ADVERTISEMENT

ಸೊಮಾಲಿಯಾ ಎಂಬ ದುರಂತದ ಕಥೆ

​ಪ್ರಜಾವಾಣಿ ವಾರ್ತೆ
Published 6 ಆಗಸ್ಟ್ 2011, 19:30 IST
Last Updated 6 ಆಗಸ್ಟ್ 2011, 19:30 IST
ಸೊಮಾಲಿಯಾ ಎಂಬ ದುರಂತದ ಕಥೆ
ಸೊಮಾಲಿಯಾ ಎಂಬ ದುರಂತದ ಕಥೆ   

ಆಫ್ರಿಕಾದ ಈಶಾನ್ಯ ತುದಿ. ಸಾವಿರ ವರ್ಷಗಳ ಹಿಂದೆ ಆಗ್ನೇಯ ಏಷ್ಯಾ ಮತ್ತು ಮಧ್ಯಪ್ರಾಚ್ಯಕ್ಕೆ ಕೊಂಡಿಯಾಗಿದ್ದ ಸಿರಿವಂತ ವರ್ತಕರ ನಾಡು. `ಹಾರ್ನ್ ಆಫ್ ಆಫ್ರಿಕಾ~ (ಆಫ್ರಿಕಾದ ಕೋಡು) ಎಂದು ಹೆಮ್ಮೆಯಿಂದ ಕರೆಸಿಕೊಳ್ಳುತ್ತಿದ್ದ ದೇಶ ಸೊಮಾಲಿಯಾ.

ಈಗ ಜಗತ್ತಿನ ಅತಿ ಅರಾಜಕ ದೇಶ. ಅತ್ಯಂತ ಬಡ ದೇಶ. ಅರ್ಧಕ್ಕಿಂತ ಹೆಚ್ಚು ಜನ ಅಪೌಷ್ಟಿಕತೆಯಿಂದ ನರಳುತ್ತಿರುವ ದೇಶ. ರಾಜಧಾನಿ ಎಂದು ಕರೆಸಿಕೊಳ್ಳುವ ಮೊಗದಿಶುವಿನಲ್ಲಿ ಸರ್ಕಾರಿ ಕಟ್ಟಡಗಳ ಎದುರು, ಆಯಕಟ್ಟಿನ ಸಂಸ್ಥೆ, ರಸ್ತೆಗಳಲ್ಲಿ ಬಂದೂಕು ಹಿಡಿದು ನಿಂತಿರುವ ವಿಶ್ವಸಂಸ್ಥೆಯ ಶಾಂತಿ ಪಾಲನಾ ಪಡೆಯ ಸೈನಿಕರು. ಜುಲೈ ಅಂತ್ಯದಲ್ಲಿ ವಿಶ್ವಸಂಸ್ಥೆ ದಕ್ಷಿಣ ಸೊಮಾಲಿಯಾವನ್ನು ಬರಪೀಡಿತ ಪ್ರದೇಶ ಎಂದು ಘೋಷಿಸಿದೆ.

ಮೊಗದಿಶುವಿನ ಬನದೀರ್ ಆಸ್ಪತ್ರೆಗೆ ನಿತ್ಯ ಹತ್ತಾರು ಹೊಸ ರೋಗಿಗಳ ಸೇರ್ಪಡೆ. ಜೋತುಬಿದ್ದ ಚರ್ಮ, ಎಲುಬಿನ ಹಂದರವಾದ ಅಪ್ಪ, ಅಮ್ಮ ತಮ್ಮ ಪ್ರತಿರೂಪದಂತಿರುವ ಅಶಕ್ತ ಕರುಳಕುಡಿಗಳನ್ನು ಹೇಗೋ ಆಸ್ಪತ್ರೆಗೆ ಹೊತ್ತು ತರುತ್ತಾರೆ. ಅಲ್ಲಿಯಾದರೂ ಪರಿಸ್ಥಿತಿ ಸುಧಾರಿಸಿತು ಎಂಬ ಮಹದಾಸೆ ಅವರ ಕಣ್ಣಲ್ಲಿ.

ಆಸ್ಪತ್ರೆ ಎಂದು ಕರೆಯಿಸಿಕೊಳ್ಳುವ ಕಟ್ಟಡದಲ್ಲಿ ಡೀಸೆಲ್‌ನ ದಟ್ಟ ವಾಸನೆ. ಮುತ್ತಿಕ್ಕುವ ನೊಣ, ಸೊಳ್ಳೆ ಓಡಿಸಲು ನರ್ಸ್‌ಗಳಿಗೆ ಇರುವುದು ಇದೊಂದೇ ದಾರಿ. ರೋಗಿಗಳ ಔಷಧಕ್ಕೆ ಗತಿ ಇಲ್ಲದಿರುವಾಗ  ನೆಲ ಸ್ವಚ್ಛಗೊಳಿಸಲು ಕ್ಲೀನಿಂಗ್ ಏಜೆಂಟ್ ತರವುದು ಎಲ್ಲಿಂದ?

ಸಲಕರಣೆ, ಔಷಧಗಳ ಕೊರತೆಯಿಂದಲೇ ಬನದೀರ್ ಆಸ್ಪತ್ರೆಯಲ್ಲಿ ಹಸುಳೆಗಳು ಸಾಯುತ್ತಿವೆ. ಮೂರು-ನಾಲ್ಕು ವರ್ಷವಾದರೂ ವರ್ಷದ ಮಗುವಿನಂತೆ ಕಾಣುವ, ನಡೆಯಲು ಶಕ್ತಿಯಿಲ್ಲದೇ ತೆವಳುವ ಮಕ್ಕಳ ಮೂಳೆಯಂತಹ ಕೈಗಳಿಗೆ ದೊಡ್ಡವರಿಗೆ ಹಾಕುವ ದೊಡ್ಡ ಡ್ರಿಪ್. ಅದರಿಂದ ಪೂರೈಕೆಯಾಗುವ ಪೌಷ್ಟಿಕ ದ್ರವ ಹೀರಿಕೊಳ್ಳಲು ಅವಕ್ಕೆ ಚೈತನ್ಯವಿಲ್ಲ.

ಹೆಚ್ಚಿನ ಜನರಲ್ಲಿ ಆಸ್ಪತ್ರೆಯ ಕನಿಷ್ಠ ವೆಚ್ಚ ಭರಿಸುವ ಆರ್ಥಿಕ ಶಕ್ತಿಯಿಲ್ಲ. ಆಸ್ಪತ್ರೆಯಲ್ಲಿ ದೊಡ್ಡದಾದ ಹಾಸಿಗೆಯ ಅಂಚಿನಲ್ಲಿ ಇಡೀ ಕುಟುಂಬ ಸದಸ್ಯರು ಕುಳಿತಿರುತ್ತಾರೆ. ಆ ಹಾಸಿಗೆಯ ಮಧ್ಯ ಭಾಗದಲ್ಲಿ ಫುಟ್‌ಬಾಲ್‌ನಷ್ಟು ದೊಡ್ಡ ತೂತು.

ಮಕ್ಕಳಿಗೆ ಭೇದಿಯಾದಲ್ಲಿ ಅಲ್ಲೇ ತಾತ್ಕಾಲಿಕ ಶೌಚಾಲಯ. ಹಸಿವು, ಅಪೌಷ್ಟಿಕತೆಯಿಂದ ಬಳಲುತ್ತಿರುವ ಬಹುತೇಕ ಮಕ್ಕಳು, ದೊಡ್ಡವರಿಗೆ ಭೇದಿಯೇ ದೊಡ್ಡ ಕಾಯಿಲೆ. ಹಾಗೆಯೇ ಆಸ್ಪತ್ರೆಯ ಶೌಚಾಲಯದ ಮುಂದೆ ಮುಗಿಯದ ಸರದಿ ಸಾಲು.

1992ರಲ್ಲಿಯೂ ದೇಶ ಬರದ ಹೊಡೆತಕ್ಕೆ ಸಿಕ್ಕಿತ್ತು. ಆಗ ಸರ್ಕಾರವನ್ನು ಅಸ್ಥಿರಗೊಳಿಸಲು ಯತ್ನಿಸುತ್ತಿದ್ದ ಇಸ್ಲಾಮಿಕ್ ಬಂಡುಕೋರರನ್ನು ಮಣಿಸಲು ವಿಶ್ವಸಂಸ್ಥೆ, ಅಮೆರಿಕ ನೇತೃತ್ವದಲ್ಲಿ ಯುದ್ಧವನ್ನೂ ನಡೆಸಿತ್ತು. ನೂರಾರು ಸೈನಿಕರು ಸತ್ತರೂ ಪರಿಸ್ಥಿತಿ ಸುಧಾರಿಸಲಿಲ್ಲ. `ಈಗಿನ ಪರಿಸ್ಥಿತಿ ಮತ್ತಷ್ಟು ಗಂಭೀರ, ಭಯಾನಕ.
 
1992ರಲ್ಲಿ ನಮಗೆ ಸ್ವಲ್ಪ ನೆರವಾದರೂ ಇತ್ತು~ ಎನ್ನುತ್ತಾರೆ  ಬನದೀರ್ ಆಸ್ಪತ್ರೆಯ ಮಕ್ಕಳ ವಿಭಾಗದ ಮುಖ್ಯಸ್ಥ ಡಾ. ಲುಲ್ ಮೊಹಮ್ಮದ್. ವರ್ಷಗಟ್ಟಲೇ ಬೀಳದ ಮಳೆ, ಆಕಾಶಕ್ಕೇರಿದ ಅಗತ್ಯ ವಸ್ತುಗಳ ಬೆಲೆಯಿಂದಾಗಿ ಜನ ಮತ್ತಷ್ಟು ತತ್ತರಿಸಿದ್ದಾರೆ. ದಶಕಗಳಿಂದ ಕಾಡುತ್ತಿರುವ ಅಪೌಷ್ಟಿಕತೆಯಿಂದ ಸಹಜ ರೋಗ ನಿರೋಧಕ ಶಕ್ತಿ ಕಳೆದುಕೊಂಡಿದ್ದಾರೆ.

ದೇಶದಾದ್ಯಂತ ಬರ ಇದ್ದರೂ ಅಲ್-ಶಬಾಬ್ ಇಸ್ಲಾಮಿಕ್ ಬಂಡುಕೋರರ ಹಿಡಿತದಲ್ಲಿರುವ ದಕ್ಷಿಣ ಸೊಮಾಲಿಯಾದಲ್ಲಿ ಬರದ ಭೀಕರ ಪರಿಣಾಮ ಕಾಣುತ್ತಿದೆ. ಅಂತರ್‌ರಾಷ್ಟ್ರೀಯ ಸೇವಾ ಸಂಸ್ಥೆಗಳು, ನೆರವು ಸಂಸ್ಥೆಗಳು ಕಾಲಿಡದಂತೆ ಉಗ್ರರು ನಿರ್ಬಂಧ ವಿಧಿಸಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಅಲ್ಲಿಗೆ ಹೋದ ಸೇವಾಸಂಸ್ಥೆಗಳ ಕಾರ್ಯಕರ್ತರು ಮರಳಿದ್ದು ಹೆಣವಾಗಿಯೇ.

 ವರ್ಷಗಳ ಹಿಂದೆಯೇ ಉಗ್ರರು, ಮಕ್ಕಳಿಗೆ ರೋಗ ನಿರೋಧಕ ಚುಚ್ಚುಮದ್ದು ಹಾಕುವುದನ್ನೂ ನಿಷೇಧಿಸಿದ್ದರು. ಸೊಮಾಲಿಯಾದ ಮಕ್ಕಳನ್ನು ಕೊಲ್ಲಲು ಪಾಶ್ಚಿಮಾತ್ಯ ಶಕ್ತಿಗಳು ಮಾಡುತ್ತಿರುವ ಹುನ್ನಾರ ಇದು ಎಂಬುದು ಅವರ ಆರೋಪ.

ಈಗ ಸಾವಿರಾರು ಮಕ್ಕಳು ಕಾಲರಾ ಮತ್ತು ದಡಾರದಿಂದ ಸಾಯುತ್ತಿದ್ದಾರೆ. ಅಲ್ಲದೇ ಈ ಉಗ್ರರು ದಕ್ಷಿಣ ಸೊಮಾಲಿಯದಲ್ಲಿ ಬಡ ಹಳ್ಳಿಗಳ ಜನ ನದಿ ನೀರನ್ನು ಬಳಸದಂತೆ ನಿರ್ಬಂಧ ಒಡ್ಡುತ್ತಿದ್ದಾರೆ. ತಮಗೆ ತೆರಿಗೆ ನೀಡುವ ಸಿರಿವಂತ ರೈತರ ಹೊಲಗಳಿಗೆ ನದಿ ನೀರು ಹಾಯಿಸುತ್ತಿದ್ದಾರೆ.

`ಅದು ಹೈಟಿಯಾಗಿದ್ದರೆ, ಈಗಾಗಲೇ ಹತ್ತಾರು ಕಾರ್ಯಕರ್ತರು ತಲುಪಿರುತ್ತಿದ್ದರು. ಹೈಟಿ, ಇರಾಕ್, ಆಪ್ಘಾನಿಸ್ತಾನಕ್ಕಿಂತ ಅಪಾಯಕಾರಿ ದೇಶ~ ಎನ್ನುತ್ತಾರೆ ಅಮೆರಿಕದ ಬಹುದೊಡ್ಡ ಸೇವಾ ಸಂಸ್ಥೆ ಅಮೆರಿಕನ್ ರೆಫ್ಯುಜಿ ಕಮಿಟಿಯ ಎರಿಕ್ ಜೇಮ್ಸ.

ದಕ್ಷಿಣ ಸೊಮಾಲಿಯಾ ಜನರಿಗೆ ಉಳಿದಿರುವುದು ಎರಡೇ ದಾರಿ. ಪಕ್ಕದ ಇಥಿಯೋಪಿಯಾ ಮತ್ತು ಕೀನ್ಯಾಕ್ಕೆ ಓಡಿಹೋಗುವುದು (ಈ ದೇಶಗಳಲ್ಲಿ ಬರ ಇದ್ದರೂ ಪಾಶ್ಚಿಮಾತ್ಯ ದೇಶಗಳ ಯಥೇಚ್ಛ ನೆರವು ಹರಿದು ಬರುತ್ತಿದೆ, ಸೇವಾ ಸಂಸ್ಥೆಗಳು ಕೆಲಸ ಮಾಡುತ್ತಿವೆ) ಅಥವಾ ಹೇಗಾದರೂ ಮಾಡಿ ರಾಜಧಾನಿ ಮೊಗದಿಶು ತಲುಪಿ, ದುರ್ಬಲ ಸರ್ಕಾರದ ಬಳಿ ನೆರವು ಯಾಚಿಸುವುದು.

ಆದರೆ, ಬರಪೀಡಿತ ಪ್ರದೇಶದ ಜನ ಅಲ್ಲಿಂದ ಪರಾರಿಯಾಗುವುದು ಅಷ್ಟು ಸುಲಭವಲ್ಲ. ಪಕ್ಕದ ದೇಶಕ್ಕೆ ಓಡಿಹೋಗುವವರು ಅಥವಾ ಮೊಗದಿಶುವಿನ ನಿರಾಶ್ರಿತರ ಶಿಬಿರಕ್ಕೆ ಹೋಗುವವರು ಅದೃಷ್ಟ ಸರಿಯಿದ್ದರೆ ಮಾತ್ರ ಗಮ್ಯ ತಲುಪುತ್ತಾರೆ.

ಪರಾರಿಯಾಗುತ್ತಿರುವ ಸುಳಿವು ಸಿಕ್ಕಲ್ಲಿ ಅಲ್-ಶಬಾಬ್ ಉಗ್ರರ ಗುಂಡು ಎದೆ ಸೀಳಬಹುದು ಅಥವಾ ಅವರನ್ನು ದನಗಳಂತೆ ಹಿಡಿದು ತಾವು ನಿರ್ಮಿಸಿರುವ ಜೈಲಿನಂತಹ ಶಿಬಿರಗಳಲ್ಲಿ ತುಂಬಬಹುದು. ಹಾಗಾಗಿ, ಹೀಗೆ ಓಡಿಹೋಗುವವರೆಲ್ಲ ರಾತ್ರಿಯ ಕಗ್ಗತ್ತಲಲ್ಲಿ ಮುಖ್ಯ ರಸ್ತೆ ಬಿಟ್ಟು ಗುಡ್ಡಗಾಡಿನ ದಾರಿ ಹಿಡಿದು ಮೊಗದಿಶು ತಲುಪುತ್ತಾರೆ. ಅಲ್ಲಿ ರೋಗಪೀಡಿತ ಅಶಕ್ತ ಜನರಿಂದ ತುಂಬಿ, ತುಳುಕುತ್ತಿರುವ ಅತ್ಯಂತ ಕೊಳಕಾದ ನಿರಾಶ್ರಿತರ ಶಿಬಿರ ಸೇರಿಕೊಳ್ಳುತ್ತಾರೆ.

ಈ ಬರ ಆ ದೇಶದ ರಾಜಕೀಯ ಸನ್ನಿವೇಶವನ್ನೇ ಬದಲಾಯಿಸಬಹುದು ಎಂಬ ನಿರೀಕ್ಷೆಯೂ ಇದೆ. 1991ರಲ್ಲಿ ಬಂಡುಕೋರ ಗುಂಪುಗಳು ಸರ್ಕಾರವನ್ನು ಅಸ್ಥಿರಗೊಳಿಸಿ ದೇಶದ ದಕ್ಷಿಣ ಭಾಗಗಳನ್ನು ವಶಪಡಿಸಿಕೊಂಡವು. ರಾಜಧಾನಿ ಮೊಗದಿಶು ಹಾಗೂ ಸುತ್ತಲಿನ ಸೀಮಿತ ಪ್ರದೇಶದ ಮೇಲೆ ವಿಶ್ವಸಂಸ್ಥೆ ಮಾನ್ಯತೆ ನೀಡಿರುವ ಸರ್ಕಾರದ ಹಿಡಿತವಿದೆ.

ಭೀಕರ ಬರದ ಈ ಸನ್ನಿವೇಶದಲ್ಲಿ ಆಹಾರ, ವೈದ್ಯಕೀಯ ನೆರವು ಒದಗಿಸಿ ಸರ್ಕಾರ ತನ್ನ ದಕ್ಷತೆ ಸಾಬೀತುಪಡಿಸಿಕೊಳ್ಳುವ, ಪ್ರಭಾವ ವಿಸ್ತರಿಸಿಕೊಳ್ಳುವ ಅವಕಾಶವಿದೆ. ಹಾಗೆಯೇ ಅಲ್-ಶಬಾಬ್ ಬಂಡುಕೋರರನ್ನು ಹಿಮ್ಮೆಟ್ಟಿಸಬಹುದು ಎನ್ನುತ್ತಾನೆ ಪ್ರತ್ಯೇಕತಾವಾದಿ ನಾಯಕ ಶೇಖ್ ಅಬ್ದುಲ್ ಖಾದಿರ್.

ಬರದ ಪರಿಣಾಮ ಅಲ್-ಶಬಾಬ್ ಮೇಲೂ ಆಗಿದೆ. ಸಾಮೂಹಿಕ ಹಸಿವು, ಬರದ ಕಾರಣದಿಂದ ಅದರ ನಾಯಕರು ಈಗ ತಮ್ಮ  ವೈಯಕ್ತಿಕ ಖರ್ಚು, ವೆಚ್ಚ ತಗ್ಗಿಸುತ್ತಿದ್ದಾರೆ.

`ವಿಶ್ವಸಂಸ್ಥೆ ಈ ಪ್ರದೇಶದಲ್ಲಿ ಬರ ಘೋಷಿಸುವ ಮೂಲಕ ಉತ್ಪ್ರೇಕ್ಷೆ ಮಾಡಿದೆ. ಜನರನ್ನು ನಾವು ಹಿಡಿದು ಬಂಧಿಸುತ್ತಿಲ್ಲ. ಶಾಂತಿ ಮತ್ತು ಸುರಕ್ಷತೆಗಾಗಿ ಅವರೇ ನಮ್ಮ ಶಿಬಿರಕ್ಕೆ ಬಂದು ಸೇರಿಕೊಳ್ಳುತ್ತಿದ್ದಾರೆ~ ಎನ್ನುತ್ತಾನೆ ಅಲ್-ಶಬಾಬ್ ವಕ್ತಾರ ಶೇಖ್ ಯೂನಿಸ್. ಅಲ್-ಶಬಾಬ್ ನದಿ ನೀರನ್ನು ಬೇರೆಡೆಗೆ ಹಾಯಿಸುತ್ತಿದೆ. ಅಂತರ್‌ರಾಷ್ಟ್ರೀಯ ಸೇವಾ ಸಂಸ್ಥೆ, ಕಾರ್ಯಕರ್ತರನ್ನು ಓಡಿಸುತ್ತಿದೆ ಎಂಬುದನ್ನೂ ಆತ ಅಲ್ಲಗಳೆಯುತ್ತಾನೆ.

ಅಲ್-ಶಬಾಬ್, ಸೇವಾ ಸಂಸ್ಥೆಗಳ ಕಾರ್ಯಕರ್ತರನ್ನು ಕೊಂದಿದ್ದರಿಂದ ಬಹುತೇಕ ಸೇವಾ ಸಂಸ್ಥೆಗಳು ದಕ್ಷಿಣ ಸೊಮಾಲಿಯಾಕ್ಕೆ ಹೋಗಲು ಅಂಜುತ್ತಿವೆ. 2008ರಲ್ಲಿ ಅಮೆರಿಕ ವಿದೇಶಾಂಗ ಇಲಾಖೆ ಅಲ್-ಶಬಾಬ್‌ಅನ್ನು `ಭಯೋತ್ಪಾದಕರ ಗುಂಪು~ ಎಂದು ಘೋಷಿಸಿದಾಗಿನಿಂದ ಪರಿಸ್ಥಿತಿ ಮತ್ತಷ್ಟು ಹದಗೆಟ್ಟಿದೆ.

ಅಲ್-ಖೈದಾ ಮತ್ತು ಅಲ್-ಶಬಾಬ್‌ಗೆ ಸಂಪರ್ಕವಿದೆ ಎಂದು ಅಮೆರಿಕ ಹೇಳುತ್ತಿದೆ. ಅದಕ್ಕೆ ನೆರವು ನೀಡುವುದು ಅಮೆರಿಕದ ಕಾನೂನು ಪ್ರಕಾರ ಈಗ ಅಪರಾಧ.

ಪಶ್ಚಿಮದ ಸೇವಾ ಸಂಸ್ಥೆಗಳೆಲ್ಲ ಈಗ ಇಸ್ಲಾಮಿಕ್ ಸಂಸ್ಥೆಗಳು ಮತ್ತು ಸ್ಥಳೀಯ ಸಂಸ್ಥೆಗಳ ಮೂಲಕ ಅಲ್ಲಿ ಕೆಲಸ ಮಾಡಲು ಯತ್ನಿಸುತ್ತಿವೆ. ಆದರೆ, ಸ್ಥಳೀಯ ಕಾರ್ಯಕರ್ತರು ಇಷ್ಟೊಂದು ಸಂಖ್ಯೆಯಲ್ಲಿ ನಿರಾಶ್ರಿತರನ್ನು ನಿರ್ವಹಿಸುವಷ್ಟು ಪರಿಣತಿ ಪಡೆದಿಲ್ಲ. ಅಲ್ಲದೇ ಸರ್ಕಾರಿ ಪಡೆಗಳು ಮತ್ತು ಬಂಡುಕೋರರ ನಡುವೆ ನಡೆಯುತ್ತಿರುವ ಘರ್ಷಣೆಗಳಿಂದಾಗಿ ಪರಿಹಾರ ಕಾರ್ಯ ಕೈಗೊಳ್ಳುವುದೇ ಅಸಾಧ್ಯ ಎನಿಸುವಂತಾಗಿದೆ.

`ಸೊಮಾಲಿಯಾದಲ್ಲಿ ಅತ್ಯಂತ ಸಂಕೀರ್ಣ ಸ್ಥಿತಿಯಿದೆ. ಭೀಕರ ಹಸಿವೆಗೆ ತುತ್ತಾಗಿರುವ ಅಲ್ಲಿನ ಜನರಿಗೆ ನೆರವು ಒದಗಿಸುವುದು ದೊಡ್ಡ ಸಾಹಸ. ಆಫ್ಘಾನಿಸ್ತಾನಕ್ಕಿಂತ ಆ ದೇಶ ಭಯಾನಕ~ ಎನ್ನುತ್ತಾರೆ ವಿಶ್ವ ಆಹಾರ ಯೋಜನೆಯ ಸೊಮಾಲಿಯಾ ಕಾರ್ಯಕ್ರಮದ ಮುಖ್ಯಸ್ಥ ಸ್ಟಿಫಾನೊ ಪೊರ‌್ರೆಟ್ಟಿ. ಈಗಷ್ಟೇ ಆಫ್ಘಾನಿಸ್ತಾನದಲ್ಲಿ ಕೆಲಸ ಮಾಡಿ ಮರಳಿರುವ ಅವರ ಮಾತುಗಳು ಸೊಮಾಲಿಯಾದ ದುರಂತ ಕಥೆಗೆ ಕನ್ನಡಿ ಹಿಡಿಯುವಂತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.