಟು ತೆರೆದುಕೊಳ್ಳುವ ಅ‍ಪಾಯವನ್ನು ತಪ್ಪಿಸಿದಳು. ಕ್ಷಣಾರ್ಧದಲ್ಲಿ ಇವಿಷ್ಟು ನಡೆದುಹೋದುದರಿಂದ ಸುತ್ತಮುತ್ತಲಿನ ಪ್ರಯಾಣಿಕರ ಗಮನಕ್ಕೂ ಬರಲಿಲ್ಲ.

ADVERTISEMENT

ಆದರೆ ಚಲಿಸುತ್ತಿದ್ದ ರೈಲಿನ ಬಾಗಿಲು ತೆರೆದುಕೊಂಡ ಪರಿಣಾಮ ಮೆಟ್ರೊ ರೈಲಿನೊಳಗೆ ಸುರಕ್ಷಾ ಕ್ರಮಗಳ ನಿರ್ವಹಣೆ ಆಗುತ್ತಿಲ್ಲವೇ ಎಂಬ ಆತಂಕ ಪ್ರಯಾಣಿಕರಿಗೆ ಎದುರಾದುದಂತೂ ನಿಜ.

ಎಡಭಾಗದ ಬಾಗಿಲಿನ ಬದಿಯಲ್ಲಿರುವ ಸ್ಟೀಲ್‌ ಕಂಬಿ ಹಿಡಿದುಕೊಂಡು ನಿಂತಿದ್ದವ ಹೇಳುವ ಪ್ರಕಾರ, ಈ ರೀತಿ ಬಾಗಿಲು ತೆರೆದುಕೊಳ್ಳುವುದು ಅವರಿಗೆ ಹೊಸದೇನೂ ಅಲ್ಲವಂತೆ. ಮಹಾತ್ಮ ಗಾಂಧಿ ರಸ್ತೆಯಿಂದ ಮೈಸೂರು ರಸ್ತೆ ನಿಲ್ದಾಣಕ್ಕೆ ಪ್ರತಿನಿತ್ಯ ಪ್ರಯಾಣಿಸುವ ಇನ್ನೊಬ್ಬ ಯುವತಿ ಹೇಳುವಂತೆ, ಕೆಲ ದಿನಗಳ ಹಿಂದೆ ಚಲಿಸುತ್ತಿದ್ದ ರೈಲಿನ ಬಾಗಿಲನ್ನು ಯಾರೋ ತಮಾಷೆಗಾಗಿ ಎರಡೂ ಕೈಯಿಂದ ತೆರೆಯಲು ಯತ್ನಿಸಿದರಂತೆ. ಬಾಗಿಲು ಒಂದೂವರೆ ಅಡಿಯಷ್ಟು  ತೆರೆದುಕೊಂಡಿತಂತೆ! ಈ ಘಟನೆಯ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲ. ಆದರೆ ಮಂಗಳವಾರ ಸಂಜೆ ನಡೆದ ಘಟನೆಯ ಬಗ್ಗೆ ಪ್ರತ್ಯಕ್ಷದರ್ಶಿಗಳೇ ಮಾಹಿತಿ ನೀಡಿದ್ದಾರೆ.

ಅತ್ಯುನ್ನತ ಮಟ್ಟದ ಸುರಕ್ಷಾ ಕ್ರಮಗಳನ್ನು ಅಳವಡಿಸಿಕೊಳ್ಳಲಾಗಿದೆ ಎಂದು ನಂಬಲಾಗಿರುವ ‘ನಮ್ಮ ಮೆಟ್ರೊ’ ರೈಲಿನಲ್ಲಿ ಇಂತಹ ಘಟನೆಗಳು ನಡೆಯಲುಕಾರಣವೇನು ಎಂಬುದಕ್ಕೆ ಮೆಟ್ರೊ ರೈಲು ನಿಗಮವೇ ಉತ್ತರಿಸಬೇಕಾಗಿದೆ.

ಮಹಾತ್ಮಗಾಂಧಿ ರಸ್ತೆಯಲ್ಲಿ ಬಾಗಿಲು ಎಡಭಾಗಕ್ಕೆ ತೆರೆದುಕೊಳ್ಳುತ್ತದೆ. ಕೆಂಪೇಗೌಡ ನಿಲ್ದಾಣದಲ್ಲಿ ನಿರ್ಗಮನ ದ್ವಾರವೂ ಅದೇ ಆಗಿರುತ್ತದೆ. ಹಾಗಾಗಿ ಮಹಾತ್ಮಗಾಂಧಿ ರಸ್ತೆಯಲ್ಲಿ ಹತ್ತಿದ ಪ್ರಯಾಣಿಕರು ಸಾಮಾನ್ಯವಾಗಿ ಬಾಗಿಲ ಆಸುಪಾಸಿನಲ್ಲಿ, ವಿಶೇಷವಾಗಿ ಬಾಗಿಲಿನ ಹತ್ತಿರವೇ ನಿಂತಿರುತ್ತಾರೆ. ಇಳಿಸಂಜೆಯ ಪೀಕ್ ಅವರ್‌ನಲ್ಲೂ ಕಬ್ಬನ್‌ ಪಾರ್ಕ್‌ ನಿಲ್ದಾಣದಲ್ಲಿ ಹತ್ತುವವರ ಸಂಖ್ಯೆ ಕಡಿಮೆಯಿರುತ್ತದೆ. ಆದರೆ ವಿಧಾನಸೌಧ ಮತ್ತು ಮುಂದಿನ ಸರ್.ಎಂ.ವಿಶ್ವೇಶ್ವರಯ್ಯ ನಿಲ್ದಾಣದಲ್ಲಿ ಮಾತ್ರ ಒಂದೊಂದು ಬೋಗಿಗೂ ಕನಿಷ್ಠ 25ರಿಂದ 30 ಮಂದಿ ಹತ್ತುತ್ತಾರೆ.

ಎಂ.ಜಿ.ರಸ್ತೆಯಿಂದ ಅಲ್ಲಿವರೆಗೂ ನಿರಾಳವಾಗಿರುವ ರೈಲು ಒಮ್ಮಿಂದೊಮ್ಮೆಲೇ ಜನನಿಬಿಡವಾಗಿ ಬಿಡುತ್ತದೆ. ಬಾಗಿಲಿಗೆ ಆತುಕೊಂಡು ನಿಂತುಕೊಳ್ಳುವ ಪರಿಸ್ಥಿತಿಯೂ ಎದುರಾಗುತ್ತದೆ. ಆದರೆ ಬುಧವಾರ ಬಾಗಿಲು ತೆರೆದುಕೊಂಡ ವೇಳೆ ಎರಡು ಮತ್ತು ಮೂರನೆಯ ಬೋಗಿಯಲ್ಲಿ ಜನಸಂದಣಿಯೇ ಇರಲಿಲ್ಲ. ಎಲ್ಲರೂ ಆರಾಮವಾಗಿ ನಿಂತಿದ್ದರು. ಹಾಗಾಗಿ ಅತಿಯಾದ ಸಂದಣಿ ಇರುವಾಗ ಸಾಮಾನ್ಯವಾಗಿ ಕಾಣುವಂತಹ ಒತ್ತಡ ಬಾಗಿಲ ಬಳಿ ಇರಲಿಲ್ಲ.

ಮೂರು ದಿನಗಳ ಹಿಂದೆ ರಾತ್ರಿ 10ಕ್ಕೆ ದೆಹಲಿಯ ಚೌರಿ ಬಜಾರ್‌ನಿಂದ ಕಾಶ್ಮೀರಿ ಗೇಟ್‌ಗೆ ಸಂಚರಿಸುತ್ತಿದ್ದ ಮೆಟ್ರೊ ರೈಲಿನ ಬಾಗಿಲು ತೆರೆದುಕೊಂಡು ಭಾರಿ ಸಂಚಲನ ಮೂಡಿಸಿತ್ತು. ಆ ಘಟನೆ ಮರೆಯುವ ಮೊದಲೇ ‘ನಮ್ಮ ಮೆಟ್ರೊ’ದಲ್ಲಿ ಅಪಾಯದ ಕರೆಗಂಟೆ ಬಾರಿಸಿದೆ.

‘ಮೆಟ್ರೊ ರೈಲು ನಿಗಮ ಇಂತಹ ಅಚಾತುರ್ಯಗಳ ಬಗ್ಗೆ ತಕ್ಷಣ ಗಮನ ಕೊಡಬೇಕಲ್ವಾ?’ ಎಂಬ, ಬಾಗಿಲ ಬಳಿ ನಿಂತಿದ್ದ ಯುವಕನ ಪ್ರಶ್ನೆ ಸಕಾಲಿಕವಾಗಿತ್ತು. ಅದೇನೇ ಇರಲಿ, ಪ್ರಯಾಣಿಕರೇ ನೆನಪಿಡಿ.. ನೀವು ಮೆಟ್ರೊ ರೈಲು ಪ್ರಯಾಣಿಕರಾಗಿದ್ದರೆ ದಯವಿಟ್ಟು ಬಾಗಿಲಿನಿಂದ ದೂರವಿರಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.