ADVERTISEMENT

ಯುರೋಪ್ ಆರ್ಥಿಕ ಬಿಕ್ಕಟ್ಟು: ವಿವಿಗಳಿಗೆ ಇಕ್ಕಟ್ಟು

ಪ್ರಜಾವಾಣಿ ವಿಶೇಷ
Published 1 ಡಿಸೆಂಬರ್ 2012, 20:44 IST
Last Updated 1 ಡಿಸೆಂಬರ್ 2012, 20:44 IST

ಐರ್ಲೆಂಡ್‌ನ ಡ್ರಂಕೊಂಡ್ರಾದ ಸೇಂಟ್ ಪ್ಯಾಟ್ರಿಕ್ಸ್ ಕಾಲೇಜು 135 ವರ್ಷಗಳಿಂದಲೂ ಶಿಕ್ಷಕರಿಗೆ ತರಬೇತಿ ನೀಡುತ್ತ ಬಂದಿದೆ. ಎರಡು ದಶಕಗಳಿಂದ ಈ ಕಾಲೇಜು ಡಬ್ಲಿನ್ ಸಿಟಿ ವಿಶ್ವವಿದ್ಯಾಲಯದಲ್ಲಿ ಸ್ವತಂತ್ರವಾಗಿ ಕಾರ್ಯನಿರ್ವಹಿಸುತ್ತಿದೆ. ಸೆಪ್ಟೆಂಬರ್ ತಿಂಗಳಿನಲ್ಲಿ ಇಲ್ಲಿಗೆ ಒಂದು ಪತ್ರ ಬಂತು. ಇನ್ನು ಮುಂದೆ ಈ ಕಾಲೇಜು ವಿಶ್ವವಿದ್ಯಾಲಯದ ಅವಿಭಾಜ್ಯ ಅಂಗ ಎನ್ನುವುದು ಅದರ ಸಾರಾಂಶವಾಗಿತ್ತು. ಅಂದರೆ ಪ್ಯಾಟ್ರಿಕ್ಸ್ ಕಾಲೇಜು ತನ್ನ ಸ್ವಾಯತ್ತತೆ ಕಳೆದುಕೊಂಡು ವಿವಿ ಆಡಳಿತ ವ್ಯಾಪ್ತಿಗೆ ಒಳಪಡುತ್ತದೆ ಎನ್ನುವುದು ಅದರ ಅರ್ಥವಾಗಿತ್ತು.

ಕಡಿಮೆ ಖರ್ಚಿನಲ್ಲಿ ಹೆಚ್ಚಿನ ಜನರಿಗೆ ಉತ್ತಮ ಶಿಕ್ಷಣವನ್ನು ನೀಡುವ ಉದ್ದೇಶ ಐರ್ಲೆಂಡ್ ಸರ್ಕಾರದ್ದು. ಇದರ ಭಾಗವಾಗಿಯೇ ಶಿಕ್ಷಕ ತರಬೇತಿ ಕಾಲೇಜುಗಳ ವಿಲೀನ ಪ್ರಕ್ರಿಯೆ ಶುರುವಾಗಿದೆ.

`ಹೇಗಿದ್ದರೂ ಬದಲಾವಣೆಯ ಅಗತ್ಯವಿದೆ. ಆದರೆ ನಿಸ್ಸಂಶಯವಾಗಿ ಸಂಪನ್ಮೂಲ ಕೊರತೆಯನ್ನು ಎದುರಿಸಿ ಕೆಲಸ ಮಾಡುವ ತುರ್ತು ಕೂಡ ಇದೆ' ಎಂದು ಉನ್ನತ ಶಿಕ್ಷಣ ಪ್ರಾಧಿಕಾರದ ಪ್ರತಿನಿಧಿ ಮಾಲ್‌ಕೋಂ ಬೈರನ್ ಹೇಳುತ್ತಾರೆ.

ADVERTISEMENT

ವೆಚ್ಚ ಕಡಿತ ಹಾಗೂ ಮರುಸಂಘಟನೆಯ ಭಾಗವಾಗಿ ಐರ್ಲೆಂಡ್‌ನಲ್ಲಿ ಇಂಥ ಬದಲಾವಣೆಗಳು ಆಗುತ್ತಿವೆ. ಒಂದು ಕಡೆ ಐರೋಪ್ಯ ದೇಶಗಳು ಆರ್ಥಿಕ ಮುಗ್ಗಟಿನ ಸಂದರ್ಭದಲ್ಲಿ ಉನ್ನತ ಶಿಕ್ಷಣ ವ್ಯವಸ್ಥೆಯನ್ನು ನಿಯಂತ್ರಿಸಲು ಹೆಣಗಾಡುತ್ತಿದ್ದರೆ, ಇನ್ನೊಂದೆಡೆ ಬದಲಾವಣೆಯನ್ನು ವಿರೋಧಿಸಿ ಯುರೋಪಿನಾದ್ಯಂತ ವಿದ್ಯಾರ್ಥಿಗಳು ಪ್ರತಿಭಟನೆಯ ಹಾದಿ ತುಳಿಯುತ್ತಿದ್ದಾರೆ.

ಉನ್ನತ ಶಿಕ್ಷಣದ ಸ್ವಾಯತ್ತತೆ ಕಸಿದುಕೊಂಡಿರುವುದು ಹಾಗೂ ಶಿಕ್ಷಣ ಶುಲ್ಕ ಹೆಚ್ಚಿಸಿರುವುದನ್ನು ವಿರೋಧಿಸಿ ಸುರಿಯುತ್ತಿದ್ದ ಮಳೆಯನ್ನೂ ಲೆಕ್ಕಿಸದೇ ಇತ್ತೀಚೆಗೆ ಲಂಡನ್‌ನಲ್ಲಿ ಸಾವಿರಾರು ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದರು.

`ಆರ್ಥಿಕ ಬಿಕ್ಕಟ್ಟು ಸರ್ಕಾರದ ನೀತಿ ಹಾಗೂ ವೈಯಕ್ತಿಕ ಬದುಕಿನ ಮೇಲೆ ಪರಿಣಾಮ ಬೀರುತ್ತಿದೆ. ಇದರಿಂದ ವಿದ್ಯಾರ್ಥಿಗಳು ಆಕ್ರೋಶಗೊಂಡಿದ್ದಾರೆ' ಎನ್ನುತ್ತಾರೆ ಐರೋಪ್ಯ ವಿದ್ಯಾರ್ಥಿ ಒಕ್ಕೂಟದ ಅಧಿಕಾರಿ ಟೈನಾ ಮೊಯಿಸಾಂಡರ್.

`ಐರ್ಲೆಂಡ್ ಸಂಸತ್‌ನಲ್ಲಿ ಕಳೆದ ತಿಂಗಳು ಕಾಲೇಜು ಶುಲ್ಕ ಹಾಗೂ ಅನುದಾನಕ್ಕೆ ಸಂಬಂಧಿಸಿದಂತೆ ಚರ್ಚೆ ನಡೆದಿತ್ತು. ಆಗ ಸಂದರ್ಶಕ ಗ್ಯಾಲರಿಯಲ್ಲಿ ಕುಳಿತುಕೊಳ್ಳಲು ನಿರಾಕರಿಸಿದ ಕಾರಣಕ್ಕೆ ಒಕ್ಕೂಟದ ಅಧ್ಯಕ್ಷರನ್ನು ಬಂಧಿಸಲಾಗಿತ್ತು' ಎಂದು `ದಿ ಐರಿಷ್ ಇಂಡಿಪೆಂಡೆಂಟ್' ವರದಿ ಮಾಡಿತ್ತು.

ದೇಶದ ಗಡಿಗಳಲ್ಲಿ ಶಿಕ್ಷಣದ ಗುಣಮಟ್ಟ ಹಾಗೂ ಮಾನದಂಡದ ನಡುವೆ ಹೊಂದಾಣಿಕೆಯನ್ನು ಮೂಡಿಸಲು ಮಾಡಿದ ಪ್ರಯತ್ನಗಳ ಕುರಿತು ವರದಿ ಸಲ್ಲಿಸಲು ಐರೋಪ್ಯ ಒಕ್ಕೂಟದ ಪ್ರತಿನಿಧಿಗಳು ಇತ್ತೀಚೆಗೆ ಸಭೆ ಸೇರಿದ್ದರು.

ಯುರೋಪಿನಾದ್ಯಂತ ವಿಶ್ವವಿದ್ಯಾಲಯ ವ್ಯವಸ್ಥೆಯಲ್ಲಿ ಭಾರಿ ವ್ಯತ್ಯಾಸವಿದೆ. ಆರ್ಥಿಕ ಬಿಕ್ಕಟ್ಟು ಒಂದೊಂದು ಸ್ಥಳದಲ್ಲಿಯೂ ವಿಭಿನ್ನ ರೀತಿಯ ಪರಿಣಾಮಗಳನ್ನು ಬೀರುತ್ತಿದೆ.

ಗ್ರೀಸ್, ಇಟಲಿ, ಐಸ್ಲೆಂಡ್, ಪೋರ್ಚುಗಲ್, ಸ್ಪೇನ್ ಸೇರಿದಂತೆ ಆರ್ಥಿಕ ಸಂಕಷ್ಟದ ಸುಳಿಯಲ್ಲಿರುವ ಯುರೋಪ್‌ನ 11 ದೇಶಗಳಲ್ಲಿ ಐರ್ಲೆಂಡ್ ಕೂಡ ಒಂದು.  `ಈ ಎಲ್ಲ ದೇಶಗಳಲ್ಲಿ ಉನ್ನತ ಶಿಕ್ಷಣದ ಅನುದಾನವು ಶೇ 10ಕ್ಕಿಂತಲೂ ಕಡಿಮೆ ಆಗಿದೆ' ಎಂದು ಐರೋಪ್ಯ ವಿಶ್ವವಿದ್ಯಾಲಯಗಳ ಒಕ್ಕೂಟವು (ಇಯುಎ) ಬಿಡುಗಡೆ ಮಾಡಿರುವ ವರದಿಯಲ್ಲಿ ಹೇಳಲಾಗಿದೆ. `ಆದರೆ ಅಚ್ಚರಿಯ ಸಂಗತಿ ಎಂದರೆ, ಒಂಬತ್ತು ದೇಶಗಳು- ಅದರಲ್ಲೂ ಪ್ರಮುಖವಾಗಿ ಫ್ರಾನ್ಸ್, ಜರ್ಮನಿ, ಸ್ವಿಟ್ಜರ್ಲೆಂಡ್‌ನಲ್ಲಿ ಶಿಕ್ಷಣಕ್ಕೆ ನೀಡುವ ಅನುದಾನ ಹೆಚ್ಚಳವಾಗಿದೆ' ಎನ್ನುತ್ತದೆ ಈ ವರದಿ. ಇನ್ನು ಸ್ಕ್ಯಾಂಡಿನೇವಿಯ ದೇಶಗಳಲ್ಲಿ ಒಂದೋ ಅನುದಾನ ಹೆಚ್ಚಿದೆ ಅಥವಾ ಸ್ಥಿರವಾಗಿದೆ.

ಬ್ರಿಟನ್‌ನಲ್ಲಿ ಶಿಕ್ಷಣ ಶುಲ್ಕ ಭಾರಿ ಏರಿಕೆಯಾಗಿದೆ. ಸ್ಥಳೀಯರಿಗೆ ಹಾಗೂ ಐರೋಪ್ಯ ಒಕ್ಕೂಟದ ವಿದ್ಯಾರ್ಥಿಗಳಿಗೆ ವಾರ್ಷಿಕ ಶುಲ್ಕದ ಮಿತಿಯು 9,000 ಪೌಂಡ್ ಅಥವಾ 14,350 ಡಾಲರ್‌ನಷ್ಟು ಹೆಚ್ಚಳವಾಗಿದೆ. ಹಾಗಾಗಿಯೇ ಬ್ರಿಟನ್ ವಿಶ್ವವಿದ್ಯಾಲಯಗಳು ಯುರೋಪ್‌ನಲ್ಲಿಯೇ ಅತ್ಯಂತ ದುಬಾರಿಯಾಗಿಬಿಟ್ಟಿವೆ. ಆರ್ಥಿಕ ಸಹಕಾರ ಹಾಗೂ ಅಭಿವೃದ್ಧಿ ಸಂಸ್ಥೆಯ ಪ್ರಕಾರ ಇಡೀ ವಿಶ್ವದ ಅತ್ಯಂತ ದುಬಾರಿ ವಿವಿಗಳಲ್ಲಿ ಅಮೆರಿಕ ಹಾಗೂ ದಕ್ಷಿಣ ಕೊರಿಯಾ ಬಳಿಕ ಬ್ರಿಟನ್ ಮೂರನೇ ಸ್ಥಾನದಲ್ಲಿ ನಿಲ್ಲುತ್ತದೆ.

ಶಿಕ್ಷಕ ತರಬೇತಿ ಕಾಲೇಜುಗಳು ವಿವಿ ವ್ಯಾಪ್ತಿಗೆ ಒಳಪಡುವ ಕ್ರಮವನ್ನು ವಿರೋಧಿಸಲು ಕಳೆದ ತಿಂಗಳು ಬ್ರಿಟಿಷ್ ವಿಶ್ವವಿದ್ಯಾಲಯಗಳ ಶಿಕ್ಷಣ ತಜ್ಞರು ಹಾಗೂ ಬುದ್ಧಿಜೀವಿಗಳು ಹೊಸ ಮಂಡಳಿಯನ್ನು ರೂಪಿಸಿದ್ದಾರೆ.

ಒಂದು ಕಡೆ ದುಬಾರಿ ಶುಲ್ಕ, ಇನ್ನೊಂದೆಡೆ ಶಿಕ್ಷಣ ಹಾಗೂ ಉತ್ತಮ ಶಿಕ್ಷಕರಿಗೆ ಪ್ರಾಶಸ್ತ್ಯ ನೀಡದೇ ನಿಧಿ ಸಂಗ್ರಹಕ್ಕೆ ಒತ್ತು ನೀಡುತ್ತಿರುವುದು ಶಿಕ್ಷಣ ತಜ್ಞರಲ್ಲಿ ಆತಂಕ ಮೂಡಿಸಿದೆ.
`ಕೆಲವೊಂದು ಕೆಲಸಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸುವಂತೆ ಅನೇಕ ಸರ್ಕಾರಗಳು ಶಿಕ್ಷಣ ಸಂಸ್ಥೆಗಳ ಮೇಲೆ ಹೆಚ್ಚಿನ ಒತ್ತಡ ಹೇರುತ್ತಿವೆ' ಎನ್ನುತ್ತಾರೆ ಐರೋಪ್ಯ ವಿವಿ ಒಕ್ಕೂಟದ ಆಡಳಿತ, ಸ್ವಾಯತ್ತತೆ ಹಾಗೂ ಅನುದಾನ ವಿಭಾಗದ ಮುಖ್ಯಸ್ಥ ಥಾಮಸ್ ಈಸ್ಟರ್‌ಮನ್.

ಐರ್ಲೆಂಡ್‌ನ ಉನ್ನತ ಶಿಕ್ಷಣ ವ್ಯವಸ್ಥೆಯಲ್ಲಿ ದಕ್ಷತೆ ಎನ್ನುವುದು ಹೊಸ ಘೋಷಣೆಯಾಗಿದೆ. ಇಲ್ಲಿನ ಸಾರ್ವಜಿಕ ಶಿಕ್ಷಣ ವ್ಯವಸ್ಥೆಯಲ್ಲಿ ಸುಮಾರು 160,000 ವಿದ್ಯಾರ್ಥಿಗಳಿಗೆ ಶಿಕ್ಷಣ ಹಾಗೂ ತರಬೇತಿ ನೀಡಲಾಗುತ್ತದೆ. 2013ರ ಆರಂಭದಲ್ಲಿ ಉನ್ನತ ಶಿಕ್ಷಣ ಪ್ರಾಧಿಕಾರವು `ನೂತನ ಶಿಕ್ಷಣದ ನೀಲ ನಕ್ಷೆ'ಯನ್ನು ಬಿಡುಗಡೆ ಮಾಡುವ ಸಾಧ್ಯತೆ ಇದೆ. ಐರ್ಲೆಂಡ್‌ನ ಏಳು ವಿಶ್ವವಿದ್ಯಾಲಯಗಳು ಸೇರಿದಂತೆ ಉನ್ನತ ಶಿಕ್ಷಣ ಸಂಸ್ಥೆಗಳು ಯಾವ ರೀತಿಯಲ್ಲಿ ಸಂಯೋಜನೆಗೊಳ್ಳಲಿವೆ ಅಥವಾ ವಿಲೀನವಾಗಲಿವೆ ಎನ್ನುವುದರ ಸ್ಥೂಲ ಚಿತ್ರಣವನ್ನು ಇದು ನಿರೂಪಿಸಲಿದೆ.

`ಕೆಲವೇ ಸಂಸ್ಥೆಗಳು ಅಸ್ತಿತ್ವದಲ್ಲಿ ಇರುತ್ತವೆ: ಅನೇಕ ಸಣ್ಣ ಸಂಸ್ಥೆಗಳು ವಿಲೀನಗೊಳ್ಳಲಿವೆ ಮತ್ತು ಶಿಕ್ಷಣ ಸಂಸ್ಥೆಗಳಲ್ಲಿ ಸೀಮಿತ ವಿಷಯಗಳ ಬೋಧನೆಗೆ ಉತ್ತೇಜನ ನೀಡಲಾಗುತ್ತದೆ' ಎನ್ನುತ್ತಾರೆ ಬೈರನ್.

ಈ ಮಧ್ಯೆ ಐರ್ಲೆಂಡ್‌ನಲ್ಲಿ ಎರಡು ಸಮಸ್ಯೆಗಳು ಎದುರಾಗಿವೆ: ಒಂದು ಕಿರಿದಾದ ಬಜೆಟ್ ಗಾತ್ರ, ಇನ್ನೊಂದು ಅಪಾರ ಸಂಖ್ಯೆಯ ವಿದ್ಯಾರ್ಥಿ ಸಮೂಹ. 90ರ ದಶಕದ ಉತ್ತರಾರ್ಧದಲ್ಲಿ ಹುಟ್ಟಿದವರೆಲ್ಲ ಇದೀಗ ವಿಶ್ವವಿದ್ಯಾಲಯ ಪ್ರವೇಶಿಸುವ ಹಂತಕ್ಕೆ ತಲುಪಿದ್ದಾರೆ. ದಶಕದಲ್ಲಿ 250,000 ವಿದ್ಯಾರ್ಥಿಗಳು ಪದವಿ ಶಿಕ್ಷಣಕ್ಕೆ ಪ್ರವೇಶ ಪಡೆಯುವರು ಎಂದು ಸರ್ಕಾರ ಅಂದಾಜು ಮಾಡಿದೆ.

ಬ್ರಿಟನ್‌ನಲ್ಲಿ ಶಿಕ್ಷಣ ಅನುದಾನವು ಪ್ರಮುಖವಾಗಿ ವಿದ್ಯಾರ್ಥಿ ಶುಲ್ಕವನ್ನು ಅವಲಂಬಿಸಿದೆ. ಸರ್ಕಾರದಿಂದ ನೇರ ಬೆಂಬಲ ಕಡಿಮೆಯಾಗಿರುವ ಕಾರಣ ಎಲ್ಲೆಡೆ ನಿರಾಶಾದಾಯಕ ಸ್ಥಿತಿ ಮನೆ ಮಾಡಿದೆ.

`ಐರ್ಲೆಂಡ್, ಬ್ರಿಟನ್ ಹಾಗೂ ಜರ್ಮನಿಯಲ್ಲಿ ಇತರ ಕ್ಷೇತ್ರಗಳಿಗೆ ಹೋಲಿಸಿದರೆ, ವಿಜ್ಞಾನ ಹಾಗೂ ತಂತ್ರಜ್ಞಾನ ಕೇಂದ್ರಿತ ಸಂಶೋಧನೆಗಳಿಗೆ ಅನುದಾನ ನಿಲ್ಲಿಸುವ ಸಾಧ್ಯತೆ ಕಡಿಮೆ' ಎನ್ನುತ್ತಾರೆ ತಜ್ಞರು.

ಜರ್ಮನಿಯಲ್ಲಿ 22 ಲಕ್ಷಕ್ಕಿಂತಲೂ ಹೆಚ್ಚಿನ ಪದವಿ ವಿದ್ಯಾರ್ಥಿಗಳು ಇದ್ದಾರೆ. ಇಲ್ಲಿನ ವಿಶ್ವವಿದ್ಯಾಲಯಗಳು ಬಹುತೇಕ ಅನುದಾನವನ್ನು16 ರಾಜ್ಯಗಳಿಂದ ಪಡೆಯುತ್ತವೆ. ಇನ್ನು ಸಂಶೋಧನೆಗೆ ನೇರವಾಗಿ ಸರ್ಕಾರವೇ ಅನುದಾನ ನೀಡಬಹುದು.

ಸಂಶೋಧನಾ ಯೋಜನೆ ಹಾಗೂ ಪದವಿ ಕಾಲೇಜುಗಳಿಗೆ ಸರ್ಕಾರ ಅನುದಾನ ನೀಡುತ್ತದೆ. ಅಲ್ಲದೇ ಸಂಶೋಧನಾ ಸಾಮರ್ಥ್ಯವನ್ನು ಆಧರಿಸಿ ಆಯ್ದ ವಿವಿಗಳಿಗೆ ಅನುದಾನ ದೊರೆಯುತ್ತದೆ.

`ಸಂಶೋಧನೆಗಳಿಗೆ ಚೆನ್ನಾಗಿ ಅನುದಾನ ಸಿಗುತ್ತದೆ. ಆದರೆ ಇತರ ಸಾಮಾನ್ಯ ವಿವಿಗಳಿಗೆ ಅಷ್ಟೊಂದು ಅನುದಾನ ಸಿಗುವುದಿಲ್ಲ' ಎನ್ನುತ್ತಾರೆ  ಜರ್ಮನಿ ವಿವಿ ಪ್ರಾಧ್ಯಾಪಕರು ಹಾಗೂ ಉಪನ್ಯಾಸಕರ ಸಂಘದ ಮಥಾಯಿಸ್ ಜರೋಚ್. `ಜರ್ಮನಿಯಲ್ಲಿ ಒಟ್ಟಾರೆ ವಿದ್ಯಾರ್ಥಿಗಳ ಸಂಖ್ಯೆ ವೃದ್ಧಿಯಾಗುತ್ತದೆ. ಆದರೆ ಅನುದಾನ ಮಾತ್ರ ಹರಿದು ಬರುವುದಿಲ್ಲ' ಎನ್ನುವುದು ತಜ್ಞರ ಕಳವಳ.

`ಇಟಲಿಯಲ್ಲಿ ಕಟ್ಟುನಿಟ್ಟಾಗಿ ವೆಚ್ಚ ಕಡಿತ ಕ್ರಮಗಳನ್ನು ಅನುಸರಿಸಲಾಗುತ್ತಿದೆ. ಹಾಗಾಗಿ ಶಿಕ್ಷಣ ವ್ಯವಸ್ಥೆಯು ಕುಸಿದು ಹೋಗುವ ಅಪಾಯದಲ್ಲಿದೆ' ಎನ್ನುತ್ತಾರೆ ಇಟಲಿ ವಿವಿ ಮುಖ್ಯಾಧಿಕಾರಿಗಳ ಸಂಘದ ಅಧ್ಯಕ್ಷರಾದ ಮಾರ್ಕೊ ಮನ್ಸಿನಿ.

`ಉನ್ನತ ಶಿಕ್ಷಣದಲ್ಲಿ ಶೇ14ರಷ್ಟು ವೆಚ್ಚ ಕಡಿತವು ಸಂಶೋಧನೆಯಿಂದ ಹಿಡಿದು ಪ್ರಾಧ್ಯಾಪಕರ ವೇತನದ ಮೇಲೂ ಪರಿಣಾಮ ಬೀರುತ್ತಿದೆ' ಎಂದೂ ಅವರು ಬೇಸರ ವ್ಯಕ್ತಪಡಿಸುತ್ತಾರೆ.

ಈ ನಡುವೆ, ಕೆಲವೊಂದು ದೇಶಗಳಲ್ಲಿ ಸಂಶೋಧನಾ ಕ್ಷೇತ್ರಗಳು ಅನುದಾನವನ್ನು ಉಳಿಸಿಕೊಂಡಿವೆ. ಮತ್ತೆ ಕೆಲವು ದೇಶಗಳು ಉದ್ಯೋಗದಾತರನ್ನು ಗಮನದಲ್ಲಿಟ್ಟುಕೊಂಡು ದಕ್ಷ ಬೋಧನೆಗೆ ಆದ್ಯತೆ ನೀಡಿವೆ.`ಉದ್ಯೋಗಾವಕಾಶ ಕೇಂದ್ರಿತ ಶಿಕ್ಷಣಕ್ಕೆ ಒಲವು ಹೆಚ್ಚಾಗುತ್ತಿದೆ' ಎನ್ನುತ್ತಾರೆ ಉನ್ನತ ಶಿಕ್ಷಣ ಸಂಸ್ಥೆಗಳ ಐರೋಪ್ಯ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಸ್ಟೀಫನ್ ಡೆಲ್‌ಪ್ಲೇಸ್.

`ಉದ್ಯೋಗದಾತರ ಬೇಡಿಕೆ ಪೂರೈಸಲು ಸಮರ್ಥ ಪದವೀಧರರನ್ನು ನೀಡಲು ಯುರೋಪ್ ಹೋರಾಡುತ್ತಿದೆ. ಹಾಗಾಗಿ ಇಲ್ಲಿ ಉನ್ನತ ಮಟ್ಟದ ಬೋಧನೆಗೆ ಒತ್ತು ನೀಡಲಾಗಿದೆ' ಎನ್ನುತ್ತಾರೆ ಡೆಲ್‌ಪ್ಲೇಸ್.

ನೆದರ್‌ಲೆಂಡ್ಸ್‌ನಲ್ಲಿ 650,000 ಕ್ಕಿಂತಲೂ ಹೆಚ್ಚಿನ ಪದವಿ ವಿದ್ಯಾರ್ಥಿಗಳು ಇದ್ದಾರೆ. ಐರ್ಲೆಂಡ್‌ನಂತೆಯೇ ಇಲ್ಲಿಯೂ ಉನ್ನತ ಶಿಕ್ಷಣದಲ್ಲಿ ವೆಚ್ಚ ಕಡಿತ ಕ್ರಮಗಳನ್ನು ಅನುಸರಿಸಲಾಗುತ್ತಿದೆ. ಶಿಕ್ಷಣ ವ್ಯವಸ್ಥೆ ಸುಧಾರಣೆಗೆ ಡಚ್ ಸರ್ಕಾರವು ವಿವಿಗಳಿಗೆ ಹೆಚ್ಚುವರಿ ಅನುದಾನ ಲಭ್ಯವಾಗುವಂತೆ ಮಾಡುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.