ADVERTISEMENT

ಹಿಂಡುವ ಮುನ್ನ ಮೇವು–ಬೂಸಾ...!

ಡಿ.ಬಿ, ನಾಗರಾಜ
Published 20 ಜನವರಿ 2018, 19:30 IST
Last Updated 20 ಜನವರಿ 2018, 19:30 IST

ವಿಜಯಪುರ: ‘ಸಮಾಜ ಸೇವೆ ಮಾಡ್ಬೇಕು ಅಂದ್ರೆ ರೊಕ್ಕ ಬೇಕು. ಅದ್ಕ ಮೊದಲು ಕಾಸ್ ಗಳಸ್ಬೇಕು... ಆಮೇಲೆ ಯೋಚಿಸ್ಬೇಕು...’

ವಿಧಾನ ಪರಿಷತ್ ಸದಸ್ಯ ಬಸನಗೌಡ ಪಾಟೀಲ ಯತ್ನಾಳ ಸಮಾಜ ಸೇವೆಗೆ ಸಂಬಂಧಿಸಿದಂತೆ ಈಚೆಗೆ ವಿಜಯಪುರದಲ್ಲಿ ಮಾಧ್ಯಮದವರಿಗೆ ನೀಡಿದ
ಪ್ರತಿಕ್ರಿಯೆಯಿದು.

‘ಪುರಾತನವಾದ ಸಿದ್ಧೇಶ್ವರ ದೇಗುಲದ ಪಕ್ಕದಲ್ಲಿನ ಶಿವಾನುಭವ ಮಂಟಪದ ಜಾಗದಲ್ಲಿ ಏಳು ಅಂತಸ್ತಿನ ಕಟ್ಟಡ ನಿರ್ಮಿಸಲಾಗುವುದು. ಸುತ್ತಲೂ ಮಳಿಗೆ ಕಟ್ಟಿಸಿ, ಬಾಡಿಗೆಗೆ ಕೊಡಲಾಗುವುದು’ ಎಂದು ಯತ್ನಾಳ ಹೇಳುತ್ತಿದ್ದಂತೆ, ‘ಸಾರ್ವಜನಿಕರಿಗೆ ಮೀಸಲಾಗಿದ್ದ ಸ್ಥಳದಲ್ಲಿ ಕಾಂಪ್ಲೆಕ್ಸಾ’ ಎಂದು ಪ್ರಶ್ನಿಸಿದ ಪತ್ರಕರ್ತರಿಗೆ ಅವರು ಬಸನಗೌಡ ಬಂಥನಾಳದ ಸಂಗನಬಸವ ಶಿವಯೋಗಿಗಳ ಕತೆ ಹೇಳಿದರು.

ADVERTISEMENT

‘ಶಿಕ್ಷಣ ಕ್ಷೇತ್ರದಲ್ಲಿ ಬಂಥನಾಳ ಸ್ವಾಮೀಜಿ ಹೆಸರು ದೊಡ್ಡದು. ಉಳ್ಳವರ ಬಳಿ ತೆರಳಿ ಅವರ ಮನವೊಲಿಸಿ ದಾನ ಪಡೆಯುವುದರಲ್ಲಿ ನಿಸ್ಸೀಮರು. ತಾವು ಭೇಟಿಯಾದ ಸಂದರ್ಭ ಪ್ರಸಾದ ಎಂದು ದಾನಿಗಳಿಗೆ ಉಂಡೆ ಕೊಡುತ್ತಿದ್ದರು. ಇದನ್ನು ಭಕ್ತರೊಬ್ಬರು ಪ್ರಶ್ನಿಸಿದಾಗ, ‘ಹಸುವಿಗೆ ಚೆನ್ನಾಗಿ ಮೇವು, ನೀರು, ಬೂಸಾ ವ್ಯವಸ್ಥೆ ಮಾಡಿದರೆ ಮಾತ್ರ ಹಿಂಡಿಕೊಳ್ಳಬೌದು. ಇಲ್ಲದಿದ್ದರೆ ಹೆಚ್ಚು ಹಾಲು ಸಿಗಲ್ಲ. ಅದಕ್ಕಾ ಅವರಿಗೆ ಉಂಡಿ ಕೊಡ್ತೀನಿ’ ಅಂದಿದ್ರಂತೆ. ಹಂಗ ನಾವೂ ದೇಣಿಗೆ ನೀಡೋರನ್ನ ಚೆನ್ನಾಗಿ ನೋಡ್ಕೋತೀವಿ. ಆದಾಯಕ್ಕಾಗಿ ಕಾಂಪ್ಲೆಕ್ಸ್‌ ಕಟ್ತೀವಿ. ಇದರೊಳಗೆ ನಮ್ಮ ಸಾಮಾಜಿಕ, ಧಾರ್ಮಿಕ ಸೇವೆನಾ ನಡೆಸ್ತೀವಿ’ ಎನ್ನುತ್ತಿದ್ದಂತೆ ಸಭಾಂಗಣ ನಗೆಗಡಲಲ್ಲಿ ತೇಲಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.