ADVERTISEMENT

ಎನ್.ಕೆ.ಹನುಮಂತಯ್ಯನವರ ಮೂರು ಕವಿತೆಗಳು

​ಪ್ರಜಾವಾಣಿ ವಾರ್ತೆ
Published 13 ಏಪ್ರಿಲ್ 2012, 19:30 IST
Last Updated 13 ಏಪ್ರಿಲ್ 2012, 19:30 IST

ಚಿತ್ರದ ಬೆನ್ನು

ಈ ಇರುವೆಯ ಮೇಲೆ
ನನ್ನ ಭಾರದ ಹೆಜ್ಜೆಯನ್ನಿಟ್ಟೆ
ತುಸು ಕಾಲದ ನಂತರ ತೆಗೆದೆ
ಇರುವೆ ಮತ್ತೆ ಚಲಿಸುತ್ತಿದೆ
ಏ ಸೂಜಿಯ ಗಾತ್ರದ
ಜೀವವೇ
ನನ್ನ ಭಾರ ಹೊರುವ ನಿನ್ನ
ಬೆನ್ನಿಗೆ ಶರಣು

ಆ ಬೇಲಿಯ ದಡದಿ
ನಿಧಾನಕ್ಕೆ ತೆವಳುತ್ತಿರುವ
ಬಸವನ ಹುಳುವೇ
ನನ್ನ ಭಾರ ಹೊರಲಾರದ
ನಿನ್ನ ಮೃದುತ್ವಕ್ಕೆ
ಶರಣು

ADVERTISEMENT

ಅಲ್ಲಿ ಆ ಗಿಡದಲ್ಲಿ
ನೂಲಿನ ಗಾತ್ರದ ಕಡ್ಡಿಯ ಮೇಲೆ
ಉಯ್ಯಾಲೆಯಾಡುವ ಹಕ್ಕಿಯೇ
ಕಡ್ಡಿ ಮುರಿಯದೆ ಆಡುವ ನಿನ್ನ
ತೂಕಕ್ಕೆ ಶರಣು

ಅಗ್ನಿ ಮಾಂಸದ ಕುಲುಮೆಯಲಿ
ನನ್ನ ಕಾಯಿಸಿ ಬಣ್ಣವ ಮಾಡಿ
ಮರಳಿ ನನ್ನ ರೂಪವನೇ ಕಡೆವ
ಏ ನನ್ನಾಳದ ಅಳುವೇ
ನನ್ನ ಚಿತ್ರಕೇಕೆ ಬೆನ್ನು ಬರೆವೆ

ಹೆಜ್ಜೆಯ ಹಿಂದೆ...

ಬಾ ಗೆಳತಿ
ಚೂರಾದ ಮುಖಗಳನು ಆಯೋಣ
ಎಲ್ಲಾದರೂ 
ನಗು ಮೆತ್ತಿಕೊಂಡಿದ್ದರೆ, 
ನಮ್ಮ ತುಟಿಗಳಿಗೆ ತುಂಬಿಕೊಳ್ಳೋಣ...

ಎಲ್ಲಾದರೂ 
ಅಳು ಅಂಟಿಕೊಂಡಿದ್ದರೆ, 
ನಮ್ಮ ಕಣ್ಣುಗಳಿಗೆ ಬಸಿದುಕೊಳ್ಳೋಣ...

ಬಾ ಗೆಳತಿ 
ಚೂರಾದ ಎದೆಗಳನು ಆಯೋಣ
ಎಲ್ಲಾದರೂ ಹದವಿದ್ದರೆ, 
ಅಲ್ಲಿ ಬೀಜಗಳಾಗಿ ಮೊಳೆಯೋಣ...

ಅವ್ವ ನಿಂತೇಯಿದ್ದಾಳೆ

ಕಿಟಕಿಯ ಕಂಬಿಗಳ ಹಿಂದೆ
ಅವ್ವ ನಿಂತಿದ್ದಾಳೆ
ಕಣ್ಣಲ್ಲಿ ನೀರು ಈಚಲು ಮರದಲ್ಲಿ
ಸೇಂಧಿ ತೊಟ್ಟಿಕ್ಕುವಂತೆ

ಅವಳ ಕಣ್ಣೀರ ಆತುಕೊಳ್ಳಲು ಹೋದೆ
ಕೈ ಸುಟ್ಟಿತು
ಮನೆ ತುಂಬ ಹೊಗೆಯ ಬಲೆ
ಮುರಿದ ತೀರುಗಳ ತೂರಿ ಬರುವ
ಸೂರ್ಯನಾಲಗೆ
ನಿಂತಲ್ಲೇ ಉರಿಯುವೆನು
ಯಾರಿಟ್ಟ ಕಿಚ್ಚಿಗೋ...

ಅವ್ವ ನಿಂತೇ ಇದ್ದಾಳೆ
ಕಪ್ಪು ಜಡೆ ಉದುರಿ ಒಣ ಗರಿಕೆಯಂತಾಗಿ
ಶಿಲೆಯಂತೆ
ಹತ್ತಿರ ಹೋಗಿ ಅವಳ ಕಿಟಕಿ ದಾಟಿದ
ನೋಟವನೇರಿ ನೋಡಿದರೆ
ಆಚೆ ಆ ಕೊಪ್ಪಲಲಿ ಅವನು ಮಲಗಿದ್ದಾನೆ
ನಿನ್ನೆ ಮದುವೆಯಾದ ಹೆಂಡಿರೊಡನೆ
ಮೊಲೆ ಚೆಂಡಿನೊಡನೆ

ಅವನೇ ನಾನು ನಿದ್ದೆಗಣ್ಣಲಿ ಎದ್ದಾಗ
ಸೇಬು ಕೊಟ್ಟವನು
ಅಪ್ಪನ ಹೆಣ ಬೀದಿಯಲಿ ಸಾಗುವಾಗ
ಅಳುವ ಅವ್ವನ ತುಟಿಗೆ ನಗುವ
ಬಳಿದವನು

ಹೊಲಸ ಕೆರೆ ತೊರೆದು ವಲಸೆ ಹೋದ ಹಕ್ಕಿ ನಾನು
ಮತ್ತೆ ಬಂದಿರುವೆ ಮೈ ಸುಟ್ಟು
ಅವ್ವ ನಿಂತೇಯಿದ್ದಾಳೆ
ನೀರಿಲ್ಲದ ಕೆರೆಯಲ್ಲಿ ಒಣಗಿದ ಏಡಿಯಂತೆ
ನನ್ನ ನೋಡದೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.