ADVERTISEMENT

ಪ್ರಶ್ನೋತ್ತರ

ಯು.ಪಿ.ಪುರಾಣಿಕ್
Published 16 ಜನವರಿ 2018, 19:30 IST
Last Updated 16 ಜನವರಿ 2018, 19:30 IST
ಪ್ರಶ್ನೋತ್ತರ
ಪ್ರಶ್ನೋತ್ತರ   

ಚಂದ್ರಶೇಖರ್, ನಾಗಶೆಟ್ಟಿಹಳ್ಳಿ

ನಾನು ನಿವೃತ್ತ ಸರ್ಕಾರಿ ನೌಕರ. ವಾರ್ಷಿಕ ಪಿಂಚಣಿ ₹ 3.25 ಲಕ್ಷ. ಮಾಸಿಕ ₹ 5,000 ಮನೆ ಬಾಡಿಗೆ ಕೊಡುತ್ತೇನೆ. ವಿಮಾ ಕಂತು ₹ 3,330, ಸರ್ವೀಸ್ ಚಾರ್ಜ್ ₹ 125, ಸರ್ವೀಸ್ ಚಾರ್ಜ್ ಹಾಗೂ ಪ್ರೀಮಿಯಂ ಹಣಕ್ಕೆ ವಿನಾಯ್ತಿ ಇದೆಯೇ?

ಉತ್ತರ: ಎಲ್.ಐ.ಸಿ. ಪ್ರೀಮಿಯಂ ಹಣಕ್ಕೆ ಸರ್ವೀಸ್ ಚಾರ್ಜ್ ಇರುವುದಿಲ್ಲ. ಒಟ್ಟಿನಲ್ಲಿ ಪ್ರೀಮಿಯಂ ಹಣ ಹೊರತುಪಡಿಸಿ, ಸರ್ವೀಸ್ ಚಾರ್ಜ್‌ಗೆ ಸೆಕ್ಷನ್ 80ಸಿ ಆಧಾರದ ಮೇಲೆ ವಿನಾಯ್ತಿ ಇರುವುದಿಲ್ಲ. ನೀವು ವಾಸಿಸುವ ಮನೆ ಬಾಡಿಗೆಗೆಂದು ಕೊಡುವ ₹ 5,000 ಕೂಡಾ ಆದಾಯದಿಂದ ಕಳೆದು ತೆರಿಗೆ ಸಲ್ಲಿಸಲು ಅವಕಾಶವಿಲ್ಲ.

ADVERTISEMENT

ಸಂತೋಷ್ ಕುಮಾರ್, ಕುಶಾಲನಗರ

ನಾನು ಅವಿವಾಹಿತ. ಗಾರೆ ಕೆಲಸ. ತಿಂಗಳ ಆದಾಯ ₹ 12,000. ನನ್ನ ತಂಗಿಯನ್ನು ಓದಿಸುತ್ತಿದ್ದೇನೆ. ವೃದ್ಧ ತಂದೆ ತಾಯಿಗಳಿದ್ದಾರೆ. ನನ್ನ ಸಹೋದರ ಉದ್ಯೋಗ ಹುಡುಕುತ್ತಿದ್ದಾನೆ. ನಮಗೆ 3 ಎಕರೆ ಜಮೀನು, 30X40 ಅಳತೆಯ ಎರಡು ನಿವೇಶನಗಳಿವೆ. ನಮ್ಮೆಲ್ಲರ ಉತ್ತಮ ಬದುಕಿಗೆ ಮಾರ್ಗದರ್ಶನ ಮಾಡಿ.

ಉತ್ತರ: ನೀವು ಗಾರೆ ಕೆಲಸ ಮಾಡಿ, ನಿಮ್ಮ ಸಹೋದರಿಯನ್ನು ಓದಿಸುತ್ತಿರುವುದು ನಿಜವಾಗಿ ನಿಮ್ಮ ಒಳ್ಳೆಯತನ ತೋರಿಸುತ್ತದೆ. ನಿಮಗೆ 3 ಎಕರೆ ಜಮೀನಿದ್ದು, ನೀವೆಲ್ಲರೂ ಕೂಡಿ ಆ ಜಮೀನಿನಲ್ಲಿ ಉತ್ತಮ ಬೆಳೆ ತೆಗೆಯಿರಿ. ಸರ್ಕಾರದಿಂದ ಬೋರ್‌ವೆಲ್ ಹಾಕಲು ಸಹಾಯಧನ ದೊರೆಯುತ್ತದೆ. ಇದೇ ವೇಳೆ ಜಮೀನಾಗಲೀ, ನಿವೇಶನಗಳಾಗಲಿ ಎಂದಿಗೂ ಮಾರಾಟ ಮಾಡಬೇಡಿ. ಭೂಮಿತಾಯಿ ಎಲ್ಲರನ್ನೂ ಸಲಹುವಳು. ಇದಕ್ಕೆ ಸಂಶಯವಿಲ್ಲ. ಚೆನ್ನಾಗಿ ದುಡಿದು ಉತ್ತಮ ಬೆಳೆ ತೆಗೆದು ಸುಖವಾಗಿ ಬಾಳಿರಿ.

ಹೆಸರು–ಊರು ಬೇಡ

ನಾನು ವಿಶ್ವವಿದ್ಯಾಲಯದ ಸಂಶೋಧಕ. ವಯಸ್ಸು 38. ತಿಂಗಳಿಗೆ ₹ 54,000 ಶಿಷ್ಯ ವೇತನ ಬರುತ್ತದೆ. ಇದು ಎರಡು ವರ್ಷಗಳ ತನಕ ಮಾತ್ರ. ನಾನು ಈ ಹಣ ಎರಡು ವರ್ಷಗಳ ಅವಧಿಗೆ ಎಫ್‌ಡಿ ಮಾಡಬೇಕೆಂದಿದ್ದೇನೆ. ಈ ಮೊತ್ತಕ್ಕೆ ತೆರಿಗೆ ಇದೆಯೇ, ಇದ್ದರೆ ತೆರಿಗೆ ಉಳಿಸುವ ಮಾರ್ಗ ಯಾವುದು?

ಉತ್ತರ:ನೀವು ಪಡೆಯುವುದು ಶಿಷ್ಯವೇತನವಾದರೂ, ನಿಮ್ಮ ವಾರ್ಷಿಕ ಒಟ್ಟು ಶಿಷ್ಯ ವೇತನ ₹ 2.50 ಲಕ್ಷ ದಾಟುವುದರಿಂದ, ನೀವು ಆದಾಯ ತೆರಿಗೆಗೆ ಒಳಗಾಗುತ್ತೀರಿ ಹಾಗೂ ರಿಟರ್ನ್ ತುಂಬ ಬೇಕಾಗುತ್ತದೆ. ನೀವು ಠೇವಣಿ ಇರಿಸಿದರೆ, ಅಲ್ಲಿ ಬರುವ ಬಡ್ಡಿಯನ್ನು ನಿಮ್ಮ ವಾರ್ಷಿಕ ಶಿಷ್ಯ ವೇತನಕ್ಕೆ ಸೇರಿಸಿ ತೆರಿಗೆ ಸಲ್ಲಿಸಬೇಕು. ತೆರಿಗೆ ಉಳಿಸಲು ಗರಿಷ್ಠ ₹ 1.50 ಲಕ್ಷ, 5 ವರ್ಷಗಳ ಬ್ಯಾಂಕ್ ಠೇವಣಿ ಮಾಡಬಹುದು. ಈ ಮೊತ್ತ ಒಟ್ಟು ಆದಾಯದಿಂದ ಕಳೆದು ತೆರಿಗೆ ಸಲ್ಲಿಸಬಹುದು. ನೀವು ರಿಟರ್ನ್ ತುಂಬಲೇಬೇಕಾಗುತ್ತದೆ.

ಹೆಸರು ಬೇಡ, ಮೈಸೂರು

ನಾನು ‘ಡಿ’ ದರ್ಜೆ ಸರ್ಕಾರಿ ನಿವೃತ್ತ ನೌಕರ. ವಯಸ್ಸು 60. ನನ್ನ ಮಗನಿಗೆ ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಜರ್ಮನಿಯಲ್ಲಿ ಎಂ.ಎಸ್. ಮಾಡಲು ಎಸ್‌ಬಿಐ ನಲ್ಲಿ 2013–14 ರಲ್ಲಿ ₹ 8 ಲಕ್ಷ ಶಿಕ್ಷಣ ಸಾಲ ಪಡೆದಿದ್ದೆ. ಸಾಲಕ್ಕೆ ಬಡ್ಡಿ ಇದೆ ಎಂದು ತಿಳಿಸಿದ್ದರು. ನನ್ನ ಮಗ ಎಂ.ಎಸ್. ಪಾಸು ಮಾಡಿದ್ದಾನೆ. ಆದರೆ ಪ್ರಾಜೆಕ್ಟ್ ತಿರಸ್ಕಾರವಾಗಿದೆ. ಕೆಲಸ ಸಿಕ್ಕಿಲ್ಲ. ಈಗ ಶಿಕ್ಷಣ ಸಾಲ ಬಡ್ಡಿ ಸೇರಿಸಿ ₹ 12 ಲಕ್ಷವಾಗಿದೆ. ನೀವು ಪ್ರಶ್ನೋತ್ತರದಲ್ಲಿ ಶಿಕ್ಷಣ ಸಾಲಕ್ಕೆ ಬಡ್ಡಿ ಇರುವುದಿಲ್ಲ ಎಂದು ತಿಳಿಸಿದ್ದೀರಿ. ಈಗ ಬ್ಯಾಂಕಿನವರು ಸಾಲ ತೀರಿಸಲು ಒತ್ತಡ ಹಾಕುತ್ತಿದ್ದಾರೆ. ಮಗನಿಗೆ ಕೆಲಸ ಸಿಕ್ಕಿಲ್ಲ ಹಾಗೂ ನಾನು ನಿವೃತ್ತನಾಗಿದ್ದೇನೆ. ನಾನು ಒಂದು ನಿವೇಶನ ಮಾರಾಟ ಮಾಡಿ ಸಾಲ ತೀರಿಸಲು ನಿರ್ಧರಿಸಿದ್ದೇನೆ. ನಿಮ್ಮ ಸಲಹೆ ತಿಳಿಸಿ.

ಉತ್ತರ: ಕೇಂದ್ರ ಸರ್ಕಾರದ ಮಾದರಿ ಶಿಕ್ಷಣ ಸಾಲದ ಸೌಲತ್ತು, ವೃತ್ತಿಪರ ಶಿಕ್ಷಣ ಪಡೆಯುವ, ವಾರ್ಷಿಕ ₹ 4.50 ಲಕ್ಷದೊಳಗೆ ಆದಾಯವಿರುವ, ಹಾಗೂ ಭಾರತದಲ್ಲಿ ಶಿಕ್ಷಣ ಪಡೆಯುವ ವಿದ್ಯಾರ್ಥಿಗಳಿಗೆ ಮಾತ್ರ ಸೀಮಿತವಾಗಿದೆ. ಅಂತಹ ವಿದ್ಯಾರ್ಥಿಗಳು ಅನುದಾನಿತ ಬಡ್ಡಿ (Interest Subsidy) ಸೌಲಭ್ಯಕ್ಕೆ ಅರ್ಹರಾಗುತ್ತಾರೆ. ಇವನ್ನೆಲ್ಲಾ ಪರಿಗಣಿಸುವಾಗ ನಿಮ್ಮ ಮಗನಿಗೆ ಬಡ್ಡಿರಹಿತ ಶಿಕ್ಷಣ ಸಾಲದ ಸೌಲತ್ತು ಇರುವುದಿಲ್ಲ. ಎಸ್‌ಬಿಐ ನಲ್ಲಿ ತಿಳಿಸಿರುವುದು ಸರಿ ಇರುತ್ತದೆ. ನಿವೇಶನ ಮಾರಾಟ ಮಾಡುವುದು ಅನಿವಾರ್ಯವಾದಲ್ಲಿ ಮಾರಾಟ ಮಾಡಿ ಸಾಲ ತೀರಿಸಿರಿ. ಸಾಲದ ಮೊತ್ತ ದಿನೇ ದಿನೇ ಬಡ್ಡಿ ಸೇರಿ ಹೆಚ್ಚಾಗುವುದರಿಂದ ಬೇಗ ಸಾಲ ತೀರಿಸಿರಿ.

ಹೆಸರು–ಊರು ಬೇಡ

ನಾನು ಕಂದಾಯ ಇಲಾಖೆಯಲ್ಲಿ ಕೆಲಸ ಮಾಡುತ್ತೇನೆ. ನನ್ನ ಒಟ್ಟು ಸಂಬಳ ₹ 31,300. ಪತಿಯ ಒಟ್ಟು ಸಂಬಳ ₹ 20,000 ನಿಮ್ಮ ಲೇಖನದಿಂದ ಪ್ರಭಾವಿತಳಾಗಿ ₹ 5,000 ಆರ್.ಡಿ. 2016ರಲ್ಲಿ 3 ವರ್ಷಗಳ ಅವಧಿಗೆ ಮಾಡಿದ್ದೇನೆ. ಮನೆ ಖರ್ಚಿಗೆ ₹ 15,000 ಕೊಡುತ್ತೇವೆ. ನನ್ನ ಬಳಿ ₹ 5 ಲಕ್ಷ ನಗದು ಮೊತ್ತವಿದೆ. ನಿವೇಶನ ಕೊಳ್ಳಲು, ಪಿಎಲ್‌ಐ, ಜಿ.ಪಿ.ಎಫ್‌. (ಓರ್ವ ವ್ಯಕ್ತಿ ಎಷ್ಟು ಖಾತೆ ಹೊಂದಬಹುದು?) ಆರ್‌.ಡಿ. ಮತ್ತು ಪಿಎಲ್‌ಐಗೆ ತೆರಿಗೆ ವಿನಾಯ್ತಿ ಇದೆಯೇ?

ಉತ್ತರ: ನಿವೇಶನ ಕೊಳ್ಳಲು ಕನಿಷ್ಠ ₹ 20 ಲಕ್ಷ ಬೇಕಾದೀತು. ಸಾಲ ಮಾಡದೇ ನಿವೇಶನ ಕೊಳ್ಳಲು ನಿಮಗೆ ಸದ್ಯಕ್ಕೆ ಸಾಧ್ಯವಾಗಲಾರದು. ಗ್ರಾಮಠಾಣ ವ್ಯಾಪ್ತಿಯಲ್ಲಿ ನಿವೇಶನ ಕೊಂಡರೆ, ಮನೆ ಕಟ್ಟಲು ಸಾಲ ಸಿಗುವುದಿಲ್ಲ. ಸ್ವಲ್ಪ ಸಮಯ ಕಾಯಿರಿ. ನೀವು ಪ್ರಶ್ನೋತ್ತರದಿಂದ ಪ್ರಭಾವಿತರಾಗಿ ₹ 5,000, 3 ವರ್ಷಗಳ ಆರ್‌.ಡಿ. ಮಾಡಿರುವುದಕ್ಕೆ ಅಭಿನಂದನೆಗಳು. ಇದನ್ನು ಮುಂದುವರಿಸಿ.

ಪಿಎಲ್‌ಐ ಅಂಚೆ ಕಚೇರಿ ವಿಮಾಪಾಲಿಸಿ, ಇದರಲ್ಲಿ ಮನಿ ಬ್ಯಾಕ್‌ ಪಾಲಿಸಿ ಮಾಡಿಸಿ. ವಾರ್ಷಿಕ ಗರಿಷ್ಠ ₹ 5,000 ತುಂಬಿರಿ. ಜಿ.ಪಿ.ಎಫ್‌.ನಲ್ಲಿ ಹೆಚ್ಚಿನ ಹಣ ತುಂಬುವುದು ನಿಜವಾಗಿ ಜಾಣತನ. ಆದರೆ, ಇದೊಂದು ದೀರ್ಘಾವಧಿ ಠೇವಣಿಯಾಗಿದ್ದು, ನೀವು ನಿವೇಶನ ಕೊಳ್ಳುವುದಾದರೆ ತಕ್ಷಣ ಹಣ ಸಿಗುವುದಿಲ್ಲ.

ಓರ್ವ ವ್ಯಕ್ತಿ ಒಂದೇ ಜಿ.ಪಿ.ಎಫ್‌. ಖಾತೆ ಹೊಂದಬಹುದು. ಇದೇ ಖಾತೆಗೆ ಹೆಚ್ಚಿನ ಹಣ ತುಂಬಬಹುದು. ನೀವು ಬಯಸಿದಲ್ಲಿ ಜಿ.ಪಿ.ಎಫ್‌. ಜೊತೆಗೆ ಪಿ.ಪಿ.ಎಫ್‌. ಖಾತೆ ಅಂಚೆ ಕಚೇರಿಯಲ್ಲಿ ತೆರೆಯಬಹುದು. ಆರ್‌.ಡಿ.ಗೆ ಬರುವ ಬಡ್ಡಿಗೆ ತೆರಿಗೆ ವಿನಾಯ್ತಿ ಇಲ್ಲ. ಪಿಎಲ್‌ಐಗೆ ತುಂಬುವ ಕಂತು ಸೆಕ್ಷನ್‌ 80ಸಿ ಆಧಾರದ ಮೇಲೆ ತೆರಿಗೆ ವಿನಾಯ್ತಿ ಪಡೆಯಬಹುದು.

ಅಮಲರವಿ, ಕೆರೂರ (ಬಾದಾಮಿ)

ನಾನು ಸರ್ಕಾರಿ ನಿವೃತ್ತಿ ನೌಕರ. ಪಿಂಚಣಿ₹ 29,380. ವಯಸ್ಸು 76. ನನಗೆ ಔಷಧ ಹಾಗೂ ಇತರೆ ಖರ್ಚು ತಿಂಗಳಿಗೆ ₹ 12,000 ಬರುತ್ತದೆ. ತಿಂಗಳಿಗೆ ₹ 13,000 ಆರ್‌.ಡಿ. ಹಾಗೂ ಉಳಿಕೆ ಸುಮಾರು 5 ಲಕ್ಷ ಠೇವಣಿಗಳಿವೆ. ನನಗೆ ತೆರಿಗೆ ಬರುತ್ತಿದೆಯೇ.ತೆರಿಗೆ ಉಳಿಸಲು ಮಾರ್ಗದರ್ಶನ ಮಾಡಿ?

ಉತ್ತರ: ನಿಮ್ಮ ವಾರ್ಷಿಕ ಪಿಂಚಣಿ ವರಮಾನ ಹಾಗೂ ಇತರೆ ಠೇವಣಿಗಳ ಮೇಲಿನ ಬಡ್ಡಿ ಲೆಕ್ಕ ಹಾಕುವಾಗ, ಈ ಎರಡೂ ಮೊತ್ತ ₹ 3 ಲಕ್ಷ ದಾಟುವುದರಿಂದ ನೀವು ತೆರಿಗೆಗೆ ಒಳಗಾಗುತ್ತೀರಿ ಹಾಗೂ ರಿಟರ್ನ್‌ ತುಂಬಬೇಕಾಗುತ್ತದೆ. ತೆರಿಗೆ ಉಳಿಸಲು, 5 ವರ್ಷಗಳ ಬ್ಯಾಂಕ್‌ ಠೇವಣಿ ಗರಿಷ್ಠ ₹ 1.50 ಲಕ್ಷ ಮಾಡಬಹುದು. ರಿಟರ್ನ್‌ ತುಂಬಲು ನಿಮಗೆ ಕಷ್ಟವಾದೀತು. ಬಾದಾಮಿಯಲ್ಲಿ ತೆರಿಗೆ ಸಲಹೆಗಾರರನ್ನು ವಿಚಾರಿಸಿ ರಿಟರ್ನ್‌ ತುಂಬಿರಿ.

ಸುಮಂತ್‌, ಹುಳಿಯಾರು

ನಾನು ಎಸ್‌ಎಸ್‌ಎಲ್‌ಸಿ ಪಾಸ್‌ ಮಾಡಿದ್ದೇನೆ. ನಾನು ಸ್ವಂತ ಉದ್ಯೋಗ ಮಾಡಬೇಕೆಂದಿದ್ದೇನೆ. ನನಗೆ ವ್ಯವಹಾರ ಜ್ಞಾನ ಸ್ವಲ್ಪಮಟ್ಟಿಗೆ ಇದೆ. ‘ಮುದ್ರಾ’ ಯೋಜನೆಯಲ್ಲಿ ಸಾಲ ಪಡೆಯುವುದು ಹೇಗೆ?

ಉತ್ತರ: ಯಾವುದೇ ವ್ಯಾಪಾರ–ಉದ್ಯೋಗ ಮಾಡಲು ವ್ಯಕ್ತಿಯ ಆಸಕ್ತಿ ಜೊತೆಗೆ ಅನುಭವ ಕೂಡಾ ಅಷ್ಟೇ ಮುಖ್ಯವಾಗುತ್ತದೆ. ನೀವು ಮಾಡಲಿರುವ ಉದ್ಯೋಗ ಅಥವಾ ಏನಾದರೂ ಮಾಡಲು ಇಚ್ಚಿಸುವ ವ್ಯವಹಾರದ ಕುರಿತು ನಿಮ್ಮ ಜಿಲ್ಲೆಯಲ್ಲಿ ಇರುವ ಡಿಸ್ಟ್ರಿಕ್ಟ್‌ ಇಂಡಸ್ಟ್ರೀಸ್‌ ಸೆಂಟರ್‌ಗೆ  ನೀವೇ ಸ್ವತಃ ಹೋಗಿ ವಿಚಾರಿಸಿರಿ. ಅಲ್ಲಿ ಅವರು ನಿಮಗೆ ಆ ವಿಚಾರದಲ್ಲಿ ತರಬೇತಿ ನೀಡುತ್ತಾರೆ. ಸ್ವಲ್ಪವಾದರೂ ಪರಿಣತಿ ಇಲ್ಲದೆ ಉದ್ಯೋಗ ಮಾಡುವುದು ಸುಲಭವಲ್ಲ ಹಾಗೂ ನಷ್ಟ ಅನುಭವಿಸುವ ಸಾಧ್ಯತೆ ಕೂಡಾ ಇರುತ್ತದೆ. ಹೀಗೆ ತರಬೇತಿ ಹೊಂದಿ, ಮಾಡತಕ್ಕ ವ್ಯವಹಾರದ ಪ್ರಾಜೆಕ್ಟ್‌ ರಿಪೋರ್ಟ್‌ ತಯಾರಿಸಿ, ನೀವು ಈಗಾಗಲೇ ವ್ಯವಹರಿಸುವ ಬ್ಯಾಂಕ್‌ನಲ್ಲಿ ಮುದ್ರಾ ಯೋಜನೆಯ ‘ಶಿಶು’ ಯೋಜನೆಯಲ್ಲಿ ₹ 50,000 ಸಾಲ ಪಡೆಯಿರಿ. ಈ ಸಾಲಕ್ಕೆ ಬೇರಾವ ಆಧಾರ  (Collateral Security) (50 ಸಾವಿರಕ್ಕೆ ಮಾತ್ರ) ಅಥವಾ ಜಾಮೀನಿನ, ಮಾರ್ಜಿನ್‌ ಹಣ ಅವಶ್ಯವಿಲ್ಲ. ಏನಾದರೂ ಯಂತ್ರೋಪಕರಣವನ್ನು (Machinery) ಸಾಲದಿಂದ ಪಡೆದಾಗ ಅಂತಹ ಯಂತ್ರವನ್ನು ಬ್ಯಾಂಕಿಗೆ ಒತ್ತೆ (Hypothecation ) ಇಡಬೇಕಾಗುತ್ತದೆ.

ಲತಾ ಸುರೇಶ್‌, ಬೆಂಗಳೂರು

ನಮ್ಮ ಬಳಿ ₹ 20 ಲಕ್ಷವಿದೆ. ರಾಜಾಜಿನಗರದಲ್ಲಿ 25X40 ಅಳತೆಯ ಹಳೆಕಟ್ಟಡ ಇದೆ. ಬಾಡಿಗೆ ಬರುವುದಿಲ್ಲ. ವಿಜಯನಗರದಲ್ಲಿ ಸ್ವಂತ ಮನೆ ಇದೆ. ಇಲ್ಲಿ ಕೂಡಾ ಬಾಡಿಗೆ ಬರುವುದಿಲ್ಲ. ನನಗೂ ಪತಿಗೂ ಯಾವ ವರಮಾನ ಇಲ್ಲ. ಮಗನಿಗೆ 26 ವರ್ಷ, ಮದುವೆ ಆಗಿಲ್ಲ, ಸಂಬಳ ₹ 15,000. ಮಗಳು ಎಸ್‌ಎಸ್‌ಎಲ್‌ಸಿ ಓದುತ್ತಾಳೆ. ನಾವು ಮಗನಿಗೆ ಮದುವೆ ಮಾಡಬೇಕು. ಸದ್ಯಯ ಮಗನ ಸಂಬಳದಿಂದ ಜೀವಿಸುತ್ತೇವೆ. ರಾಜಾಜಿನಗರ ಮನೆ ಕೆಡವಿ ಹೊಸ ಮನೆ ಕಟ್ಟಲು ಸಾಧ್ಯವಾಗುತ್ತಿಲ್ಲ. ಪರಿಹಾರ ಇದೆಯೇ?

ಉತ್ತರ: ನಿಮಗೆ ಸ್ಥಿರ ಆಸ್ತಿ ಇದೆ, ಆದರೆ ನಿಮ್ಮಲ್ಲಿ ನಗದು ಹಣವಿಲ್ಲ. ನೀವು ರಾಜಾಜಿನಗರದ ಹಳೆಮನೆ ಕೆಡವಿ ಹೊಸಮನೆ ಕಟ್ಟಿಸಲು ದೊಡ್ಡ ಪ್ಲ್ಯಾನ್‌ ಹಾಕಿದಂತೆ ಕಾಣುತ್ತದೆ. ಸಾಲ ತೀರಿಸಲು ನಿಮಗೆ ಆದಾಯವಿಲ್ಲದಿರುವುದರಿಂದ, ಬ್ಯಾಂಕಿನಲ್ಲಿ ಸಾಲ ಸಿಗದಿರುವುದು ಸಹಜ, ಆದರೆ ನಿಮ್ಮೊಡನಿರುವ
₹ 20 ಲಕ್ಷದಲ್ಲಿ, ಕನಿಷ್ಠ 10 ಚದರದ ಮನೆ ಕಟ್ಟಲು ಸಾಧ್ಯವಿದೆ. ರಾಜಾಜಿನಗರ, ಬೆಂಗಳೂರಿನ ಉತ್ತಮ ಹಾಗೂ ಮುಖ್ಯ ಭಾಗದಲ್ಲಿದ್ದು, ಹೊಸ ಮನೆಗೆ ಒಳ್ಳೆ ಬಾಡಿಗೆ ಬರುತ್ತದೆ. ರಾಜಾಜಿನಗರದ ಆಸ್ತಿ ಮಾರಾಟ ಮಾಡಿ ವಿಜಯನಗರದಲ್ಲಿ ಬಹುಮಹಡಿ ಕಟ್ಟಬಹುದಾದರೂ ಸ್ಥಿರ ಆಸ್ತಿ ಮಾರಾಟ ಮಾಡುವುದು ಸರಿಯಲ್ಲ. ನೀವೇ ಯೋಚಿಸಿ ನಿಮಗೆ ಅನುಕೂಲವಾಗುವಂತೆ ಮಾಡಿರಿ.

ಹೆಸರು– ಊರು ಬೇಡ

ಪಿತ್ರಾರ್ಜಿತ ಆಸ್ತಿ ಹೊಲ ಮಾರಾಟ ಮಾಡಿ ₹ 40 ಲಕ್ಷ ಬಂದಿದೆ. ಈ ಹಣ 4 ಜನ  ಮಕ್ಕಳಿಗೆ ಸಮಭಾಗ ಮಾಡಿ ಅಂಚೆ ಕಚೇರಿ ಅಥವಾ ಬ್ಯಾಂಕಿನಲ್ಲಿ ತೊಡಗಿಸುವುದು ಯಾವುದು ಲಾಭದಾಯಕ. ನನಗೆ ₹ 20,000 ತಿಂಗಳಿಗೆ ಪಿಂಚಣಿ ಬರುತ್ತದೆ. ಇದರಲ್ಲಿ ₹ 5,000 ಉಳಿಸಲು ದಯಮಾಡಿ ಮಾರ್ಗದರ್ಶನ ನೀಡಿ.

ಉತ್ತರ: ಬ್ಯಾಂಕ್ ಹಾಗೂ ಅಂಚೆ ಕಚೇರಿ ಠೇವಣಿ ಗಮನಿಸಿದಾಗ ಬ್ಯಾಂಕುಗಳಿಗಿಂತ ಅಂಚೆ ಕಚೇರಿ ಠೇವಣಿಯಲ್ಲಿ ಸ್ವಲ್ಪ ಹೆಚ್ಚಿನ ಬಡ್ಡಿ ಬರುತ್ತದೆ. ಅದೇ ರೀತಿ ಕೆಲವು ಹೆಸರಾಂತ ಉತ್ತಮ ಸಹಕಾರಿ ಬ್ಯಾಂಕುಗಳೂ ಉಳಿದ ಬ್ಯಾಂಕುಗಳಿಗಿಂತ ಹೆಚ್ಚಿನ ಬಡ್ಡಿ ಕೊಡುತ್ತವೆ. ಎಲ್ಲಾ ಕಡೆ ವಿಚಾರಿಸಿ, ಹೆಚ್ಚಿಗೆ ಬಡ್ಡಿ ಬರುವಲ್ಲಿ ಠೇವಣಿ ಇರಿಸಿರಿ. ₹5000, 5 ವರ್ಷಗಳ ಅವಧಿಗೆ ಅಂಚೆ ಕಚೇರಿಯಲ್ಲಿ ಆರ್.ಡಿ. ಮಾಡಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.