ADVERTISEMENT

‘ಮಷಿನ್ ಸರಿ ಇಲ್ವ, ನಾವೇ ಸರಿ ಇಲ್ವ?’

ಚಿದಂಬರ ಪ್ರಸಾದ್
Published 19 ಮೇ 2018, 19:51 IST
Last Updated 19 ಮೇ 2018, 19:51 IST

ಮಂಗಳೂರು: ‘ಮಷಿನ್‌ ಸರಿ ಇಲ್ವ, ನಾವೇ ಸರಿ ಇಲ್ವ ಒಂದೂ ಗೊತ್ತಾಗ್ತಿಲ್ಲ. ಜಿಲ್ಲೆಯಲ್ಲಿ ಈ ಬಾರಿ ಹಿಂದೆಂದೂ ಆಗದಷ್ಟು ಅಭಿವೃದ್ಧಿ ಆಗಿದೆ. ಆದರೆ, ಫಲಿತಾಂಶ ನೋಡಿದರೆ, ಜನರಿಗೆ ಅಭಿವೃದ್ಧಿ ಬೇಡ ಅಂತ ತೋರುತ್ತೆ...’

ಪುತ್ತೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿಯಾಗಿದ್ದ ಶಕುಂತಳಾ ಶೆಟ್ಟಿ ತಮ್ಮ ಸೋಲನ್ನು ವಿಶ್ಲೇಷಿಸಿದ್ದು ಹೀಗೆ. ಮತ ಎಣಿಕೆ ಕೇಂದ್ರದಿಂದ ಹೊರ ಬರುತ್ತಿದ್ದಂತೆಯೇ ಅವರು ಮಾಧ್ಯಮದವರಿಗೆ ಈ ರೀತಿ ಪ್ರತಿಕ್ರಿಯೆ ನೀಡಿದ್ದರು.

‘ಬಿಜೆಪಿ ಅಭ್ಯರ್ಥಿ ಸಂಜೀವ ಮಠಂದೂರು ಜತೆ ನಾನೂ ಮಾತನಾಡಿದ್ದೆ. ಏನೇ ಆದರೂ 10 ಸಾವಿರ ಮತಗಳ ಅಂತರ ಬರಬೇಕಾಗಿತ್ತು. ಇಲ್ಲಿ ನೋಡಿದರೆ 19 ಸಾವಿರ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ’ ಎಂದರು.

ADVERTISEMENT

‘ನನ್ನ ವಿರುದ್ಧ ಅಪಪ್ರಚಾರ ಮಾಡಲಾಗಿದೆ’ ಎಂದು ಅವರು ಮಾಡಿದ್ದ ಆರೋಪದ ಕುರಿತು ಪ್ರತಿಕ್ರಿಯೆ ಕೇಳಿದಾಗ, ‘ಈಗ ನಾನು ಏನನ್ನೋ ಹೇಳುವುದು, ಅದನ್ನು ನೀವು ಬರೆಯುವುದು. ಅದರಿಂದ ಮತ್ತೇನೋ ಆಗುವುದು... ಅದೆಲ್ಲ ಬೇಡ. ಪೆನ್ನು ಕೆಳಗಿಟ್ಟು ಕೇಳಿದರೆ ಹೇಳ್ತೇನೆ’ ಎಂದರು.

ಕೊನೆಗೆ ಮೌನ ಮುರಿದ ಅವರು ಇವಿಎಂಗಳ ಕಾರ್ಯನಿರ್ವಹಣೆ ಬಗ್ಗೆ ಸಂದೇಹ ವ್ಯಕ್ತಪಡಿಸಿದರು. ‘ನನ್ನ ಕ್ಷೇತ್ರ ಮಾತ್ರವಲ್ಲ. ಜಿಲ್ಲೆಯಲ್ಲಿ ಇಂತಹ ಫಲಿತಾಂಶವನ್ನು ಯಾರೂ ನಿರೀಕ್ಷೆ ಮಾಡಿರಲಿಲ್ಲ. ಯಾರೋ ಹೇಳ್ತಾ ಇದ್ರು, ಒಂದು ಕಡೆ ಕೇವಲ 219 ಮತ ಇದ್ರೂ, ಮಷಿನ್‌ 2019 ಮತ ತೋರಿಸಿದೆ ಅಂತ’ ಎಂದು ಹೇಳುತ್ತಲೇ ತಮ್ಮ ವಾಹನದತ್ತ ಹೆಜ್ಜೆ ಹಾಕಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.