ADVERTISEMENT

ಬಾಯಿ ಬಿಡಲಿಲ್ಲ: ಹೌದೌದು ಹುಲಿ!

ಡಿ.ಬಿ, ನಾಗರಾಜ
Published 25 ನವೆಂಬರ್ 2017, 19:30 IST
Last Updated 25 ನವೆಂಬರ್ 2017, 19:30 IST

ವಿಜಯಪುರ: ‘ರಾಜ್ಯದ ರೈತರ ಸಾಲ ಮನ್ನಾ ಮಾಡುವಂತೆ ಒತ್ತಾಯಿಸಲಿಕ್ಕಾಗಿ, ಈ ಹಿಂದೆ ಪ್ರಧಾನಿ ನರೇಂದ್ರ ಮೋದಿ ಬಳಿಗೆ ಸರ್ವಪಕ್ಷ ನಿಯೋಗದಲ್ಲಿ ಹೋಗಿ ಸಾಲ ಮನ್ನಾ ಮಾಡಿ ಎಂದು ಕೈಮುಗಿದು ಮನವಿ ಮಾಡಿದೆ. ಆ ಪುಣ್ಯಾತ್ಮ ಏನೂ ಹೇಳ್ಲಿಲ್ಲ. ನಿಯೋಗದಲ್ಲಿದ್ದ ಬಿಜೆಪಿ ‘ಗಿರಾಕಿಗಳು’ ಸಹ ತುಟಿ ಪಿಟಕ್ ಅನ್ಲಿಲ್ಲ. ಏನಾದ್ರೂ ಹೇಳ್ರಯ್ಯಾ ಅಂದ್ರೂ ಒಬ್ರೂ ಪ್ರಧಾನಿ ಎದುರು ತುಟಿ ಬಿಚ್ಚಲಿಲ್ಲ...’

ಮುಖ್ಯಮಂತ್ರಿ ಸಿದ್ದರಾಮಯ್ಯ ಶನಿವಾರ ಚಡಚಣ ಪಟ್ಟಣದಲ್ಲಿ ನಡೆದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ, ಉದ್ಘಾಟನೆ ಸಮಾರಂಭದಲ್ಲಿ ಬಿಜೆಪಿ ಮುಖಂಡ ರನ್ನು ತರಾಟೆಗೆ ತೆಗೆದುಕೊಂಡ ಪರಿಯಿದು...

ಬಿಜೆಪಿ ಮುಖಂಡರಾದ ಕೇಂದ್ರ ಸಚಿವ ಅನಂತಕುಮಾರ್, ಬಿ.ಎಸ್‌.ಯಡಿಯೂರಪ್ಪ, ಕೆ.ಎಸ್‌.ಈಶ್ವರಪ್ಪ, ಜಗದೀಶ ಶೆಟ್ಟರ್‌, ಶೋಭಾ ಕರಂದ್ಲಾಜೆ, ಜೆಡಿಎಸ್‌ ಮುಖಂಡ ಎಚ್‌.ಡಿ.ರೇವಣ್ಣ ಅವರ ಹೆಸರನ್ನು ಸಿದ್ದರಾಮಯ್ಯ ವ್ಯಂಗ್ಯದ ಧಾಟಿಯಲ್ಲಿ ಪ್ರಸ್ತಾಪಿಸುತ್ತಿದ್ದಂತೆ ನೆರೆದಿದ್ದ ಜನಸ್ತೋಮ ಕೇಕೆ ಹಾಕಿ ಹರ್ಷೋದ್ಗಾರ ಮಾಡಿತು.

ADVERTISEMENT

ಇದರಿಂದ ಮತ್ತಷ್ಟು ಉತ್ತೇಜಿತರಾದ ಮುಖ್ಯಮಂತ್ರಿ, ಬಿಜೆಪಿಗರ ವಿರುದ್ಧ ಟೀಕಾ ಪ್ರಹಾರ ಮುಂದುವರೆಸಿದರು. ‘ರಾಜ್ಯದ ಬಿಜೆಪಿಗರು ಉತ್ತರ ಕುಮಾರನ ಪೌರುಷ ಪ್ರದರ್ಶಿಸಿದ್ದಾರೆ. ತಮ್ಮಿಂದ ಏನೂ ಆಗಲ್ಲ ಅಂತ, ಮೋದಿ– ಅಮಿತ್‌ ಷಾ ಅವರನ್ನು ಕರ್ಕೊಂಡು ಬರ್ತಾರಂತೆ. ಆಗ ನೀವೆಲ್ಲಾ ಅವರನ್ನು ಸಾಲ ಮನ್ನಾ ಕುರಿತಂತೆ ಪ್ರಶ್ನಿಸಿ’ ಎಂದು ಸಿದ್ದರಾಮಯ್ಯ ಹೇಳುತ್ತಿದ್ದಂತೆ, ಸಭಿಕರಿಂದ ‘ಹೌದೌದು ಹುಲಿ..!’ ಎಂಬ ಉದ್ಗಾರ ಕೇಳಿ ಬಂತು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.