ADVERTISEMENT

ಒಪ್ಪಿಕೊಂಡದ್ದು 35, ಬಂದಿರುವುದು ಐದೇ ಐದು

​ಪ್ರಜಾವಾಣಿ ವಾರ್ತೆ
Published 1 ಜೂನ್ 2012, 19:30 IST
Last Updated 1 ಜೂನ್ 2012, 19:30 IST
ಒಪ್ಪಿಕೊಂಡದ್ದು 35, ಬಂದಿರುವುದು ಐದೇ ಐದು
ಒಪ್ಪಿಕೊಂಡದ್ದು 35, ಬಂದಿರುವುದು ಐದೇ ಐದು   

ಎರಡು ವರ್ಷಗಳ ಹಿಂದಿನ ವಿಶ್ವ ಬಂಡವಾಳ ಹೂಡಿಕೆದಾರರ ಸಮಾವೇಶದಲ್ಲಿ  ಎಲ್ಲರ ಗಮನ ಸೆಳೆದ ಜಿಲ್ಲೆ ಬಳ್ಳಾರಿ. ಈ ಜಿಲ್ಲೆಯಲ್ಲಿ ಬಂಡವಾಳ ಹೂಡಲು ಒಡಂಬಡಿಕೆಗೆ ಸಹಿ ಮಾಡಿದ್ದ ಒಟ್ಟು ಕಂಪೆನಿಗಳು 35. ಈ ಕಂಪೆನಿಗಳು ಒಟ್ಟು ರೂ 139 ಲಕ್ಷ ಕೋಟಿ ಹೂಡಿಕೆಗೆ ಒಪ್ಪಿಗೆ ಸೂಚಿಸಿ, 26 ಸಾವಿರ ಎಕರೆ ಭೂಮಿಗೆ ಬೇಡಿಕೆ ಸಲ್ಲಿಸಿದ್ದವು. ಅಲ್ಲದೆ, ನೇರವಾಗಿ 79 ಸಾವಿರ ಜನರಿಗೆ ಉದ್ಯೋಗ ದೊರೆಯಲಿದೆ ಎಂಬ ಅಂದಾಜನ್ನೂ ಮಾಡಲಾಗಿತ್ತು. 2 ವರ್ಷಗಳ ನಂತರದ ಇಲ್ಲಿನ ಸ್ಥಿತಿ ನಿರಾಶಾದಾಯಕ.  ಕೇವಲ ಐದು ಕಂಪೆನಿಗಳ ಕೈಗಾರಿಕಾ ಸ್ಥಾಪನೆಯ ಪ್ರಕ್ರಿಯೆ ಮಾತ್ರ ಪ್ರಾರಂಭವಾಗಿದೆ.

ಅನುಮತಿ ನಿರಾಕರಣೆ, ಕಬ್ಬಿಣದ ಅದಿರಿನ ಅಲಭ್ಯತೆ, ಭೂಸ್ವಾಧೀನ ಪ್ರಕ್ರಿಯೆಯಲ್ಲಿನ ಗೊಂದಲ, ಭೂಮಿ ಕೊಡಲು ರೈತರ ಪ್ರತಿರೋಧ, ಮೂಲ ಸೌಲಭ್ಯ ಕೊರತೆ, ರಾಜಕೀಯ ಬೆಳವಣಿಗೆ, ಅಕ್ರಮ ಗಣಿಗಾರಿಕೆಯ ಆರೋಪ ಮೊದಲಾದ ಕಾರಣಗಳಿಂದಾಗಿ 30 ಕಂಪೆನಿಗಳ ಉದ್ದೇಶಿತ ಯೋಜನೆಗಳಿಗೆ ಇನ್ನಷ್ಟೇ ಚಾಲನೆ ಸಿಗಬೇಕಾಗಿದೆ. ಈ 35ರಲ್ಲಿ ಒಂದೆರಡು ಕಂಪೆನಿಗಳನ್ನು ಹೊರತುಪಡಿಸಿ, ಬಹುತೇಕ ಕಂಪೆನಿಗಳು ಜಿಲ್ಲೆಯಲ್ಲಿ ಲಭ್ಯವಿರುವ ಕಬ್ಬಿಣದ ಅದಿರನ್ನೇ ಬಳಸಿಕೊಂಡು, ಉಕ್ಕಿನ ಕಾರ್ಖಾನೆ ಮತ್ತು ಸಂಬಂಧಿತ ಇತರ ಉದ್ಯಮ ಆರಂಭಿಸಲು ಮುಂದಾಗಿವೆ. ಅಕ್ರಮ ಗಣಿಗಾರಿಕೆ ಕುರಿತು ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಗಣಿಗಾರಿಕೆಯನ್ನೇ ಸ್ಥಗಿತಗೊಳಿಸುವಂತೆ ಸೂಚಿಸಿದ್ದರಿಂದ ಜಿಲ್ಲೆಯಲ್ಲಿ ನೆಲೆಯೂರಬೇಕಿರುವ ಕೆಲವು ಉದ್ಯಮಗಳು ಆರಂಭವಾಗದೇ ಉಳಿದಿವೆ.

ಬೃಹತ್ ಘಟಕಗಳು: ಆರ್ಸೆಲ್ಲರ್ ಮಿತ್ತಲ್ ಹಾಗೂ ಎನ್‌ಎಂಡಿಸಿಯ ಬೃಹತ್ ಉಕ್ಕಿನ ಕಾರ್ಖಾನೆಗಳಿಗಾಗಿ ರಾಜ್ಯ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ ಭೂಸ್ವಾಧೀನ ಪ್ರಕ್ರಿಯೆ ಪ್ರಾರಂಭಿಸಿದೆ. ಬಳ್ಳಾರಿ ತಾಲ್ಲೂಕಿನ ಕುಡುತಿನಿ ಬಳಿ 1800 ಎಕರೆ ಭೂಮಿಯನ್ನು ಮಿತ್ತಲ್ ಕಾರ್ಖಾನೆಗಾಗಿ ಮತ್ತು ವೇಣಿವೀರಾಪುರ ಬಳಿ ಎನ್‌ಎಂಡಿಸಿ ಕಾರ್ಖಾನೆಗಾಗಿ 2300 ಎಕರೆ ಭೂಮಿಯನ್ನು ಸ್ವಾಧೀನಪಡಿಸಲು ಗುರುತಿಸಲಾಗಿದೆ.

ಹೊಸಪೇಟೆ ತಾಲ್ಲೂಕಿನ ಗಾದಿಗನೂರು ಗ್ರಾಮದ ಬಳಿ ಬೃಹತ್ ಉಕ್ಕಿನ ಕಾರ್ಖಾನೆ ಸ್ಥಾಪಿಸಲು ಮುಂದೆಬಂದಿದ್ದ ಭೂಷಣ್ ಸ್ಟೀಲ್ಸ್ ಕಂಪೆನಿಗೆ, `ದರೋಜಿ ಕರಡಿಧಾಮದಲ್ಲಿನ ವನ್ಯಜೀವಿಗಳಿಗೆ ಅಪಾಯ ಎದುರಾಗಲಿದೆ~  ಎಂಬ ಪರಿಸರ ತಜ್ಞರ ವಿರೋಧದ ಹಿನ್ನೆಲೆಯಲ್ಲಿ ಅನುಮತಿ ನಿರಾಕರಿಸಲಾಗಿದೆ. ಅದೇರೀತಿ, ಸಿದ್ದಮ್ಮನಹಳ್ಳಿ, ಯರ‌್ರಂಗಳಿ, ಕೊಳಗಲ್ ಗ್ರಾಮಗಳ ಬಳಿ ಐದು ಸಾವಿರ ಎಕರೆ ಭೂಮಿಯಲ್ಲಿ ಮಾಜಿ ಸಚಿವ ಜಿ.ಜನಾರ್ದನರೆಡ್ಡಿ ಸ್ಥಾಪಿಸಲು ಉದ್ದೆಶಿಸಿದ್ದ ಬ್ರಹ್ಮಿಣಿ ಸ್ಟೀಲ್ಸ್ ಸ್ಥಾಪನೆಯ ಉದ್ದೇಶವನ್ನೇ ಕೈಬಿಟ್ಟು ಬೇರೊಬ್ಬರಿಗೆ ಪರಭಾರೆ ಮಾಡುತ್ತಿರುವ ಹಿನ್ನೆಲೆಯಲ್ಲಿ, ಆ ಯೋಜನೆಯೂ ಕಾರ್ಯಾರಂಭ ಮಾಡಿಲ್ಲ.

ಐದು ಕಂಪೆನಿಗಳು: ಜೆಎಸ್‌ಡಬ್ಲ್ಯೂ ಸಿವರ್‌ಫೀಲ್ಡ್ ಸ್ಟ್ರಕ್ಚರ್ಸ್ ಕಂಪೆನಿಯು ತೋರಣಗಲ್ ಬಳಿ ಫ್ಯಾಬ್ರಿಕೇಟೆಡ್ ಸ್ಟ್ರಕ್ಚರಲ್ ಪ್ರಾಡಕ್ಟ್ಸ್ ಉತ್ಪಾದನೆಗಾಗಿ, ಜಿಂದಾಲ್ ಸಾ ಕಂಪೆನಿಯು ಸುಲ್ತಾನ್‌ಪುರದ ಬಳಿ ಸ್ಟೀಲ್ ಪೈಪ್ ಮತ್ತು ಕೋಟಿಂಗ್ ಪ್ಲಾಂಟ್‌ಗಾಗಿ, ಸಿರುಗುಪ್ಪ ಶುಗರ್ಸ್ ಅಂಡ್ ಕೆಮಿಕಲ್ಸ್ ಕಂಪೆನಿಯ ಸಿರುಗುಪ್ಪ ತಾಲ್ಲೂಕಿನಲ್ಲಿ ಸಕ್ಕರೆ ಹಾಗೂ ವಿದ್ಯುತ್ ಉತ್ಪಾದನಾ ಘಟಕ, ಪವರ್‌ನಾಕಿಕ್ಸ್ ಕಂಪೆನಿಯು ಉದ್ದೇಶಿಸಿರುವ ವಿದ್ಯುತ್ ಉತ್ಪಾದನಾ ಸ್ಥಾವರ ಹಾಗೂ ಕೆಇಜೆ ಮಿನರಲ್ಸ್ ಕಂಪೆನಿಯು ಸಂಡೂರು ತಾಲ್ಲೂಕಿನ ತಾರಾನಗರ ಬಳಿ ಮೆದು ಕಬ್ಬಿಣ ಉತ್ಪಾದನಾ ಘಟಕಗಳ ಸ್ಥಾಪನಾ ಪ್ರಕ್ರಿಯೆ ಚಾಲನೆಯಲ್ಲಿದೆ.

ಗಣಿಗಾರಿಕೆ ಸ್ಥಗಿತ: ಅಕ್ರಮ ಗಣಿಗಾರಿಕೆ ಹಾಗೂ ನಿಯಮಾವಳಿಗಳ ಉಲ್ಲಂಘನೆ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್‌ನ  ಕೇಂದ್ರದ ಉನ್ನತಾಧಿಕಾರ ಸಮಿತಿಯು ಗಣಿಗಾರಿಕೆ ಪುನರ್ ಆರಂಭಕ್ಕೆ ಸಂಬಂಧಿಸಿದಂತೆ ಮಹತ್ವದ ಶಿಫಾರಸುಗಳನ್ನು ಮಾಡಿದೆ. ಅರಣ್ಯ ಪರಿಸರಕ್ಕೆ ಧಕ್ಕೆ ಮತ್ತು ಗಣಿಗಾರಿಕೆ ನಡೆಯುತ್ತಿದ್ದ ಸಂಡೂರು, ಹೊಸಪೇಟೆ ಭಾಗದ ಗ್ರಾಮೀಣ ಪ್ರದೇಶಗಳ ಜನರ ಆರೋಗ್ಯದ ಮೇಲಿನ ದುಷ್ಪರಿಣಾಮವನ್ನು ಗಂಭೀರವಾಗಿ ಪರಿಗಣಿಸಿ, ಪರಿಸರ ಪುನರ್ ನಿರ್ಮಾಣಕ್ಕೂ, ಜನ, ಜಾನುವಾರುಗಳ ಆರೋಗ್ಯಕ್ಕೆ ಸಂಬಂಧಿಸಿದಂತೆ ಮುನ್ನೆಚ್ಚರಿಕೆ ಕ್ರಮವನ್ನೂ ಕೈಗೊಳ್ಳುವಂತೆ ಸೂಚಿಸಿದೆ. ಅಲ್ಲದೆ, ಗಣಿ ಕಂಪೆನಿಗಳನ್ನು ಮೂರು ವಿಧವಾಗಿ ವರ್ಗೀಕರಿಸಿ, ಕ್ರಮಬದ್ಧವಾಗಿ ಗಣಿಗಾರಿಕೆ ನಡೆಸಿರುವ `ಎ~ ವರ್ಗದ ಗಣಿ ಕಂಪೆನಿಗಳಿಗೆ ಗಣಿಗಾರಿಕೆಗೆ ಅವಕಾಶ ನೀಡಬಹುದು ಎಂದು ಶಿಫಾರಸು ಮಾಡಿರುವ ಹಿನ್ನೆಲೆಯಲ್ಲಿ ಸದ್ಯ ಗಣಿಗಾರಿಕೆ ಅನುಮತಿಗಾಗಿ ಆ ವರ್ಗದ ಕಂಪೆನಿಗಳು ಕಾದುಕುಳಿತಿವೆ.

ರಾಜ್ಯ ಸರ್ಕಾರ 2010ರ ಜುಲೈನಲ್ಲಿ ಅದಿರಿನ ರಫ್ತನ್ನೇ ನಿಷೇಧಿಸಿ ಆದೇಶ ಹೊರಡಿಸಿದ್ದು, ಲಭ್ಯವಿರುವ ಅದಿರನ್ನು ಮೌಲ್ಯವರ್ಧನೆಗೆ ಬಳಸಿಕೊಳ್ಳಲು ವಿಪುಲ ಅವಕಾಶಗಳಿವೆ.ಉಕ್ಕಿನ ಕಾರ್ಖಾನೆ ಹಾಗೂ ಸಂಬಂಧಿಸಿದ ಉದ್ಯಮ ಸ್ಥಾಪನೆಗೆ ಆಸಕ್ತಿ ತಾಳುವ ಕಂಪೆನಿಗಳಿಗೆ ನೀರನ್ನು ಒದಗಿಸುವುದೂ ಸದ್ಯದ ಪ್ರಶ್ನೆಯಾಗಿದ್ದು, ಹೊಸಪೇಟೆ ಬಳಿಯ ತುಂಗಭದ್ರಾ ಜಲಾಶಯದಲ್ಲಿ ಲಭ್ಯವಿರುವ ನೀರನ್ನು ಈಗಾಗಲೇ ಹಲವು ಕೈಗಾರಿಕೆಗಳಿಗೆ ಹಂಚಿಕೆ ಮಾಡಿರುವುದರಿಂದ ಹೊಸದಾಗಿ ಆರಂಭವಾಗುವ ಉದ್ಯಮಗಳಿಗೆ ನೀರನ್ನು ನೀಡುವುದು ಎಲ್ಲಿಂದ ಎಂಬ ಜಿಜ್ಞಾಸೆಯೂ ಇದೆ.

ಅಸ್ತಿತ್ವದಲ್ಲಿರುವ ಜೆಎಸ್‌ಡಬ್ಲ್ಯೂ ಸ್ಟೀಲ್ಸ್ ಹಾಗೂ ಹೊಸದಾಗಿ ಆರಂಭ ಆಗಲಿರುವ ಆರ್ಸೆಲ್ಲರ್ ಮಿತ್ತಲ್ ಕಂಪೆನಿಗಳು ಆಲಮಟ್ಟಿ ಜಲಾಶಯದಿಂದ ನೀರನ್ನು ಪಡೆಯಲು ಪರವಾನಗಿ ಪಡೆದಿದ್ದು, ಮಧ್ಯಮ ಹಾಗೂ ಕೆಳ ಮಧ್ಯಮ ಪ್ರಮಾಣದ ಉಕ್ಕಿನ ಘಟಕಗಳಿಗೆ ನೀರು ನೀಡುವುದೇ ಸದ್ಯದ ಸವಾಲಾಗಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.