ADVERTISEMENT

ಭಯದ ನಿರಂತರತೆ

‘ಗೂಂಡಾ ಕಾಯ್ದೆ’ ವಿಸ್ತರಣೆ

ಕೆ.ವಿ.ಧನಂಜಯ
Published 15 ಆಗಸ್ಟ್ 2014, 19:30 IST
Last Updated 15 ಆಗಸ್ಟ್ 2014, 19:30 IST

ದಶಕದ ಹಿಂದೆ ನೋಡಿದ ಒಂದು  ಬಾಲಿವುಡ್‌ ಚಲನಚಿತ್ರ ನನಗೆ ಇನ್ನೂ ನೆನಪಿದೆ. ಆ ಚಲನಚಿತ್ರವನ್ನು ಟಿ.ವಿ. ವಾಹಿನಿಗಳು ಆಗಾಗ ಪ್ರಸಾರ ಮಾಡುತ್ತಿರುತ್ತವೆ. ಆಸ್ಕರ್‌ ಪ್ರಶಸ್ತಿ ವಿಜೇತ ನಿರ್ದೇಶಕ ಸ್ಟೀವನ್‌ ಸ್ಪಿಲ್ಬರ್ಗ್ ಅವರ ‘ಮೈನಾರಿಟಿ ರಿಪೋರ್ಟ್‌’ ಎಂಬ ಚಿತ್ರ ಅದು. ಅದರಲ್ಲಿ, ಪೊಲೀಸರು ಅತೀಂದ್ರಿಯ ಶಕ್ತಿ ಇರುವವರ ಸಹಾಯ ಪಡೆದು ಎಲ್ಲ ಬಗೆಯ ಅಪರಾಧ ಚಟುವಟಿಕೆಗಳನ್ನು ತಡೆ­ಯು­ತ್ತಾರೆ. ಅತೀಂದ್ರಿಯ ಶಕ್ತಿ ಹೊಂದಿರುವವರು ಮುಂದೆ ಆಗುವ ಅಪರಾಧ ಚಟುವಟಿ ಕೆಗಳನ್ನು ಕಂಡು ಅದನ್ನು ಪೊಲೀಸ­ರಿಗೆ ತಿಳಿಸುತ್ತಾರೆ. ಭವಿಷ್ಯ ದಲ್ಲಿ ಅಪರಾಧ ಎಸಗು­ವವರನ್ನು ಪೊಲೀಸರು ಬಂಧಿಸಿ, ಅಹಿತಕರ ಘಟನೆಗಳನ್ನು ತಡೆಯುತ್ತಾರೆ.

ಈ ಚಲನಚಿತ್ರದಲ್ಲಿ ಪೊಲೀಸರು, ಅಪರಾಧ ಮಾಡುತ್ತಾರೆ ಎನ್ನಲಾದವರನ್ನು ಅಪರಾಧ ಘಟಿಸುತ್ತದೆ ಎನ್ನಲಾದ ಅವಧಿಯವರೆಗೆ ಮಾತ್ರ ಬಂಧನದಲ್ಲಿ ಇಟ್ಟುಕೊಳ್ಳುತ್ತಾರೆ. ಆ ಅವಧಿ ಕಳೆದ ನಂತರ ಅವರು ಬಂಧಮುಕ್ತರು. ಈಗ ಆ ಸಿನಿಮಾದಲ್ಲಿ ಅತೀಂದ್ರಿಯಶಕ್ತಿ ಹೊಂದಿರುವವರ ಜಾಗದಲ್ಲಿ ರಾಜ್ಯದ ಪೊಲೀಸರನ್ನು ಇಟ್ಟು ನೋಡಿ. ಆಗ ಇತ್ತೀಚೆಗೆ ತಿದ್ದು ಪಡಿ ಕಂಡ ಗೂಂಡಾ ಕಾಯ್ದೆಯ ಪರಿಣಾಮ ಗೊತ್ತಾಗುತ್ತದೆ. ಈ ಕಾಯ್ದೆ ಉದ್ದವಾದ ಹೆಸರು ಹೊಂದಿದೆ. ಆದರೆ ಸದ್ಯಕ್ಕೆ ಇದನ್ನು ‘ಗೂಂಡಾ ಕಾಯ್ದೆ’ ಎಂದು ಕರೆಯೋಣ.

ಈ ಕಾಯ್ದೆಗೆ ಇತ್ತೀಚೆಗೆ ತಂದಿರುವ ತಿದ್ದುಪಡಿಗಿಂತ ಹೆಚ್ಚಿನ ಅಪಾಯಕಾರಿಯಾದ, ವಿವೇಚನಾರಹಿತವಾದ ಇನ್ನೊಂದು ತಿದ್ದುಪಡಿ ನನಗೆ ತಿಳಿದಿಲ್ಲ. ಸಾಮಾನ್ಯವಾಗಿ, ಅಪ­ರಾಧ ಚಟು ವಟಿಕೆ ನಡೆದ ನಂತರ ಕಾಯ್ದೆಯ ಅನ್ವಯ ಕ್ರಮ ಕೈಗೊಳ್ಳುವ ಪ್ರಕ್ರಿಯೆ ಆರಂಭವಾಗುತ್ತದೆ. ಆದರೆ ಗೂಂಡಾ ಕಾಯ್ದೆ ಅನ್ವಯ ಕೇವಲ ಅನುಮಾನದ ಆಧಾರದಲ್ಲಿ ನಾಗರಿಕರನ್ನು ಬಂಧನದಲ್ಲಿಡುವ ಅಧಿಕಾರ ಸರ್ಕಾರಕ್ಕಿದೆ. ಬಂಧನದ ಅವಧಿ ಯನ್ನು ಮೂರು ತಿಂಗಳುಗಳಿಂದ ಒಂದು ವರ್ಷದವರೆಗೆ ವಿಸ್ತರಿಸಬಹುದು.

ಹೊಸದಾಗಿ ತಂದಿರುವ ತಿದ್ದುಪಡಿ ಅನ್ವಯ ಯಾವುದೇ ಸ್ಮಾರ್ಟ್‌ಫೋನ್‌ ಬಳಕೆದಾರ, ತಾನು ಅದನ್ನು ಬಳಸಿ ದಿನನಿತ್ಯ ಮಾಡುವ ಕಾರ್ಯಗಳನ್ನು ಮಾಡಿಕೊಂಡಿದ್ದರೆ ಬಂಧನಕ್ಕೆ ಒಳಗಾಗುವ ಅಪಾಯ ಇದೆ. ಒಂದು ಹಾಡು ಅಥವಾ ಯಾವುದೇ ಹಕ್ಕುಸ್ವಾಮ್ಯ (ಕಾಪಿರೈಟ್‌) ಇರುವ ಕಡತವನ್ನು ವಾಟ್ಸ್‌ಆ್ಯಪ್‌, ಫೇಸ್‌ಬುಕ್‌ ಬಳಸಿ ಇನ್ನೊಬ್ಬರಿಗೆ ಕಳುಹಿಸಿದರೆ ಹಾಗೆ ಮಾಡಿದ ವ್ಯಕ್ತಿಯನ್ನು ಈ ತಿದ್ದುಪಡಿ ಮಸೂದೆ­ ಅನ್ವಯ ಬಂಧಿಸಬಹುದು.

ಇನ್ನೂ ಗಂಭೀರವಾದ ವಿಚಾರ­ವೊಂದಿದೆ. ವ್ಯಕ್ತಿ, ಹಕ್ಕುಸ್ವಾಮ್ಯ ಇರುವ ಕಡತವನ್ನು ಇನ್ನೊ­ಬ್ಬರಿಗೆ ಕಳುಹಿಸಿರಲೇಬೇಕು ಎಂದಿಲ್ಲ. ಆ ವ್ಯಕ್ತಿ ಹಕ್ಕುಸ್ವಾಮ್ಯ ಇರುವ ಕಡತವನ್ನು ಭವಿಷ್ಯದಲ್ಲಿ ಇನ್ನೊಬ್ಬರಿಗೆ ಕಳುಹಿಸುವ ಉದ್ದೇಶ ಹೊಂದಿದ್ದಾನೆ ಎಂದು ಸರ್ಕಾರಕ್ಕೆ ಮನವರಿಕೆ­ಯಾದರೆ ಸಾಕು. ಆ ಅನುಮಾನದ ಆಧಾರದಲ್ಲಿ ವ್ಯಕ್ತಿಯನ್ನು ಬಂಧಿಸಬಹುದು. ಭಾರತದ ಸಂವಿಧಾನ ಸ್ಪಷ್ಟ­ವಾಗಿ ಹೇಳುವ ಒಂದು ಮಾತಿದೆ. ಹಕ್ಕುಸ್ವಾಮ್ಯ ಮತ್ತು ಟೆಲಿಕಾಂ ವ್ಯಾಪ್ತಿಗೆ ಸಂಬಂಧಿಸಿದ ಕಾನೂನು ರೂಪಿಸುವ ಅಧಿಕಾರ ಸಂಸತ್ತಿಗೆ ಮಾತ್ರ ಇದೆ.

ಮಾಹಿತಿ ತಂತ್ರಜ್ಞಾನ ಕಾಯ್ದೆ– 2000ದ ಅಡಿ ನಿಷೇಧಿ ಸಲಾದ ಕೆಲವು ಕೃತ್ಯಗಳು ತಿದ್ದುಪಡಿ ಕಂಡಿರುವ ಗೂಂಡಾ ಕಾಯ್ದೆ ಅನ್ವಯವೂ ಶಿಕ್ಷಾರ್ಹ. ಸಂವಿಧಾನವನ್ನು ಸೂಕ್ಷ್ಮವಾಗಿ ಓದಿಕೊಂಡಿರದ ವ್ಯಕ್ತಿಗಳು ಗೂಂಡಾ ಕಾಯ್ದೆಗೆ ಇಂಥ­ದೊಂದು ತಿದ್ದುಪಡಿ ತರುವಂತೆ ಸಲಹೆ ನೀಡಿರಬೇಕು. ಕೇಂದ್ರ ಸರ್ಕಾರದ ವ್ಯಾಪ್ತಿಗೆ ಮಾತ್ರ ಬರುವ ಕೆಲವು ವಿಚಾರ­ಗಳೂ ಈ ತಿದ್ದುಪಡಿ ಯಲ್ಲಿ ಸೇರಿವೆ, ಅವು­ಗಳನ್ನು ಶಿಕ್ಷಾರ್ಹ ಅಪರಾಧಗಳನ್ನಾಗಿ ವ್ಯಾಖ್ಯಾನಿ­ಸಲಾಗಿದೆ. ರಾಜ್ಯ ಸರ್ಕಾರ ಈಗ ತಂದಿರುವ ತಿದ್ದುಪಡಿ ವಿವೇಚನೆಯಿಲ್ಲದ್ದು ಎಂದು ಯಾವುದೇ ಸಂವಿಧಾನ ತಜ್ಞ ಹೇಳಬಲ್ಲ.

ತಿದ್ದುಪಡಿಯಲ್ಲಿರುವ ‘ಡಿಜಿಟಲ್‌ ಅಪರಾಧಿ’ ಪದದ ವ್ಯಾಖ್ಯಾನವನ್ನು ಸೂಕ್ಷ್ಮವಾಗಿ ಪರಿಶೀಲಿ­ಸಬೇಕು. ಹಕ್ಕುಸ್ವಾಮ್ಯ ಹೊಂದಿರುವ ಯಾವುದೇ ಕಡತವನ್ನು (ಹಾಡು, ದೃಶ್ಯಾವಳಿ ಇತ್ಯಾದಿ) ಇನ್ನೊಬ್ಬರಿಗೆ ‘ವಾಣಿಜ್ಯ ಉದ್ದೇಶಕ್ಕೆ’ ರವಾನಿಸುವ ವ್ಯಕ್ತಿಯನ್ನು ಮುಂಜಾಗರೂಕತಾ ಕ್ರಮವಾಗಿ ಬಂಧಿಸಬಹುದು ಎಂದು ಇದು ಹೇಳುತ್ತದೆ.

‘ವಾಣಿಜ್ಯ ಉದ್ದೇಶ’ ಎಂಬ ಪದಗಳ ಅರ್ಥ ವಿಸ್ತೃತವಾಗಿದೆ. ಹಣ ನೀಡಿ ಕೊಳ್ಳಬಹುದಾದ  ಹಾಡು ಅಥವಾ ಇನ್ಯಾವುದೇ ಕಡತವನ್ನು ವ್ಯಕ್ತಿಯೊಬ್ಬ ಅಂತ ರ್ಜಾಲದಿಂದ ಉಚಿತವಾಗಿ ಡೌನ್‌ಲೋಡ್‌ ಮಾಡಿಕೊಂಡರೆ, ಆತ ಅದನ್ನು ಇನ್ನೊಬ್ಬರಿಗೆ ಮಾರಿ ಲಾಭ ಮಾಡಿಕೊಳ್ಳುವ ಉದ್ದೇಶ ಹೊಂದಿರದಿದ್ದರೂ, ಅದು ‘ವಾಣಿಜ್ಯ ಉದ್ದೇಶ’ಕ್ಕೆ ಮಾಡಿದ ಕೃತ್ಯ­ವಾಗುತ್ತದೆ.

ಉಚಿತವಾಗಿ ಡೌನ್‌ ಲೋಡ್‌ ಮಾಡಿ ಹಣ ಉಳಿಸುವ ಉದ್ದೇಶ ಆತನಿಗೆ ಇತ್ತು ಎಂದು ವ್ಯಾಖ್ಯಾನಿಸಿ, ತಿದ್ದುಪಡಿ ಕಂಡ ಗೂಂಡಾ ಕಾಯ್ದೆಯನ್ನು ಆತನಿಗೆ ಅನ್ವಯ ಮಾಡಬಹುದು. ಜಾಮೀನು ಇಲ್ಲದೆ ಜೈಲಿನಲ್ಲಿ ಕಳೆಯುವಂತೆ ಮಾಡುವ, ಅಂತರ್ಜಾಲ ಬಳಕೆದಾರರ ಸಮೂಹವನ್ನೇ ಭೀತಿಗೆ ನೂಕುವ ಇಂಥ ಕಾನೂನನ್ನು ನಾನು ಎಲ್ಲೂ ಕಂಡಿಲ್ಲ.

‘ಇಂಥ ಆಘಾತಕಾರಿ ಪರಿಣಾಮಗಳನ್ನು ಈ ತಿದ್ದುಪಡಿಯ ಮೂಲಕ ಸೃಷ್ಟಿಸಬೇಕು ಎಂಬ ಉದ್ದೇಶ ತನಗಿರಲಿಲ್ಲ’ ಎಂದು ಸರ್ಕಾರ ಹೇಳಿಕೊಳ್ಳಬಹುದು. ಆದರೆ ಶಾಸನ ರಚಿಸುವವರ ಮೂಲ ಉದ್ದೇಶ ಏನಿತ್ತು ಎಂಬುದು ಪ್ರಮುಖವಾಗುವುದಿಲ್ಲ. ‘ಕುದುರೆ’ ಕದಿಯುವುದನ್ನು ಅಪರಾಧ ಎಂದು ಘೋಷಿಸುವ ಕಾಯ್ದೆ ರೂಪಿಸುವ ಉದ್ದೇಶ ಇಟ್ಟುಕೊಂಡು, ‘ಕತ್ತೆ’ ಕದಿ­ಯುವುದನ್ನು ಅಪರಾಧವೆನ್ನುವ ಕಾಯ್ದೆ ತಂದರೆ? ಕಾಯ್ದೆ­ಯನ್ನು ಅನುಷ್ಠಾನಕ್ಕೆ ತರುವ ಸಂಸ್ಥೆಗಳು ಮತ್ತು ನ್ಯಾಯಾಲ­ಯಗಳು ಕಾನೂನು ರೂಪಿಸುವವರ ಉದ್ದೇಶ ಏನಿತ್ತು ಎಂಬುದನ್ನು ಗಮನಿಸುವು­ದಿಲ್ಲ.

ಗೂಂಡಾ ಕಾಯ್ದೆಯು ಕ್ರಿಮಿನಲ್‌ ಚಟುವಟಿಕೆಗೆ ಸಂಬಂಧಿಸಿದ್ದಾದ ಕಾರಣ, ಕಾಯ್ದೆಯ ಅನುಷ್ಠಾನ ಸಂದರ್ಭ­ದಲ್ಲಿ, ಅದನ್ನು ರೂಪಿಸಿ­ದವರ ಉದ್ದೇಶ ಏನಿತ್ತು ಎಂಬುದು ಪ್ರಾಮುಖ್ಯ ಪಡೆಯು­ವುದಿಲ್ಲ. ಹಾಗಾಗಿ ‘ಕತ್ತೆ’ ಕದಿಯುವವರ ವಿರುದ್ಧ ಕಾನೂನು ಕ್ರಮ ಆರಂಭವಾಗುತ್ತದೆ.

ಈಗ ಈ ತಿದ್ದುಪಡಿಯ ಇನ್ನೊಂದು ವಿವಾದಾತ್ಮಕ ಅಂಶವನ್ನು ಪರಿಗಣಿಸೋಣ. ತಿದ್ದುಪಡಿ ಅನ್ವಯ ಅತ್ಯಾಚಾರಿಯನ್ನು ಈ ಕಾಯ್ದೆಯಡಿ ಬಂಧಿಸಿ, ಒಂದು ವರ್ಷದವರೆಗೆ ವಿಚಾರಣೆ­ಯಿಲ್ಲದೆ ಜೈಲುವಾಸ ಅನುಭವಿಸುವಂತೆ ಮಾಡಬಹುದು. ಆದರೆ, ತಿದ್ದುಪಡಿ ಅನ್ವಯ ಪ್ರಕರಣ ದಾಖಲಿಸಲು ವ್ಯಕ್ತಿ­ಯೊಬ್ಬ ಅತ್ಯಾ­ಚಾರ ನಡೆಸಿ­ರಲೇಬೇಕು ಎಂಬ ನಿಯಮ ಇಲ್ಲ.

ಒಬ್ಬ ವ್ಯಕ್ತಿ ಅತ್ಯಾಚಾರ ನಡೆಸಬ ಹುದು ಎಂದು ಸರ್ಕಾರ ಭಾವಿಸಿದರೆ ಸಾಕು. ವ್ಯಕ್ತಿಯೊಬ್ಬ ಅತ್ಯಾ­ಚಾರ ನಡೆಸ­ಬಹುದು ಎಂದು ಸರ್ಕಾರ ಯಾವ ಆಧಾರ­ದಲ್ಲಿ ಸಂದೇಹ­­ಪಡ­ಬ­ಹುದು? ಈ ತಿದ್ದು­ಪಡಿಯನ್ನು ­ಶುದ್ಧ ಅವಿವೇಕ ಎಂದು ಕರೆಯ­ಬೇಕು. ಸಾಮಾ­ನ್ಯ­­ನೊಬ್ಬ­ನ ಮನೆ ಬಾಗಿಲು ತಟ್ಟಿ ‘ನೀನು ಮುಂದಿನ 12 ತಿಂಗಳಲ್ಲಿ ಯಾರ ಮೇಲೂ ಅತ್ಯಾಚಾರ ಮಾಡು­ವುದಿಲ್ಲ ಎಂಬು­ದಕ್ಕೆ ಖಾತರಿ ಏನು?’ ಎಂದು ಸರ್ಕಾರ ಪ್ರಶ್ನಿಸಬ­ಹುದು. ಯಾವುದೇ ವ್ಯಕ್ತಿ ಮುಂದೊಂದು ವರ್ಷದಲ್ಲಿ ಅತ್ಯಾಚಾರ ನಡೆಸಬಹುದು ಎಂಬ ಬಲವಾದ ವಾದವನ್ನು ಮಂಡಿ­ಸುವುದು ಸುಲಭ.

ಒಂದು ವರ್ಷದ ಅವಧಿಯಲ್ಲಿ ಅತ್ಯಾಚಾರ ಮಾಡ­ದಿ­ರು­ವು­ದೊಂದೇ ಇಂಥ ವಾದವನ್ನು ಸೋಲಿಸಲು ಇರುವ ಮಾರ್ಗ. ಪ್ರಶ್ನೆಯೇ ದೋಷ­ಯುಕ್ತವಾಗಿದ್ದರೆ ಅದಕ್ಕೆ ಸಮಾ­ಧಾನಕರ ಉತ್ತರ ನೀಡು­ವುದು ಸಾಧ್ಯವಿಲ್ಲ. ಆಗ ಆ ಪ್ರಶ್ನೆಯನ್ನೇ ಪ್ರಶ್ನಿಸಬೇಕಾಗುತ್ತದೆ– ‘ವ್ಯಕ್ತಿಯೊಬ್ಬ ಇನ್ನೊಬ್ಬ ವ್ಯಕ್ತಿಯ ಮೇಲೆ ಅತ್ಯಾಚಾರ ನಡೆಸುತ್ತಾನೆ ಎಂದು ಯಾವ ಆಧಾರದಲ್ಲಿ ಹೇಳು ವುದು?’ ಎಂಬ ಪ್ರಶ್ನೆ ಕೇಳಬೇಕಾಗುತ್ತದೆ.

ಆದರೆ ಈ ತಿದ್ದುಪಡಿಯ ಅಡಿ ನೀವು ಇಂಥ ಮರುಪ್ರಶ್ನೆಯನ್ನು ಮುಂದಿ­ಡುವ ಅವಕಾಶ ಇಲ್ಲ. ಸಮಸ್ಯೆ ಇರುವುದೇ ಇಲ್ಲಿ. ವ್ಯಕ್ತಿಯೊಬ್ಬ ಅತ್ಯಾಚಾರ ನಡೆಸ ಬಹುದು ಎಂಬ ಗುಮಾನಿ ಸರ್ಕಾರಕ್ಕೆ  ಬಂದರೆ ಸಾಕು, ಆತನನ್ನು ಗರಿಷ್ಠ ಒಂದು ವರ್ಷದವರೆಗೆ ಬಂಧಿಸಿಡ­­ಬಹುದು. ಅತ್ಯಾಚಾರ ಎಂಬುದು ಉದ್ರೇಕದಿಂದ ಆಗುವ ಕೃತ್ಯ.

ಮುಂಜಾ­ಗರೂಕತೆಯ ಬಂಧನದಂತಹ ಕ್ರಮಗಳನ್ನು ಅತ್ಯಾಚಾರದಂಥ ಅಪರಾಧಗಳ ತಡೆಗೆ ಬಳಸಿಕೊಳ್ಳುವುದು ಎಳ್ಳಷ್ಟೂ ಸರಿಯಲ್ಲ. ಶಿಕ್ಷೆಗೊಳಗಾದ ಅತ್ಯಾಚಾರಿಯೊಬ್ಬ ಮತ್ತೆ ಅದೇ ಕೃತ್ಯ ಎಸಗಬಹುದು ಎಂಬ ಆತಂಕ ಸರ್ಕಾರಕ್ಕೆ ಇದ್ದರೆ, ಅಂಥ ವ್ಯಕ್ತಿಗಳ ವಿಚಾರಣೆಗೆ ಪ್ರತ್ಯೇಕ ಕಾಯ್ದೆ ರೂಪಿಸಬಹುದು. ಅತ್ಯಾಚಾ­ರದಂಥ ಅಪ­ರಾಧವನ್ನು ‘ಮುಂಜಾಗ­ರೂ­ಕತೆಯಿಂದ ಬಂಧಿಸುವ ಅವಕಾಶ’ ನೀಡುವ ಕಾಯ್ದೆಯ ವ್ಯಾಪ್ತಿಗೆ ತರುವುದು ತಪ್ಪು. ಈ ತಿದ್ದುಪಡಿ ಯಾರಿಗೂ ರಕ್ಷಣೆ ನೀಡಲಾರದು.

ಅತ್ಯಾ­ಚಾರದಂಥ ಉದ್ರಿಕ್ತ ಸ್ಥಿತಿಯಲ್ಲಿ ನಡೆಯುವ ಅಪ­ರಾಧಗಳನ್ನು ‘ಮುನ್ನೆಚ್ಚರಿ­ಕೆಯ ಬಂಧನ’ಕ್ಕೆ ಅವಕಾಶ ನೀಡುವ ಕಾಯ್ದೆಯ ವ್ಯಾಪ್ತಿಗೆ ತರಲು ಸಂವಿಧಾನ ಅವಕಾಶ ನೀಡು­ವುದಿಲ್ಲ. ಶಿಕ್ಷೆಗೆ ಒಳ­ಗಾದ ವ್ಯಕ್ತಿಗಳು ಅಂತಹ ಕೃತ್ಯವನ್ನು ಪುನಃ ಎಸ­ಗುವ ಸಾಧ್ಯತೆ ಇದ್ದಾಗ, ಅವರನ್ನು ಇಂಥ ಕಾಯ್ದೆಗಳ ವ್ಯಾಪ್ತಿಗೆ ತರಬಹುದು.

ಗೂಂಡಾ ಕಾಯ್ದೆ ಮತ್ತೆ ಮತ್ತೆ ಅಪರಾಧ ಕೃತ್ಯ ಎಸಗುವ ವ್ಯಕ್ತಿಗಳ ವಿರುದ್ಧ ಮಾತ್ರ ಎಂದು ರಾಜ್ಯ ಸಂಪುಟದ ಹಿರಿಯ ಸದಸ್ಯರು ಸ್ಪಷ್ಟನೆ ನೀಡಿದ್ದಾರೆ. ವಿಧಾನ ಮಂಡಲದ ಉಭಯ ಸದನಗಳ ಅನುಮೋದನೆ ಪಡೆದುಕೊಂಡಿರುವ ತಿದ್ದುಪಡಿ ಮಸೂದೆಯನ್ನು ಅವರು ಓದಿಯೇ ಇಲ್ಲ ಎನ್ನಬೇಕಾಗುತ್ತದೆ. ತಿದ್ದುಪಡಿಯಲ್ಲಿ 12 ಬಗೆಯ ಅಪರಾಧಗಳ ಬಗ್ಗೆ ಹೇಳ­ಲಾಗಿದೆ.

ಇದರಲ್ಲಿ 11 ಬಗೆಯ ಅಪರಾಧಗಳು ‘ಪುನರಾ­ವರ್ತನೆಯಾಗುವ ಅಪರಾಧ’ ಅಲ್ಲ. ‘ಬೀದಿ ಗೂಂಡಾ’ ವ್ಯಾಖ್ಯಾನ ಮಾತ್ರ ಇದರ ವ್ಯಾಪ್ತಿಗೆ ಬರುತ್ತದೆ. ಹಾಗಾಗಿ, ಈ ತಿದ್ದುಪಡಿ ಪದೇ ಪದೇ ಅದೇ ತಪ್ಪು ಮಾಡುವವರಿಗೆ ಮಾತ್ರ ಅನ್ವಯವಾಗುತ್ತದೆ ಎಂದು ಸಚಿವರು ಹೇಳಿದರೆ, ‘ಅದನ್ನು ಸರಿ­ಯಾಗಿ ಓದಿದ್ದೀರಾ’ ಎಂದು ಕೇಳಬೇಕಾಗುತ್ತದೆ. ಬೀದಿ ಗೂಂಡಾ­ಗಳು ಮತ್ತು ಬೀದಿಯ ಗೂಂಡಾ ಪಡೆಯನ್ನು ಬಂಧಿಸಲು ಮಾತ್ರ ‘ಪದೇ ಪದೇ ತಪ್ಪು ಮಾಡುವ ವ್ಯಕ್ತಿ’ ಎಂಬ ವ್ಯಾಖ್ಯಾನವನ್ನು ಅನ್ವಯಿ­ಸಬಹುದು. ಇನ್ನುಳಿದ ಅಪರಾಧಗಳ ವಿಚಾರದಲ್ಲಿ ‘ಮತ್ತೆ ಮತ್ತೆ ತಪ್ಪಾಗಿರುವುದನ್ನು’ ತೋರಿಸಬೇಕಾದ ಅನಿವಾರ್ಯ ಸರ್ಕಾರಕ್ಕಿಲ್ಲ.

ಈ ತಿದ್ದುಪಡಿ ಕಾರಣ, ಭ್ರಷ್ಟ  ಪೊಲೀಸರು ಇನ್ನಷ್ಟು  ಭ್ರಷ್ಟ ರಾಗಬಹುದು. ಹೊಸ ತಿದ್ದುಪಡಿ, ಸಮಾಜದಲ್ಲಿ ಸುರಕ್ಷೆಯ ಭಾವ ತರುವುದಿಲ್ಲ. ಜನ ನಿರಂತರ ಭಯದಲ್ಲಿ ಬದುಕಬೇಕಾ ಗುತ್ತದೆ. ಕಾದು ನೋಡಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.