ADVERTISEMENT

ವೃತ್ತಿಘನತೆ ಎತ್ತಿಹಿಡಿದ ನಾಗನೂರ

ಮಲ್ಲಿಕಾರ್ಜುನ ಗುಮ್ಮಗೋಳ
Published 10 ಮಾರ್ಚ್ 2018, 19:30 IST
Last Updated 10 ಮಾರ್ಚ್ 2018, 19:30 IST
ವೃತ್ತಿಘನತೆ ಎತ್ತಿಹಿಡಿದ ನಾಗನೂರ
ವೃತ್ತಿಘನತೆ ಎತ್ತಿಹಿಡಿದ ನಾಗನೂರ   

ಅದು 1962ರ ಉತ್ತರಾರ್ಧ. ಭಾರತ ಸರ್ಕಾರವು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ಮೂಲಕ ರಾಕೆಟ್ ಉಡಾವಣಾ ಕೇಂದ್ರ ನಿರ್ಮಾಣಕ್ಕೆ ಕೇರಳದ ತಿರುವನಂತಪುರ ಸಮೀಪದ ‘ತುಂಬ್‌’ ಗ್ರಾಮವನ್ನು ಆಯ್ಕೆ ಮಾಡಿಕೊಂಡಿತು. ಆಯಸ್ಕಾಂತೀಯ ಆಕರ್ಷಣೆ (ಮ್ಯಾಗ್ನೆಟಿಕ್ ಈಕ್ವೇಟರ್) ಮತ್ತು ಭೂಮಿಯ ಗುರುತ್ವಾಕರ್ಷಣ ಬಲ ಇಲ್ಲಿ ಕೇಂದ್ರೀಕೃತವಾಗಿದ್ದನ್ನು ಪತ್ತೆ ಹಚ್ಚಿದ್ದ ವಿಜ್ಞಾನಿಗಳು ಇದು ರಾಕೆಟ್ ಉಡಾವಣೆಗೆ ಸೂಕ್ತವಾದ ಸ್ಥಳ ಎಂದು ಗುರುತಿಸಿದ್ದರು.

ಸುಮಾರು ಎರಡೂವರೆ ಕಿಲೋ ಮೀಟರ್ ಉದ್ದ ಮತ್ತು 600 ಎಕರೆ ವಿಸ್ತೀರ್ಣದಲ್ಲಿ ಹರಡಿಕೊಂಡಿದ್ದ ತುಂಬ್‌ ಗ್ರಾಮದ ಒಂದು ಬದಿಯಲ್ಲಿ ರೈಲ್ವೆ ಮಾರ್ಗ ಹಾದು ಹೋಗಿದ್ದರೆ ಮತ್ತೊಂದು ಬದಿಯಲ್ಲಿ ಅರಬ್ಬಿ ಸಮುದ್ರ ಮೈ ಚಾಚಿತ್ತು. ಮೀನುಗಾರಿಕೆಯೇ ಮೂಲ ಕಸುಬಾಗಿದ್ದ ಈ ಗ್ರಾಮದಲ್ಲಿ, ಪುರಾತನ ಸೇಂಟ್ ಮೇರಿ ಮ್ಯಾಗ್ಡೇಲಿನ್ ಚರ್ಚೂ ಇತ್ತು. ಇದು ಇಲ್ಲಿನ ಮೂಲ ನಿವಾಸಿಗಳ ಧಾರ್ಮಿಕ ಕೇಂದ್ರವೂ ಆಗಿತ್ತು. ಇಲ್ಲಿ ಉಡಾವಣಾ ಕೇಂದ್ರ ಸ್ಥಾಪನೆ ಮಾಡುವುದಕ್ಕೆ ಭೂಸ್ವಾಧೀನ ಪ್ರಕ್ರಿಯೆ ಕೈಗೊಳ್ಳಬೇಕಿತ್ತು. ಆದರೆ, ಅದು ಹೇಗೆಂಬುದು ಜಿಲ್ಲಾಡಳಿತಕ್ಕೆ ತಲೆನೋವಿನ ಸಂಗತಿಯಾಗಿತ್ತು. ಈ ಹಳವಂಡದಲ್ಲಿದ್ದ ತಿರುವನಂತಪುರದ ಜಿಲ್ಲಾಧಿಕಾರಿಯು ಚರ್ಚ್‌ನ ಬಿಷಪ್ ರೆವರೆಂಡ್ ಡಾ.ಡೆರೈರಾ ಅವರನ್ನು ಕಂಡು, ತಮ್ಮ ಸಂಕಟ ಬಿನ್ನವಿಸಿಕೊಂಡರು. ಜಿಲ್ಲಾಧಿಕಾರಿಗಳ ಮಾತಿಗೆ ಮರು ಮಾತನಾಡದ ಫಾದರ್‌, ಉದಾತ್ತ ಧ್ಯೇಯ ಸಾಧನೆಗೆ ಚರ್ಚ್ ಬಿಟ್ಟುಕೊಡಲು ತುಂಬು ಮನಸ್ಸಿನಿಂದ ಮುಂದಾಗಿ ಇಡೀ ಚರ್ಚನ್ನೇ ಹಸ್ತಾಂತರಿಸಿದರು. ಇದೇ ಬಾಹ್ಯಾಕಾಶ ಕೇಂದ್ರದ ಮೊದಲ ಕಚೇರಿ. ಇಲ್ಲಿನ ಪ್ರಾರ್ಥನಾ ಸ್ಥಳ ಡಾ.ಅಬ್ದುಲ್ ಕಲಾಂರ ಪ್ರಥಮ ಪ್ರಯೋಗಾಲಯ! ಬಿಷಪ್‌ ಇದ್ದ ಕೋಣೆಯೇ ವಿಜ್ಞಾನಿಗಳ ಡ್ರಾಯಿಂಗ್ ಮತ್ತು ವಿನ್ಯಾಸ ಕೊಠಡಿ. ತ್ಯಾಗದ ಸಂಕೇತವಾದ ಈ ಚರ್ಚ್, ಇಲ್ಲಿ ವೈಭವದಿಂದ ಇಂದಿಗೂ ಕಂಗೊಳಿಸುತ್ತಿದೆ ಮತ್ತು ಭಾರತೀಯ ಬಾಹ್ಯಾಕಾಶ ಸಂಸ್ಥೆಯ ಮ್ಯೂಸಿಯಂ ಕೂಡಾ ಆಗಿ ಪರಿವರ್ತನೆಯಾಗಿದೆ.

ಇಪ್ಪತ್ತನೇ ಶತಮಾನದ ಆರಂಭದಲ್ಲಿ ನಿರ್ಮಾಣಗೊಂಡ ಇಂದಿನ ಕೃಷ್ಣರಾಜಸಾಗರ ಅಣೆಕಟ್ಟು ತಲೆ ಎತ್ತಿದ್ದು ಅಂದು ಅಲ್ಲಿದ್ದ ಕನ್ನಂಬಾಡಿ ಗ್ರಾಮದ ಒಡಲಲ್ಲಿ. ಈ ಅಣೆಕಟ್ಟೆಗಾಗಿ ಗ್ರಾಮದ ಸುಮಾರು 10 ಸಾವಿರ ಜನರನ್ನು ಒಕ್ಕಲೆಬ್ಬಿಸಲಾಯಿತು. ಅಣೆಕಟ್ಟೆಗೆ ‘ಕನ್ನಂಬಾಡಿ ಕಟ್ಟೆ’ ಎಂದು ಹೆಸರಿಡಬೇಕೆಂಬ ವಾಗ್ದಾನದ ಮೇಲೆಯೇ ಇಲ್ಲಿನ ಜನರೆಲ್ಲಾ ಮೈಸೂರು ಮಹಾರಾಜರಿಗೆ ತಮ್ಮ ಜಮೀನು ಬಿಟ್ಟುಕೊಟ್ಟರು. ಆದರೆ ಕಾಲಾನಂತರದಲ್ಲಿ ಅದು ಕೆಆರ್‌ಎಸ್‌ ಆಗಿ ಪರಿವರ್ತನೆಗೊಂಡಿತು.

ADVERTISEMENT

ಭೂ ಸ್ವಾಧೀನಕ್ಕೆ ಸಂಬಂಧಿಸಿದ ಪ್ರಕರಣಗಳು ನ್ಯಾಯಾಲಯದ ಮೆಟ್ಟಿಲು ಹತ್ತಿದಾಗಲೆಲ್ಲಾ ‘ತುಂಬ್‌’ ಹಾಗೂ ‘ಕನ್ನಂಬಾಡಿ’ ಗ್ರಾಮಸ್ಥರ ಹೃದಯ ವೈಶಾಲ್ಯ ನನ್ನ ಕಣ್ಣಮುಂದೆ ಸುಳಿದು ಹೋಗುತ್ತಿದ್ದವು. ಇಂತಹುದೇ ಒಂದು ಸಂದರ್ಭ ಅಂದರೆ; 2000ದ ಆರಂಭದಲ್ಲಿ, ಭೂಸ್ವಾಧೀನ ಪ್ರಕ್ರಿಯೆಯಲ್ಲಿ ಸೂಕ್ತ ಪರಿಹಾರ ಸಿಗದೆ ಕಾನೂನು ಹೋರಾಟದಲ್ಲಿ ತೊಡಗಿಸಿಕೊಂಡು ಕೇಸು ನಡೆಸಿಕೊಟ್ಟ ವಕೀಲರು ತಮ್ಮ ಕಕ್ಷಿದಾರನಿಂದ ಸಂಭಾವನೆ ಪಡೆಯುವ ವಿಚಾರದಲ್ಲಿ ಕೋರ್ಟ್‌ ಕಟಕಟೆ ಏರಿದ ಸ್ವಾರಸ್ಯಕರ ಪ್ರಕರಣಕ್ಕೆ ನಾನು ಸಾಕ್ಷಿಯಾಗಿದ್ದೆ.

ಭೂ ಸ್ವಾಧೀನ ಕಾಯ್ದೆ–1984ರ ಅಡಿಯಲ್ಲಿ ಕೇಂದ್ರ, ರಾಜ್ಯ ಸರ್ಕಾರಗಳು ಲೋಕೋಪಯೋಗಿ ಉದ್ದೇಶಕ್ಕಾಗಿ ಯಾವುದೇ ಖಾಸಗಿ ಸ್ವತ್ತು, ಜಮೀನುಗಳನ್ನು ವಶಪಡಿಸಿಕೊಂಡು ಸ್ವತ್ತಿನ ಮಾಲೀಕರಿಗೆ ಪರಿಹಾರ ನೀಡುವ ವಿಧಾನ ಜಾರಿಯಲ್ಲಿದೆ. ರಸ್ತೆ, ರೈಲು ಮಾರ್ಗ, ಕೆರೆ-ಕಟ್ಟೆ, ಅಣೆಕಟ್ಟು, ಆಸ್ಪತ್ರೆ, ಸರ್ಕಾರಿ ಕಟ್ಟಡಗಳ ನಿರ್ಮಾಣ, ಮಿಲಿಟರಿ ವಸಾಹತು, ದೇಶದ ರಕ್ಷಣೆಗೆ, ಗ್ರಾಮೀಣ ಮೂಲ ಸೌಕರ್ಯಕ್ಕೆ, ಬಡವರಿಗೆ ವಾಸದ ಮನೆಗಳಿಗೆ, ಕೈಗಾರಿಕಾ ಕಾರಿಡಾರ್‌ಗಳಿಗೆ, ಸಾರ್ವಜನಿಕ ಮತ್ತು ಖಾಸಗಿ ಪಾಲುದಾರಿಕೆ (ಪಿಪಿಪಿ) ಯೋಜನೆ... ಹೀಗೆ ಯಾವುದೇ ಅಭಿವೃದ್ಧಿ ಕಾರ್ಯಗಳ ಉದ್ದೇಶಕ್ಕೆ ಸರ್ಕಾರವು ಸಾರ್ವಜನಿಕರ ಸ್ಥಿರಾಸ್ತಿಯನ್ನು ಸ್ವಾಧೀನಕ್ಕೆ ಪಡೆಯಬಹುದು.

ಸ್ವಾತಂತ್ರ್ಯೋತ್ತರ ಭಾರತ ಸರ್ಕಾರ ತಾನು ಪಾಲಿಸಿಕೊಂಡು ಬಂದಿದ್ದ ಪುರಾತನ ಬ್ರಿಟಿಷ್‌ ಕಾಯ್ದೆಯನ್ನು 2014ರಲ್ಲಿ ರದ್ದುಗೊಳಿಸಿ ‘ಭೂಸ್ವಾಧೀನ ಪ್ರಕ್ರಿಯೆಯಲ್ಲಿ ನ್ಯಾಯೋಚಿತ ಪರಿಹಾರದ ಹಕ್ಕು ಮತ್ತು ಪಾರದರ್ಶಕತೆ ಕಾಯ್ದೆ’ ಜಾರಿಗೆ ತಂದಿತು.

ಭೂ ಸ್ವಾಧೀನವು ಸಾರ್ವಜನಿಕ ಉದ್ದೇಶದ ವ್ಯಾಖ್ಯಾನಕ್ಕೆ ಸ್ಪಷ್ಟವಾಗಿರಬೇಕು. ಅತಿ ಹೆಚ್ಚು ಸಂಖ್ಯೆಯ ಜನರಿಗೆ ನೇರವಾಗಿ ಅನುಕೂಲವಾಗುವಂತಿರಬೇಕು. ಇಡೀ ಸಮುದಾಯದ ಹಿತ ಕಾಯುವಂತಿರಬೇಕು. ಖಾಸಗಿ ಲಾಭ ಅಥವಾ ಸಟ್ಟಾ ಹೂಡಿಕೆಗಳಿಗೆ ಅನುಕೂಲ ಮಾಡಿಕೊಡಲು ಈ ಪ್ರಕ್ರಿಯೆ ನಡೆಯುವಂತಿಲ್ಲ... ಎಂಬ ಅಂಶಗಳು ಈ ಕಾಯ್ದೆಯ ಮುಖ್ಯ ಆಶಯ. ಆದಾಗ್ಯೂ, ಅಭಿವೃದ್ಧಿಯ ನೆಪದಲ್ಲಿ ಹಲವು ಜನವಸತಿ ಪ್ರದೇಶಗಳು ಒಕ್ಕಲೆದ್ದು, ಇಡೀ ಗ್ರಾಮಗಳೇ ಮುಳುಗಿ ಹೋಗಿ ಅಲ್ಲಿನ ಮೂಲನಿವಾಸಿಗಳ ಬದುಕು ಮೂರಾಬಟ್ಟೆಯಾದ ಲಕ್ಷಾಂತರ ಕಥೆಗಳು ನಮ್ಮ ಕಣ್ಣಮುಂದಿವೆ.

ಇಂತಹುದೇ ಒಂದು ಕಾರಣಕ್ಕಾಗಿ ಭೂಸ್ವಾಧೀನ ಪ್ರಕ್ರಿಯೆಯಲ್ಲಿ ನೊಂದು-ಬೆಂದ ಗ್ರಾಮದ ಜನತೆ ನ್ಯಾಯಾಲಯದ ಬಾಗಿಲು ಬಡಿದಿದ್ದರು. ಅದುವೇ ಹುಬ್ಬಳ್ಳಿ–ಧಾರವಾಡ ನಡುವಿನ ಭೈರಿದೇವರ ಕೊಪ್ಪ, ಅಮರಗೋಳ ಮತ್ತು ಉಣಕಲ್‌ ಪ್ರದೇಶದ ಗ್ರಾಮಸ್ಥರ ಕಥೆ. ಉದ್ದೇಶಿತ ಕೃಷಿ ಉತ್ಪನ್ನ ಮಾರುಕಟ್ಟೆ (ಎಪಿಎಂಸಿ) ನಿರ್ಮಾಣಕ್ಕೆ ಈ ಮೂರು ಗ್ರಾಮಗಳ ಜನರು 1990ರ ದಶಕದ ಆರಂಭಿಕ ದಿನಗಳಲ್ಲಿ ತಮ್ಮ ಕೃಷಿ ಜಮೀನುಗಳನ್ನು ಬಿಟ್ಟುಕೊಡಬೇಕಾಗಿ ಬಂತು. ಅವರೆಲ್ಲಾ ಮುಕ್ತ ಮನಸ್ಸಿನಿಂದಲೇ ಸರ್ಕಾರದ ತೀರ್ಮಾನಕ್ಕೆ ತಲೆ ಬಾಗಿದ್ದರು. ಆದರೆ, ತಾವು ಕಳೆದುಕೊಂಡ ಜಮೀನಿಗೆ ಮತ್ತು ಅದಕ್ಕಾಗಿ ತಮಗೆ ಸೇರಬೇಕಾದ ಪರಿಹಾರದ ಹಣ ನ್ಯಾಯೋಚಿತವಾಗಿಲ್ಲ ಎಂಬ ಕೊರಗು ಅವರಲ್ಲಿ ಹಾಗೇ ಉಳಿದಿತ್ತು. ಗ್ರಾಮಸ್ಥರ ಈ ಕೊರಗಿಗೆ ದನಿಯಾದವರು ಸ್ಥಳೀಯ ಜನಪ್ರಿಯ ವಕೀಲರೂ ಎನಿಸಿದ್ದ ಚಂದ್ರಶೇಖರ ಎಸ್. ನಾಗನೂರ.

ಜಮೀನು ಕಳೆದುಕೊಂಡ ಗ್ರಾಮಸ್ಥರ ಪರವಾಗಿ ನಾಗನೂರರು ನ್ಯಾಯಾಲಯದಲ್ಲಿ ದಾವೆ ಹೂಡಿದರು. ತಾವೇ ಆರಂಭಿಕ ವೆಚ್ಚಗಳನ್ನೂ ಭರಿಸಿದ್ದರು. ಕಕ್ಷಿದಾರ ಗ್ರಾಮಸ್ಥರ ಪರವಾಗಿ ತಿರುಪತಿ ಎಂಬ ಮುಖಂಡ ನಾಗನೂರ ಅವರಿಗೆ ಜಮೀನು ಕಳೆದುಕೊಂಡ ಹಳ್ಳಿಗರಿಂದ ಕೇಸುಗಳನ್ನು ತಂದು ಕೊಡುತ್ತಿದ್ದ. ಮಧ್ಯವರ್ತಿಯಾಗಿ ಕಮಿಷನ್ ಕೂಡಾ ಪಡೆಯುತ್ತಿದ್ದ ಅಷ್ಟೇಕೆ, ಗ್ರಾಮಸ್ಥರನ್ನು ತನ್ನ ಅಂಕೆಯಲ್ಲಿ ಇಟ್ಟುಕೊಂಡಿದ್ದ.

ನಾಗನೂರ ಅವರು ಸಂಭಾವನೆ ವಿಚಾರದಲ್ಲಿ ಕಕ್ಷಿದಾರರ ಮಾತು ನಂಬಿಯೇ ಮುನ್ನಡೆಯುತ್ತಿದ್ದರು. ಪರಿಹಾರದ ಹಣ ಕಕ್ಷಿದಾರರ ಕೈ ಸೇರಿದ ಮೇಲೆಯೇ ತಮ್ಮ ಸಂಭಾವನೆಯನ್ನು ಕೇಳಿ ಪಡೆಯುತ್ತಿದ್ದರು. ಇಂತಹ ಭೂ ಸ್ವಾಧೀನ ವ್ಯಾಜ್ಯಗಳಲ್ಲಿ ಕೆಲವು ವಕೀಲರು ಪರಿಹಾರದ ಮೊತ್ತದಲ್ಲಿ ಶೇ 25ರಷ್ಟು ಸಂಭಾವನೆ ಪಡೆಯುತ್ತಿದ್ದರೆ, ನಾಗನೂರ ಮಾತ್ರ ಯಾವುದೇ ನಿರ್ದಿಷ್ಟ ಸಂಭಾವನೆ ಪಡೆಯದೆ ಬಡ ಕಕ್ಷಿದಾರರ ಅನುಕೂಲ ನೋಡಿಕೊಂಡು ವ್ಯವಹರಿಸುತ್ತಿದ್ದರು. ಹೀಗಾಗಿ ಅವರಿಗೆ ಶುದ್ಧಹಸ್ತದ ವಕೀಲರು ಎಂಬ ಹೆಸರಿತ್ತು.

ನಿರೀಕ್ಷೆಯಂತೆ ನಾಗನೂರ ಅವರು ಎಪಿಎಂಸಿ ನಿರ್ಮಾಣದ ಭೂ ಸ್ವಾಧೀನ ಪ್ರಕರಣದಲ್ಲಿ ಹುಬ್ಬಳ್ಳಿ ಸಿವಿಲ್ ನ್ಯಾಯಾಲಯದಿಂದ, ಸುಪ್ರೀಂ ಕೋರ್ಟಿನವರೆಗೂ ಹೋರಾಡಿ ಕಕ್ಷಿದಾರರಿಗೆ ದೊಡ್ಡ ಮೊತ್ತದ ಪರಿಹಾರದ ಐ-ತೀರ್ಪು ಕೊಡಿಸುವಲ್ಲಿ ಯಶಸ್ವಿಯಾಗಿದ್ದರು. ಈ ಮಜಲುಗಳೆಲ್ಲಾ ಮುಗಿಯಲು ಏಳೆಂಟು ವರ್ಷಗಳೇ ಹಿಡಿದಿದ್ದವು.

ಐ–ತೀರ್ಪೇನೊ ಬಂದಿತ್ತು. ಆದರೆ, ಸೂಕ್ತ ಸಮಯಕ್ಕೆ ಪರಿಹಾರದ ಹಣ ದೊರೆತಿರಲಿಲ್ಲ. ಹೀಗಾಗಿ ಪರಿಹಾರದ ಮೊತ್ತವನ್ನು ಪಡೆಯಲು ಭೂ ಸಂತ್ರಸ್ತರು ನ್ಯಾಯಾಲಯಕ್ಕೆ ಅಮಲ್ಜಾರಿ (ಎಕ್ಸಿಕ್ಯೂಷನ್) ಅರ್ಜಿ ಸಲ್ಲಿಸಿದರು. ಭೂ ಸ್ವಾಧೀನದ ಸಂತ್ರಸ್ತರಿಗೆ ನ್ಯಾಯಾಲಯದಲ್ಲಿ ಪ್ರಕರಣ ದಾಖಲು ಮಾಡಿದ ದಿನದಿಂದ ಪರಿಹಾರದ ಹಣ ನೀಡುವ ದಿನದವರೆಗೂ ಬಡ್ಡಿ ಸಮೇತ ಪರಿಹಾರದ ಮೊತ್ತ ನೀಡಬೇಕೆಂಬ ಪೂರ್ವ ನಿದರ್ಶನಗಳೂ ಇವೆ. ಆದ್ದರಿಂದ ನಮಗೆ ಸೇರಬೇಕಾದ ನ್ಯಾಯಯುತ ಪರಿಹಾರವನ್ನು ಸಂಪೂರ್ಣವಾಗಿ ನೀಡಲು ನಿರ್ದೇಶಿಸಬೇಕು ಎಂದು ಇವರೆಲ್ಲಾ ಕೋರಿದ್ದರು.

ಈ ಅಹವಾಲನ್ನು ಮಾನ್ಯ ಮಾಡಿದ ನ್ಯಾಯಾಲಯ, ಪ್ರತಿವಾದಿ ಸರ್ಕಾರದ ವಿರುದ್ಧ ಕಚೇರಿ ಆಸ್ತಿಗಳ ಜಪ್ತಿಗೆ ಆದೇಶ ಹೊರಡಿಸಿತು. ಎಚ್ಚೆತ್ತುಕೊಂಡ ಸರ್ಕಾರ ತಡಮಾಡದೆ ಪರಿಹಾರದ ಹಣವನ್ನು ನ್ಯಾಯಾಲಯದಲ್ಲಿ ಠೇವಣಿಯಾಗಿ ಇರಿಸಿತು. ಬಹುತೇಕ ಕಕ್ಷಿದಾರರು ಮಾತಿಗೆ ತಪ್ಪದೆ ನಾಗನೂರ ವಕೀಲರಿಗೆ ಸಂಭಾವನೆ ನೀಡಿದರು. ಆದರೆ ತಿರುಪತಿ ಮಾತ್ರ ಪರಿಹಾರ ಪಡೆಯಲು ನಾಗನೂರ ಕಡೆಯಿಂದ ಅಮಲ್ಜಾರಿ ಅರ್ಜಿ ಸಲ್ಲಿಸದೆ, ತನ್ನ ಸಂಬಂಧಿಕ ವಕೀಲರ ಮೂಲಕ ಸಲ್ಲಿಸಿದ್ದ. ಅನೇಕ ದಿನಗಳ ನಂತರ ನಾಗನೂರ ಅವರ ಗಮನಕ್ಕೆ ಈ ವಿಚಾರ ಬಂತು. ಒಂದು ದಿನ ಅವನನ್ನು ಭೇಟಿಯಾಗಿ, ‘ಯಾಕಪ್ಪಾ, ತಿರುಪತೀ, ನನ್ನ ಫೀಸು ಕೊಡಬೇಕಾಗ್ತೇತಿ ಅಂತಾ ಬ್ಯಾರೇ ವಕೀಲರ ಕೂಡಿ ಅರ್ಜಿ ಹಾಕಿಯೇನು, ಮಾತಿಗೆ ತಪ್ಪದೇ ನನ್‌ ಫೀಸು ಕೊಟ್ಟುಬಿಡು’ ಎಂದರು. ತಿರುಪತಿ ಮಾತ್ರ ನಾಗನೂರರ ಈ ಮಾತಿಗೆ ಕಿವಿಗೊಡಲಿಲ್ಲ.

ಇದರಿಂದ ಕುಪಿತರಾದ ನಾಗನೂರ, ತಿರುಪತಿಯ ಅಮಲ್ಜಾರಿ ಅರ್ಜಿಗೆ ನ್ಯಾಯಾಲಯದಲ್ಲಿ ತಕರಾರು ಸಲ್ಲಿಸಿದರು. ತಮಗೆ ಸೇರಬೇಕಾದ ಫೀಸು ಕೊಡಿಸಿಕೊಡುವಂತೆ ಮನವಿ ಮಾಡಿದರು. ಇದಕ್ಕೆ ನ್ಯಾಯಾಲಯವು, ‘ನಿಮ್ಮ ವಕಾಲತ್ತಿರುವುದು ಭೂ ಸ್ವಾಧೀನ ಪ್ರಕರಣದಲ್ಲಿ ಮಾತ್ರ. ಆದ್ದರಿಂದ ಅಮಲ್ಜಾರಿ ಅರ್ಜಿಯಲ್ಲಿ ನಿಮ್ಮ ಪಾತ್ರಕ್ಕೆ ಫೀಸು ಕೇಳಲು ಅವಕಾಶವಿಲ್ಲ’ ಎಂದು ಅವರ ಅಹವಾಲನ್ನು ಸಾರಾಸಗಟಾಗಿ ತಿರಸ್ಕರಿಸಿತು.

ಈ ಆದೇಶ ಪ್ರಶ್ನಿಸಿದ ನಾಗನೂರ, ತಿರುಪತಿ ವಿರುದ್ಧ ‘ಹಣ ವಸೂಲಿ ದಾವಾ’ ಹೂಡಿದರು. ‘ನನ್ನ ಸಂಭಾವನೆ ನೀಡುವವರೆಗೂ ತಿರುಪತಿಯ ಅಮಲ್ಜಾರಿ ಅರ್ಜಿ ವಿಚಾರಣೆ ತಡೆ ಹಿಡಿಯಬೇಕು’ ಎಂದು ವಿನಂತಿಸಿ ತಡೆಯಾಜ್ಞೆ ಪಡೆದರು.

ತಿರುಪತಿಯ ವಕೀಲರು ಇದಕ್ಕೆ ಪ್ರತಿಯಾಗಿ ಆಕ್ಷೇಪಣೆ ಸಲ್ಲಿಸಿ, ‘ಭೂ ಸ್ವಾಧೀನ ಪರಿಹಾರ ಮೊತ್ತದ ಪ್ರಕರಣಗಳನ್ನು ಬೇರೆ ಪ್ರಕರಣದೊಂದಿಗೆ ಅಟ್ಯಾಚ್‌ಮೆಂಟ್ ಮಾಡಲು ಸಾಧ್ಯವಿಲ್ಲ’ ಎಂದು ವಾದ ಮಂಡಿಸಿದರು. ಇದಕ್ಕೆ ಪೂರಕವಾಗಿ, ಸುಪ್ರೀಂ ಕೋರ್ಟ್‌ ತೀರ್ಪುಗಳನ್ನು ಉಲ್ಲೇಖಿಸಿ ಪರಿಹಾರದ ಮೊತ್ತವನ್ನು ಕೂಡಲೇ ಬಿಡುಗಡೆ ಮಾಡುವಂತೆ ಕೇಳಿಕೊಂಡರು.

ಇದರಿಂದ ಧೃತಿಗೆಡದ ನಾಗನೂರ, ತಿರುಪತಿಯ ಮೂಲಕ ಕೇಸು ನೀಡಿದ್ದ ಗ್ರಾಮಸ್ಥರನ್ನೇ ಸಾಕ್ಷೀದಾರರನ್ನಾಗಿ ವಿಚಾರಣೆ ಮಾಡಿದರು.

ಕಲ್ಲಪ್ಪ ಎಂಬ ಸಾಕ್ಷಿಯು, ‘ನಾಗನೂರ ವಕೀಲರನ್ನು ನಮ್ಮ ಬಳಿಗೆ ಕರೆದುಕೊಂಡು ಬಂದದ್ದೇ ತಿರುಪತಿ. ನಾಗನೂರ ಭೂಸ್ವಾಧೀನ ಪರಿಹಾರ ಪ್ರಕರಣಗಳನ್ನು ಚೆನ್ನಾಗಿ ನಡೆಸುತ್ತಾರೆ. ನಮಗೆಲ್ಲಾ ನ್ಯಾಯ ಕೊಡಿಸಿದ್ದಾರೆ. ಪರಿಹಾರ ದೊರೆತ ನಂತರವೇ ವಕೀಲರ ಶುಲ್ಕ ಕೊಡುತ್ತೇವೆ ಎಂದು ನಾವೆಲ್ಲಾ ಮೊದಲೇ ಮಾತು ಕೊಟ್ಟಿದ್ದೆವು. ತಿರುಪತಿಯೂ ಸೇರಿದಂತೆ ನಾವ್ಯಾರೂ ವಕೀಲರಿಗೆ ಮುಂಗಡ ಫೀಸು ಕೊಟ್ಟಿರುವುದಿಲ್ಲ. ಪರಿಹಾರ ದೊರೆತ ನಂತರ, ವಕೀಲರ ಸಂಭಾವನೆಯಾಗಿ, ಪರಿಹಾರದ ಮೊತ್ತದಲ್ಲಿ ಶೇ 15ರಷ್ಟನ್ನು ನೀಡಿದ್ದೇವೆ’ ಎಂಬ ಅಂಶವನ್ನು ನ್ಯಾಯಾಲಯಕ್ಕೆ ಸಾಬೀತು ಪಡಿಸಿದರು.

ಪ್ರಕರಣದ ಮುಂದಿನ ವಾಯಿದೆ ವೇಳೆಗೆ ತಿರುಪತಿಯ ವಕೀಲರು, ನ್ಯಾಯಾಲಯಕ್ಕೆ ಹಾಜರಾಗಿ, ₹ 5 ಸಾವಿರದ ಚೆಕ್ ಸಲ್ಲಿಸಿದರು. ‘ಕರ್ನಾಟಕ ಸಿವಿಲ್ ರೂಲ್ಸ್‌ ಆಫ್ ಪ್ರ್ಯಾಕ್ಟೀಸ್–1967ರ, 100ನೇ ನಿಯಮ ಉಲ್ಲೇಖಿಸಿ, ವಕೀಲರ ಸೇವೆ ಪಡೆದಾಗ ಕಕ್ಷಿದಾರ ನೀಡಬೇಕಾದ ಗರಿಷ್ಠ ಸಂಭಾವನೆ ₹ 5 ಸಾವಿರ ಇದೆ. ಕನಿಷ್ಠ ಸಂಭಾವನೆ ₹ 500 ಇದೆ. ವಕೀಲರು ಇದಕ್ಕಿಂತ ಹೆಚ್ಚಿನ ಸಂಭಾವನೆ ಪಡೆಯಲು ಅವಕಾಶ ಇಲ್ಲ. ಆದ್ದರಿಂದ ಈ ಪ್ರಕರಣವನ್ನು ಮುಕ್ತಾಯಗೊಳಿಸಿ, ಪರಿಹಾರ ಮೊತ್ತ ಬಿಡುಗಡೆ ಮಾಡಬೇಕು’ ಎಂದು ವಾದ ಮಂಡಿಸಿದರು.

ಕುತಂತ್ರವನ್ನೇ ಮೇಳೈಸಿಕೊಂಡಿದ್ದ ತಿರುಪತಿಗೆ ತನ್ನ ಕೆಡುಕು ಬುದ್ಧಿ ಥಟ್ಟನೆ ಜಾಗೃತವಾಯಿತು. ನ್ಯಾಯಾಲಯದಲ್ಲಿ ಸಾಕ್ಷಿ ಹೇಳಿದ್ದ ಕಲ್ಲಪ್ಪನ ಹೇಳಿಕೆಯ ದೃಢೀಕೃತ ನಕಲು ಪಡೆದು, ‘ನಾಗನೂರ ವಕೀಲರು ಎಲ್ಲಾ ಪ್ರಕರಣಗಳಲ್ಲಿಯೂ ಶೇ 15ರಷ್ಟು ಪ್ರಮಾಣದ ಫೀಸು ಪಡೆದಿದ್ದಾರೆ. ಇದಕ್ಕೆ ಅವರು ಆದಾಯ ತೆರಿಗೆ ಪಾವತಿ ಮಾಡಿಲ್ಲ. ಈ ಕುರಿತು ನಾನು ಆದಾಯ ತೆರಿಗೆ ಇಲಾಖೆಗೆ ದೂರು ಸಲ್ಲಿಸಿ ಅವರ ಮನೆ, ಕಚೇರಿ ಮೇಲೆ ಐ.ಟಿ ದಾಳಿ ಮಾಡಿಸುತ್ತೇನೆ ಎಂಬುದಾಗಿ, ತನ್ನ ಶಿಷ್ಯನ ಮೂಲಕ ನಾಗನೂರ ಅವರ ಕಿವಿಗೆ ಈ ಸುದ್ದಿ ಮುಟ್ಟುವಂತೆ ನೋಡಿಕೊಂಡ.

ಯಾರಿಗೂ ಮೋಸ ಮಾಡದ ನಾಗನೂರ ವಕೀಲರು ಇದರಿಂದ ತೀವ್ರವಾಗಿ ನೊಂದುಕೊಂಡರು ಮತ್ತು ತಿರುಪತಿಯ ಮನೆಗೆ ಹೋಗಿ ಅವನ ತಂದೆ–ತಾಯಿ ಮತ್ತು ಊರ ಜನರ ಮುಂದೆ ತಿರುಪತಿ ತನಗೆ ಮಾಡಿರುವ ವಂಚನೆಯ ಬಗ್ಗೆ ಬಹಿರಂಗವಾಗಿ ನೊಂದು ನುಡಿದರು. ತಿರುಪತಿ ವಿರುದ್ಧ ದಾಖಲಿಸಿದ್ದ ‘ಹಣ ವಸೂಲಿ ದಾವೆ’ಯನ್ನೂ ಹಿಂಪಡೆದರು.

ಇದಾದ ಸ್ವಲ್ಪ ದಿನಗಳ ನಂತರ ತಿರುಪತಿಯ ತಂದೆ ಶಿವಪ್ಪ ಅವರು, ನಾಗನೂರ ಅವರಿಗೆ ಫೋನಾಯಿಸಿ ಅವರನ್ನು ತಮ್ಮ ಊರಿಗೆ ಕರೆಸಿಕೊಂಡು ಅವರ ಕೈಗೆ ಬಟ್ಟೆಯಲ್ಲಿ ಸುತ್ತಿದ ನೋಟಿನ ಕಂತೆಗಳನ್ನು ಇಟ್ಟು ಆಗಿಹೋದ ಕಹಿಘಟನೆ ಮರೆಯುವಂತೆ ಕೇಳಿದರು. ಇದರಿಂದ ಭಾವುಕರಾದ ನಾಗನೂರ, ಆ ಹಣವನ್ನು ವಾಪಸು ಶಿವಪ್ಪನವರ ಕೈಗಿಟ್ಟು, ‘ನಾನು ನಿಮ್ಮೂರಿನ ಅನ್ನ ಉಂಡಿದ್ದೇನೆ. ಈ ಹಣ ನನಗೆ ಬೇಡ. ಇದನ್ನು ದೇವಸ್ಥಾನದ ಅಭಿವೃದ್ಧಿಗೆ ಬಳಸಿಕೊಳ್ಳಿ’ ಎಂದು ಕೈಮುಗಿದರು.

ಆತ್ಮಸಾಕ್ಷಿಗೆ ಅನುಗುಣವಾಗಿ ನಡೆದ ದಿವಂಗತ ನಾಗ ನೂರರಂತಹ ಎಷ್ಟು ವಕೀಲರು ನಮಗಿಂದು ಸಿಗಬಲ್ಲರು?
(ಲೇಖಕ–ನ್ಯಾಯಾಂಗ ಅಧಿಕಾರಿ ಹೆಸರುಗಳನ್ನು ಬದಲಾಯಿಸಲಾಗಿದೆ.)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.