ADVERTISEMENT

ಪಯಣಗಳು ತರುವ ಪಕ್ವತೆ...

​ಪ್ರಜಾವಾಣಿ ವಾರ್ತೆ
Published 13 ಜನವರಿ 2018, 20:16 IST
Last Updated 13 ಜನವರಿ 2018, 20:16 IST
ಪಯಣಗಳು ತರುವ ಪಕ್ವತೆ...
ಪಯಣಗಳು ತರುವ ಪಕ್ವತೆ...   

* ಪ್ರಕಾಶ್ ರೈ

ವಿಶ್ವನಾಥ ಒಬ್ಬ ಟ್ಯಾಕ್ಸಿ ಡ್ರೈವರ್. ಎಲ್ಲಿಗೆ, ಯಾವಾಗ, ಯಾರು ಕರೆದರೂ ಓಡಿಬರುವ ವ್ಯಕ್ತಿ. ಹೋಗುವುದು ಹೊಸ ಜಾಗವಾದರೂ ದುಡ್ಡಿನ ಬಗ್ಗೆ ತಲೆ ಕೆಡಿಸಿಕೊಳ್ಳುವವನಲ್ಲ. ಪ್ರಯಾಣ ಮಾಡುವುದೇ ತನ್ನ ವೃತ್ತಿಯಾದುದರ ಬಗ್ಗೆ ತುಂಬ ಹೆಮ್ಮೆ, ಸಂತೋಷ ಪಡುವ ವ್ಯಕ್ತಿ. ಒಮ್ಮೆ ನಡು ರಾತ್ರಿ ಹೈವೆಯಲ್ಲಿ ಕಾರು ಓಡಿಸುತ್ತಾ ಊರಿನ ಕಡೆ ಹೊರಟಿದ್ದ. ಮುಖದಲ್ಲಿ ಹೇಳಲಾರದ ನೋವೊಂದು ನೆರಿಗೆಗಟ್ಟಿದೆ. ದಾರಿಯಲ್ಲಿ ಯುವ ಜೋಡಿಯೊಂದು ಕೈ ಅಡ್ಡಹಾಕಿ ಲಿಫ್ಟ್ ಕೇಳಿತು. ಅವರು ತಲುಪಬೇಕಾದ ಊರು ತಾನು ಹೋಗುತ್ತಿರುವ ದಾರಿಯಲ್ಲೇ ಇದ್ದುದರಿಂದ ಮರು ಮಾತನಾಡದೆ ಹತ್ತಿಸಿಕೊಂಡ ವಿಶ್ವ. ಯಾವುದೋ ವಿಚಾರವನ್ನು ಗಾಢವಾಗಿ ಯೋಚಿಸುತ್ತಾ ಡ್ರೈವ್ ಮಾಡುತ್ತಿದ್ದ ವಿಶ್ವನಿಗೆ, ಹಿಂಬದಿಯ ಸೀಟಿನಲ್ಲಿ ಆ ಯುವ ಜೋಡಿಗಳು ಸರಸವಾಡುತ್ತಿರುವುದು ಗೊತ್ತಾಗುತ್ತಿತ್ತು. ಆ ಹೆಣ್ಣು ಗಂಡಿನ ನೋಟದಲ್ಲೂ ಸ್ಪರ್ಷದಲ್ಲೂ ಪಿಸು ಮಾತುಗಳಲ್ಲೂ, ಪ್ರೀತಿಯೂ ಕಾಮವೂ ತುಳುಕುತ್ತಿತ್ತು.

ಆದರೆ ವಿಶ್ವ ಅದರ ಬಗ್ಗೆ ವಿಚಲಿತನಾಗದೆ ತನ್ನ ಪಾಡಿಗೆ ತಾನು ಕಾರು ಚಲಾಯಿಸುತ್ತಿದ್ದ. ಕೆಲವು ಗಂಟೆಗಳ ದೀರ್ಘ ಪ್ರಯಾಣದ ನಂತರ ಯುವ ಜೋಡಿ ಇಳಿಯ ಬೇಕಿದ್ದ ಊರಿಗೆ ಮುಂಚೆಯೇ, ತನ್ನ ಊರಿನಲ್ಲಿ ಸ್ವಲ್ಪ ಕೆಲಸವಿದೆ ಅಂತ ಹೇಳಿ ಕಾರನ್ನು ಆ ಕಡೆ ತಿರುಗಿಸಿದ. ಟ್ಯಾಕ್ಸಿ ವಿಶ್ವನ ಮನೆಯ ಬೀದಿಯ ಕಡೆ ಬರುತ್ತಿದ್ದಂತೆ ಸಾವಿನ ರೋದನ ಜೋರಾಗಿ ಕೇಳಿ ಬಂತು. ಅವನ ದಾರಿ ಕಾಯುತ್ತಿದ್ದ ಬಂಧುಗಳು ಕಾರಿನ ಸುತ್ತ ಬಂದು ನಿಂತರು. ದುಃಖತಪ್ತ ವಿಶ್ವ, ಕಾರಿನ ಹಿಂಬದಿ ತೆಗೆದರೆ, ಅಲ್ಲಿ ಅವನ ಪ್ರೀತಿಯ ಹೆಂಡತಿಯ ಮೃತ ದೇಹವಿತ್ತು. ತನ್ನ ಎರಡೂ ಕೈಗಳಿಂದ ಆಕೆಯನ್ನು ಹೊತ್ತೊಯ್ದ. ತನ್ನ ಬದುಕಿನ ಆಧಾರ ಸ್ತಂಭದಂತಿದ್ದ ಪ್ರೀತಿಯ ಹೆಂಡತಿ ಪ್ರಸವ ವೇದನೆಯಲ್ಲಿ ತೀರಿಹೋಗಿದ್ದಳು. ತನ್ನ ಟ್ಯಾಕ್ಸಿಯಲ್ಲಿ ಶವವನ್ನು ಊರಿಗೆ ಹೊತ್ತುತಂದಿದ್ದ ವಿಶ್ವ. ಇಂಥ ನೋವನ್ನು ಹೊತ್ತು ಪ್ರಯಾಣಿಸುತ್ತಿರುವಾಗಲೂ ಆ ಯುವ ಜೋಡಿಯ ಸರಸದಾಟಗಳನ್ನು ವಿಶ್ವ ಹೇಗೆ ಸಹಿಸಲು ಸಾಧ್ಯವಾಯಿತು? ಎಂಬ ಪ್ರಶ್ನೆಗೆ, ಆತನ ಪ್ರಯಾಣಗಳಿಂದ ಬಂದ ಪಕ್ವತೆಯೇ ಎಂಬ ಉತ್ತರ ಬರುತ್ತದೆ. ನಾಗತಿಹಳ್ಳಿ ಚಂದ್ರಶೇಖರ್ ಅವರ ಈ ಕತೆಯನ್ನು ಓದಿದ ನನ್ನ ನೆನಪು ಇದು. ಆ ಕತೆಯ ವಿಶ್ವ ನನ್ನ ಹೀರೋ ಆಗಿಬಿಟ್ಟ. ಆ ಯುವ ಜೋಡಿಯ ತಮಾಷೆ ನೋಡುತ್ತ ಟ್ಯಾಕ್ಸಿ ಚಲಾಯಿಸಿದಂತೆ, ಬದುಕನ್ನು ತಮಾಷೆಯಾಗಿ ನೋಡುವ ಮನೋಭಾವ, ಪಕ್ವತೆ ನಮ್ಮಲ್ಲಿ ಪ್ರತಿಯೊಬ್ಬರಿಗೂ ಬಂದರೆ ಸಾಕಲ್ಲವೇ? ಆದರೆ, ಅದಕ್ಕೆ ಮೊದಲು ನಮಗೆ ಪಯಣಿಸಲು ಗೊತ್ತಿರಬೇಕು.

ADVERTISEMENT

**

ಪ್ರಯಾಣವೇ ಅದ್ಬುತ. ಒಂದೆಡೆ ನಿಂತ ಕೊಳ ಅದು ಎಷ್ಟೇ ದೊಡ್ಡದಿದ್ದರೂ ಪಾಚಿ ಕಟ್ಟಿಯೇ ನಿಲ್ಲುತ್ತದೆ. ಓಡುವುದು ಸಣ್ಣ ಝರಿಯಾದರೂ ನೀರು ಕನ್ನಡಿಯೇ. ಜೀವನದ ಯಾವ ಘಟ್ಟದಲ್ಲೂ ಇದೇ ನನ್ನ ಸ್ಥಳ ಅಂತ ನಿಂತು ಬಿಡಬಾರದು ಎನ್ನುವುದು ನನ್ನ ದೃಢ ನಿರ್ಧಾರ. ಬಹು ದೂರ ಪ್ರಯಾಣ ಮಾಡುವಾಗ ಆಯಾಸವಾಗುವುದು ಸಹಜ. ಆಗ ನಾವು ತೆಗೆದುಕೊಳ್ಳುವ ವಿಶ್ರಾಂತಿ ಬಸ್ ಸ್ಟಾಪಿನಲ್ಲಿ ನಿಂತು ಮತ್ತೊಂದು ಬಸ್ಸಿಗಾಗಿ ಕಾಯುವಂತೆ ಇರಬೇಕು. ಏಕೆಂದರೆ ಆ ವಿಶ್ರಾಂತಿ ನಮ್ಮ ಮುಂದಿನ ಪ್ರಯಾಣದ ಆರಂಭವಾಗಿರುತ್ತದೆ. ನಟನೆ, ಹಣ, ಕೀರ್ತಿ, ಪ್ರೇಮ, ಮದುವೆ, ಮಕ್ಕಳು, ಸ್ನೇಹ ಇವೆಲ್ಲವೂ ನನಗೆ ನನ್ನ ಪ್ರಯಾಣದಿಂದಾಗಿಯೇ ದೊರೆತವುಗಳು.

**

ಸಣ್ಣ ವಯಸ್ಸಿನಲ್ಲಿ ರಜೆಗೆಂದು ಊರಿಗೆ ಹೋಗುತ್ತಿದ್ದೆ. ಸಾಲೆತ್ತೂರಿನ ಅಗರಿಗೆ, ಅಲ್ಲಿಂದ ಬಾಂಡಿಬೆಟ್ಟುಗೆ, ಪುತ್ತೂರಿನ ಸಿದ್ಯಾಳಕ್ಕೆ... ಹೀಗೆ ಎಲ್ಲಿಗೆ ಹೋದರೂ ಚಿಕ್ಕ ವ್ಯಾನ್‌ನಂಥ ಆಟೋ ಇರುತ್ತಿತ್ತು. ವೈವಿಧ್ಯಮಯ ಮನುಷ್ಯರು ಬರುವರು ಹೋಗುವರು, ನಮ್ಮೊಂದಿಗೆ ಪಯಣಿಸುವರು. ಪ್ರತಿಯೊಬ್ಬರದೂ ಒಂದೊಂದು ಪ್ರಪಂಚ. ಆ ಪುಟ್ಟಗಾಡಿಯಲ್ಲಿ ಐದಾರು ಜನಕ್ಕೆ ಸ್ಥಳವಿದ್ದರೆ ಹೆಚ್ಚು. ಆದರೂ, 8-10 ಜನರನ್ನು ಹತ್ತಿಸಿಕೊಳ್ಳುತ್ತಿದ್ದರು. ಡ್ರೈವರ್, ಸೀಟಿನ ಒಂದು ಮೂಲೆಯಲ್ಲಿ ಕೂತರೆ, ಅವನ ಸ್ಥಳದಲ್ಲಿ ಇನ್ನಿಬ್ಬರು ಕುಳಿತಿರುತ್ತಿದ್ದರು. ಕೈಗೆ ಸಿಕ್ಕ ಎಲ್ಲಾ ಚಾಕಲೇಟ್‌ಗಳನ್ನು ಒಮ್ಮೆಗೇ ಬಾಯಿಗೆ ಹಾಕಿಕೊಂಡ ಮಗುವಿನಂತೆ ಎಲ್ಲರನ್ನೂ ಕೂಡ್ರಿಸಿಕೊಂಡು ಓಡುತ್ತಿತ್ತು ಆ ಬಂಡಿ. ಅಂಥ ಇಕ್ಕಟ್ಟಿನಲ್ಲೂ, ಒಂದು ಕೈಯಲ್ಲಿ ಗಾಡಿ ಓಡಿಸುತ್ತಾ, ಇನ್ನೊಂದು ಕೈಯಲ್ಲಿ ಬೀಡಿ ಸೇದುತ್ತಾ ಎಲ್ಲರೊಂದಿಗೆ ನಗುತ್ತಾ ಹರಟುತ್ತಿದ್ದ ಡ್ರೈವರ್, ನನಗೆ ಸಿನಿಮಾದ ಹೀರೋನಂತೆ ಕಾಣುತ್ತಿದ್ದ. ಎಂದಾದರೊಮ್ಮೆ ನಾನು ಹಾಗೇ ಒಮ್ಮೆ ಗಾಡಿ ಓಡಿಸಬೇಕೆಂದು ಆಸೆ ಪಡುತ್ತಿದ್ದೆ.

**

ಸೆಂಟ್ ಜೋಸೆಫ್ ಇಂಡಿಯನ್ ಹೈಸ್ಕೂಲ್‌ನ ನನ್ನ ಶಾಲೆಯಲ್ಲಿ ನಾನೇ ಸ್ಕೌಟ್ ಲೀಡರ್. ದೆಹಲಿಗೆ ಹೋಗಿ, ರಾಷ್ಟ್ರಪತಿಗಳ ಕೈ ಕುಲಕಿ, ಪ್ರೆಸಿಡೆಂಟ್ ಸ್ಕೌಟ್ ಪದಕ ಪಡೆಯುವ ಅವಕಾಶ ಒದಗಿಬಂದಿತ್ತು. ನನ್ನ ದೇಶದ ಪ್ರಥಮ ಪ್ರಜೆಯನ್ನು ಸಂಧಿಸಲು ರೈಲಿನಲ್ಲಿ ಪಯಣಿಸಿದ ದಿನಗಳು ಇನ್ನೂ ನೆನಪಿನಲ್ಲಿವೆ. ಮೂರು ದಿನದ ಪ್ರಯಾಣ ಅದು. ಮೂರೂದಿನ ಆ ಖುಷಿಗೆ ನಿದ್ದೆಯೇ ಬರಲಿಲ್ಲ. ರಾಷ್ಟ್ರಪತಿಯ ಮುಂದೆ ಹೇಗೆ ನಿಲ್ಲಬೇಕು ಎಂದೆಲ್ಲಾ ಹೇಳಿಕೊಟ್ಟಿದ್ದರು. ಆ ಬಗ್ಗೆ ಎಷ್ಟೆಲ್ಲಾ ಕನಸುಗಳು. ವೇದಿಕೆಯತ್ತ ಗಂಭೀರವಾಗಿ ನಡೆಯಬೇಕು. ಪದಕ ಪಡೆದೊಡನೆ ಹೇಗೆಲ್ಲ ತಲೆಬಾಗಿ ವಂದಿಸಬೇಕು. ಹಾಗೆಯೇ ತಲೆ ಎತ್ತಿ ಸಭಿಕರತ್ತ ತಿರುಗಿ ಇನ್ನೊಂದು ನಮಸ್ಕಾರ ಮಾಡುತ್ತಾ, ಜೋರಾದ ಚಪ್ಪಾಳೆ ಮಧ್ಯೆ ವೇದಿಕೆಯಿಂದ ಇಳಿಯಬೇಕು. ಹೀಗೆ ಸಾಕಷ್ಟು ಪ್ಲಾನ್ ಗಳೊಂದಿಗೆ ದೆಹಲಿಗೆ ಹೋಗಿದ್ದೆ. ಅಲ್ಲಿ ಬೇರೆ ಬೇರೆ ರಾಜ್ಯಗಳಿಂದ ಬಹಳಷ್ಟು ವಿದ್ಯಾರ್ಥಿಗಳು ನನ್ನಂತೆ ಬಂದಿದ್ದರು. ನನ್ನ ಉತ್ಸಾಹಕ್ಕೆ ನೀರೆರಚುವ ಮೊದಲ ಕಾರ್ಯ ಎನ್ನುವಂತೆ ನಮ್ಮೆಲ್ಲರಿಗೂ ಒಂದೇ ಸೂರಿನಡಿ, ಗುಂಪಾಗಿ ತಂಗುವ ವ್ಯವಸ್ಥೆ ಮಾಡಿದ್ದರು. ನನ್ನ ಕನಸು ನಿಧನಿಧಾನವಾಗಿ ಒಡೆಯತೊಡಗಿತು. ಪಯಣಿಸುವಾಗ ನನ್ನಲ್ಲಿದ್ದ ಸಂಭ್ರಮದ ಅರ್ಧದಷ್ಟು ವೇದಿಕೆ ಏರುವಾಗ ಇರಲಿಲ್ಲ.

ರಾಷ್ಟ್ರಪತಿ ಭವನದ ಲಾನ್ ಮೇಲೆ ಕೆಲವೇ ಕೆಲವು ಸಭಿಕರಿದ್ದರು, ಅಷ್ಟೇ ಚಪ್ಪಾಳೆ. ನೀಲಂ ಸಂಜೀವರೆಡ್ಡಿ ಆಗ ನಮ್ಮ ರಾಷ್ಟ್ರಪತಿ. ಅವರ ಕೈ ಕುಲಕಿದಾಗ, ದೇಶದ ರಾಷ್ಟ್ರಪತಿಗಳ ಕೈ ಇಷ್ಟು ಕೋಮಲವಾಗಿಯೂ, ಚಿಕ್ಕದಾಗಿಯೂ ಇದೆಯೇ ಅನಿಸಿತು. ಹಲವು ವರ್ಷಗಳ ನಂತರ ರಾಷ್ಟ್ರಪತಿಗಳಿಂದ ಪದಕ ಪಡೆಯಲು ಮತ್ತೊಮ್ಮೆ ದೆಹಲಿಗೆ ಹೋದೆ. ಈ ಬಾರಿ ಮೂರು ದಿನವಲ್ಲ ಎರಡೇ ತಾಸಿನ ಪಯಣ. ಅದೂ ವಿಮಾನದಲ್ಲಿ. ನಟನಾಗಿ ರಾಷ್ಟ್ರಪತಿಯಿಂದ ಪ್ರಶಸ್ತಿ ಪಡೆಯಲು ಹೋಗಿದ್ದೆ. ರಾಷ್ಟ್ರಪತಿ ಕೈ ಚಿಕ್ಕದಾಗಿ, ಕೋಮಲವಾಗಿ ಇರುತ್ತದೆ ಎಂದು ಗೊತ್ತಿದ್ದರಿಂದ ಆ ಬಗ್ಗೆ ಅಂಥ ಥ್ರಿಲ್ ಏನೂ ಇರಲಿಲ್ಲ. ಅಷ್ಟೇ ಕಮ್ಮಿ ಸಭಿಕರು, ಚಪ್ಪಾಳೆ. ರಾಷ್ಟ್ರಪತಿ ಮಾತ್ರ ಬದಲಾಗಿದ್ದರು. ಆ ವರ್ಷ ಗೆಳೆಯ ಪ್ರಕಾಶ್ ಬೆಳವಾಡಿಗೂ ರಾಷ್ಟ್ರಪ್ರಶಸ್ತಿ ಬಂದಿತ್ತು. ಪ್ರಶಸ್ತಿ ಸ್ವೀಕರಿಸಿ ಹೋಟೆಲ್ ರೂಮ್‍‍ನಲ್ಲಿ ಇಟ್ಟು, ಸಂಜೆ ಅವನೊಂದಿಗೆ ದೆಹಲಿ ಪ್ರೆಸ್ ಕ್ಲಬ್ಬಿಗೆ ಹೋದೆ. ಆ ರಾತ್ರಿ ಹಲವು ಹಿರಿಯ ಪತ್ರಕರ್ತರೊಂದಿಗೆ ಹರಟುತ್ತಿದ್ದೆವು. ಪ್ರಯಾಣದ ಬಗ್ಗೆ ಮಾತನಾಡುತ್ತಿದ್ದೆವು. ಮಾತು ಹಾಗೇ, ಸಾಹಿತ್ಯ, ರಾಜಕೀಯ, ಸಿನಿಮಾ ಹೀಗೆ ಹಲವು ಕಡೆ ಸಾಗಿತು.

ನನ್ನ ಮಾತುಗಳಿಂದ ಹಿರಿಯ ಪತ್ರಕರ್ತರೊಬ್ಬರಿಗೆ ತುಂಬ ಇಷ್ಟವಾಗಿಹೋದೆ. ‘ಪ್ರಕಾಶ್, ನನಗೆ, ನಟರು, ಸಿನಿಮಾದವರ ಬಗ್ಗೆ ಅಂಥ ಒಳ್ಳೆಯ ಅಭಿಪ್ರಾಯವಿರಲಿಲ್ಲ. ನಿಮ್ಮ ಜೊತೆ ಮಾತನಾಡಿದ ಮೇಲೆ ಅದು ಬದಲಾಗಿದೆ. ಮುಂದಿನ ಸಲ ನೀವು ದೆಹಲಿಗೆ ಬಂದಾಗ ಮತ್ತೆ ಭೇಟಿಯಾಗಬೇಕು’ ಅಂದರು. ಅದಕ್ಕೆ ನಾನು, ‘ಸಾರ್, ಪ್ರಯಾಣಗಳನ್ನು ನಾನು ತೀರ್ಮಾನಿಸುವುದಿಲ್ಲ. ಪ್ರಯಾಣವೇ ನನ್ನನ್ನು ತೀರ್ಮಾನಿಸುತ್ತದೆ. ನಾನು ಮತ್ತೊಮ್ಮೆ ದೆಹಲಿಗೆ ಬರಬಹುದು. ಆದರೆ ಆಗ ನಿಮ್ಮನ್ನು ಭೇಟಿಯಾಗುತ್ತೇನೆ ಎಂದು ಹೇಳಲಾಗದು. ಏಕೆಂದರೆ ಈ ಪ್ರಯಾಣದಲ್ಲಿ ನಿಮ್ಮನ್ನು ಸಂಧಿಸುತ್ತೇನೆ ಅಂತ ನನಗೇ ಗೊತ್ತಿರಲಿಲ್ಲ. ಇದು ತಾನಾಗಿ ಏರ್ಪಟ್ಟ ಭೇಟಿ. ಪ್ರಶಸ್ತಿ ಪಡೆದ ಎಲ್ಲರೂ ಸಿನಿಮಾದವರಿಗಾಗಿ ಏರ್ಪಡಿಸಿದ್ದ ಸಂತೋಷ ಕೂಟಕ್ಕೆ ಹೋದರು. ನಾನು ನನ್ನ ಗೆಳೆಯನೊಡನೆ ಇಲ್ಲಿಗೆ ಬಂದೆ. ಹಾಗೇ ಬಂದ ಸ್ಥಳದಲ್ಲಿ ಅಚಾನಕ್ಕಾಗಿ ನಾವಿಬ್ಬರೂ ಸಂಧಿಸಿದ್ದೇವೆ. ಮುಂದಿನ ವರ್ಷ ಇನ್ನೊಂದು ಪ್ರಶಸ್ತಿಗಾಗಿ ದೆಹಲಿಗೆ ಬಂದರೂ ಬರಬಹುದು. ಆದರೆ ಪ್ರೆಸ್ ಕ್ಲಬ್ ಗೆ ಬರುವೆನೇ, ನಿಮ್ಮನ್ನು ಭೇಟಿಯಾಗುವನೇ ಅನ್ನೋದು ಗೊತ್ತಿಲ್ಲ’ ಅಂತ ನಕ್ಕೆ. ‘ಈ ಮನಸ್ಥಿತಿಯನ್ನು ಮಾತ್ರ ಎಂದಿಗೂ ಕಳೆದುಕೊಳ್ಳಬೇಡ’ ಎಂದು ಆ ದೊಡ್ಡ ಮನುಷ್ಯರು ಹರಸಿ, ಬೀಳ್ಕೊಟ್ಟರು.

ಇಂದಿಗೂ ಹೀಗೆ ಪಯಣಿಸುತ್ತಲೇ ಇದ್ದೇನೆ. ಕಂಡ ಪ್ರತಿ ದಿಗಂತವನ್ನು ತಲುಪಿದಾಗಲೆಲ್ಲಾ ಮತ್ತೊಂದು ದಿಗಂತ ಕಂಡು, ಅತ್ತಕಡೆಗೆ ನಡೆಯುತ್ತಾ... ಎಲ್ಲಾ ದಿಗಂತಗಳನ್ನು ನನ್ನೊಳಗೆ ಒಳಗೊಳಿಸುತ್ತಾ...
ಸಾಗುತ್ತಲೇ ಇದ್ದೇನೆ.

ಸಂಕ್ರಾಂತಿ ಹೊಸ್ತಿಲಲ್ಲಿ ನಿಂತಿದ್ದೇವೆ. ಸುಂದರವಾಗಿ, ಅರ್ಥಪೂರ್ಣವಾಗಿ ಬದುಕಲು, ಎಲ್ಲರ ಜೀವನದಲ್ಲೂ ಹೊಸ ‘ಸಂಕ್ರಮಣ’ ಶುರುವಾಗಲು, ಇಂತಹ ಪಯಣಗಳನ್ನು ಎದುರುಗೊಳ್ಳುತ್ತಲೇ ಮುಂದುವರಿಯುತ್ತಿರಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.