ADVERTISEMENT

ಶೌಚಾಲಯಕ್ಕೆ ಕರಾರುಪತ್ರ ಬೇಕೇ?!

ಮಲ್ಲೇಶ್ ನಾಯಕನಹಟ್ಟಿ
Published 3 ಮಾರ್ಚ್ 2018, 19:30 IST
Last Updated 3 ಮಾರ್ಚ್ 2018, 19:30 IST

ಯಾದಗಿರಿ: ‘ರೀ ಪೌರಾಯುಕ್ತರೇ... ಶೌಚಾಲಯಕ್ಕೆ ಕರಾರುಪತ್ರ ಬೇಕೇನ್ರೀ?’ ಎಂಬ ಆಕ್ರೋಶ ಭರಿತ ದನಿ ನಗರಸಭೆ ಸಭಾಂಗಣದ ಮೂಲೆಯೊಂದರಿಂದ ತೂರಿ ಬಂದಾಗ, ಸಾಮಾನ್ಯ ಸಭೆಯಲ್ಲಿ ಅಪೂರ್ಣ ಕಾಮಗಾರಿ ಕುರಿತು ನಡೆಯುತ್ತಿದ್ದ ಚರ್ಚೆಗೆ ಕಡಿವಾಣ ಬಿತ್ತು.

‘ನಮ್‌ ಜನ ಶೌಚಾಲಯ ಅಂದ್ರೆನೇ ಮಾರುದೂರ ಓಡಿ ಹೋಗ್ತಾರೆ. ಇನ್‌ ನೀವ್‌ ಕರಾರುಪತ್ರ ಕೇಳಿದ್ರೆ ಕೊಡ್ತಾರಾ? ನೀವ್‌ ಇಂಥಾ ಆದೇಶ ಮಾಡೋದ್ರಿಂದ್ಲೇನೆ ನಮ್‌ ಜನ ಮುಂದೆ ಬರವಲ್ರು’ ಎಂದು ಸದಸ್ಯ ಹಣಮಂತ ಇಟಗಿ ಶೌಚಾಲಯ ನಿರ್ಮಾಣ ಸಮಸ್ಯೆ ಕುರಿತು ಅಸಮಾಧಾನ ಹೊರಹಾಕಿದರು.

‘ಸಂಡಾಸು ಊರ ಆಚೆ ಇರ್‍ಬೇಕು ಅನ್ನುತ್ತಿದ್ದ ಜನರು, ಮನಸ್ಸು ಬದಲಾಯಿಸಿಕೊಂಡು ಶೌಚಾಲಯಕ್ಕೆ ಅರ್ಜಿ ಹಾಕುತ್ತಿದ್ದಾರೆ. ಇಂಥದ್ರಲ್ಲಿ ನೀವು ಅರ್ಜಿ ವಿಲೇವಾರಿ ಏಕೆ ಮಾಡಿಲ್ಲ. ಜನರು ‘ಸಂಡಾಸು ಕರಾರುಪತ್ರ’ಕ್ಕಾಗಿ ಕೋರ್ಟ್‌ ಆವರಣ ಅಲೆಯುವಂತೆ ಮಾಡಿದ್ದೀರಿ. ಸರ್ಕಾರ ಕೊಟ್ಟಿರುವ ₹ 3 ಕೋಟಿ ‘ಸಂಡಾಸು ಅನುದಾನ’ದಲ್ಲಿ ಬರೀ ₹ 40 ಲಕ್ಷ ಅಷ್ಟೇ ಖರ್ಚ್ ಮಾಡೀರಿ’ ಎಂದು ಸರ್ವ ಸದಸ್ಯರು ಪೌರಾಯುಕ್ತರ ವಿರುದ್ಧ ರೇಗಿದರು.

ADVERTISEMENT

‘ಛೇ!ಛೇ! ಇದು ನಾನು ಮಾಡಿದ ಆದೇಶ ಅಲ್ಲ. ಹಿಂದಿದ್ದ ಅಧಿಕಾರಿಗಳು ಮಾಡಿರಬೇಕು’ ಎಂದು ಪೌರಾಯುಕ್ತರು ಜಾರಿಕೊಂಡರು. ‘ಬೀಸೋ ದೊಣ್ಣೆಯಿಂದ ತಪ್ಪಿಸಿಕೊಂಡಂತಾಯ್ತು’ ಎಂಬಂತೆ ನಗರಸಭೆ ತಾಂತ್ರಿಕ ವಿಭಾಗದ ಸಿಬ್ಬಂದಿ ಮುಖಮುಖ ನೋಡಿಕೊಂಡರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.