ADVERTISEMENT

ಯುಜಿಸಿ ಮಲತಾಯಿ ಧೋರಣೆ ಬಿಕ್ಕಟ್ಟಿಗೆ ಕಾರಣ

ವಿ.ಎಸ್.ಸುಬ್ರಹ್ಮಣ್ಯ
Published 14 ಅಕ್ಟೋಬರ್ 2017, 20:21 IST
Last Updated 14 ಅಕ್ಟೋಬರ್ 2017, 20:21 IST
ಕುಲಪತಿ ಪ್ರೊ.ಡಿ. ಶಿವಲಿಂಗಯ್ಯ
ಕುಲಪತಿ ಪ್ರೊ.ಡಿ. ಶಿವಲಿಂಗಯ್ಯ   

ರಾಜ್ಯದಲ್ಲಿ ವೈಯಕ್ತಿಕ ಮತ್ತು ಕೌಟುಂಬಿಕ ಸಮಸ್ಯೆಗಳಿಂದ ಉನ್ನತ ಶಿಕ್ಷಣ ವಂಚಿತರಾಗುತ್ತಿದ್ದವರ ಪಾಲಿಗೆ ಆಸರೆಯಾಗಿದ್ದ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ (ಕೆಎಸ್‌ಒಯು) ಆರು ವರ್ಷಗಳಿಂದ ಮಾನ್ಯತೆ ಕಳೆದುಕೊಂಡಿದೆ. ಎರಡು ವರ್ಷಗಳಿಂದ ವಿಶ್ವವಿದ್ಯಾಲಯದಲ್ಲಿ ಪ್ರವೇಶ ಪ್ರಕ್ರಿಯೆ ಪೂರ್ಣ ಸ್ಥಗಿತವಾಗಿದೆ. ಈ ವಿಶ್ವವಿದ್ಯಾಲಯವನ್ನು ಮುಚ್ಚುವ ಮತ್ತು ವಿ.ವಿಯ ಠೇವಣಿ ಹಣವನ್ನು ಅನ್ಯ ಉದ್ದೇಶಕ್ಕೆ ಬಳಸಿಕೊಳ್ಳುವ ಚರ್ಚೆ ಮತ್ತೆ ಮುನ್ನೆಲೆಗೆ ಬಂದಿದೆ.

‘ಮುಕ್ತ ವಿಶ್ವವಿದ್ಯಾಲಯದ ಈ ಸ್ಥಿತಿಗೆ ವಿಶ್ವವಿದ್ಯಾಲಯ ಅನುದಾನ ಆಯೋಗದ (ಯುಜಿಸಿ) ಮಲತಾಯಿ ಧೋರಣೆಯೇ ಕಾರಣ. ಯುಜಿಸಿ ಮುಕ್ತ ವಿ.ವಿ.ಯ ಪಾಲಿಗೆ ನ್ಯಾಯ ನಿರಾಕರಿಸುತ್ತಿದೆ’ ಎಂದು ಈಗ ವಿ.ವಿ. ಕುಲಪತಿಯಾಗಿರುವ ಪ್ರೊ.ಡಿ. ಶಿವಲಿಂಗಯ್ಯ ಆಪಾದಿಸುತ್ತಾರೆ. ಅವರು ‘ಪ್ರಜಾವಾಣಿ’ಗೆ ನೀಡಿರುವ ಸಂದರ್ಶನ ಇಲ್ಲಿದೆ.

* ಕೆಎಸ್‌ಒಯು ಈಗ ಎದುರಿಸುತ್ತಿರುವ ಬಿಕ್ಕಟ್ಟಿಗೆ ಮೂಲ ಕಾರಣ ಏನು?
1996ರಲ್ಲಿ ಮುಕ್ತ ವಿಶ್ವವಿದ್ಯಾಲಯ ಸ್ಥಾಪನೆಯಾಯಿತು. ಆರಂಭದಲ್ಲಿ ಪ್ರತಿ ವರ್ಷ ವಿಶ್ವವಿದ್ಯಾಲಯದ ಕೋರ್ಸ್‌ಗಳಿಗೆ ಮಾನ್ಯತೆ ನೀಡಲಾಗುತ್ತಿತ್ತು. 2007–08ರಲ್ಲಿ 2013ರವರೆಗೆ ಮಾನ್ಯತೆ ನೀಡಲಾಯಿತು. 2011ರಲ್ಲಿ ಹೊಸ ನಿಯಮಗಳನ್ನು (ಸ್ಟ್ಯಾಚ್ಯೂಟ್‌) ರೂಪಿಸಿ, ರಾಜ್ಯಪಾಲರ ಒಪ್ಪಿಗೆ ಪಡೆದುಕೊಂಡ ವಿಶ್ವವಿದ್ಯಾಲಯದ ಆಡಳಿತ, ಕರ್ನಾಟಕದ ಹೊರಗಡೆ 205 ಶೈಕ್ಷಣಿಕ ಪಾಲುದಾರರ ಜೊತೆ ಒಪ್ಪಂದ ಮಾಡಿಕೊಂಡಿತು. ಪಾಲುದಾರರು 4,400 ಫ್ರಾಂಚೈಸಿಗಳನ್ನು ನೇಮಿಸಿಕೊಂಡರು. ಆ ಬಳಿಕ ನೇರವಾಗಿ ರಾಜ್ಯದೊಳಗೆ ತನ್ನ ಅಧ್ಯಯನ ಕೇಂದ್ರಗಳ ಮೂಲಕ ವಿದ್ಯಾರ್ಥಿಗಳಿಗೆ ಪ್ರವೇಶ ನೀಡುವುದರ ಜೊತೆಗೆ ರಾಜ್ಯದ ಹೊರಗೆ ಶೈಕ್ಷಣಿಕ ಪಾಲುದಾರರು ಮತ್ತು ಫ್ರಾಂಚೈಸಿಗಳ ಮೂಲಕ ತಾಂತ್ರಿಕ, ಅರೆ ವೈದ್ಯಕೀಯ ಮತ್ತು ವೃತ್ತಿಪರ ಶಿಕ್ಷಣ ಕೋರ್ಸ್‌ಗಳನ್ನು ಆರಂಭಿಸಿತು. ಈ ಬೆಳವಣಿಗೆಯೇ ಮುಕ್ತ ವಿಶ್ವವಿದ್ಯಾಲಯ ಎದುರಿಸುತ್ತಿರುವ ಎಲ್ಲ ಸಮಸ್ಯೆಗಳಿಗೂ ಮೂಲ. ಮೊದಲು, ಸಂಸ್ಥೆಗಳಿಗೆ ಸೀಮಿತವಾಗಿ ಮಾನ್ಯತೆ ನೀಡಲಾಗುತ್ತಿತ್ತು. ಆದರೆ, ಮುಕ್ತ ವಿ.ವಿ. ಯುಜಿಸಿ ಅಧೀನಕ್ಕೆ ಒಳಪಟ್ಟ ಬಳಿಕ ಕೋರ್ಸ್‌ಗಳಿಗೆ ಮಾನ್ಯತೆ ನೀಡಲಾಗುತ್ತಿದೆ. ಇದು ಬಿಕ್ಕಟ್ಟಿಗೆ ಮತ್ತೊಂದು ಪ್ರಬಲ ಕಾರಣ.

ADVERTISEMENT

* ಮಾನ್ಯತೆ ರದ್ದುಗೊಳ್ಳುವುದನ್ನು ತಡೆಯಲು ಪ್ರಯತ್ನ ನಡೆದಿರಲಿಲ್ಲವೇ?
ಭೌಗೋಳಿಕ ವ್ಯಾಪ್ತಿ ಮೀರಿದ ಆಪಾದನೆ ಮೇರೆಗೆ ಯುಜಿಸಿ 2011ರ ಜೂನ್‌ 10ರಂದು ಮೊದಲ ಬಾರಿಗೆ ಕಾರಣ ಕೇಳುವ ನೋಟಿಸ್‌ ಜಾರಿ ಮಾಡಿತ್ತು. ಅದಕ್ಕೆ ವಿ.ವಿ.ಯ ಆಡಳಿತ ಪ್ರತಿಕ್ರಿಯೆ ಸಲ್ಲಿಸಿತ್ತು. ಆದರೆ, ಆಯೋಗ ಯಾವುದೇ ನಿರ್ಧಾರ ಕೈಗೊಂಡಿರಲಿಲ್ಲ. ಮಧ್ಯದಲ್ಲಿ ಹಲವು ನೋಟಿಸ್‌ ನೀಡಿದ್ದು, ಉತ್ತರ ಸಲ್ಲಿಸಲಾಗಿತ್ತು. 2015ರ ಜೂನ್‌ 16ರಂದು ಸಾರ್ವಜನಿಕ ಪ್ರಕಟಣೆ ನೀಡಿ, ‘ಕರ್ನಾಟಕ ಮುಕ್ತ ವಿಶ್ವವಿದ್ಯಾಲಯದ ಮಾನ್ಯತೆಯನ್ನು ಮುಂದುವರಿಸಿರುವುದಿಲ್ಲ’ ಎಂದು ಘೋಷಿಸಿತು. 2011ರಲ್ಲಿ ತಾಂತ್ರಿಕ, ಅರೆ ವೈದ್ಯಕೀಯ ಮತ್ತು ನಿರ್ವಹಣಾ ಕೋರ್ಸ್‌ಗಳಿಗೆ ಸೀಮಿತವಾಗಿ ನೋಟಿಸ್‌ ನೀಡಲಾಗಿತ್ತು. ಆದರೆ, ಯುಜಿಸಿ 2015ರಲ್ಲಿ ಯಾವ ಮುನ್ಸೂಚನೆಯನ್ನೂ ನೀಡದೆ, ಎಲ್ಲ ಕೋರ್ಸ್‌ಗಳನ್ನು ರದ್ದು ಮಾಡುವ ನಿರ್ಧಾರ ಕೈಗೊಂಡಿತು.

* ವಿಶ್ವವಿದ್ಯಾಲಯದ ಬಿಕ್ಕಟ್ಟಿಗೆ ಯಾರು ಕಾರಣ?
ಕೆಎಸ್‌ಒಯು ಇಂತಹ ಸಂಕಷ್ಟಕ್ಕೆ ಸಿಲುಕಲು ಮತ್ತು ಈ ಬಿಕ್ಕಟ್ಟು ಸೃಷ್ಟಿಯಾಗಲು ಹಿಂದಿನ ಇಬ್ಬರು ಕುಲಪತಿಗಳ ಅವಧಿಯಲ್ಲಿ ತೆಗೆದುಕೊಂಡ ತಪ್ಪು ನಿರ್ಧಾರಗಳು, ಅದೆಲ್ಲಕ್ಕಿಂತಲೂ ಮುಖ್ಯವಾಗಿ ಯುಜಿಸಿಯ ಮಲತಾಯಿ ಧೋರಣೆ ಕಾರಣ. ವಿ.ವಿ. ಅಧ್ಯಯನ ಕೇಂದ್ರಗಳ ಮೂಲಕ ನೇರವಾಗಿ ನೀಡಿರುವ ಪ್ರವೇಶ ಮತ್ತು ಶೈಕ್ಷಣಿಕ ಪಾಲುದಾರರು, ಫ್ರಾಂಚೈಸಿಗಳ ಮೂಲಕ ಕೊಟ್ಟಿರುವ ಪ್ರವೇಶವನ್ನು ಯುಜಿಸಿ ಒಂದೇ ರೀತಿ ನೋಡುತ್ತಿದೆ. ನಾನು 2016ರಲ್ಲಿ ಕುಲಪತಿಯಾದ ಬಳಿಕ 16 ಬಾರಿ ಯುಜಿಸಿ ಮತ್ತು ಮಾನವ ಸಂಪನ್ಮೂಲ ಸಚಿವಾಲಯದ ಅಧಿಕಾರಿಗಳನ್ನು ಭೇಟಿ ಮಾಡಿದ್ದೇನೆ. ನಮ್ಮ ಮನವಿಗೆ ಪೂರಕವಾಗಿ 40,000 ಪುಟಗಳಷ್ಟು ದಾಖಲೆ ಒದಗಿಸಿದ್ದೇನೆ. ಯುಜಿಸಿ ಅಧಿಕಾರಿಗಳು ನಮ್ಮನ್ನು ಗುಮಾಸ್ತರ ರೀತಿ ನಡೆಸಿಕೊಳ್ಳುತ್ತಿದ್ದಾರೆ.

* ಯುಜಿಸಿ ಮಲತಾಯಿ ಧೋರಣೆ ಅನುಸರಿಸುತ್ತಿದೆ ಎಂದು ಹೇಗೆ ಹೇಳುತ್ತೀರಿ?
ಇಂತಹದ್ದೇ ಬಿಕ್ಕಟ್ಟು ಎದುರಿಸಿದ್ದ ತಮಿಳುನಾಡಿನ ಅಣ್ಣಾಮಲೈ ವಿಶ್ವವಿದ್ಯಾಲಯಕ್ಕೆ ಮಾನ್ಯತೆ ನವೀಕರಿಸಲಾಗಿದೆ. ಕೆಎಸ್‌ಒಯು ವಿಷಯದಲ್ಲಿ ಉದ್ದೇಶಪೂರ್ವಕವಾಗಿ ನ್ಯಾಯ ನಿರಾಕರಿಸಲಾಗುತ್ತಿದೆ. ಕುವೆಂಪು ವಿಶ್ವವಿದ್ಯಾಲಯ, ಬೆಂಗಳೂರು ವಿಶ್ವವಿದ್ಯಾಲಯಕ್ಕೆ ದೂರ ಶಿಕ್ಷಣ ಕೇಂದ್ರಗಳನ್ನು ತೆರೆಯಲು ಮಾನ್ಯತೆ ನೀಡಿ, ಮುಕ್ತ ವಿ.ವಿ.ಗೆ ನಿರಾಕರಿಸಿದರೆ ಇನ್ನೇನು ಹೇಳಬೇಕು?

* ಯುಜಿಸಿ ಸೂಚನೆಗಳನ್ನು ಪಾಲನೆ ಮಾಡುವುದರಲ್ಲಿ ವಿಶ್ವವಿದ್ಯಾಲಯ ಎಡವಿದೆಯೇ?
ಮಾನ್ಯತೆ ನವೀಕರಣ ನಿರಾಕರಿಸಿದ್ದ ಯುಜಿಸಿ ಮೂರು ಷರತ್ತುಗಳನ್ನು ವಿಧಿಸಿತ್ತು. ಭೌಗೋಳಿಕ ವ್ಯಾಪ್ತಿ ಸೀಮಿತಗೊಳಿಸುವುದು, ಶೈಕ್ಷಣಿಕ ಪಾಲುದಾರರ ಜೊತೆಗಿನ ಒಪ್ಪಂದ ರದ್ದು ಮಾಡುವುದು, ಫ್ರಾಂಚೈಸಿಗಳನ್ನು ರದ್ದು ಮಾಡಬೇಕೆಂಬ ಷರತ್ತುಗಳಿದ್ದವು. ಈ ಸಂಬಂಧ 2016ರ ಜೂನ್‌ 4ರಂದು ಎಲ್ಲ ಪ್ರಕ್ರಿಯೆ ಪೂರ್ಣಗೊಳಿಸಲಾಗಿತ್ತು. ಯುಜಿಸಿ ತಕರಾರು ಆಧರಿಸಿ 2017ರಲ್ಲಿ ಮತ್ತೊಮ್ಮೆ ಎಲ್ಲ ಒಪ್ಪಂದಗಳನ್ನೂ ರದ್ದು ಮಾಡಿದ್ದೇವೆ. ಯುಜಿಸಿ ಹೇಳಿದ ಎಲ್ಲವನ್ನೂ ಪಾಲನೆ ಮಾಡಲಾಗಿದೆ.

* ರಾಜ್ಯ ಸರ್ಕಾರ ವಿ.ವಿ.ಯನ್ನು ನಿಯಂತ್ರಿಸಲು ವಿಫಲವಾಯಿತೇ?
ಹಾಗೇನೂ ಇಲ್ಲ. ವಿ.ವಿ ಆಡಳಿತ ತಪ್ಪು ಮಾಡಿದೆ ಎಂದು ಗೊತ್ತಾದ ಎಲ್ಲ ಸಂದರ್ಭಗಳಲ್ಲೂ ಉನ್ನತ ಶಿಕ್ಷಣ ಇಲಾಖೆ, ರಾಜ್ಯಪಾಲರ ಸಚಿವಾಲಯದಿಂದ ಪತ್ರಗಳನ್ನು ಬರೆದು ಎಚ್ಚರಿಕೆ ನೀಡಲಾಗಿದೆ. ಅಂತಹ ಕೆಲಸಗಳನ್ನು ಮಾಡದಂತೆ ನಿರ್ದೇಶನ ನೀಡಲಾಗಿತ್ತು. ಆದರೆ, ವಿ.ವಿ. ಸ್ವಾಯತ್ತ ಸಂಸ್ಥೆ ಎಂಬ ನಿಲುವಿನಲ್ಲಿ ಅಂತಹ ಕೆಲಸವನ್ನು ಮುಂದುವರಿಸಿಕೊಂಡು ಹೋಗಲಾಗಿತ್ತು. ಸರ್ಕಾರದ ಹಂತದಲ್ಲಿ ತಪ್ಪುಗಳಾಗಿರುವುದು ಕಂಡುಬಂದಿಲ್ಲ.

* ಈ ಬಿಕ್ಕಟ್ಟು ಇಷ್ಟೊಂದು ದೀರ್ಘ ಅವಧಿಯವರೆಗೆ ಮುಂದುವರಿಯಲು ಏನು ಕಾರಣ?
ತಾಂತ್ರಿಕ, ಅರೆ ವೈದ್ಯಕೀಯ ಮತ್ತು ನಿರ್ವಹಣಾ ಕೋರ್ಸ್‌ ನಡೆಸಲು ಅವಕಾಶವಿಲ್ಲ ಎಂಬ ಯುಜಿಸಿ ನೋಟಿಸ್‌ ವಿರುದ್ಧ ಹಿಂದಿನ ಕುಲಪತಿಗಳು ದೆಹಲಿ ಹೈಕೋರ್ಟ್‌ನಲ್ಲಿ ರಿಟ್‌ ಅರ್ಜಿ ಸಲ್ಲಿಸಿದ್ದರು. ಇದರಲ್ಲಿ ವಿಶ್ವವಿದ್ಯಾಲಯದ ಪರ ತೀರ್ಪು ಬರಬಹುದು ಎಂದು ಕಾದರು. ಆದರೆ, ಆ ಅರ್ಜಿಯನ್ನು ಹಿಂದಕ್ಕೆ ಪಡೆಯುವಂತೆ ಯುಜಿಸಿ ಅಧಿಕಾರಿಗಳು ಒತ್ತಡ ಹೇರಿದರು. ತಾಂತ್ರಿಕ, ಅರೆ ವೈದ್ಯಕೀಯ ಮತ್ತು ನಿರ್ವಹಣಾ ಕೋರ್ಸ್‌ಗಳನ್ನು ವಿ.ವಿ. ಸ್ಥಗಿತಗೊಳಿಸಿರುವುದರಿಂದ ನಾವು ಅರ್ಜಿ ವಾಪಸು ಪಡೆಯಲು ಒಪ್ಪಿಕೊಂಡಿದ್ದೇವೆ. ಮುಂದಿನ ಕ್ರಮವನ್ನು ಯುಜಿಸಿ ಕೈಗೊಳ್ಳಬೇಕಿತ್ತು. ಕೆಎಸ್‌ಒಯುಗೆ ನೋಟಿಸ್‌ ನೀಡಿ, ಉತ್ತರ ಪಡೆದು ಯಾವ ನಿರ್ಧಾರವನ್ನೂ ಕೈಗೊಳ್ಳದೇ ಕಾಲಹರಣ ಮಾಡುವ ಯುಜಿಸಿ ಅಧಿಕಾರಿಗಳ ಮನಸ್ಥಿತಿಯೇ ಬಿಕ್ಕಟ್ಟು ಇನ್ನೂ ಜೀವಂತವಾಗಿರಲು ಕಾರಣ. ಇದರಿಂದ ಪ್ರತಿ ವರ್ಷ ₹ 60 ಕೋಟಿ ನಷ್ಟವಾಗುತ್ತಿದೆ.

* 2013–14 ಮತ್ತು 2014–15ರಲ್ಲಿ ಪ್ರವೇಶ ಪಡೆದಿದ್ದ ವಿದ್ಯಾರ್ಥಿಗಳ ಗತಿ ಏನು?

ಯುಜಿಸಿಯಿಂದ ಮಾನ್ಯತೆ ನವೀಕರಣ ನಿರಾಕರಿಸುವ ಮುನ್ನವೇ ಈ ಎರಡೂ ವರ್ಷಗಳ ಪ್ರವೇಶ ಪ್ರಕ್ರಿಯೆ ಮುಗಿದಿತ್ತು. ರಾಜ್ಯದ ಉನ್ನತ ಶಿಕ್ಷಣ ಸಚಿವರಾಗಿದ್ದ ಟಿ.ಬಿ.ಜಯಚಂದ್ರ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯ ನಿರ್ಧಾರದಂತೆ ಪ್ರವೇಶ ಪ್ರಕ್ರಿಯೆ ಮುಂದುವರಿಸಲಾಗಿತ್ತು. ಹೀಗಾಗಿ ನೇರವಾಗಿ ವಿ.ವಿ.ಯ ಅಧ್ಯಯನ ಕೇಂದ್ರಗಳಿಂದ ಪ್ರವೇಶ ಪಡೆದಿದ್ದ 95,853 ಮತ್ತು ಶೈಕ್ಷಣಿಕ ಪಾಲುದಾರರು ಹಾಗೂ ಫ್ರಾಂಚೈಸಿಗಳ ಮೂಲಕ ಪ್ರವೇಶ ಪಡೆದಿದ್ದ 2.12 ಲಕ್ಷ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸಿ, ಪ್ರಮಾಣಪತ್ರ ವಿತರಿಸಲು ಸಾಧ್ಯವಾಗಿಲ್ಲ. ನೇರ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸಲು ಅವಕಾಶ ಕೋರಿದ್ದೆವು. ಯಾವ ತೊಡಕು ಇಲ್ಲದಿದ್ದರೂ ಅದಕ್ಕೆ ಯುಜಿಸಿ ಒಪ್ಪಿಗೆ ನೀಡುತ್ತಿಲ್ಲ. ಶೈಕ್ಷಣಿಕ ಪಾಲುದಾರರು ಮತ್ತು ಫ್ರಾಂಚೈಸಿಗಳ ಮೂಲಕ ಪ್ರವೇಶ ಪಡೆದಿದ್ದವರಿಗೆ ವಿ.ವಿ.ಯ ನೇರ ಸುಪರ್ದಿಯಲ್ಲಿ ಒಂದು ಬಾರಿಗೆ ಪರೀಕ್ಷೆ ನಡೆಸಲು ಅವಕಾಶ ಕೇಳಿದ್ದೇವೆ. ಈ ಬೇಡಿಕೆಗೂ ಒಪ್ಪಿಗೆ ನೀಡುತ್ತಿಲ್ಲ. ಈ ವಿದ್ಯಾರ್ಥಿಗಳಿಗೆ ನ್ಯಾಯ ದೊರಕಿಸುವುದು ವಿ.ವಿ.ಯ ಹೊಣೆ. ಇದಕ್ಕಾಗಿ ಕಾನೂನು ಹೋರಾಟಕ್ಕೂ ಸಿದ್ಧವಾಗುತ್ತಿದೆ.

* ಮತ್ತೆ ಮಾನ್ಯತೆ ಪಡೆಯಲು ಏನು ಪ್ರಯತ್ನ ಮಾಡಿದ್ದೀರಿ?

2017–18ನೇ ಶೈಕ್ಷಣಿಕ ವರ್ಷಕ್ಕೆ ನೇರವಾಗಿ ವಿ.ವಿ.ಯ ಅಧ್ಯಯನ ಕೇಂದ್ರಗಳ ಮೂಲಕ ಪ್ರವೇಶ ಪ್ರಕ್ರಿಯೆ ನಡೆಸಲು ಮಾನ್ಯತೆ ನೀಡುವಂತೆ ಕೋರಿ ಅರ್ಜಿ ಸಲ್ಲಿಸಿದ್ದೇವೆ. ಅಗತ್ಯವಿರುವ ಎಲ್ಲ ದಾಖಲೆಗಳನ್ನು ಖುದ್ದಾಗಿ ಯುಜಿಸಿ ಕಚೇರಿಗೆ ಹೋಗಿ ಸಲ್ಲಿಸಿ ಬಂದಿದ್ದೇನೆ. ಆದರೆ, ಮಾರ್ಗಸೂಚಿಗಳನ್ನು ದಿಢೀರ್‌ ಬದಲಾವಣೆ ಮಾಡಿರುವ ಯುಜಿಸಿ, ನಮ್ಮ ಅರ್ಜಿ ಕುರಿತು ಯಾವ ನಿರ್ಧಾರ ಕೈಗೊಳ್ಳದೇ ಸತಾಯಿಸುತ್ತಿದೆ. ಮಾನ್ಯತೆ ಪಡೆಯುವುದಕ್ಕೆ ಪೂರಕವಾಗಿ ಬೋಧಕ ಸಿಬ್ಬಂದಿ ನೇಮಕಾತಿಗೂಪ್ರಸ್ತಾವ ಸಲ್ಲಿಸಲಾಗಿದೆ. ಈ ಎಲ್ಲ ಕಾರಣಗಳನ್ನು ಮುಂದಿಟ್ಟುಕೊಂಡು ಕರ್ನಾಟಕ ಹೈಕೋರ್ಟ್‌ಗೆ ರಿಟ್‌ ಅರ್ಜಿ ಸಲ್ಲಿಸಲಾಗಿದೆ. ಮುಂದಿನ ವಾರ ವಿಚಾರಣೆಗೆ ಬರಲಿದೆ. ಮಾನ್ಯತೆ ನವೀಕರಿಸುವಂತೆ ಕೇಂದ್ರ ಮಾನವ ಸಂಪನ್ಮೂಲ ಸಚಿವ ಪ್ರಕಾಶ್ ಜಾವಡೇಕರ್‌  ಅವರನ್ನು ಖುದ್ದಾಗಿ ಭೇಟಿ ಮಾಡಿ ಮನವಿ ಸಲ್ಲಿಸಲಾಗಿದೆ.

* ಮಾನ್ಯತೆ ರದ್ದು ಮಾಡುವಂತಹ ಹಂತಕ್ಕೆ ವಿ.ವಿ. ತಲುಪಿದೆಯೇ?
ಮುಕ್ತ ವಿಶ್ವವಿದ್ಯಾಲಯ ಸದೃಢವಾಗಿಯೇ ಇದೆ. ಮಾನ್ಯತೆ ರದ್ದು ಮಾಡಬೇಕಾದ ಅಥವಾ ಮುಚ್ಚಬೇಕಾದ ಸ್ಥಿತಿಯಲ್ಲಿ ಇಲ್ಲ. ಒಂದು ಹಂತದಲ್ಲಿ ಆಗಿರುವ ಲೋಪಗಳನ್ನು ತಪ್ಪಾಗಿ ಅರ್ಥೈಸುತ್ತಿರುವುದರಿಂದ ಮಾನ್ಯತೆ ರದ್ದು ಮಾಡುವ ಕುರಿತು ಚರ್ಚೆ ಆರಂಭವಾಗಿದೆ. ಮುಕ್ತ ವಿಶ್ವವಿದ್ಯಾಲಯವನ್ನು ಮುಚ್ಚಿದರೆ ಈ ರಾಜ್ಯದ ಅಶಕ್ತರಿಗೆ ಉನ್ನತ ಶಿಕ್ಷಣದ ಅವಕಾಶ ನಿರಾಕರಿಸುವ ಮೂಲಕ ಘೋರ ಅಪರಾಧ ಮಾಡಿದಂತಾಗುತ್ತದೆ. ಹಾಗೇನಾದರೂ ಆದಲ್ಲಿ ಅದಕ್ಕೆ ಯುಜಿಸಿಯೇ ಹೊಣೆಯಾಗುತ್ತದೆ.

* ವಿ.ವಿ.ಯಲ್ಲಿ ₹ 500 ಕೋಟಿಯಷ್ಟು ಅವ್ಯವಹಾರ ನಡೆದಿದೆ ಎಂಬ ಆಪಾದನೆ ಇದೆಯಲ್ಲವೇ?
2016ರ ನಂತರ ಯಾವುದೇ ಆರ್ಥಿಕ ಅವ್ಯವಹಾರ ನಡೆದಿಲ್ಲ. ಅದಕ್ಕೂ ಮೊದಲು ಕೆಲವು ವಿಚಾರಗಳಿಗೆ ಸಂಬಂಧಿಸಿದಂತೆ ಲೆಕ್ಕಪರಿಶೋಧಕರು ಆಕ್ಷೇಪಗಳನ್ನು ಎತ್ತಿದ್ದಾರೆ. ಆ ಬಗ್ಗೆ ಉತ್ತರ ನೀಡಲಾಗುತ್ತಿದೆ. ಹಣಕಾಸು ಅವ್ಯವಹಾರ ನಡೆದಿದ್ದರೆ ರಾಜ್ಯ ಅಥವಾ ಕೇಂದ್ರ ಸರ್ಕಾರ ಯಾವುದೇ ರೀತಿಯ ತನಿಖೆಗೆ ಆದೇಶಿಸಬಹುದು.

* ವಿ.ವಿ.ಯಲ್ಲಿರುವ ಠೇವಣಿ ಹಣವನ್ನು ಅನ್ಯ ಉದ್ದೇಶಕ್ಕೆ ಬಳಸಲು ವರ್ಗಾವಣೆ ಮಾಡಲಾಗುತ್ತಿದೆಯೇ?
ವಿಶ್ವವಿದ್ಯಾಲಯದಲ್ಲಿ ₹ 580 ಕೋಟಿಯಷ್ಟು ಠೇವಣಿ ಇದೆ. ಇಂತಹ ಮೊತ್ತವನ್ನು ಸಕಾಲಕ್ಕೆ ಬಳಸದಿದ್ದರೆ ಕಾನೂನು ತೊಡಕು ಎದುರಾಗುತ್ತದೆ ಎಂಬ ಕಾರಣ ನೀಡಿ ಬೇರೆ ಉದ್ದೇಶಗಳಿಗೆ ಬಳಸುವಂತೆ ಉನ್ನತ ಶಿಕ್ಷಣ ಇಲಾಖೆ 2013ರಲ್ಲಿ ನಿರ್ದೇಶನ ನೀಡಿತ್ತು. ರಾಜ್ಯದ ಹತ್ತು ಹೊಸ ವಿ.ವಿ.ಗಳಲ್ಲಿ ಕೆಎಸ್‌ಒಯು ಸಹಭಾಗಿತ್ವದಲ್ಲಿ ಅತ್ಯಾಧುನಿಕ ಅಧ್ಯಯನ ಕೇಂದ್ರಗಳನ್ನು ಸ್ಥಾಪಿಸಲು ₹ 100 ಕೋಟಿ ಒದಗಿಸಲು 2016ರಲ್ಲಿ ಕ್ರಿಯಾಯೋಜನೆ ಸಿದ್ಧಪಡಿಸಿ, ಸಲ್ಲಿಸಲಾಗಿತ್ತು. ಆದರೆ, ಯಾವ ನಿರ್ಧಾರವೂ ಆಗಲಿಲ್ಲ. ಸರ್ಕಾರದ ಖಜಾನೆಯಲ್ಲಿ ಠೇವಣಿ ಇಡುವುದು, ಬೇರೆ ವಿ.ವಿ.ಗಳಿಗೆ ವರ್ಗಾವಣೆ ಮಾಡುವ ಬಗ್ಗೆಯೂ ಉನ್ನತ ಶಿಕ್ಷಣ ಇಲಾಖೆಯ ಸಭೆಯಲ್ಲಿಚರ್ಚೆ ನಡೆದಿತ್ತು. ಅನ್ಯ ಉದ್ದೇಶಕ್ಕೆ ಈ ಹಣ ವರ್ಗಾವಣೆ ಮಾಡಲು ಅವಕಾಶವಿಲ್ಲ. ವಿ.ವಿ.ಯ ಆಡಳಿತ ನಿರ್ಣಯ ಕೈಗೊಂಡು, ರಾಜ್ಯಪಾಲರು ಒಪ್ಪಿಗೆ ಸೂಚಿಸಿದರೆ ಮಾತ್ರ ಹಣ ಬಳಕೆ ಸಾಧ್ಯ.

* ಕೆಎಸ್‌ಒಯು ವಿರುದ್ಧದ ಪ್ರತಿಭಟನೆ ರಾಜಕೀಯ ಸ್ವರೂಪ ಪಡೆಯುತ್ತಿದೆಯೇ?
ಸಮಸ್ಯೆಯಲ್ಲಿರುವ ವಿದ್ಯಾರ್ಥಿಗಳು ಪ್ರತಿಭಟಿಸುವುದು ಸಹಜ. ಆದರೆ, ಶಿಕ್ಷಣದ ವಿಚಾರದಲ್ಲಿ ಯಾರೂ ರಾಜಕೀಯ ಮಾಡಬಾರದು. ರಾಜ್ಯದ ಆಡಳಿತ ಪಕ್ಷ, ವಿರೋಧ ಪಕ್ಷ ಸೇರಿದಂತೆ ಎಲ್ಲ ರಾಜಕೀಯ ಪಕ್ಷಗಳೂ ಒಟ್ಟಾಗಿ ಮುಕ್ತ ವಿಶ್ವವಿದ್ಯಾಲಯವನ್ನು ಉಳಿಸಿಕೊಳ್ಳಲು ಪ್ರಯತ್ನಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.