ADVERTISEMENT

ಶಿಕ್ಷಣ ಮಾಧ್ಯಮ-: ಒಂದು ಜಿಜ್ಞಾಸೆ

ಜಿನದತ್ತ ದೇಸಾಯಿ, ಬೆಳಗಾವಿ
Published 15 ಮಾರ್ಚ್ 2014, 19:30 IST
Last Updated 15 ಮಾರ್ಚ್ 2014, 19:30 IST

ಶಿಕ್ಷಣ ಮಾಧ್ಯಮದ ಕುರಿತು ಸುಪ್ರೀಂ ಕೋರ್ಟಿನ ತೀರ್ಪಿನ ನಿರೀಕ್ಷೆಯಲ್ಲಿರುವ ನಾವು ಒಂದಿಷ್ಟು ಆತ್ಮಾವಲೋಕನ ಮಾಡಿಕೊಳ್ಳುವ ಅವಶ್ಯಕತೆಯಿದೆ.  ತೀರ್ಪು ಕನ್ನಡ ಪರವಾಗಿ ಬಂದರೆ ಸಂತೋಷವೇ, ಬಾರದಿದ್ದರೆ? ಬಾರದಿದ್ದರೆ ನಾವು ಯಾವ ಬಾವಿಯನ್ನು ನೋಡಿಕೊಳ್ಳಬೇಕು? ನಿರಾಶರಾಗಿ ನಾವು ಪ್ರಾಣವಿಲ್ಲದ ದೇಹವಾಗಿ ಉಳಿಯಬಹುದಾದ ಒಂದು ಘೋರ ಚಿತ್ರ ನಮ್ಮ ಮುಂದಿದೆ.

ನಮ್ಮ ಆತ್ಮಘಾತುಕ ಪ್ರವೃತ್ತಿಯೇ ನಮ್ಮನ್ನು ಈ ಸ್ಥಿತಿಗೆ ತಂದು ಮುಟ್ಟಿಸಿದೆ. ಭಾಷೆಯನ್ನು ಕೇವಲ ಒಂದು ಬೋಧನಾ  ಮಾಧ್ಯಮ ಎಂದು ಬಗೆಯುವುದು ಭಾಷೆಯನ್ನು ಅವಮಾನಿಸಿದಂತೆ. ಅಂತಃಸತ್ವವನ್ನು ಅಲ್ಲಗಳೆದಂತೆ. ಭಾಷೆ ಒಂದು ದಿನದ ಬೆಳೆಯಲ್ಲ. ಅದು ಒಂದು ನಾಡಿನ ಅಂತಃಸತ್ವವನ್ನು ಸಂಸ್ಕೃತಿ, ನಡೆ, ನುಡಿ, ಪರಂಪರೆ ಎಲ್ಲವನ್ನೂ ಹೀರಿಕೊಂಡು ಬೆಳೆದು ನಿಂತ ಜ್ಞಾನವೃಕ್ಷ. ಇಂಥ ಒಂದು ಕಲ್ಪವೃಕ್ಷವನ್ನು ಕಳೆದುಕೊಂಡರೆ ನಾವು ಅದನ್ನು ಮತ್ತೆ ಬೆಳೆಸಲಾರೆವು.  ತಂದು ತುಂಬಲು ಅದು ಯಾವುದೇ ಸಂತೆಯ ಸರಕಲ್ಲ.  ಅದು ನೆಲದ ಮರೆಯ ನಿದಾನ.

ಈ ವಿಷಯದ  ವಿಶ್ಲೇಷಣೆಯಲ್ಲಿ ಈವರೆಗೆ ಕೆಲವು ತಪ್ಪು ಕಲ್ಪನೆಗಳಾಗಿರುವುದನ್ನು ಇಲ್ಲಿ ಉಲ್ಲೇಖಿಸುವ ಅವಶ್ಯಕತೆಯಿದೆ. ತನ್ನ ಮಗನಿಗೆ ಶಿಕ್ಷಣ ಕೊಡಲೇಬೇಕೆಂಬುದು ಪಾಲಕನ ಕರ್ತವ್ಯ. ಅದು ಅವನಿಗೆ ನೈತಿಕ ಬಂಧನ. ಕಾನೂನಿನ ಕಟ್ಟಳೆಯಲ್ಲ.  ಆದರೆ ಸರ್ಕಾರಕ್ಕೆ ಮಾತ್ರ ಅದು ಸಂವಿಧಾನ ವಿಧಿಸಿದ ಕಟ್ಟಳೆ. ೨೦೦೨ರಲ್ಲಿ ಸಂವಿಧಾನದ ೨೧ನೇ ಕಲಂ ಗೆ ತಿದ್ದುಪಡಿಯನ್ನು ತಂದು ಪಾಲಕರ ಈ ಜವಾಬ್ದಾರಿಯನ್ನು ಸರ್ಕಾರಕ್ಕೆ ವರ್ಗಾಯಿಸಲಾಯಿತು. 

ಆರು ವರ್ಷದಿಂದ ಹದಿನಾಲ್ಕು ವರ್ಷದವರೆಗಿನ ಮಕ್ಕಳಿಗೆ ಪುಕ್ಕಟೆಯಾಗಿ ಶಿಕ್ಷಣವನ್ನು ಒದಗಿಸುವುದನ್ನು ಸರ್ಕಾರಕ್ಕೆ ಕಡ್ಡಾಯಗೊಳಿಸಲಾಯಿತು. ಸರ್ಕಾರವು ನಿರ್ಧರಿಸಿದ ಹಕ್ಕನ್ನು ಸರ್ಕಾರಕ್ಕೆ ವಹಿಸಲಾಯಿತು. ಒಂದು ರಾಜ್ಯದ ಭಾಷೆ ಸಂಸ್ಕೃತಿ, ಪರಂಪರೆಗಳನ್ನು ಸಂರಕ್ಷಿಸುವ ಜವಾಬ್ದಾರಿ ಸರ್ಕಾರದ್ದು. ಈ ಎಲ್ಲ ಮೌಲ್ಯಗಳನ್ನು ಗಮನದಲ್ಲಿಟ್ಟು ಕೊಂಡು ಈ ಕುರಿತು ತನ್ನ ಜವಾಬ್ದಾರಿಯನ್ನು ಅರಿತು ತನ್ನ ರಾಜ್ಯದ ಪ್ರಜೆಗೆ ಎಂಥ ಶಿಕ್ಷಣ ಕೊಡಬೇಕೆಂದು ನಿರ್ಧರಿಸುವ ಕರ್ತವ್ಯ ಮತ್ತು ಅಧಿಕಾರ ಸರ್ಕಾರದ್ದು.

ರಾಜ್ಯವು ನೀಡುವ ಎಲ್ಲ ಸೌಲಭ್ಯ ಸವಲತ್ತುಗಳನ್ನು, ಅಂದರೆ ಶಾಲೆ, ಕಾಲೇಜು, ಶಿಕ್ಷಕರು, ಸಿಬ್ಬಂದಿ, ಗ್ರಂಥಾಲಯ, ಸಾರಿಗೆ, ವಿದ್ಯುತ್ ಇತ್ಯಾದಿ ಎಲ್ಲವನ್ನೂ ಉಪಯೋಗಿಸಿಕೊಂಡ ಒಬ್ಬ ವ್ಯಕ್ತಿಯು ಆ ರಾಜ್ಯದ ಭಾಷೆ ಮತ್ತು ಸಂಸ್ಕೃತಿಗಳಿಗೆ ಮಾರಕವಾಗುವಂಥ ಕೃತ್ಯದಲ್ಲಿ ತೊಡಗಿದರೆ ಅದನ್ನು ನಿಗ್ರಹಿಸುವ, ತಡೆಹಿಡಿಯುವ ಅಧಿಕಾರ ರಾಜ್ಯಕ್ಕಿದೆ.  ಈ ಉದ್ದೇಶಕ್ಕಾಗಿ ತನ್ನ ರಾಜ್ಯದ ಹಿತಾಸಕ್ತಿಯನ್ನು ಕಡೆಗಣಿಸುವ ವ್ಯಕ್ತಿಯ ಸ್ವಾತಂತ್ರ್ಯವನ್ನು ಸರ್ಕಾರವು ಮೊಟಕುಗೊಳಿಸಬಹುದಾಗಿದೆ. ಈ ರಾಜ್ಯದ ಸಂಸ್ಕೃತಿಯ ಬೇರಾದ ಕನ್ನಡ ಭಾಷೆಯನ್ನು ಉಳಿಸಿಕೊಳ್ಳಬೇಕಾದ ಕರ್ತವ್ಯ ಕರ್ನಾಟಕ ಸರ್ಕಾರದ್ದು.  ಈವರೆಗೆ ಮಾತೃಭಾಷೆಗೆ ಪಟ್ಟಕಟ್ಟಲು ಮರೆತ ಸರ್ಕಾರ ಈಗ ಮುಂದಾಗಿ ಒಂದಿಷ್ಟು ಧೈರ್ಯ ತೋರಿದೆ.  ಊರು ಕೊಳ್ಳೆಹೊಡೆದ ಮೇಲೆ ಕೋಟೆಯ ಬಾಗಿಲು ಮುಚ್ಚಿದಂತೆ ಎನ್ನುವ ಗಾದೆ ನೆನಪಾಗುತ್ತದೆ.

ಈಗಾಗಲೇ ಈ ರಾಜ್ಯದ ಶೇ. ೩೦% ವಿದ್ಯಾರ್ಥಿಗಳನ್ನು ಬಲಿ ತೆಗೆದುಕೊಂಡ ಇಂಗ್ಲಿಷ್ ಭಾಷಾದೆವ್ವ ಈ ರಾಜ್ಯದ ಎಲ್ಲ ಮನೆಗಳನ್ನು ಹೊಕ್ಕು ಕುಣಿಯುತ್ತಿದೆ. ಪಟ್ಟಣಗಳಲ್ಲಿ ತಲೆ ಎತ್ತಿ ನಿಂತ ಖಾಸಗಿ ಶಿಕ್ಷಣ ಸಂಸ್ಥೆಗಳನ್ನು ಆಡಳಿತದ ಭಾಗವೇ ಆದ ಶಾಸಕರು, ರಾಜಕಾರಣಿಗಳು, ಕೆಲವು ಮಠಾಧೀಶರು ನಡೆಸುತ್ತಿರುವುದು ಗೌಪ್ಯ ಸಂಗತಿಯೇನಲ್ಲ.  ಈ ರಾಜಕಾರಣಿಗಳು ಆಡಳಿತದ ಭಾಗವೇ ಆಗಿರುವುದರಿಂದ ಅವರು ತಮ್ಮ ಸ್ವಂತ ಹಿತಾಸಕ್ತಿಯನ್ನು ತಾವೇ ವಿರೋಧಿಸಲಾರರು.  ಆಡಳಿತದಲ್ಲಿ ಮಠಾಧೀಶರ ಆಶೀರ್ವಾದ ಬೇಕೇಬೇಕೆನ್ನುವ ಸ್ಥಿತಿಗೆ ನಾವು ಬಂದು ತಲುಪಿದ್ದೇವೆ. ಮಠಾಧೀಶರ ಕೃಪಾದೃಷ್ಟಿಗಾಗಿ ಕೋಟಿ ಕೋಟಿ ಕೊಟ್ಟ ಮುಖ್ಯಮಂತ್ರಿಗಳು ನಮ್ಮಲ್ಲಿ ಆಗಿ ಹೋಗಿದ್ದಾರೆ.

ಆ ಮಾತು ಏನೇ ಇರಲಿ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಶಿಕ್ಷಣದ ವ್ಯಾಪಾರೀಕರಣವಾಗಿ ಶಿಕ್ಷಣವು ಒಂದು ವ್ಯಾಪಾರವಾಗಿ ಪರಿವರ್ತನೆಯಾದದ್ದೂ ಗೌಪ್ಯ ವಿಷಯವೇನಲ್ಲ. ಒಬ್ಬ ವ್ಯಾಪಾರಿಯು ತನ್ನ ಸರಕು ಚೆನ್ನಾಗಿದೆ.  ಅದಕ್ಕೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಬೇಡಿಕೆ ಇದೆ ಎಂದೆಲ್ಲ ಪ್ರಚಾರ ನೀಡುವುದು. ಅದಕ್ಕೆ ತಕ್ಕಂತೆ ತನ್ನ ಅಂಗಡಿ ಮುಗ್ಗಟ್ಟುಗಳನ್ನು, ಅಂದರೆ ಶಾಲೆ ಕಾಲೇಜುಗಳನ್ನು ಆಕರ್ಷಕ ರೀತಿಯಲ್ಲಿ ಕಟ್ಟಿ ಶೃಂಗರಿಸಿ ಅಮಾಯಕರನ್ನು ಆಕರ್ಷಿಸುವುದು ವ್ಯಾಪಾರಿಯ ಚಾಕಚಕ್ಯತೆಯೇ! ಒಬ್ಬ ಗುಮಾಸ್ತನೋ, ಸಿಪಾಯಿಯೋ, ಮನೆಗೆಲಸದವನೋ ಸಾಲ ಮಾಡಿಯಾದರೂ ಈ ವೈಭವೀಕರಿಸಿದ ಮೋಹದ ಬಲೆಗಳಿಗೆ ತಮ್ಮ ಮಕ್ಕಳನ್ನು ಬಲಿ ಕೊಡುವುದು ನಡೆದೇ ಇದೆ. ತುಲನಾತ್ಮಕವಾಗಿ ನಮ್ಮ ಸರ್ಕಾರಿ ಶಾಲೆಗಳು ದೊಡ್ಡಿಗಳಾಗಿ ಆಕರ್ಷಣೆ ಇಲ್ಲದ,

ಗುಣಮಟ್ಟದವಿಲ್ಲದ, ಮುರುಕು ಮನೆಗಳಂತೆ ಕಾಣುತ್ತಿರುವುದು ನಗ್ನಸತ್ಯವೇ. ಈ ಪರಿಯ ನಿರ್ಲಕ್ಷ್ಯವು ಶಿಕ್ಷಣದ ವ್ಯಾಪಾರಿಗಳಿಗೆ ಅನುಕೂಲಕರವಾಗಿ ಪರಿಣಮಿಸಿತು. ತಮ್ಮ ವ್ಯಾಪಾರಕ್ಕಾಗಿ ಇಂಗ್ಲಿಷ್ ಬಲ್ಲವರೆಲ್ಲ ಇಂಗ್ಲೆಂಡಿಗೆ ಹೋಗುತ್ತಾರೆ ಎನ್ನುವ ಭ್ರಮೆಯನ್ನು ಹುಟ್ಟಿಸಿ ಪ್ರಚಾರ ಪಡಿಸಿದವರು ಈ ವ್ಯಾಪಾರಿಗಳೇ. ಅಮಾಯಕರು ಈ ಮಾತಿಗೆ ಬಲಿಬೀಳುತ್ತಾರೆ.

ಪಾಪ ಅವರಿಗೆ ವಿಜ್ಞಾನಿ ಸಿ.ಎನ್.ಆರ್.ರಾವ್ ಕನ್ನಡ ಮಾಧ್ಯಮದಲ್ಲಿ ಓದಿದವರು ಎನ್ನುವುದು ಗೊತ್ತಿಲ್ಲ. ಆಕ್ಸ್‌ಫರ್ಡ್‌ ವಿಶ್ವವಿದ್ಯಾಲಯದಲ್ಲಿ ಇಂಗ್ಲಿಷ್‌ ವಿಷಯವನ್ನು ತೆಗೆದುಕೊಂಡು ಪ್ರಥಮರಾಗಿ ಉತ್ತೀರ್ಣರಾದ ನನ್ನ ಗುರುಗಳಾದ
ಡಾ. ವಿ.ಕೃ. ಗೋಕಾಕರು ಕನ್ನಡ ಕಲಿಕೆಯನ್ನು ಪ್ರತಿಪಾದಿಸಿದವರು. ಇಂಗ್ಲಿಷಿನಲ್ಲಿ ನೂರಾರು ತೀರ್ಪುಗಳನ್ನು ಬರೆದ ನಾನು ಮತ್ತು ನನ್ನ ಸಹೋದ್ಯೋಗಿಗಳು ಕನ್ನಡ ಮಾಧ್ಯಮದಲ್ಲಿಯೇ ಓದಿದವರು. ನನ್ನ ಹಿಂದಿನ ತಲೆಮಾರಿನ ವಿದ್ವಾಂಸರು, ಎಂಜಿನಿಯರುಗಳು, ವೈದ್ಯರು, ವಿವಿಧ ವಿಷಯಗಳ ಪ್ರಾಧ್ಯಾಪಕರು ಕನ್ನಡವನ್ನು ಕರಗತ ಮಾಡಿಕೊಂಡವರು.

ವಿಜ್ಞಾನವೂ ಸೇರಿದಂತೆ ವಿವಿಧ ವಿಷಯಗಳನ್ನು ಅರಿಯಲು ಕನ್ನಡ ಮಾಧ್ಯಮ ನಮಗೆ ಯಾವ ಅಡಚಣೆಯನ್ನೂ ಉಂಟು ಮಾಡಲಿಲ್ಲ. ನಾವು ಇಂಗ್ಲಿಷ್‌ಮಾಧ್ಯಮದಲ್ಲಿ ಓದಿದವರಲ್ಲ. ನಾವೆಲ್ಲ ಇಂಗ್ಲಿಷನ್ನು ಒಂದು ಭಾಷೆಯಾಗಿ ಕಲಿತವರು.  ಇಂಗ್ಲಿಷ್ ಓದದವರು ದಡ್ಡರಾಗುತ್ತಾರೆ. ನಮ್ಮ ರಾಜ್ಯದಲ್ಲಿಯೇ ಕೊಳೆಯುತ್ತಾರೆ ಎನ್ನುವ ಭ್ರಮೆಯನ್ನು ಹುಟ್ಟಿಸಿದವರು ಈ ವ್ಯಾಪಾರಿಗಳು ಮತ್ತು ಅವರ ನೆರವಿಗೆ ನಿಂತ ಕೆಲವು ಶಾಸಕರು ಮತ್ತು ನಮ್ಮ ಐಎಎಸ್, ಐಪಿಎಸ್ ಕಿರೀಟಧಾರಿಗಳು. ಈ ಅಧಿಕಾರಿಗಳು ಕನ್ನಡದಲ್ಲಿ ತಮ್ಮ ಟಿಪ್ಪಣಿಗಳನ್ನು ಬರೆದರೆ ತಮ್ಮ ಘನತೆಗೆ ಕುಂದೆಂದು ಬಗೆಯುತ್ತಾರೆ. 

ಚಿರಂಜೀವಿ ಸಿಂಗ್ ಕೂಡಾ ಮೇಲ್ದರ್ಜೆಯ ಅಧಿಕಾರಿ­ಯಾಗಿಯೇ ಕೆಲಸ ಮಾಡಿದವರು. ಅವರಿಗೆ ಕನ್ನಡ ಕಂಟಕವಾಗಲಿಲ್ಲ. ಪ್ರಪಂಚದ ಎಲ್ಲ ದೇಶಗಳಲ್ಲಿ ಇಂಗ್ಲಿಷ್ ಶಿಕ್ಷಣ ಮಾಧ್ಯಮವಾಗಿಲ್ಲ. ಫ್ರಾನ್ಸ್, ಜರ್ಮನಿ, ರಷ್ಯಾ, ಚೀನಾ ದೇಶಗಳಲ್ಲಿ ಅಲ್ಲಿಯ ಭಾಷೆಗಳ  ಸಾರ್ವಭೌಮತ್ವವಿದೆ. ಅವರೆಲ್ಲ ಇಂಗ್ಲಿಷ್‌ನಲ್ಲಿಯೇ ಓದಿ ಮುಂದೆ ಬಂದವರಲ್ಲ, ತಮ್ಮ ಮಾತೃಭಾಷೆಯಲ್ಲಿ ಗಳಿಸಿದ ಜ್ಞಾನ ವಿಜ್ಞಾನಗಳನ್ನು ಅಭ್ಯಸಿಸಿಯೇ ಆ ದೇಶಗಳು ಪ್ರಗತಿಯನ್ನು ಸಾಧಿಸಿವೆ. 

  ಡಾ. ಗೋಕಾಕ ಸಮಿತಿಯ ವರದಿ ಒಂದು ಆದರ್ಶ ವರದಿ ಎನ್ನುವುದು ಸರ್ವರಿಗೂ ಗೊತ್ತು.  ಕನ್ನಡ ಭಾಷೆಯ ಪಾರಮ್ಯವನ್ನು ಆ ವರದಿಯಲ್ಲಿ ಹೀಗೆ ಉಲ್ಲೇಖಿಸಲಾಗಿದೆ. ‘ನಿಜವಾಗಿ ಈಗೀಂದೀಗ  ಇಂಗ್ಲಿಷ್‌­ನಿಂದ ರಾಜ್ಯ ಭಾಷೆಗೆ ಮಾಧ್ಯಮ  ಪಲ್ಲಟಗೊಳ್ಳು­ವುದು ಶಿಕ್ಷಣದ ದೃಷ್ಟಿಯಿಂದ ಅತ್ಯಗತ್ಯ­ವಾ­ಗಿದೆ... ಸ್ವಾತಂತ್ರ್ಯೋತ್ತರ ಕರ್ನಾಟಕದಲ್ಲಿ ಇಂಗ್ಲಿಷ್ ಮಾಧ್ಯಮ ಶಾಲೆಗಳು ಅತಿಯಾಗಿ ಬೆಳೆದದ್ದು, ಒಂದು ವಿಶಿಷ್ಟ ಲಕ್ಷಣವಾಗಿದೆ. ತಮ್ಮ ಮಕ್ಕಳು ಇಂಗ್ಲಿಷ್  ಚೆನ್ನಾಗಿ ಕಲಿಯಬೇಕೆಂಬ ಸದಿಚ್ಛೆಯಿಂದ ನಾಗರಿಕರು ಇದನ್ನು ಸ್ವಾಗತಿಸಿದ್ದಾರೆ. ಆದರೆ ಇದು ಅಜ್ಞಾನದ ಫಲವೆಂದು ನಾವು ಹೇಳದಿರಲಾರೆವು’.

ಆ ವರದಿಯಲ್ಲಿನ ಈ ಕೆಳಕಂಡ ಭಾಗವು ಇಲ್ಲಿ ಪ್ರಸ್ತುತ. ಅದು ಹೀಗಿದೆ: ‘ಶಿಕ್ಷಣ ಪಡೆಯಬೇಕೆಂಬ ಹವ್ಯಾಸವುಳ್ಳ ಲಕ್ಷಾವಧಿ ವಿದ್ಯಾರ್ಥಿಗಳಿಗೆ  ಕನ್ನಡ ನಾಡಿನಲ್ಲಿ ಅತ್ಯಂತ ಪ್ರಯೋಜನಕಾರಿಯಾದ ಭಾಷೆ ಯಾವುದು? ಕನ್ನಡ ನಾಡಿನಲ್ಲಿ ಕನ್ನಡವೊಂದೇ ಆ ಪ್ರಥಮ ಭಾಷೆಯಾಗಬಲ್ಲದು. ಅದು ಕನ್ನಡ  ಜನತೆಯ ಭಾಷೆ. ಅಂತೆಯೇ ಕನ್ನಡ ನಾಡಿನಲ್ಲಿನ ವ್ಯವಹಾರದ, ಆಡಳಿತದ, ಸೇವಾ ಆಯೋಗದ, ಶಾಲೆ ಕಾಲೇಜುಗಳ,  ವಿಶ್ವವಿದ್ಯಾನಿಲಯಗಳ ಮಾಧ್ಯಮವಾಗಬೇಕಾದ ಭಾಷೆ. ಅದರ ಪ್ರಯೋಜನ ಜನತೆಗೆ ಸಂಪೂರ್ಣ  ಲಭ್ಯವಾಗಲು ತಡವಾದರೆ ಜನತೆ ರೊಚ್ಚಿಗೇಳುವುದರಲ್ಲಿ ಸಂಶಯವಿಲ್ಲ’ ಎಂದ ವರದಿ ಮುಂದುವರಿದು ‘ಹೊರಗಿನಿಂದ ಬಂದವರಿಗಾಗಿ  ಒಂದೋ ಎರಡೋ ಕಾಲೇಜುಗಳನ್ನು ಮೀಸಲಾಗಿಟ್ಟು ವಿಶ್ವವಿದ್ಯಾನಿಲಯಗಳ ಮಾಧ್ಯಮವು  ರಾಜ್ಯದಲ್ಲಿ ಎಂದೋ ಕನ್ನಡವಾಗಬೇಕಿತ್ತು’ ಎಂದಿದೆ.

ಗೋಕಾಕ ವರದಿ ಪ್ರಕಟವಾಗಿ ಇಂದಿಗೆ 33 ವರ್ಷ­ಗಳೇ ಸಂದಿವೆ. ಕರ್ನಾಟಕ ಶಿಕ್ಷಣ ಮಾಧ್ಯಮದ ವಿಷಯ­ದಲ್ಲಿ ಇನ್ನೂ ತಿಣುಕಾಡುತ್ತಿದೆ ಎನ್ನುವುದನ್ನು ಗಮನಿಸಿ­ದಾಗ ಗೋಕಾಕ ವರದಿಯಲ್ಲಿ ಅವರು ಮುಂದಾಗಿ ಕಂಡುಕೊಂಡ ರೊಚ್ಚಾಗಲಿ, ಕಿಚ್ಚಾಗಲೀ, ಹೊತ್ತಿ­ಕೊಳ್ಳಲೇ ಇಲ್ಲ. ಜನರು ರೊಚ್ಚಿಗೇಳುತ್ತಾರೆ ಎಂದು ಡಾ. ಗೋಕಾಕರು ಹೇಳುವಂತೆ ಮಾಡಿದ್ದು ಅಂದಿನ ಸಂದರ್ಭ. ವರದಿಯ ಪೂರ್ವದಲ್ಲಿ ಈ ನಾಡಿನ ಮೂಲೆ ಮೂಲೆಯಲ್ಲಿ ಕನ್ನಡಾಭಿಮಾನ ಪ್ರತಿಧ್ವನಿ­ಸಿತು. ಡಾ.ರಾಜಕುಮಾರ್ ಆದಿಯಾಗಿ ನಾಡಿನ ಗಣ್ಯರು, ಸಾಮಾನ್ಯರು ಕನ್ನಡಕ್ಕಾಗಿ ಮಾಡಿದ ಪ್ರಬಲ  ಹೋರಾಟವನ್ನು ಗಮನಿಸಿದ ಡಾ. ಗೋಕಾಕರು ಇದೇ ಅಭಿಮಾನವನ್ನು ಕನ್ನಡ ಜನತೆ ಕಾಯ್ದುಕೊಳ್ಳುತ್ತಾರೆ ಮತ್ತು ಮುಂದುವರಿಸುತ್ತಾರೆ ಎನ್ನುವ ತಪ್ಪು ಅಂದಾಜಿಗೆ ಒಳಗಾದರು.

ಕನ್ನಡ ಭಾಷೆಯನ್ನು ಆಡಳಿತ ಭಾಷೆಯಾಗಿ ಸಂಸ್ಥಾಪಿಸುವಲ್ಲಿ ರಾಜ್ಯ ಸರ್ಕಾರವು ದಿಟ್ಟ ಕ್ರಮವನ್ನು ತೆಗೆದುಕೊಳ್ಳಲೇ ಇಲ್ಲ.
  ಹೊರಗಿನಿಂದ ಬಂದವರು ಹಾಗೂ ಕನ್ನಡ ಮಾತೃಭಾಷೆಯಲ್ಲದವರೂ ಈ ರಾಜ್ಯದ ಪ್ರಜೆಗಳಾ­ಗಿದ್ದಾರೆ. ಅವರ ಉಪಯೋಗಕ್ಕಾಗಿ ಗೋಕಾಕ ವರದಿಯಲ್ಲಿ ಹೇಳಿದಂತೆ ಕೆಲವು ಶಾಲೆ ಕಾಲೇಜುಗಳನ್ನು ಮೀಸಲಾಗಿಡಬಹುದು. ಆದರೆ ಆ ನೆಪದಿಂದ ಎಲ್ಲ ಕಡೆಗೆ ಇಂಗ್ಲಿಷ್ ಶಾಲೆಗಳೇ  ವಿಜೃಂಭಿಸುತ್ತಿರುವಾಗ ಸರ್ಕಾರವು ಕಣ್ಣು ಮುಚ್ಚಿಕೊಂಡು ಕುಳಿತುಕೊಳ್ಳುವುದು ಕರ್ತವ್ಯ ಚ್ಯುತಿಯಾಗುತ್ತದೆ.

ಸುಪ್ರೀಂ ಕೋರ್ಟ್‌ನಲ್ಲಿ ಮಾತೃಭಾಷೆಯ  ವ್ಯಾಖ್ಯೆಗಾಗಿ ಪರದಾಡುವುದನ್ನು ಕಂಡು ಬೇಸರ ವೆನಿಸಿತು. ನನ್ನ ಮಾತೃಭಾಷೆ ಯಾವುದೆಂದು ನನಗೆ ಗೊತ್ತಿದೆ. ಈ ಲೇಖನವನ್ನು ಓದುವ ಪ್ರತಿಯೊಬ್ಬ  ಓದುಗನಿಗೂ ತನ್ನ ಮಾತೃಭಾಷೆ ಯಾವುದೆಂಬ ಅರಿವಿದೆ. ಸುಪ್ರೀಂ ಕೋರ್ಟಿನ ನ್ಯಾಯಮೂರ್ತಿಯವರಿಗೂ ತಮ್ಮ ಮಾತೃಭಾಷೆ ಯಾವುದೆಂದು ಗೊತ್ತಿದೆ.

ಅದನ್ನು ವ್ಯಾಖ್ಯಾನಿಸುವ ಅವಶ್ಯಕತೆ ಇದೆಯೇ? ಒಬ್ಬ ವ್ಯಕ್ತಿಗೆ ಇದ್ದಂತೆ ಒಂದು ರಾಜ್ಯಕ್ಕೂ ತನ್ನದೇ ಆದ ಮಾತೃಭಾಷೆ ಇರುತ್ತದೆ. ಭಾಷಾ ತತ್ವದ ಆಧಾರದ ಮೇಲೆಯೇ ಈ ದೇಶವನ್ನು ವಿವಿಧ ರಾಜ್ಯಗಳನ್ನಾಗಿ   ವಿಂಗಡಿಸಲಾಯಿತು. ಒಂದು ಪ್ರದೇಶದ  ಬಹುಸಂಖ್ಯಾತರು ಆಡುವ ಭಾಷೆಯನ್ನೇ ಪ್ರಾದೇಶಿಕ ಭಾಷೆ ಎಂದು ಗುರುತಿಸಿ ಒಂದು ರಾಜ್ಯವೆಂದು  ಪರಿಗಣಿಸಲಾಗಿದೆ. ಆ ರಾಜ್ಯದ ಬಹು ಜನರ ಮಾತೃಭಾಷೆಯೇ ಆ ರಾಜ್ಯದ ರಾಜ್ಯ ಭಾಷೆಯಾಯಿತು. ರಾಜ್ಯ ಪುನರ್ವಿಂಗಡನಾ ಆಯೋಗವು ನಮ್ಮ ಈ ಪ್ರಾದೇಶಿಕ ಭಾಷೆಯನ್ನೇ ಆಧಾರವಾಗಿರಿಸಿಕೊಂಡು ನಮ್ಮ ರಾಜ್ಯವನ್ನು ಅಸ್ತಿತ್ವಕ್ಕೆ ತಂದಿತು. ೧೯೫೬ರಿಂದ ಈ ದಿನದವರೆಗೆ ನಾವು ನಮ್ಮ ರಾಜ್ಯ ಭಾಷೆ ಕನ್ನಡ ಎಂದು ಒಪ್ಪಿಯಾಗಿದೆ. ಅಂದರೆ ಕನ್ನಡವು ಈ ನಾಡಿನ ಮಾತೃಭಾಷೆ ಎಂದು ಒಪ್ಪಿಯಾಗಿದೆ.

ಅದನ್ನು ಪುನಃ ಕೆದಕುವ ಅವಶ್ಯಕತೆಯಿಲ್ಲ. ಈ ರಾಜ್ಯದ ಅಲ್ಪಸಂಖ್ಯಾತರ ಮಾತೃಭಾಷೆಗೆ ಕೊಡಬೇಕಾದ ಸ್ಥಾನಮಾನ ಸವಲತ್ತು ಸೌಲಭ್ಯಗಳನ್ನು ಧಾರಾಳವಾಗಿ ಕೊಡಲಾಗಿದೆ.  ಹೀಗಿದ್ದೂ ಈ ರಾಜ್ಯದ ಭಾಷಾ ನೀತಿಯು ಚೌಕಟ್ಟಿಗೆ ಹೊಂದಿಕೊಳ್ಳಲಾರೆವು ಎನ್ನುವವರು ಈ ರಾಜ್ಯದಲ್ಲಿಯೇ ನೆಲೆಸಬೇಕೆನ್ನುವ ಕಡ್ಡಾಯವೇನೂ ಇಲ್ಲ. ಸಮಸ್ಯೆ ಅವರದಲ್ಲ. ಮಾತೃಭಾಷೆಯ ನೆಪ ಮಾಡಿಕೊಂಡು ಇಂಗ್ಲಿಷ್ ಶಾಲೆಗಳಿಗೆ ಮಕ್ಕಳನ್ನು ಕಳಿಸಬೇಕೆನ್ನುವ ಕೆಲವು ಬಹುಸಂಖ್ಯಾತರೇ ಈ ಸಮಸ್ಯೆಯನ್ನು ಸೃಷ್ಟಿಸಿದ್ದಾರೆ.  

ತನ್ನ ರಾಜ್ಯದ ಶಿಕ್ಷಣ ಮಾಧ್ಯಮವನ್ನು ನಿರ್ಧರಿಸುವ ಹಕ್ಕನ್ನು ಸಂವಿಧಾನವು ರಾಜ್ಯ  ಸರ್ಕಾರಗಳಿಗೆ ಇತ್ತಿದೆ. ಈ ಅಧಿಕಾರವನ್ನು ಚಲಾಯಿಸಲು ಸಂವಿಧಾನದ ಯಾವ ಅಡಚಣೆಯೂ ನನಗೆ ಕಾಣಿಸದು. ಅಷ್ಟಕ್ಕೂ ಸಂವಿಧಾನ ಪರಿಣಿತರಿಗೆ ಅಂಥಾ ಅಡಚಣೆ ಅಥವಾ ಸಂಶಯ ಕಂಡರೆ ಸಂವಿಧಾನಕ್ಕೆ ತಿದ್ದುಪಡಿ ತಂದಾದರೂ ಮಾತೃಭಾಷಾ ಮಾಧ್ಯಮವನ್ನು ಜಾರಿಗೊಳಿಸುವ ಆಪತ್ಕಾಲ ಈಗ ಸನ್ನಿಹಿತವಾಗಿದೆ. ಇಂಥ ತಿದ್ದುಪಡಿ ಕರ್ನಾಟಕ ಒಂದಕ್ಕೆ ಅಲ್ಲ, ಇನ್ನಿತರ  ರಾಜ್ಯಗಳಿಗೂ ವರವಾಗಿ ಪರಿಣಮಿಸುತ್ತದೆ.

  ಈ ರಾಜ್ಯದ ಸತ್ವ, ಸರ್ವಸ್ವವಾದ ಕನ್ನಡ ಭಾಷೆಯನ್ನು ಉಳಿಸಿಕೊಳ್ಳಬೇಕಾದ ಕರ್ತವ್ಯ ಹಾಗೂ ಅಧಿಕಾರ ಸರ್ಕಾರದ್ದು. ತನ್ನ ಕರ್ತವ್ಯ ಪಾಲನೆ ಮಾಡುವುದರಲ್ಲಿ ಅಡೆತಡೆಯೊಡ್ಡುವ ಯಾವ ಪ್ರಯತ್ನವನ್ನೂ ಅದೂ ಸಹಿಸಕೂಡದು. ಆ ಅಡ್ಡಿಯನ್ನು ನಿವಾರಿಸಲು ಸರ್ಕಾರವು ತನ್ನ ಶಕ್ತಿ ಸಾಮರ್ಥ್ಯವನ್ನೆಲ್ಲಾ ಬಳಸಬೇಕು. ಕೇವಲ ಕೆಲವರ ಅನುಕೂಲಕ್ಕಾಗಿ ಸರ್ಕಾರವು ತನ್ನ ಕರ್ತವ್ಯದಿಂದ ವಿಮುಖವಾಗಕೂಡದು.

ಲೇಖಕರು: ನಿವೃತ್ತ ಜಿಲ್ಲಾ ನ್ಯಾಯಾಧೀಶರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT